ADVERTISEMENT

ಪೋಲ್‍ಮಾರ್ಕ್ ಸಿಕ್ತಲ್ಲ!

ಲಿಂಗರಾಜು ಡಿ.ಎಸ್
Published 16 ಡಿಸೆಂಬರ್ 2019, 20:00 IST
Last Updated 16 ಡಿಸೆಂಬರ್ 2019, 20:00 IST
ಚುರುಮುರಿ
ಚುರುಮುರಿ   

‘ಬೀಜೆಪಿ 12 ಅಸೆಂಬ್ಲಿ ಸೀಟುಗಳ ಬಾಚಿ ಬಾಯಿಗೆ ಹಾಕ್ಕ್ಯಂಡುದ್ದಕ್ಕೆ ಅನರ್ಹ ಅಂಬೋ ಕರ್ಮ ಹರೀತಲ್ಲ! ಈಗ ಅರ್ಹರೆಲ್ಲಾ ಬಾಸಿಂಗ ಕಟ್ಟಿಕ್ಯಂಡು ರೆಡಿಯಾಗವೆ ಸಾರ್. ಪಂಚಾಯಿತಸ್ತರು ಏನು ಮಾಡತರೋ?’ ಅಂದೆ.

‘ಹ್ಞೂಂ ಕಲಾ, ಮೊನ್ನೆ ರಾತ್ರಿ ಎಲ್ಲಾ ನವ ಶಾಸಕರೂ ಸಭೆ ಸೇರಿ ಯಡುರಪ್ಪಾರಿಗೆ ವಾಯಿದೆ ಕೊಟ್ಟವ್ರಂತೆ ‘ಸ್ವಾಮಿ ನಾವು ಇನ್ನು ಅನರ್ಹರಲ್ಲ ನಮಗೆ ಬೈಎಲೆಕ್ಷನ್ನಿನಗೆ ಪೋಲ್‍ಮಾರ್ಕ್ ಸಿಕ್ಕಿ ಸೂತಕ ಕಳಕಂಡು ಪುಟವಿಟ್ಟ ಚಿನ್ನದಂಗೆ ಅರ್ಹರಾಗಿದ್ದೀವಿ. ಇಷ್ಟು ದಿನ ಕಳೆದ್ರೂವೆ ಊರಗೌಡ ಅನ್ನಿಸಿಕ್ಯಂಡ ನೀವು ಮಂತ್ರಿ ಪೂಜೆಗೆ ಗುಗ್ಗರಿಗೆ ಹಾಕಿಲ್ಲ, ದಾಸಣ್ಣನಿಗೆ ಗೋವಿಂದ ಅನ್ನಲಿಲ್ಲ, ಜೋಗಿಗೆ ಜೋ ಅನ್ನಲಿಲ್ಲ, ಜಂಗಮ ರಿಗೆ ಕೊಟ್ಟು ಜೈ ಅನ್ನಲಿಲ್ಲ! ಇನ್ನು ನಮ್ಮ ಅಂಗ- ಭಂಗ ನಮ್ಮದೇಯ, ನೀವು ನಮ್ಮ ನಿಷ್ಟೂರ ಮಾಡಬ್ಯಾಡಿ’ ಅಂದವರಂತೆ!’ ಅಂದ್ರು ತುರೇಮಣೆ.

‘ಮಂತೆ ಇನ್ನೇನ್ಸಾ, ಅವರ ಉಪ್ಪು ತಿಂದು ಅವರ ಸೊಪ್ಪು ತಿಂದು ಅವರ ಮೀಸಲು ಇನ್ನೂ ಕೊಡದೇ ಹೋದ್ರೆ ಒಂದೋಗಿ ಎರಡಾದದು! ಜೊತೆಗೆ ವೈರಾಗ್ಯಮೂರ್ತಿ ಸಿದ್ದರಾಮಣ್ಣಾರೇ ನಮ್ಮ ಗುರುಗಳು ಅಂತ್ಲೂ ಅಂದವುರೆ!’ ಅಂದೆ.

ADVERTISEMENT

‘ಹೌದೇಳು, ನನಗೆ ಅಭಿವೃದ್ಧಿ ಚೆನ್ನಾಗಿ ಗೊತ್ತದೆ. ಬೆಂಗಳೂರು ನನಗೇ ಕೊಡಿ ಅಂತ ಒಬ್ಬರು, ನಾನೇ ಗ್ರಹಮಂತ್ರಿ ಅಂತ ನುಲಿದೋರು, ನಾನು ಕಾಮಗಾರಿ ಚೆನ್ನಾಗಿ ಮಾಡ್ತೀನಿ ಅಂದೋರು, ಹಣಕಾಸು ಹಿಡಕ ಎದ್ದೋರು, ಬೆಳಗಾವಿ ರಿಪಬ್ಲಿಕ್ಕಿನ ಡಿಸಿಎಂ ನಾನೇ ಅಂತ ಇನ್ನೊಬ್ರು ಟವಲ್ ಹಾಕ್ಯವರಂತೆ. ಇನ್ನುಳಿದೋರು ಅವರವರ ಶಕ್ತ್ಯಾನುಸಾರ ಪಾಲು-ಪಾರೀಕತ್ತು ಮಾಡಿದ ಚಂದ ನೋಡಿ ಹಾಲಿ ಮಂತ್ರಿಗಳು ಇನ್ನು ನಮ್ಮ ದೌಲತ್ತು, ದೊರೆ ತನ ಬಿಟ್ಟು ದೇಶಾಂತರ ಹೋಗಬೇಕಾಯ್ತ
ದೇನೋ ಅಂತ ಹಲ್ಲಲ್ಲು ಕಡೀತಾವ್ರೆ!’ ಅಂದರು.

‘ಇರಬೌದೇಳಿ, ಸಿದ್ದರಾಮ ಗುರುಗಳ ಶಾಪಕ್ಕೆ ಬಲಿಯಾಗಿ ಪೋಲ್‍ಮಾರ್ಕ್ ಸಿಕ್ಕದೆ ಹಕ್ಕೀ-ಎಂಟಿ ಹಿಂದ್ಲ ಬಾಗಲಾಗೆ ಕುಂತು ಸಂಕಟ ಪಡ್ತಾವಂತೆ. ಇಕ್ಕಡೆ ಬೀಜೆಪಿ ಬೀಜದೋರಿ ರಾಮುಲಣ್ಣ ಗುಟುರು ಹಾಕ್ತಾ ಅದೆ. ಇನ್ನು ಲಕ್ಷ್ಮಣ ಜಾಗ ಬುಡಬೇಕಾಯ್ತದೇನೋ?’ ಅಂದೆ. ಅದುಕ್ಕೆ ತುರೇಮಣೆ ಹೀಗೆ ಮಂಗಳ ಹಾಡಿದರು:
‘ಹೌದು ಹುಲಿಯಾ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.