ADVERTISEMENT

ಚುರುಮುರಿ | ಮುತ್ತಿನ ಮಾತ್ರೆ

ಲಿಂಗರಾಜು ಡಿ.ಎಸ್
Published 31 ಆಗಸ್ಟ್ 2020, 20:15 IST
Last Updated 31 ಆಗಸ್ಟ್ 2020, 20:15 IST
ಚುರುಮುರಿ
ಚುರುಮುರಿ   

‘ಮತ್ತಿನ ಮಾತ್ರೆ ಸೀಜ್ ಮಾಡ್ಯವುರಂತೆ ನೋಡ್ಲಾ’ ಅಂದ್ರು ತುರೇಮಣೆ.

‘ಮುತ್ತು ಕೊಡೋದೆಲ್ಲಾ ಹುಲಿಯಾನ ಕಾಲಕ್ಕೆ ಹೊಂಟೋಯ್ತು. ನಾವೇನಿದ್ರೂ ತುತ್ತು ಮಾತ್ರಾ ಕೊಡೋದು ಅಂದವ್ರೆ ರಾಜಾಉಲಿ’ ಅಂತಂದೆ.

‘ತುತ್ತು ಕೊಡಕ್ಕೆ ದುಡ್ಡು ಎಲ್ಲದಲಾ! ಮೋದಿ ಮಾವಾರು ‘ಎಲ್ಲದೆ ದುಡ್ಡು! ಜಿಎಸ್‍ಟಿ ಕಮ್ಮಿ ಬಂದದೆ. ಆಮೇಲೆ ನೋಡನ? ಈಗ ಬೇಕಾರೆ ಸಾಲ ತಗಳಿ’ ಅಂತ ಈರಭದ್ರನ ಥರಾ ಮೂರು ಬೆಳ್ಳು ತೋರಿಸ್ಯವರೆ’ ಅಂದ್ರು.

ADVERTISEMENT

‘ಹಂಗಾರೆ ಈಗ ರಾಜಾಉಲಿ, ನೃತ್ಯಾನಂದ ಸ್ವಾಮಿ ರಿವರ್ಸ್ ಬ್ಯಾಂಕಲ್ಲಿ ಕೈಸಾಲ ತಕ್ಕಬೇಕಾಯ್ತದೆ ಅನ್ನಿ’ ಅಂದೆ.

‘ಲೋ, ನಾನೇಳಿದ್ದು ಬೆಂಗಳೂರೇಲಿ ಮತ್ತಿನ ಮಾತ್ರೆ ಮಾರೋರು ಸಿಗೇಬಿದ್ದು ಗಿರಾಕಿಗಳ ದೊಡ್ಡ ಪಟ್ಟಿ ಕೊಟ್ಟವರಂತೆ ಅಂತ’.

‘ಓ ಹಂಗೇನ್ಸಾ, ವೀಕೆಂಡ್ ಪಾರ್ಟಿಗಳಲ್ಲಿ ಮಾತ್ರೆ ಯಾಪಾರ ಜೋರಾಗ್ಯದೆ ಅಂತ ಸ್ಕ್ಯಾಂಡಲ್ ಆಗದೆ. ಮುಸುಡಿ ಅಂದ ಹೆಚ್ಚಿಸಿ
ಗ್ಯಳಕೆ, ಗ್ವಾಮಾಳೇಲಿ ರಾಗ ಕಡೆಯಕೆ, ಆಕ್ಟಿಂಗಲ್ಲಿ ಕಿಕ್ಕು ಬರಕ್ಕೆ ಅಂತ ಮಾತ್ರೆ ತಗತವಂತೆ’.

‘ಅಲ್ಲ ಕಲಾ, ಇವು ಮಾತ್ರೆ ತಗಂಡು ಅದೇನು ದಬ್ಬಾಕ್ತವ್ಲಾ? ನಾಟಕದೇಲಿ ಮಂಡೇದ ಸೀನರಿ ಹಾಕಿ ಮಳವಳ್ಳಿ ಈರೋಯಿನ್ನು ಬಂದ್ರೆ ಯಾವ ಮಾತ್ರೆಯೂ ಬ್ಯಾಡ, ಪದ ಬಾಯಿಂದ ಹಂಗೇ ಕಡದು ಬತ್ತವೆ!’ ಅಂದ್ರು ನಾಟಕದ ಕೃಷ್ಣನ ಸ್ಟೈಲಲ್ಲಿ.

‘ಹೌದು ಸಾ, ಮಾತ್ರೆ ತಗಂದ್ರೆ ಇನ್ನೂ ತಾಕತ್ತು ಬಂದದಂತೆ. ಸರ್ಕಾರಕ್ಕೆ ಕೇಂದ್ರದಿಂದ ದುಡ್ಡು ತರೋ ತಾಕತ್ತು, ಶಾಸಕನಿಗೆ ಮತದಾರರ ಸೇವೆ ಮಾಡಕೆ ತಾಕತ್ತು, ಅಧಿಕಾರಿಗಳಿಗೆ ಕಳ್ಳಬೀಳದಂಗೆ ಕೆಲಸ ಮಾಡಕ್ಕೆ ತಾಕತ್ತು, ವಿರೋಧ ಪಕ್ಸಕ್ಕೆ ನಿಷ್ಟೂರಾಗಿ ಮಾತಾಡಕ್ಕೆ ತಾಕತ್ತು, ಸರ್ಕಾರಕ್ಕೆ ಡ್ರಗ್ಸ್ ಮೂಲ ಪತ್ತೆ ಹಚ್ಚಕ್ಕೆ ತಾಕತ್ ಕಿ ದವಾ ಕೊಟ್ರೆ ಹ್ಯಂಗೆ!’ ಅಂತ ನನ್ನ ಮನದ ಮಾತು ಅಂದೆ.

‘ಮತ್ತಿನ ಮಾತ್ರೆ ತಗೊಳ್ಳಿ ತಾಕತ್ ಬೇಗ ಬರಿಸಿ ಅಂತ ವೊಸಾ ಯೋಜನೆ ಮಾಡಬೌದು ಕನಾ ಬಡ್ಡಿಹೈದ್ನೆ’ ಅಂದ್ರು ತುರೇಮಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.