
‘ಬಿಹಾರ ಚುನಾವಣೆಯಲ್ಲಿ ‘ನಾರಿ ನಿರ್ಣಯ’ ಮೇಲುಗೈ ಸಾಧಿಸಿದೆಯಂತೆ, ಗೆದ್ದ ಪಕ್ಷಗಳು ಮಹಿಳೆಯರನ್ನು ಹಾಡಿ ಹೊಗಳುತ್ತಿವೆ...’ ಎನ್ನುತ್ತಾ ವೈಶಾಲಿ ಬಂದಳು.
‘ನಾನೂ ಪೇಪರ್‌ನಲ್ಲಿ ಓದಿದೆ’ ಎಂದು ಸುಮಿ ಕಾಫಿ ತಂದುಕೊಟ್ಟಳು.
‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ಚುನಾವಣಾ ಫಲಿತಾಂಶದವರೆಗೂ ಹೆಣ್ಣುಮಕ್ಕಳು ಮೇಲುಗೈ ಸಾಧಿಸೋದು ಒಳ್ಳೆಯ ಬೆಳವಣಿಗೆ ಅಲ್ವಾ?’
‘ಏನು ಬೆಳವಣಿಗೆಯೋ, ಭಾಗ್ಯಗಳಿಗೆ ಮರುಳಾಗಿ ಮಹಿಳೆಯರು ರಾಜಕೀಯ ಪಕ್ಷಗಳ ಮತ ಬ್ಯಾಂಕ್ ಆಗಿದ್ದಾರೆ ಅನ್ನುವ ಆಪಾದನೆಯೂ ನಮ್ಮ ಮೇಲಿದೆ’ ಎಂದು ಸುಮಿ ಹೇಳಿದಳು.
‘ರಾಜಕೀಯ ಪಕ್ಷಗಳಿಗೆ ಮಹಿಳೆಯರ ಬಗ್ಗೆ ಇರುವಷ್ಟು ನಂಬಿಕೆ ಪುರುಷರ ಬಗ್ಗೆ ಇಲ್ಲ’.
‘ನಾವೂ ನಂಬಿಕೊಂಡಿಲ್ಲ. ಮಹಿಳೆಯರಿಗೆ ಗೃಹಲಕ್ಷ್ಮಿ, ಪ್ರಯಾಣ ಲಕ್ಷ್ಮಿಭಾಗ್ಯಗಳನ್ನು ಕೊಡುವ ರಾಜಕೀಯ ಪಕ್ಷಗಳು ಗಂಡಸರಿಗೆ ಕನಿಷ್ಠ ಶೇವಿಂಗ್ ಬ್ಲೇಡ್ ಭಾಗ್ಯವನ್ನೂ ಕೊಡುತ್ತಿಲ್ಲವಲ್ಲ’ ಶಂಕ್ರಿ ಬೇಸರಗೊಂಡ.
‘ಇನ್ಮೇಲೆ ಮಹಿಳೆಯರು ಯಾವ ಭಾಗ್ಯ, ಬಾಗಿನವನ್ನೂ ಬಯಸದೆ ವಿಧಾನಸೌಧದಲ್ಲಿ ಅಧಿಕಾರದ ಭಾಗ್ಯ ಪಡೆಯಬೇಕು’ ಸುಮಿ ನಿರ್ಣಯ ಹೇಳಿದಳು.
‘ಮೇಲ್ಮನೆ, ಕೆಳಮನೆಯಲ್ಲಿ ಮಹಿಳಾ ಪ್ರತಿನಿಧಿಗಳು ಬೆರಳೆಣಿಕೆಯಷ್ಟಿದ್ದಾರೆ. ಇನ್ನೆಲ್ಲಿ ಅಧಿಕಾರ ಚಲಾಯಿಸ್ತೀರಿ?’ ಶಂಕ್ರಿ ಹೇಳಿದ.
‘ಮೇಲ್‌ಮನೆ ಜೊತೆಗೆ ‘ಫೀ-ಮೇಲ್‌ಮನೆ’ ಸ್ಥಾಪಿಸಿ ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಬೇಕು ಎಂದು ಒತ್ತಾಯ ಮಾಡಬೇಕು’ ಎಂದಳು ವೈಶಾಲಿ.
‘ಶಾಸನಸಭೆಗಳಲ್ಲಿ 33 ಪರ್ಸೆಂಟ್ ಮಹಿಳಾ ಪ್ರಾತಿನಿಧ್ಯ ಖಾತರಿಗೊಳಿಸುವ ಕಾಯ್ದೆ ಅನುಷ್ಠಾನಗೊಳಿಸಲು ರಾಜಕೀಯ ಪಕ್ಷಗಳಿಗೆ, ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಅದರ ವಿರುದ್ಧ ಮೊದಲು ಹೋರಾಟ ಮಾಡಬೇಕು’ ಎಂದಳು ಸುಮಿ.
‘67 ಪರ್ಸೆಂಟ್ ಪುರುಷ ಪ್ರತಿನಿಧಿಗಳ ನಡುವೆ ಮಹಿಳಾ ಧ್ವನಿ ಕ್ಷೀಣಿಸೊಲ್ಲವೆ?’ ಅಂದ ಶಂಕ್ರಿ.
‘ನಮ್ಮ ಧ್ವನಿ ಬಗ್ಗೆ ಡೌಟ್ ಬೇಡ, 33 ಪರ್ಸೆಂಟ್ ಜಾರಿಯಾಗಲಿ, ಆ 67 ಪರ್ಸೆಂಟನ್ನು ದಾರಿಗೆ ತರುವುದು ನಮಗೆ ಗೊತ್ತು...’ ಎಂದು ನಗುತ್ತಾ ವೈಶಾಲಿ ಮನೆಯತ್ತ ಹೊರಟಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.