ADVERTISEMENT

ಚುರುಮುರಿ: ಹೀಗೂ ಉಂಟೆ?!

ಸುಮಂಗಲಾ
Published 3 ಆಗಸ್ಟ್ 2025, 22:32 IST
Last Updated 3 ಆಗಸ್ಟ್ 2025, 22:32 IST
.
.   

‘ಮೋದಿ ಮಾಮಾ ಫೆಬ್ರುವರಿ ವಳಗೆ ಯುಎಸ್‌ಗೆ ‌ಭೇಟಿ ಕೊಟ್ಟಾಗ, ನಾನೂ ನೀನೂ ಮಸ್ತ್‌ ದೋಸ್ತ್ ಅಂತ ಟ್ರಂಪಣ್ಣ ಹೇಳಿದ್ದ. ಐದೇ ತಿಂಗಳಿನಾಗೆ ಭಾರತ ಸತ್ತ ಆರ್ಥಿಕತೆ ಅಂತ ಜರೀತಾನೆ… ಹೀಗೂ ಉಂಟೆ!’ ಎಂದು ಬೆಕ್ಕಣ್ಣ ಉದ್ಗರಿಸಿತು.

‘ನಮ್ಮ ಸರಕುಗಳ ಮ್ಯಾಲೆ 25 ಪರ್ಸೆಂಟ್ ಸುಂಕ ಬೇರೆ ಹಾಕ್ಯಾನೆ. ಮೈತ್ರಿ ಸಂಕದ ಮ್ಯಾಲೆ ಸುಂಕ ಕಟ್ಟಳೆ ದಾಟಕ್ಕೆ ಆಗಂಗಿಲ್ಲಲೇ!’ ಎಂದೆ.  

‘ಈ ಟ್ರಂಪಣ್ಣ ಯಾವಾಗ ಮೈತ್ರಿ ಮಾತಾಡತಾನೆ, ಯಾವಾಗ ಬಾಯಿಗೆ ಬಂದಂತೆ ಜರೀತಾನೆ ಅಂತ ಆ ದೇವರಿಗೂ ಗೊತ್ತಿಲ್ಲ! ಹೀಗೂ ಉಂಟೆ!’ ಎಂದ ಬೆಕ್ಕಣ್ಣ, ‘ಇವತ್ತು ಹೀಗೂ ಉಂಟೆ ಆಟ ಅಡೂಣು… ನೀ ಒಂದ್‌ ಹೀಗೂ ಉಂಟೆ ಹೇಳು’ ಎಂದಿತು.

ADVERTISEMENT

‘ಗಾಜಾವಳಗೆ ಸಾವಿರಗಟ್ಟಲೆ ಮಂದಿಯನ್ನ, ಅದರಲ್ಲೂ ಮಕ್ಕಳನ್ನ ಕೊಂದಾರೆ. ಬದುಕುಳಿದವರು ಹಸಿವೆಯಿಂದ ನರಳೂ ಹಂಗೆ ಮಾಡ್ಯಾರೆ. ಒಂದು ಕಾಲಕ್ಕೆ ನಾಜಿಗಳ ಬರ್ಬರತೆಯನ್ನು ಅನುಭವಿಸಿದವರೇ ಇವತ್ತು ಹಿಂಗೆ ಮುಗ್ಧ ನಾಗರಿಕರನ್ನು ಕ್ಷಿಪಣಿ, ಡ್ರೋನ್‌ ದಾಳಿಯಲ್ಲಿ ಕೊಲ್ಲತಾರೆ… ಹೀಗೂ ಉಂಟೆ!’ ಎಂದು ನಾನು ವಿಷಾದದಿಂದ ಹೇಳಿದೆ.       

‘ನಮ್ಮ ಕರುನಾಡಿನ ಹೀಗೂ ಉಂಟೆ ಕೇಳು. ಕೊಪ್ಪಳದಾಗೆ ಗುತ್ತಿಗೆ ನೌಕರನೊಬ್ಬ 24 ಮನೆ, ಆರು ಸೈಟು, 40 ಎಕರೆ ಜಮೀನು, 350 ಗ್ರಾಂ ಬಂಗಾರ, ಕೋಟ್ಯಂತರ ಆಸ್ತಿ ಮಾಡ್ಯಾನಂತೆ. ಸಸ್ಪೆಂಡ್‌ ಆಗದಕ್ಕಿಂತ ಮದ್ಲು ಜುಜುಬಿ 15 ಸಾವಿರ ಸಂಬಳ ತಗೋತಿದ್ದಂವ ಇಷ್ಟಕೊಂದು ಆಸ್ತಿ ಮಾಡಿರೂದು ಕಂಡು ಲೋಕಾ ಅಧಿಕಾರಿಗಳು ದಂಗಾದರಂತೆ! ಹೀಗೂ ಉಂಟೆ!’ ಎಂದು ಬೆಕ್ಕಣ್ಣ ನಕ್ಕಿತು.     

‘ಅಂತೂ ಕೊನೆಗೂ ಹಾಸನದ ಯುವಸಂಸದನ
ವಿಕೃತ ಹುಚ್ಚಾಟಗಳೆಲ್ಲ ಸಾಬೀತಾಗಿ ಜೀವಾವಧಿ ಶಿಕ್ಷೆ ವಿಧಿಸ್ಯಾರೆ. ನ್ಯಾಯಕ್ಕೆ ಜಯ ಸಿಕ್ಕಿತಲ್ಲ… ಹೀಗೂ ಉಂಟು ಎಂದು ಸಮಾಧಾನ ಪಡಬಹುದು’ ಎಂದು ನಾನು ಆಟ ಮುಗಿಸಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.