ADVERTISEMENT

ಚುರುಮುರಿ | ಮನೆ ಶಿಕ್ಷಣ

ಮಣ್ಣೆ ರಾಜು
Published 3 ಜೂನ್ 2020, 2:49 IST
Last Updated 3 ಜೂನ್ 2020, 2:49 IST
   

‘ಎಸ್‍ಎಸ್‍ಎಲ್‍ಸಿ, ಪಿಯುಸಿ ಮಕ್ಕಳೇ ಇನ್ನೂ ಪರೀಕ್ಷೆ ಮುಗಿಸಿ ಪಾಸ್ ಆಗಲಿಲ್ಲ. ಹೀಗಿರುವಾಗ, ಪ್ರೈಮರಿ ಮಕ್ಕಳು ಮರಳಿ ಶಾಲೆಗೆ ಯಾವಾಗ ಹೋಗ್ತಾರೋ...’ ಸುಮಿ ಆತಂಕಪಟ್ಟಳು.

‘ಕೊರೊನಾ ಕಾಟ ಹೀಗೇ ಮುಂದುವರಿದರೆ ಗುಡಿ ಕೈಗಾರಿಕೆ ಥರಾ ಮಕ್ಕಳಿಗೆ ಮನೆಯೇ ಪಾಠಶಾಲೆ ಆಗಬಹುದು’ ಅಂದ ಶಂಕ್ರಿ.

‘ಅಂದ್ರೆ, ಟೀಚರ್‌ಗಳೇ ಮಕ್ಕಳ ಮನೆಗೆ ಬಂದು ಪಾಠ ಹೇಳಬಹುದಾ?’

ADVERTISEMENT

‘ಇಲ್ಲ, ಅಪ್ಪ-ಅಮ್ಮಂದಿರು ಸಬ್ಜೆಕ್ಟ್ ಸ್ಟಡಿ ಮಾಡಿ ತಮ್ಮ ಮಕ್ಕಳಿಗೆ ಪಾಠ ಹೇಳಬೇಕಾಗುತ್ತದೆ’.

‘ನೀವು ಪಾಠ ಹೇಳಿಕೊಟ್ಟರೆ ಮಕ್ಕಳು ಉದ್ಧಾರ ಆದಂತೆ, ನಿಮ್ಮ ಎಸ್‍ಎಸ್‍ಎಲ್‍ಸಿ ಮಾರ್ಕ್ಸ್‌ ಕಾರ್ಡ್ ಯೋಗ್ಯತೆ ನಂಗೂ ಗೊತ್ತು... ನಾನು ಕಲಿಸ್ತೀನಿ ಬಿಡಿ’.

‘ಗಂಡನಿಗೆ ಪಾಠ ಕಲಿಸುವಷ್ಟು ಸುಲಭವಲ್ಲ, ಮಕ್ಕಳಿಗೆ ಪಾಠ ಬೋಧಿಸುವುದು’.

‘ನನಗೆ ಕ್ವಾಲಿಫಿಕೇಷನ್ ಇಲ್ಲ ಅಂತನಾ? ನೋಡ್ತಿರಿ, ಆನ್‍ಲೈನ್‍ನಲ್ಲಿ ಟೀಚರ್ ಟ್ರೈನಿಂಗ್ ಮಾಡಿ, ಮಕ್ಕಳು ಔಟಾಫ್ ಔಟ್ ಮಾರ್ಕ್ಸ್‌ ತಗೊಳ್ಳೋಥರಾ ಪಾಠ ಹೇಳಿ, ಬೆಸ್ಟ್ ಟೀಚರ್ ಅನ್ನಿಸಿಕೊಳ್ತೀನಿ’.

‘ಸರ್ಕಾರಕ್ಕೆ ಅಮ್ಮಂದಿರ ಬಗ್ಗೆ ನಂಬಿಕೆ ಇಲ್ಲ, ನೀವು ಮಕ್ಕಳಿಗೆ ಕಾಪಿ ಹೊಡೆಸಿ ಫುಲ್ ಮಾರ್ಕ್ಸ್‌ ಕೊಡ್ತೀರಿ ಅಂತ’.

‘ಅಷ್ಟೊಂದು ಅನುಮಾನವಿದ್ದರೆ ಪರೀಕ್ಷಾ ಕೇಂದ್ರವನ್ನು ಚೇಂಜ್ ಮಾಡಿ, ಪರೀಕ್ಷೆ ನಡೆಸಲಿ’.

‘ಹಾಗೇ ಮಾಡಬಹುದು, ನಮ್ಮ ಮಕ್ಕಳು ಪಕ್ಕದ ಮನೆಯ ಪರೀಕ್ಷಾ ಕೇಂದ್ರದಲ್ಲಿ, ಅವರ ಮಕ್ಕಳು ನಮ್ಮ ಮನೆಯಲ್ಲಿ ಪರೀಕ್ಷೆ ಬರೆಯುವ ರೂಲ್ಸ್ ಮಾಡಬಹುದು’.

‘ಅಂಥಾ ರೂಲ್ಸ್ ಬೇಡರೀ, ಪಕ್ಕದ ಮನೆಯವಳು ಮನೆಗೆ ಬಂದವರಿಗೆ ಒಂದು ಲೋಟ ಕಾಫಿನೂ ಕೊಡೊಲ್ಲ, ಇನ್ನು ನಮ್ಮ ಮಕ್ಕಳು ಪರೀಕ್ಷೆಯಲ್ಲಿ ಕಾಪಿ ಮಾಡಲು ಬಿಡ್ತಾಳಾ? ಹೇಗಾದ್ರೂ ಮಾಡಿ ಫೇಲ್ ಮಾಡಿಸಿಬಿಡ್ತಾಳೆ! ತಡವಾದರೂ ಪರವಾಗಿಲ್ಲ, ಮಕ್ಕಳು ಶಾಲೆಯಲ್ಲೇ ಕಲಿತು ಅಲ್ಲೇ ಪರೀಕ್ಷೆ ಬರೆಯಲಿ...’ ಎಂದಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.