ADVERTISEMENT

ಚುರುಮುರಿ | ಕೋಳಿಗಳು ಕ್ರಾಸಾಯ್ತವೆ!

ಲಿಂಗರಾಜು ಡಿ.ಎಸ್
Published 2 ಜೂನ್ 2020, 3:13 IST
Last Updated 2 ಜೂನ್ 2020, 3:13 IST
   

‘ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ’ ಅಂತ ತುರೇಮಣೆ ಹಳೆ ರೆಕಾರ್ಡು ಪಲುಕ್ತಾ ಕುಂತುದ್ದರು. ನಾನು ಅವರ ಗಾನ ಕೇಳಿ ‘ಅಲ್ಲಾ ಸಾ, ಅಲ್ಲಿ ನೋಡಿದ್ರೆ ಪಾಪದ ಸಿಎಮ್ಮು ಕೊರೊನಾ ಬಲಿ ಹಾಕಬೇಕು ಅಂತ ಮುಕ್ಕುರಿತಾವರೆ. ಇಕ್ಕಡೆ ಶಾಸಕರು ಕಾಲಿಗೆ ಕತ್ತಿ ಕಟ್ಟಿಕ್ಯಂಡು ಕೋಳಿಜಗಳ ಆಡತಾ ಕುಂತವ್ರೆ! ಹೆಂಗೆ ಸಾರ್?’ ಅಂತಂದೆ.

‘ನೋಡ್ಲಾ, ರಾಜಕೀಯ ಇರಾಗಂಟಾ ಕೋಳಿಜಗಳದ ಯತ್ನ ಇರತದೆ. ರಾಜಕೀಯ ಪಕ್ಷಗಳೆಲ್ಲಾ ಕೋಳಿಪಾರಂ ಇದ್ದಂಗೆ ಕನೋ! ಕಾವು-ಮೇವು ಕೊಟ್ಟು ಬೆಳಸಿದ ಕನ್ನೆಗೋಳಿಗಳ ಇನ್ಯಾರೋ ಆರ್ಥಿಕ ಪ್ಯಾಕೇಜ್ ಕೊಟ್ಟು ತಕ್ಕೋಯ್ತರೆ!’ ಅಂದರು. ನನಗೆ ಏನೂ ಅರ್ಥಾಗಲಿಲ್ಲ.

‘ಅಲ್ಲಾ ಸಾ, ಪಕ್ಷಕ್ಕೂ ಕೋಳಿಗೂ ಏನು ಸಂಬಂಧ?’ ಅಂದೆ.

ADVERTISEMENT

‘ನೋಡ್ಲಾ, ತೆನೆ ಪಾರಮ್ಮು ಅಂದ್ರೆ ಪ್ಯಾಮಿಲಿ ಕೋಳಿಪಾರಂ ಇದ್ದಂಗೆ. ಅಲ್ಲಿ ವತ್ತಾರೆಗೆ ಸಾಂದರ್ಭಿಕವಾಗಿ ಕೊಕ್ಕೋ ಅಂತ ಕೂಗದು, ಮೇವು ತಿನ್ನದು ಪ್ಯಾಮಿಲಿ ಕೋಳಿಗಳು ಮಾತ್ರ. ಕೈ ಪಾರಮ್ಮಲ್ಲಿ ಇರೂವೆಲ್ಲಾ ಸೀನಿಯರ್ ಕೋಳಿಗಳು. ಆದ್ರೂ ಮೊಟ್ಟೆ ಇಟ್ಟು ದಬ್ಬಾಕ್ತೀವಿ ಅಂತ ನುಲಿತವೆ. ಕಮಲದ ಪಾರಂ ದೊಡ್ಡದು. ಅಲ್ಲಿ ಕೊತ್ತಿಗಳು, ಅತೃಪ್ತ ನಾಟಿ ಕೋಳಿಗಳು, ಸೀಟಿ ಕೋಳಿಗಳು, ಘಾಟಿ ಕೋಳಿಗಳು, ಮೊಟ್ಟೆ ಕೋಳಿಗಳು, ವಲಸೆ ಕೋಳಿಗಳು, ಕಾವುಗೋಳಿಗಳವೆ. ಈ ಕೋಳಿಗಳಲ್ಲಿ ಮೇವಿಗೋಸ್ಕರ ಭಿನ್ನಮತ ಜಾಸ್ತಿಯಾಗಿ ಕಚ್ಚಾಡುತ್ಲೇ ಇರ್ತವೆ’ ಅಂದ್ರು ತುರೇಮಣೆ.

‘ಅಲ್ಲಾ ಸಾ, ಕಿತ್ತಾಡ ಕೋಳಿಗಳ ಗ್ವಾಮಾಳೆ ಕಿವುಚಿ ಚಿಚ್ಚಿ ಮಾಡಿಕ್ಯಂಡು ತಿಂದುಬುಡದಲ್ವಾ?’ ಅಂದೆ ನಾನು.

‘ಅಲ್ಲೋ ಎಡವಟ್ಟಾ, ಬಾಂಬೇ ಕೊತ್ತಿಗಳು ಇನ್ನೊಂದಷ್ಟು ಕೋಳಿಗಳ ಎಪ್ಪೆಸ್ ಮಾಡ್ಕ್ಯಂಬರಕೆ ನಾವು ತಯಾರ್ ಅಂದವೆ’ ಅಂತ ರಾಂಗಾದ್ರು.

‘ಹಂಗಾರೆ ಇನ್ನೊಂದು ಸತಿ ಮುಂಬೈನಗೆ ಕೋಳಿ ಕ್ಯಾಂಪದೆ ಅನ್ನಿ!’ ಅಂತಂದೆ ನಾನು.

‘ಈಗಲೇ ಕೋಳಿಗಳು ಜಾಸ್ತಿಯಾಗಿ ಜಾಗ ಸಾಕಾಯ್ತಿಲ್ಲ. ಆಮೇಲೆ ನಾಟಿ, ಬ್ರಾಯ್‍ಲರು, ಮೊಟ್ಟೆ ಕೋಳಿಗಳು ಕ್ರಾಸಾಗಿಬುಟ್ರೆ ಹಕ್ಕಿಜ್ವರ ಬತ್ತದೆ ಕನೋ!’ ಅಂದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.