‘ಈ ಎಲೆಕ್ಷನ್ ಕಮಿಸನ್ನು ಭಾರೀ ಕನ್ಪೂಸನ್ ಆಗ್ಬುಟ್ಟಿದೆ ಕಣ್ರಲಾ’ ಎಂದು ಹರಟೆಕಟ್ಟೇಲಿ ಸಿಬಿರೆಬ್ಬಿದ
ಗುದ್ಲಿಂಗ.
‘ಕಮಿಸನ್ನು ಕಮಲ ಪಾಳೆಯದ ಸುಳ್ ಸೆಲ್ ಆಗದೆ ಅಂತ ರಾಹುಲಣ್ಣ ಗುಡುಗವ್ರೆ’.
‘ಅದ್ಕೇ, ಹಳೇ ಬೇರು ಕಣಿ ಮಂಕರಿ ಐಯ್ನೋರು ಮತ್ತು ಹೊಸ ಚಿಗುರು ಸಸಿ ತವರೂರು ಸೇರಿಸಿ ಟ್ರೂತ್ ಫೈಂಡಿಂಗ್ ಕಮಿಸನ್ ಮಾಡ್ಬುಟ್ರೆ ಸರಿ ಓಯ್ತದೆ’.
‘ಅದಿರ್ಲಿ, ಈಗ ನಿಜವಾಗ್ಲು ಒರಿಜಿನಲ್ ಮತದಾರ‍್ರು ಯಾರು ಅಂತ ಕಂಡ್ ಹಿಡ್ಯೋದು ಎಂಗೆ? ಈ ರೇಸನ್ ಕಾಲ್ಡು ಮಡಿಕ್ಕಂಡು ಓಟ್ರು ಲಿಸ್ಟು ಮಾಡುದ್ರೆ?’ ಕೇಳಿದ ಕಲ್ಲೇಶಿ.
‘ಲಕ್ಷಾಂತರ ರೇಶನ್ ಕಾಲ್ಡು ಬೋಗಸ್ಸು ಅಂತ ನಮ್ ಸರ್ಕಾರನೇ ಕಿತ್ ಒಗೀಲಿಲ್ವಾ?’
‘ಔದಲ್ವಾ? ಅಂಗಾರೆ ಈ ಆಧಾರ್ ಕಾರ್ಡ್‌ನೇ ಯಾಕ್ ಲಿಸ್ಟ್ ಮಾಡಕ್ಕೆ ದಾಖಲೆ ಅಂತ ಮಡಿಕ್ಕಬಾರ‍್ದು?’
‘ಅದ್ನೂ ಲಕ್ಷ ಲಕ್ಷ ನಕಲಿ ಮಾಡ್ಬುಟ್ಟವ್ರಲ್ಲ! ಕಳ್ ಒಕ್ಲುತವೆಲ್ಲಾ ಈ ಬೋಗಸ್ ಕಾರ್ಡ್ ಅದೆ’.
‘ಅಲ್ಲಿಗೆ ಅದೂ ನೆಗೆದು ಬಿತ್ತು... ಬರ್ತ್ ಸರ್ಟಿಫಿಕೇಟ್‌ನೂ ತಿದ್ದಿರೋ ಭೂಪರವ್ರೆ. ಈ ಜಾತಕ ಕುಂಡಲೀನೆ ಆಧಾರ ಇಟ್ಕಂಡು ಲಿಸ್ಟು ಮಾಡುದ್ರೆ?’
‘ಅದು ಎಲೆಕ್ಷನ್ಗೆ ನಿಂತ್ಕಂಡು ಬುಲ್ಡೆ ಬಿಡೋರಿಗೆ ಸರಿ ಓಯ್ತದೆ. ಇದ್ನೆಲ್ಲಾ ಬುಟ್ಟಾಕಿ ನಮ್ ಎಣ್ಣೆ ಚೀಟಿ ಮಡಿಕ್ಕಂಡ್ರೆ ಓಟರ್ ಲಿಸ್ಟು ಪಕ್ಕಾ ಆಗ್ತದೆ’.
‘ಎಣ್ಣೆ ಚೀಟಿನಾ? ಅಂಗಂದ್ರೆ?’
‘ಅದೇ ಕಣ್ಲಾ! ಎಲೆಕ್ಷನ್ಗಳಲ್ಲಿ ಎಲ್ಲಾ ಪಾರ್ಟಿಯೋರು ಎಣ್ಣೆಗೆ ಅಂತ ಒಂದು ಚೀಟಿ ಬರ‍್ಕೊಟ್ಟಿರ‍್ತಾರೆ. ಅದ್ನ ತೋರ‍್ಸುದ್ರೆ ಎಣ್ಣೆ ಕೊಡಾದು... ಆ ಚೀಟಿ ಇದ್ಬುಟ್ರೆ
ಇವನು ಹಳೇ ಓಟರ್ ಅಂತ ಗ್ಯಾರೆಂಟಿ ಆಯ್ತದಲ್ವಾ? ಗಂಡಸ್ರುಗೆ ಎಣ್ಣೆ ಚೀಟಿ, ಎಂಗುಸ್ರುಗೆ ಸೀರೆ ಚೀಟಿ’ ಎಂದ ಪರ‍್ಮೇಶಿ.
ಎಲ್ಲರೂ ಗೊಳ್ಳನೆ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.