ADVERTISEMENT

ಚುರುಮುರಿ: ಗುತ್ತಿಗೆ ಶ್ರೀ

ಆನಂದ ಉಳಯ
Published 24 ಡಿಸೆಂಬರ್ 2021, 19:30 IST
Last Updated 24 ಡಿಸೆಂಬರ್ 2021, 19:30 IST
   

‘ಮುಂದಿನ ತಿಂಗಳು ಹೊಸ ಪ್ರಶಸ್ತಿ ಪ್ರಕಟವಾಗುತ್ತೇರಿ’ ಎಂದಳು ಹೆಂಡತಿ. ನನಗೆ ಆಶ್ಚರ್ಯವಾಯಿತು. ‘ಇದು ಹೊಸ ಪ್ರಶಸ್ತಿನೋ ಅಥವಾ ಹಳೆ ಪ್ರಶಸ್ತಿಗೇ ಹೊಸ ಹೆಸರು ಕೊಡುವ ಪ್ಲ್ಯಾನೋ?’ ಎಂದೆ.

‘ಇಲ್ಲಾರಿ, ಇದು ಹೊಚ್ಚ ಹೊಸ ಪ್ರಶಸ್ತಿ’ ಎಂದಳು.

‘ಮುಂದಿನ ತಿಂಗಳು ಹೇಗೂ ರಿಪಬ್ಲಿಕ್ ಡೇ ಸಂದರ್ಭದಲ್ಲಿ ಪ್ರಶಸ್ತಿಗಳನ್ನ ಅನೌನ್ಸ್ ಮಾಡ್ತಾರೆ. ನಿನ್ನದೇನು ಈ ಹೊಸ ಪ್ರಶಸ್ತಿ ರಾಗ?’ ಎಂದೆ.

ADVERTISEMENT

‘ಹ್ಞಾಂ! ಈಗ ಆ ಪ್ರಶಸ್ತಿಗೆ ಒಳ್ಳೆ ಹೆಸರೂ ಸಿಕ್ತು. ಅದೇರಿ, ಪದ್ಮಶ್ರೀ ತರಹ ಗುತ್ತಿಗೆಶ್ರೀ...’ ಎಂದಳು.

‘ಗುತ್ತಿಗೆಶ್ರೀ?! ಹಳೆ ಪ್ರಶಸ್ತಿಗೆ ಹೊಸ ಹೆಸರು ಕೊಡುವ ಯೋಜನೆಯೇ? ಅಂದರೆ ಗುತ್ತಿಗೆ ಭೂಷಣ, ಗುತ್ತಿಗೆ ವಿಭೂಷಣ, ಗುತ್ತಿಗೆ ರತ್ನ... ಇವೆಲ್ಲಾ ಇರಬಹುದೇ?’

‘ಐಡಿಯಾತೊ ಅಚ್ಛಾ ಹೈ’ ಎಂದಳು.

‘ಅದೇನು ಹೇಳು’ ಎಂದು ಅಂಗಲಾಚಿದೆ.

‘ಗುತ್ತಿಗೆ ಕಾಮಗಾರಿಗಳ ಮೊತ್ತದಲ್ಲಿ 40 ಪರ್ಸೆಂಟ್ ಮಾಮೂಲು ಕೊಡಬೇಕಿದೆ ಅಂತ ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದು ದೂರಿತ್ತಲ್ವೇ?’

‘ಹೌದು’

‘ನಮೋ ಅವರು ಮನಮೋಹನ್ ಅವರಂತೆ ಮೌನ ವಹಿಸಿದ್ದಾರಲ್ಲ. ಅದಕ್ಕೆ ಗುತ್ತಿಗೆದಾರರ ಸಂಘದವರು, ಯಾರ‍್ಯಾರು ಮಾಮೂಲು ಕೇಳ್ತಾರೆ ಎಂಬ ಪಟ್ಟಿಯನ್ನ ಮುಂದಿನ ತಿಂಗಳು ಬಿಡುಗಡೆ ಮಾಡ್ತಾರಂತೆ.’

‘ಸೊ?’

‘ಆ ಪಟ್ಟಿ ಆಧಾರದ ಮೇಲೆ ಗುತ್ತಿಗೆಶ್ರೀ, ಗುತ್ತಿಗೆ ಭೂಷಣ, ಗುತ್ತಿಗೆ ವಿಭೂಷಣ, ಗುತ್ತಿಗೆ ರತ್ನ ಹೀಗೆ ಪ್ರಶಸ್ತಿ ಕೊಡಬಹುದಲ್ಲವೇ? ಆದರೆ ಒಂದು ಸಮಸ್ಯೆ. ‘ಮಾಮೂಲಿ’ ಪಡೆಯುವವರ ಹೆಸರುಗಳನ್ನ ಜಿಲ್ಲಾವಾರು ಬಿಡುಗಡೆ ಮಾಡ್ತಾರಂತೆ. ಆಗ ಲಿಸ್ಟ್ ತುಂಬಾ ದೊಡ್ಡದಾಗದೇ?’

‘ಆಗಲಿ, ಕೆಲವೊಮ್ಮೆ ಕೆಲವು ಪ್ರಶಸ್ತಿ ವಿಜೇತರ ಸಂಖ್ಯೆ ದಿಢೀರ್‌ ಎಂದು ಏರಿಕೆಯಾಗುವುದಿಲ್ಲವೇ?

‘ಆಗೆಲ್ಲಾ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಹಂಬಲ ಜೋರಾಗಿರುತ್ತದೆ. ಆದರೆ ಇಲ್ಲಿ ಮಾತ್ರ ತಮ್ಮ ಹೆಸರು ಪ್ರಕಟವಾಗದಿರಲಿ ಎಂದು ಲಾಬಿ ಮಾಡುವವರ ಸಂಖ್ಯೆ ತುಂಬ ದೊಡ್ಡದಿರುತ್ತದೆ’ ಎಂದಳು.

ಅದಕ್ಕೂ ಮಾಮೂಲಿ ಕೊಡಬೇಕೆ? ಎಷ್ಟು ಪರ್ಸೆಂಟ್? ಯಾರಿಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.