ADVERTISEMENT

ಚುರುಮುರಿ | ಕುರ್ಚಿ ಭಾಗ್ಯವನರಸಿ…

ಸುಮಂಗಲಾ
Published 17 ಮಾರ್ಚ್ 2024, 23:30 IST
Last Updated 17 ಮಾರ್ಚ್ 2024, 23:30 IST
   

‘ಶಿವಮೊಗ್ಗದ ಅಭಯಾರಣ್ಯದೊಳು ಕುಳಿತು ಹುಲಿಯು ಅಬ್ಬರಿಸುತಿದೆ ಕೇಳಾ’ ಬೆಕ್ಕಣ್ಣ ಯಕ್ಷಗಾನದ ಶೈಲಿಯಲ್ಲಿ ಹೇಳುತ್ತಿತ್ತು.

‘ರಾಜಾಹುಲಿ ಶಿಕಾರಿಪುರದ್ದು, ಮರಿರಾಜಾಹುಲಿ ಶಿವಮೊಗ್ಗ ನಗರದ್ದು, ಇನ್ನ ಹುಲಿಯಾ ಮೈಸೂರು ಕಡೇದು… ಇದ್ಯಾವುದಲೇ ಅಭಯಾರಣ್ಯದ ಹುಲಿ?’ ನನಗೆ ಅಚ್ಚರಿ.

‘ಇದು ಹೊಸ ಹುಲಿ. ಯಾರಿಗೂ ಹೆದರದೇ ಬೆದರದೇ ಪಕ್ಷೇತರವಾಗಿ ಸ್ಪರ್ಧಿಸಿ, ಗೆದ್ದು, ಆಮೇಲೆ ಕಮಲಕ್ಕನ ಮನೆಗೆ ಹೋಗೋ ಪ್ಲಾನು ಹಾಕಿರುವ ಹೊಸ ಹುಲಿ ನಮ್ಮ ಈಶೂ ಮಾಮ’ ಎಂದು ಬೆಕ್ಕಣ್ಣ ಮೀಸೆ ತಿರುವುತ್ತ ಹೇಳಿತು.

ADVERTISEMENT

‘ಅಲ್ಲಲೇ… ಶಿವಮೊಗ್ಗದಾಗೆ ಕಮಲ ಬಿಟ್ಟರೆ ಬ್ಯಾರೆ ಯಾವುದಾದರೂ ಹೂ ಅರಳತೈತೆ ಅಂದುಕೊಳ್ಳದೇ ಮಹಾ ಮೂರ್ಖತನ’ ಎಂದೆ.

‘ಎನ್ನ ತೂಕಕ್ಕೆ ಸಮನಾರಿಹರು ಅಂತ ಈಶೂ ಮಾಮ ಅಬ್ಬರಿಸಿದ್ದನ್ನು ಕೇಳಿಲ್ಲೇನು?’ ಬೆಕ್ಕಣ್ಣ ಗುಡುಗಿತು.

‘ಈಶೂ ಮಾಮ ದೇಹದ ತೂಕ ಅಂತ ಹೇಳಿರಬೇಕು. ನನ್ನ ಭಾರತ, ನನ್ನ ಪರಿವಾರ ಅಂತ ಮೋದಿಮಾಮನ ಹೊಸ ವಿಡಿಯೊ ಬಂದೈತಿ. ನಾನು ಮೋದಿಯ ಪರಿವಾರ ಅಂತ ಭಾಳ ಮಂದಿ ಅದ್ರಾಗೆ ಹಾಡ್ಯಾರೆ. ಟಿಕೀಟು ಕೊಟ್ಟಿಲ್ಲ ಅಂತ ಧುಮುಧುಮುಗುಡವ್ರು, ಈಶೂ ಮಾಮನ ಹಂಗೆ ಪಕ್ಷೇತರವಾಗಿ ನಿಂತು ಗೆಲ್ಲತೀವಂತ ಅಬ್ಬರಿಸೋರು ಈ ಪದ ಹಾಡಂಗಿಲ್ಲೇನು?’

‘ಸೆಟಗಂಡವ್ರು ಹಾಡದಿದ್ದರೆ ಏನಾತು, ಹೊಸದಾಗಿ ಬಂದವ್ರು ಹಾಡ್ತಾರೆ. ಇಲ್ಲಿ ನಮ್‌ ಕುಮಾರಣ್ಣ, ಬಿಹಾರದಾಗೆ ನಿತೀಶಂಕಲ್ಲು ನಾವೇ ಮೋದಿಯ ಪರಿವಾರ ಅಂತ ಹಾಡ್ತಿದಾರೆ. ನೋಡ್ತಿರು… ಇನ್ನೊಂದೆರಡು ವಾರದಾಗೆ ಇನ್ನೆಷ್ಟು ತೆಲಿಗಳು ನಾ ಮೋದಿಯ ಪರಿವಾರ ಹಾಡು ಹಾಡತಾವೆ ಅಂತ’.

‘ಪಾಪ… ಕಮಲಕ್ಕನ ಪರಿವಾರದವರು ಹೇಳಿದ್ದಕ್ಕೆಲ್ಲ ತಲೆಯಾಡಿಸ್ತಾ ಕುಮಾರಣ್ಣಂಗೆ ಕತ್ತು ನೋವು ಬಂದಿರಬಕು’.

‘ಏನಿಲ್ಲೇಳು… ಮಣಭಾರದ ರಾಗಿ ತೆನಿ ಹೊತ್ತು ಕತ್ತು ಉಳುಕಿತ್ತಂತೆ. ಈಗ ತೆನಿ ಬಿಟ್ಟಾಕಿ, ಹತ್ತಿ ಹಗುರಿನ ಕಮಲ ಹಿಡಿದ ಮುಖದಾಗೆ ಎಷ್ಟ್‌ ನಗು ಐತಿ! ನಾ ಕಮಲ ಪರಿವಾರ ಅಂದವರಿಗೇ ಕುರ್ಚಿಯ ಸೌಭಾಗ್ಯ ಅನ್ನೂದು ಎಲ್ಲಾರಿಗೂ ಮನದಟ್ಟಾಗೈತಿ’ ಬೆಕ್ಕಣ್ಣ ಹ್ಹೆಹ್ಹೆಗುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.