
ಅಪಘಾತದಲ್ಲಿ ಗಾಯಗೊಂಡು ಗೋಪಾಲಿ ಹಾಸಿಗೆ ಹಿಡಿದಿದ್ದ. ಬ್ರೆಡ್ಡು, ಬಾಳೆಹಣ್ಣು ತಗೊಂಡು ಶಂಕ್ರಿ, ಸುಮಿ ಆರೋಗ್ಯ ವಿಚಾರಿಸಲು ಬಂದಿದ್ದರು.
‘ಅಪಘಾತ ಹೇಗಾಯ್ತೋ ಗೋಪಾಲಿ?’ ಶಂಕ್ರಿ ಕೇಳಿದ.
‘ಅವರನ್ನು ಕೇಳಬೇಡಿ, ಬಂದವರಿಗೆಲ್ಲಾ ಅಪಘಾತದ ವಿವರ ಹೇಳಿ ಹೇಳಿ ಅವರಿಗೆ ‘ಉಪಘಾತ’ವಾಗಿದೆ. ನಾನು ಹೇಳಿತೀನಿ, ಬೈಕಿನಲ್ಲಿ ಬರುತ್ತಿದ್ದಾಗ ಬೀದಿನಾಯಿ ಅಟ್ಟಿಸಿಕೊಂಡು ಬಂತಂತೆ, ಗಾಬರಿಯಾಗಿ ರಸ್ತೆ ಗುಂಡಿಗೆ ಬಿದ್ದು ಹೀಗೆ ಮಾಡಿಕೊಂಡಿದ್ದಾರೆ...’ ಗೋಪಾಲಿ ಹೆಂಡ್ತಿ ವೈಶಾಲಿ ಕಣ್ಣು ಒರೆಸಿಕೊಂಡಳು.
‘ರಸ್ತೆ ಗುಂಡಿ, ಬೀದಿನಾಯಿ ಎರಡೂ ಅಪಘಾತಕಾರಿಗಳೇ, ಗುಂಡಿ ಮುಚ್ಚಬಹುದು. ನಾಯಿಯ ಬಾಯಿ ಮುಚ್ಚಲಾಗುವುದಿಲ್ಲ’ ಸುಮಿ ಸಂಕಟಪಟ್ಟಳು.
‘ಹೌದು. ನಾಯಿ ನಮ್ಮನ್ನು ಕಚ್ಚುವುದು ಅಪರಾಧವಲ್ಲ, ನಾವು ನಾಯಿಯನ್ನು ಕಚ್ಚೋದು ಅಪರಾಧ ಎನ್ನುವಂತಾಗಿದೆ’ ಅಂದ ಗೋಪಾಲಿ.
‘ಬೀದಿನಾಯಿ ಕಾಡುಪ್ರಾಣಿಯೋ ನಾಡು ಪ್ರಾಣಿಯೊ?’
‘ಸದ್ಯಕ್ಕೆ ಕಾಡುವ ಪ್ರಾಣಿ. ಕಾಡಿನಲ್ಲಿ ನೆಲೆಯಿಲ್ಲ, ನಾಡಿನಲ್ಲಿ ಬೆಲೆಯಿಲ್ಲ. ಬೀದಿನಾಯಿಗಳ ಬಾಳು ತ್ರಿಶಂಕುವಾಗಿದೆ’.
‘ಬೀದಿನಾಯಿಗಳ ಹಾವಳಿ ತಡೆಯಲು ಸರ್ಕಾರ ನಾಯಿ ನೀತಿ ರೂಪಿಸಬೇಕು. ಆಶ್ರಯ ಕೇಂದ್ರಗಳಲ್ಲಿ ಬೀದಿನಾಯಿಗಳಿಗೆ ಆಶ್ರಯ ಕಲ್ಪಿಸಬೇಕು ಎಂದು ಕೋರ್ಟ್ ಹೇಳಿದೆ’.
‘ಬೀದಿನಾಯಿಗಳ ಸಂತತಿ ಜಾಸ್ತಿಯಾಗ್ತಿದೆ. ಅವುಗಳಿಗೂ ಕುಟುಂಬ ಕಲ್ಯಾಣ ನೀತಿ ಜಾರಿ ಮಾಡಬೇಕು, ಆರತಿಗೊಂದು ಮರಿ, ಕೀರುತಿಗೊಂದು ಮರಿ ಸಾಕು ಎಂದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಬೇಕಂತೆ’.
‘ಬೀದಿನಾಯಿಗಳಿಗೆ ಉದ್ಯೋಗ ಕೊಟ್ಟರೆ ಕಾಯಕ ಮಾಡಿಕೊಂಡು ತಮ್ಮ ಕಾಲು ಮೇಲೆ ತಾವು ನಿಂತುಕೊಳ್ಳುತ್ತವೆ’.
‘ಎಜುಕೇಷನ್ ಇಲ್ಲ, ಲಾಂಗ್ವೇಜ್ ಗೊತ್ತಿಲ್ಲದ ಬೀದಿನಾಯಿಗಳು ಯಾವ ಉದ್ಯೋಗ ಮಾಡುತ್ತವೆ?’
‘ಮನೆ, ಕಚೇರಿ, ಕಂಪನಿ, ಕಾರ್ಖಾನೆಗಳ ಕಾವಲಿಗೆ ಬೀದಿನಾಯಿಗಳನ್ನು ನೇಮಿಸಬಹುದು. ಊಟ ಕೊಟ್ಟರೆ ಸಾಕು ಸಂಬಳ-ಸಾರಿಗೆ ಕೇಳೋದಿಲ್ಲ...’
‘ಆದರೂ, ಬೀದಿನಾಯಿಗಳು ಬೀದಿಗೆ ಬಾರದಂತೆ ತಡೆಯೋದು ಅನ್ಯಾಯ ಅಲ್ವಾ?’ ಗೋಪಾಲಿ ನರಳುತ್ತಾ ಮಗ್ಗುಲಾದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.