ಚುರುಮುರಿ: ಜನರಿಗೆ ಪ್ರವೇಶವಿಲ್ಲ!
ಕಾಡಿನ ಪ್ರಾಣಿಗಳೆಲ್ಲ ಸಭೆ ಸೇರಿ ಗುಸು ಗುಸು ಮಾತನಾಡುತ್ತಲೇ ಇದ್ದವು.
‘ಸದ್ದು...’ ರಾಜಗಾಂಭೀರ್ಯದಲ್ಲಿ ಬಂದು ಕುಳಿತು ಗರ್ಜಿಸಿತು ಸಿಂಹ.
ಪ್ರಾಣಿಗಳು ಸೈಲೆಂಟ್ ಆದವು. ‘ಇಂದಿನ ಸಭೆಯ ಅಜೆಂಡಾ ಏನು’ ಕೇಳಿತು ಕಾಡಿನ ರಾಜ.
‘ಕರ್ನಾಟಕ ಸರ್ಕಾರದ ನಿರ್ಧಾರ ಕುರಿತು ಚರ್ಚಿಸುವುದು ಮಹಾರಾಜ’ ವಿನಯದಿಂದ ಹೇಳಿತು ಜಿಂಕೆ.
‘ಸರ್ಕಾರದ ನಿರ್ಧಾರವೇ? ಏನಂತೆ ಅವರದು?’
‘ದನ–ಕರುಗಳನ್ನು ಕಾಡಿನೊಳಗೆ ಬಿಡಬಾರದು ಎಂದು ಆದೇಶ ಹೊರಡಿಸಿದ್ದಾರೆ ಪ್ರಭು’.
‘ಜಾನುವಾರುಗಳು ಯಾಕ್ ಬರಬಾರದಂತೆ?’
‘ನಮ್ಮ ರಕ್ಷಣೆಗೆ, ಅಂದ್ರೆ ಕಾಡು ಮತ್ತು ಕಾಡಿನ ಪ್ರಾಣಿಗಳನ್ನು ಕಾಪಾಡುವ ಉದ್ದೇಶವಂತೆ ರಾಜ’.
ಜೋರಾಗಿ ನಕ್ಕ ಸಿಂಹ, ‘ದನ–ಕರುಗಳು ಕಾಡಿನೊಳಗೆ ಬಂದರೆ ನಮಗೆ ಭಯವಿಲ್ಲ, ಈ ಜನ–ಪ್ರಭುಗಳು ಅರಣ್ಯದೊಳಗೆ ಬಂದರೆ ನಮಗೆ ಆತಂಕ’ ಎಂದಿತು.
‘ಹೌದು, ದನಗಳು ಬಂದರೆ ಏನೋ ಒಂದಿಷ್ಟು ಹುಲ್ಲು ತಿಂದು ಹೋಗುತ್ತವೆ. ಆದರೆ, ಈ ಜನಗಳು ಬಂದರೆ ಕಾಡನ್ನೇ ನುಂಗಿಬಿಡ್ತಾರೆ’ ಗಂಭೀರವಾಗಿ ಹೇಳಿತು ಆನೆ.
ಸಭೆಯಲ್ಲಿ ಮತ್ತೆ ಗುಸುಗುಸು ಆರಂಭವಾಯಿತು. ‘ಸದ್ದು..! ಏನದು ಗುಸುಗುಸು’ ಎಂದಿತು ಸಿಂಹ.
‘ಪ್ರಭು, ಇಲ್ಲಿ ಭಿನ್ನಮತೀಯ ಚಟುವಟಿಕೆ ನಡೆಯುತ್ತಿದೆ’ ಎಂದಿತು ಜಿಂಕೆ.
‘ಏನಂತೆ ವಿಷಯ?’
‘ಈ ಕಾಡಿನ ಅಭಿವೃದ್ಧಿಗೆ ನಿಮಗಿಂತ ಮಂತ್ರಿ ಹುಲಿಯದ್ದೇ ಹೆಚ್ಚಿನ ಕೊಡುಗೆ ಇದೆಯಂತೆ. ಹಾಗಂತ ಮರಿ ಹುಲಿ ಹೇಳಿಕೊಂಡು ಓಡಾಡುತ್ತಿದೆ.
ಸಿಂಹ ಏನೂ ಪ್ರತಿಕ್ರಿಯಿಸಲಿಲ್ಲ. ಆದರೆ, ನಗುತ್ತಾ ಆನೆ ಹೇಳಿತು, ‘ರಾಜ ರಾಜನೇ, ಮಂತ್ರಿ ಮಂತ್ರಿಯೇ’.
‘ಅನಗತ್ಯ ಚರ್ಚೆ ಬೇಡ. ದನಗಳು ಬರಬಹುದು. ಆದರೆ, ಪ್ರಭಾವಿ ಜನಗಳಿಗೆ ಈ ಕಾಡಿನೊಳಗೆ ಪ್ರವೇಶವಿಲ್ಲ ಎಂದು ಅರಣ್ಯದ ಮುಂದೆ ಬೋರ್ಡ್ ಹಾಕಿ’ ಎಂದು ಪುನರುಚ್ಚರಿಸಿದ ಸಿಂಹ ಎದ್ದು ಹೊರಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.