ADVERTISEMENT

ಚುರುಮುರಿ | ಕಪ್ ನಮ್ದೇ...

ಮಣ್ಣೆ ರಾಜು
Published 19 ಮಾರ್ಚ್ 2024, 23:38 IST
Last Updated 19 ಮಾರ್ಚ್ 2024, 23:38 IST
   

‘ಶಕ್ತಿ ಯೋಜನೆ ಜಾರಿಯಾಗಿ ಸರ್ಕಾರಿ ಬಸ್‍ಗಳಲ್ಲಿ ಉಚಿತ ಪ್ರಯಾಣ ಶುರುವಾದ ನಂತರ ನಮ್ಮ ಮಹಿಳೆಯರು ಸ್ಟ್ರಾಂಗ್ ಆಗ್ತಿದ್ದಾರೆ ಕಣ್ರಿ...’ ಎನ್ನುತ್ತಾ ಬಂದಳು ಪಕ್ಕದ ಮನೆ ಪದ್ಮಾ.

‘ಹೌದು, ಇದುವರೆಗೂ ಬಸ್ಸಿನಲ್ಲಿ ‘ಅಯ್ಯೋ ಪಾಪ, ಅಸಹಾಯಕ ಮಹಿಳೆಗೆ ಸೀಟು ಬಿಟ್ಟುಕೊಡಿ’ ಎಂದು ಅವರಿವರು ಹೇಳುತ್ತಿದ್ದ ಪರಿಸ್ಥಿತಿ ಇತ್ತು ಅಲ್ಲವೇ?’ ಎಂದಳು ಸುಮಿ.

‘ಹೌದೌದು ಈಗ ನೋಡಿ ಹೇಗಾಗಿದೆ ಅಂತ’.

ADVERTISEMENT

‘ಶಕ್ತಿ ಯೋಜನೆ ನಂತರ ಮಹಿಳೆಯರ ಶಕ್ತಿ ವೃದ್ಧಿಯಾಗಿದೆ. ಬಸ್ಸಿನ ಕಿಟಕಿಯಲ್ಲಿ ನುಸುಳಿ, ಡ್ರೈವರ್ ಡೋರಿನಲ್ಲಿ ನುಗ್ಗಿಹೋಗಿ ಸೀಟು ಹಿಡಿಯುತ್ತಾರೆ, ಲೇಡೀಸ್ ಸೀಟಿನಲ್ಲಿ ಕುಳಿತ ಗಂಡಸರನ್ನು ಎಳೆದು ಆಚೆ ಹಾಕಿ ಸೀಟು ಪಡೆ ಯುವ ಶಕ್ತಿ, ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ’.

‘ಶಕ್ತಿ ಯೋಜನೆ ಜಾರಿಯಾಗುವವರೆಗೂ ನಮ್ಮಲ್ಲಿ ಹುದುಗಿದ್ದ ಶಕ್ತಿ ನಮಗೇ ಗೊತ್ತಿರಲಿಲ್ಲ, ತಪ್ಪೆಲ್ಲ ನಮ್ದೇ ಅಲ್ವೇನ್ರೀ?’

‘ಈ ಬಾರಿ ಕಪ್ ನಮ್ದೇ ಅಂತ ಆರ್‌ಸಿಬಿ ಅಭಿಮಾನಿಗಳು ಪ್ರತಿ ಬಾರಿಯೂ ಆಸೆಪಡುತ್ತಿ
ದ್ದರು. ಆದರೆ ಆರ್‌ಸಿಬಿ ಮಹಿಳೆಯರು ಈಗ ಟೂರ್ನಿ ಗೆದ್ದು ‘ಕಪ್ ನಮ್ದು’ ಅಂತ ಸಾಧಿಸಿಬಿಟ್ಟರು ನೋಡಿ’.

‘ಸರ್ಕಾರ ಪುರುಷರಿಗೂ ಶಕ್ತಿ ಯೋಜನೆಯನ್ನು ವಿಸ್ತರಿಸಿದರೆ ಆರ್‌ಸಿಬಿ ಪುರುಷರೂ ಈ ಬಾರಿ ಕಪ್ ಗೆಲ್ಲಬಹುದು ಕಣ್ರೀ’.

‘ಬೇಕಾಗಿಲ್ಲ, ಕಪ್ ಗೆದ್ದಿರುವ ಮಹಿಳೆಯರಿಂದ ಸ್ಫೂರ್ತಿ ಪಡೆದು ಈ ಬಾರಿ ಆರ್‌ಸಿಬಿ ಪುರುಷರೂ ಐಪಿಎಲ್ ಗೆದ್ದು ‘ಕಪ್ ನಮ್ದೇ’ ಅಂತಾರೆ. ಯಶಸ್ವಿ ಮಹಿಳೆಯರು ಪುರುಷರ ಗೆಲುವಿಗೆ ಪ್ರೇರಣೆ ಆಗ್ತಾರೆ’.

‘ನನಗೂ ಹಾಗೇ ಅನ್ನಿಸ್ತಿದೆ. ಅಂದಹಾಗೆ, ಮೊನ್ನೆ ನಿಮ್ಮ ಮನೆಯಿಂದ ಒಂದು ಕಪ್ ಸಕ್ಕರೆ ತಂದಿದ್ದೆನಲ್ಲ, ಈ ಎರಡರಲ್ಲಿ ನಿಮ್ಮ ಕಪ್ ಯಾವುದು?’ ಎಂದು ಸುಮಿ ಕಪ್‍ಗಳನ್ನು ತಂದು ತೋರಿಸಿದಳು.

ಅವುಗಳಲ್ಲಿ ತನ್ನ ಕಪ್‌ ಅನ್ನು ಗುರುತಿಸಿದ ಪದ್ಮಾ, ‘ಇದೇ ಕಪ್, ಈ ಕಪ್ ನಮ್ದೇ...’ ಎಂದು ತನ್ನ ಕಪ್ ಈಸ್ಕೊಂಡು ಮನೆಗೆ ಹೊರಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.