ADVERTISEMENT

ಚುರುಮುರಿ| ಹೊಸ ಮಾರ್ಗಸೂಚಿ

ಕೆ.ವಿ.ರಾಜಲಕ್ಷ್ಮಿ
Published 29 ಡಿಸೆಂಬರ್ 2021, 19:30 IST
Last Updated 29 ಡಿಸೆಂಬರ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಹೊಸ ವರ್ಷಾಚರಣೆಗೆ ಮನೇಲಿ ಹೊಸ ಮಾರ್ಗಸೂಚಿ ಇದೆಯೇನು?’ ಎನ್ನುತ್ತಾ ಕಂಠಿ ಬಂದ. ‘ಹೋಟೆಲ್‌ಗೆ ಹೋಗೋಕ್ಕಾಗೋಲ್ಲ, ರಾತ್ರಿ 12ಕ್ಕೆ ಮೊದಲು 22 ಶುರುವಾಗೋಲ್ಲ, 10 ಗಂಟೆಯೊಳಗೆ ಮನೆ ಸೇರ್ಕೋಬೇಕು, ಏನೂ ಥ್ರಿಲ್ ಇರೋಲ್ಲ’ ಪುಟ್ಟಿ ಸಿಂಡರಿಸಿದಳು.

‘ಅದಕ್ಕೇನಂತೆ, ಮನೆಯೊಳಗೇ ಸೆಲೆಬ್ರೇಟ್ ಮಾಡಿದ್ರೆ ಬರೋಲ್ಲ ಅನ್ನುತ್ತಾ ನಿಮ್ಮ 2022?
ಇನ್ನೂ ಈ ಮಹಾಮಾರಿಯಿಂದ ಚೇತರಿಸಿಕೊಳ್ಳೋಕ್ಕೆ ಆಗ್ತಿಲ್ಲ, ಅಷ್ಟೊಂದು ಐಷಾರಾಮಿ ಯಾಕೋ?’ ನನ್ನವಳ ದನಿ ತಾರಕಕ್ಕೇರಿತ್ತು.

‘ನಿಜ, ಸ್ನೇಹಿತರೆಲ್ಲ ಒಬ್ಬರ ಮನೇಲಿ ಸೇರೋದು... ಒಬ್ಬೊಬ್ಬರು ಒಂದೊಂದು ತಿಂಡಿ ತಂದರೆ ಮುಗೀತು, ಟಿ.ವಿ ಹಚ್ಚಿದರೆ ಹಾಡು, ಕುಣಿತ ಎಲ್ಲ ಇರುತ್ತೆ’ ನನ್ನವಳಿಗೆ ಸಪೋರ್ಟ್ ಮಾಡಿದೆ. ‘ಆದರೆ ಕೇಕು ಕತ್ತರಿಸದಿದ್ರೆ, ಒಂಥರಾ ಇನ್‌ಕಂಪ್ಲೀಟ್’.

ADVERTISEMENT

‘ಅದಕ್ಕೇನಂತೆ, ಹೆಚ್ಚು ಖರ್ಚಿಲ್ಲದೆ ಗೋಧಿಬೆಲ್ಲದ ಕೇಕ್ ನಾನೇ ಮಾಡಿಕೊಡ್ತೀನಿ, ಮೊನ್ನೆ ತಾನೇ ಯು ಟ್ಯೂಬ್‌ನಲ್ಲಿ ನೋಡಿದೆ’ ನನ್ನವಳ ಉತ್ಸಾಹ. ಪುಟ್ಟಿ ನನ್ನತ್ತ ದಯನೀಯ ನೋಟ ಬೀರಿದಳು.

‘ವಿರುದ್ಧ ಪದ ಬರೆ ಅಂದರೆ ದಿನ X ಅನುದಿನ, ರಾಗ X ಅನುರಾಗ ಅಂತ ಗೀಚಿದ್ದಾನೆ. ಅದ್ಹೇಗೋ ಅಂದ್ರೆ, ಉಚಿತಕ್ಕೆ ಅನುಚಿತ ಹಾಗೇ ಇವಕ್ಕೂ ‘ಅನು’ ಅಂತ ಸೇರಿಸೋದು ಅಂತಾನೆ! ಮಂಗಣ್ಣನ ತಂದು! ಹತ್ತುಸಲ ಬರಿ ಅಂತ ಕೂರಿಸಿ ಬಂದೆ’. ಪಕ್ಕದ ಮನೆ ಚಿಣ್ಣನಿಗೆ ಪುಕ್ಕಟೆ ಕನ್ನಡ ಮನೆಪಾಠ ಕಲಿಸುತ್ತಿರುವ ಅತ್ತೆ ಬೆವರೊರೆಸಿಕೊಂಡು ಕೊಠಡಿಯಿಂದ ಹೊರಬಂದರು.

‘ಹೊಸವರ್ಷದ ಪ್ರಯುಕ್ತ ನಮ್ಮ ಆಫೀಸಲ್ಲಿ ರಸಪ್ರಶ್ನೆ ಕಾರ್ಯಕ್ರಮವಿದೆ, ನೀವೇ ನಡೆಸಿಕೊಟ್ಟರೆ ಹೇಗೆ ಅಂತ ಯೋಚಿಸ್ತಿದ್ದೀನಿ. ಪಿಕಪ್, ಡ್ರಾಪ್, ಸನ್ಮಾನ ಎಲ್ಲ ನನ್ನ ಜವಾಬ್ದಾರಿ. ಹ್ಞೂಂ ಅನ್ನೋದಾದ್ರೆ ಬಾಸ್‌ಗೆ ತಿಳಿಸ್ತೀನಿ’ ಕಂಠಿಯ ಮನವಿ.

‘ಅಮ್ಮನ್ನ ಒಪ್ಪಿಸೋ ಹೊಣೆ ನಂದು. ಒಬ್ರೇ ಬರೋಕ್ಕಾಗೋಲ್ಲ, ಅವರ ಜೊತೆಗೆ ನಾನೂ ಬರ್ತೀನಿ. ನೀವು ಬಾಸ್‌ಗೆ ಫೋನ್ ಮಾಡಿ, ಅಷ್ಟರಲ್ಲಿ ನಾನು ತಿಂಡಿ ಮಾಡ್ತೀನಿ’ ಲಗುಬಗೆಯಿಂದ ನನ್ನವಳು ಒಗ್ಗರಣೆಗೆ ಸಾಸಿವೆ ಸಿಡಿಸಲು ಮೊದಲಾದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.