ADVERTISEMENT

ಚುರುಮುರಿ | ಹ್ಯಾಕು–ಟಾಕು!

ಬಿ.ಎನ್.ಮಲ್ಲೇಶ್
Published 2 ನವೆಂಬರ್ 2023, 19:30 IST
Last Updated 2 ನವೆಂಬರ್ 2023, 19:30 IST
   

‘ಗುಡ್ಡೆ ಭಾಯ್, ಈ ಹ್ಯಾಕು ಮತ್ಲಬ್ ಕ್ಯಾ ಹೈ? ನಮ್ ರಾಹುಲ್ ಗಾಂಧಿ ಸಾಬ್‌ದು ಫೋನು ಹ್ಯಾಕ್ ಆಗೇತಿ ಅಂತ ಪೇಪರ್‌ನಾಗೆ ಬಂದಿತ್ತು’ ಹರಟೆಕಟ್ಟೆಯಲ್ಲಿ ಗೌಸು ಕೇಳಿದ.

‘ಅದಾ? ನೀನು ಮೊಬೈಲ್‌ನಲ್ಲಿ ಮಾತಾಡೋದ್ನೆಲ್ಲ ಬೇರೇರು ಕದ್ದು ಕೇಳಿಸ್ಕಂಡ್ರೆ ಅದ್ನ ಹ್ಯಾಕ್ ಅಂತಾರೆ’ ಗುಡ್ಡೆ ಹೇಳಿದ.

‘ಓ ಕೈಸೆ? ನಮ್ದುಕೆ ಮನೇಲಿ ನಾವು ಕುಂತು ಮಾತಾಡಿದ್ರೆ ಅಲ್ಲಿ ಅವರೆಂಗೆ ಕೇಳಿಸ್ಕಂತಾರೆ?’

ADVERTISEMENT

‘ಅದಕ್ಕೆಲ್ಲ ಟೆಕ್ನಾಲಜಿ ಅದಾವು ಕಣಲೆ’.

‘ನಮ್ ಫೋನು ಒಳಗೆ ಅವ್ರು ಹೆಂಗೆ ಅಂತ...’

‘ಥೋ... ಮೊಬೈಲ್ ಟವರ್ ಹತ್ತಿ ಕೇಳಿಸ್ಕಂತಾರೆ ಅನ್ಕಾ, ನಿನಿಗೇಳಾದು ಕಷ್ಟಾತಪ’ ಗುಡ್ಡೆ ತಲೆ ಒಗೆದ.

‘ಲೇ ಗೌಸು, ನಿನ್ ಫೋನಿಗೆ ಪೂನಾದಿಂದ ಯಾರಾದ್ರು ರೊಕ್ಕ ಹಾಕಿದ್ರೆ ಬರ್ತತೋ ಇಲ್ಲೋ? ನಿನ್ ಫೋನ್‌ನಾಗಿದ್ದ ರೊಕ್ಕನ ಒಂದ್ಸಲ ಯಾರೋ ಕದ್ದಿದ್ರು ನೆನಪೈತಾ? ಹೆಂಗ್ ಕದ್ರು? ಅದೇ ತರ ಕದ್ದು ಕೇಳಿಸ್ಕಳಾಕೂ ಬರ್ತತಿ. ಅದ್ನೇ ಹ್ಯಾಕ್ ಅಂತಾರೆ’ ಅಂದ ಪರ್ಮೇಶಿ.

‘ಹಂಗಾದ್ರೆ ನಾವೂ ಬೇರೆ ಮಂದೀದು ಕದ್ದು ಕೇಳಿಸ್ಕಾಬೋದಾ?’

‘ಆಗಲ್ಲ, ಗೌರ್ಮೆಂಟ್‌ನೋರಿಗೆ ಮಾತ್ರ ಆ ಪವರ್ ಇರೋದು’.

‘ಐಸೆ ಕರೇತೋ ಅವರಿಗೇನ್ ಲಾಭ?’

‘ಈಗ ನೀನು ಆ್ಯಪಲ್ ಖರೀದಿಗೆ ಟೆಂಡರ್ ಹಾಕ್ತೀಯಲ್ಲ, ನಿನ್ ರೇಟ್‌ನ ಬೇರೇರು ಕದ್ದು ಕೇಳಿಸ್ಕಂಡು ನಿನಗಿಂತ ಕಮ್ಮಿ ರೇಟ್ ಹಾಕಿ ಟೆಂಡರ್ ಹೊಡ್ಕಂಡ್ರೆ ಅವರಿಗೆ ತಾನೇ ಲಾಭ? ಹಂಗೇ ಬೇರೆ ಪಕ್ಷದೋರ ಸೀಕ್ರೆಟ್‌ನೆಲ್ಲ ಅವರಿಗೆ ಗೊತ್ತಿಲ್ಲದಂಗೆ ಇನ್ನೊಂದು ಪಕ್ಷದೋರು ತಿಳ್ಕಂಡ್ರೆ ಅದೇ ಹ್ಯಾಕು’ ಪರ್ಮೇಶಿ ವಿವರಿಸಿದ.

‘ಓ... ಅಬ್ ಪೂರಾ ಸಮಜ್ ಹೋಗಯ. ಈಗ ಎಲ್ಲ ಅರ್ಥಾತು’ ಗೌಸು ನಕ್ಕ.

‘ಲೇ ಗೌಸು, ರಾಜ್ಯೋತ್ಸವ ನಡೆದೈತಿ, ಈಗ್ಲಾದ್ರು ಸರಿಯಾಗಿ ಕನ್ನಡ ಮಾತಾಡಲೆ’  ದುಬ್ಬೀರ ಆಕ್ಷೇಪಿಸಿದ. ಗೌಸ್‌ಗೆ ಸಿಟ್ಟು ಬಂತು, ‘ಅರೆ, ನಿನಿಗೇನ್ ತೆಲಿ ಬರಾಬರ್ ಐತಿಲ್ಲೋ. ನಾನು ಕನ್ನಡಾನೇ ಮಾತಾಡ್ತಿರೋದು’ ಎಂದ. ದುಬ್ಬೀರ, ಗುಡ್ಡೆ ಪಿಟಿಕ್ಕನ್ನಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.