ADVERTISEMENT

ಚುರುಮುರಿ: ಕಪ್‌ ಟ್ರಂಪಣ್ಣಂದೇ!

ಸುಮಂಗಲಾ
Published 5 ಅಕ್ಟೋಬರ್ 2025, 23:31 IST
Last Updated 5 ಅಕ್ಟೋಬರ್ 2025, 23:31 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ಈ ಸಲ ನೊಬೆಲ್‌ ಶಾಂತಿ ಪ್ರಶಸ್ತಿ ಟ್ರಂಪಣ್ಣಂಗೇ ಸಿಗತೈತಿ!’ ಬೆಕ್ಕಣ್ಣ ಭಲೇ ಸಂಭ್ರಮದಿಂದ ವದರಿತು.

‘ಅಂವಾ ಹುಟ್ಟಾ ಜಗಳಗಂಟ ಕಣಲೇ! ಅವಂಗೆ ಹೆಂಗೆ ಶಾಂತಿ ಪ್ರಶಸ್ತಿ ಕೊಡತಾರೆ?’ ನಾನು ಕೇಳಿದೆ.

ADVERTISEMENT

‘ಅಂವಾ ಒಟ್‌ ಏಳು ಯುದ್ಧ ನಿಲ್ಲಿಸ್ಯಾನೆ. ಸಪ್ತಕದನ ನಿಲ್ಲಿಸೂದು ಅಂದರೆ ಅಷ್ಟ್‌ ಸುಲಭ ಅಲ್ಲ. ನೋಡ್ತಿರು... ಈ ಸಲ ನೊಬೆಲ್‌ ಶಾಂತಿ ಕಪ್‌ ಅಂವಂದೇ!’ ಬೆಕ್ಕಣ್ಣ ಇನ್ನಷ್ಟು ಹುರುಪಿನಿಂದ ಘೋಷಿಸಿತು.

‘ಆ ಏಳು ಯುದ್ಧಗಳು ಯಾವ್ಯಾವು ಹೇಳು ನೋಡಾಮು’ ನಾನು ಬೆಕ್ಕಣ್ಣನಿಗೆ ಸವಾಲು ಎಸೆಯುವಂತೆ ಹೇಳಿದೆ. 

‘ಇಸ್ರೇಲ್–ಇರಾನ್‌ ಯುದ್ಧ, ಈಜಿಪ್ಟ್–ಇಥಿಯೋಪಿಯಾ ಯುದ್ಧ, ಥಾಯ್ಲೆಂಡ್–ಕಾಂಬೋಡಿಯಾ ಯುದ್ಧ, ಭಾರತ–ಪಾಕಿಸ್ತಾನ ಯುದ್ಧ’ ಬೆಕ್ಕಣ್ಣ ಬೆರಳು ಮಡಚಿ ಎಣಿಸತೊಡಗಿತು.

‘ಹಂಗಾರೆ ಭಾರತ–ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ್ದು ಟ್ರಂಪಣ್ಣನೇ ಅಂತ ಮೋದಿಮಾಮಾರು ಎದಕ್ಕೆ ಘೋಷಣೆ ಮಾಡಂಗಿಲ್ಲ?’ ನಾನು ಪ್ರಶ್ನಿಸಿದೆ.

‘ಅವೆಲ್ಲ ರಾಜತಾಂತ್ರಿಕ ವಿಚಾರಗಳು, ನಿನ್ನಂಥ ಶ್ರೀಸಾಮಾನ್ಯರಿಗೆ ಅರ್ಥ ಆಗಂಗಿಲ್ಲ! ಈಗ ಇಸ್ರೇಲ್–ಪ್ಯಾಲೆಸ್ಟೀನ್‌ ಯುದ್ಧ ನಿಲ್ಲಿಸಾಕೆ ಟ್ರಂಪಣ್ಣ 20 ಅಂಶದ ಪ್ರಸ್ತಾಪ ಮಾಡ್ಯಾನೆ. ಜಗತ್ತಿನ ಶಾಂತಿಗೆ ಎಷ್ಟ್‌ ಕೊಡುಗೆ ಕೊಟ್ಟಾನೆ!’ ಎಂದು ಬೆಕ್ಕಣ್ಣ ಪಾಠ ಮಾಡಿತು.

‘ಎರಡು ದೇಶಗಳ ನಡುವೆ ಕಿತಾಪತಿ ಹುಟ್ಟುಹಾಕಿ, ಯುದ್ಧೋನ್ಮಾದ ಹೆಚ್ಚಿಸಿ, ಆಮೇಲೆ ತಾನೇ ಜಗಳ ನಿಲ್ಲಿಸಿದೆ ಅನ್ನದು ಯಾವ ಸೀಮೆಯ ಶಾಂತಿಸ್ಥಾಪನೆ?’

‘ಅದೇ ನಿಜವಾದ ಶಾಂತಿಸ್ಥಾಪನೆ! ಹಂಗಾಗಿ ಈ ಸಲ ನೊಬೆಲ್‌ ಶಾಂತಿ ಕಪ್‌ ಅಂವಗೇ ಕೊಡಬಕು’.

‘ಅಂವಾ ನಮ್ಮಂತ ದೇಶಗಳ ಮೇಲೆ ಸುಂಕಸಮರ ಸಾರಿದಾನಲ್ಲ, ಮೊದಲು ಅದನ್ನು ನಿಲ್ಲಿಸಲು ಹೇಳು’ ಎಂದೆ.

‘ಸುಂಕಸಮರ ಅನ್ನೂದು ಕ್ಷಿಪಣಿ ಯುದ್ಧವಲ್ಲ. ಅದನ್ನು ನಿಲ್ಲಿಸೂದು ಶಾಂತಿ ಸ್ಥಾಪನೆ ಅಡಿಯಲ್ಲಿ ಬರಂಗಿಲ್ಲ. ಇಷ್ಟಾಗಿ ಅಂವಾ ಸುಂಕಸಮರ ಮಾಡೂದು ಅಮೆರಿಕದ ಜನರ ಶಾಂತಿಯುತ ಬದುಕಿಗಾಗಿ’ ಎಂದು ಬೆಕ್ಕಣ್ಣ ಭಲೇ ಲಾಯರಿನಂತೆ ವಾದಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.