ADVERTISEMENT

ಚುರುಮುರಿ | ಕೇಸರಿ ಕಳವಳ

ಮಣ್ಣೆ ರಾಜು
Published 15 ನವೆಂಬರ್ 2022, 20:15 IST
Last Updated 15 ನವೆಂಬರ್ 2022, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಶಾಲೆಗಳಿಗೆ ಸುಣ್ಣ, ಬಣ್ಣ ಬಳಿಯುವುದನ್ನೂ ವಿರೋಧ ಪಕ್ಷದವರು ವಿರೋಧಿಸೋದು ಸರಿಯೇನ್ರೀ?’ ಸುಮಿಯ ಆಕ್ಷೇಪ.

‘ಬಳಿಯಲಿ, ಕೇಸರಿ ಬಣ್ಣವನ್ನೇ ಯಾಕೆ ಬಳಿಯಬೇಕು. ಸರ್ಕಾರಕ್ಕೆ ಬೇರೆ ಬಣ್ಣಗಳ ಬರವೇ ಎಂದು ವಿಪಕ್ಷದವರು ಕೇಳ್ತಿದ್ದಾರೆ’ ಅಂದ ಶಂಕ್ರಿ.

‘ಕೇಸರಿ ಬಳಿದರೆ ತಪ್ಪೇನು ಎಂದೂ ಕೇಳಿರುವ ಸಿ.ಎಂ, ವಿವೇಕಾನಂದರ ಕಾವಿ ಕಲರ್, ತ್ರಿವರ್ಣ ಧ್ವಜದ ಕೇಸರಿ ಬಣ್ಣದ ಮಹತ್ವವನ್ನು ಬಣ್ಣನೆ ಮಾಡಿ ಬೆನ್ನು
ತಟ್ಟಿಕೊಂಡಿದ್ದಾರೆ’.

ADVERTISEMENT

‘ಕೇಸರಿ ಬಿಜೆಪಿಯವರ ಒಲವಿನ ಬಣ್ಣ. ಅದು ಪ್ರತಿಪಕ್ಷಗಳ ಕಣ್ಣಿಗೆ ಸುಣ್ಣ ಅಂತೆ. ಹಾಗಾಗಿ ಕೇಸರಿ ಕಂಡರೆ ವಿರೋಧ ಪಕ್ಷದವರು ಕೆರಳಿದ ಕೇಸರಿಯಂತಾಗಿದ್ದಾರೆ. ಬಿಜೆಪಿಯವರು ಬಣ್ಣ ಬದಲಾಯಿಸಲೇಬೇಕು ಎಂದು
ಒತ್ತಾಯಿಸಿದ್ದಾರೆ’.

‘ಒಂದೊಂದು ಚುನಾವಣೆಗೆ ಒಂದೊಂದು ಬಣ್ಣ ಬದಲಾಯಿಸುವ ಪಕ್ಷ ನಮ್ಮದಲ್ಲ. ಹಳದಿ ಕಣ್ಣಿನವರಿಗೆ ಕಾಣುವುದೆಲ್ಲಾ ಹಳದಿ ಅನ್ನುವಂತೆ ಪ್ರತಿಪಕ್ಷದವರಿಗೆ ಬಿಜೆಪಿ ಕಾರ್ಯಕ್ರಮಗಳೆಲ್ಲಾ ಕೇಸರಿಯಾಗಿ ಕಂಡರೆ ಅದು ಅವರಿಗಿರುವ ದೃಷ್ಟಿದೋಷ ಅಂತ ಬಿಜೆಪಿಯವರೂ ಬಣ್ಣ ಎರಚಿದ್ದಾರೆ’.

‘ಮಾಸಿಹೋಗುವ ಗೋಡೆ ಬಣ್ಣದ ವಿಚಾರವನ್ನು ಇಷ್ಟೆಲ್ಲಾ ಬಣ್ಣ ಕಟ್ಟಿ ವಿವಾದ ಮಾಡಬೇಕೆ?’

‘ಸರ್ಕಾರ ಶಿಕ್ಷಣವನ್ನು ಕೇಸರೀಕರಣ ಮಾಡಲು ಹೊರಟಿದೆ. ಶಾಲೆಗಳಿಗೆ ಕೇಸರಿ ಬಳಿಯುವುದರ ಹಿಂದೆ ಬಿಜೆಪಿಯ ಚುನಾವಣಾ ತಂತ್ರವೂ ಇದೆ ಅಂತ ವಿರೋಧ ಪಕ್ಷದವರಿಗೆ ಅನುಮಾನ ಬಂದಿರಬಹುದು’.

‘ಶಾಲಾ ಮಕ್ಕಳಿಗೆ ಕೇಸರಿ ಸಮವಸ್ತ್ರ ಜಾರಿಗೆ ತರಬಹುದು ಅಂತನಾ?’

‘ಅಲ್ಲ. ಎಲೆಕ್ಷನ್ ಟೈಮ್‌ನಲ್ಲಿ ಕೇಸರಿ ಬಣ್ಣದ ಶಾಲೆಗಳು ಮತಕೇಂದ್ರಗಳಾದರೆ ಬಿಜೆಪಿ ಬಣ್ಣಕ್ಕೆ ಮತದಾರರು ಮರುಳಾಗಿಬಿಡುತ್ತಾರೇನೋ ಎಂಬ ಆತಂಕ ವಿಪಕ್ಷ ನಾಯಕರಿಗೆ ಇರಬಹುದು...’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.