ADVERTISEMENT

ವಿಕಾರಿ... ನಾನಲ್ಲ!

ಸುಮಂಗಲಾ
Published 7 ಏಪ್ರಿಲ್ 2019, 20:11 IST
Last Updated 7 ಏಪ್ರಿಲ್ 2019, 20:11 IST
   

‘ವಿಳಂಬಿ’ ಸಂವತ್ಸರಕ್ಕೆ ಭರತಖಂಡದಿಂದ ಪಲಾಯನಗೈದರೆ ಸಾಕಾಗಿತ್ತು. ಬೆಳಗಿಗೂ ಕಾಯದೆ ನಡುರಾತ್ರಿಯಲ್ಲೇ ‘ವಿಕಾರೀ’ಗೆ ಚಾರ್ಜ್ ಕೊಟ್ಟುಓಡಿತು. ರಾತ್ರಿಯೇ ರೌಂಡ್ ಹೊಡೆಯೋಣವೆಂದು ವಿಕಾರೀ ಹೊರಟಿತು.

60 ವರ್ಷದ ಹಿಂದೆ ಬಂದಾಗ ಓಡಾಡಿದ್ದ ಗಲ್ಲಿಗಳು ದೊಡ್ಡ ಬೀದಿಗಳಾಗಿ, ರಸ್ತೆಗಳು ಹೆದ್ದಾರಿಗಳಾಗಿ, ಕಾಡುಗಳು ಬಯಲಾಗಿ, ನದಿಗಳು ಚರಂಡಿಹೊಳೆಯಾಗಿ, ಹಳ್ಳಿಗಳು ಪಟ್ಟಣಗಳಾಗಿ, ನಗರಗಳು ಮಹಾನಗರಗಳಾಗಿ, ಲಕ್ಷಾಧಿಪತಿಗಳು ಕೋಟ್ಯಧಿಪತಿಗಳಾಗಿ, ಬಡವರು ಇನ್ನಷ್ಟು ಬೀದಿಗೆ ಬಿದ್ದವರಾಗಿ, ಮನಸುಗಳ ನಡುವಣ ಗೋಡೆಗಳು ಕೋಟೆಗಳಾಗಿ... ಹೀಗೆ ಅಗದಿ ಭಯಂಕರವಾಗಿ ‘ಪ್ರಕಾಶಿಸುತ್ತ’ ಬದಲಾದ ಭರತಖಂಡವನ್ನು ಕಂಡು ‘ಅಕಟಕಟಾ’ ಎಂದು ದಿಕ್ಕೆಟ್ಟಿತು. ಎಲ್ಲೆಡೆ ಬ್ಯಾನರ್‌ಗಳು, ಕಟೌಟ್‍ಗಳು, ತಡರಾತ್ರಿಯ ಪ್ರಚಾರ ಸಭೆಗಳು, ರೋಡ್‌ ಶೋಗಳು, ಕೂಗುಮಾರಿ ಅಭ್ಯರ್ಥಿಗಳು... ವಿಕಾರೀ ನಿಬ್ಬೆರಗಾಯಿತು. ಹಿಂದೆ ಕೆರೆಗಳಲ್ಲಿ ಕಮಲಗಳು ಇದ್ದರೆ, ಈಗ ಕೆರೆಗಳೆಲ್ಲ ಬಡಾವಣೆಗಳಾಗಿ, ಹುಸಿ ಸಂಸ್ಕೃತಿಯ ಕಮಲಗಳು ಕೋಮುದ್ವೇಷದ ಹೊಂಡಗಳಲ್ಲಿ ಅರಳಿದ್ದವು. ಆಗ ತುಸು ಸ್ವಚ್ಛವಾಗಿದ್ದ ಕೈಗಳೂ ಈಗ ಮಸಿಕೆಂಡ ವಾಗಿದ್ದವು.

ಕಳೆದ ಸಲ ಬಂದಾಗ ಹುಟ್ಟಿದ್ದವ ಮುಖ್ಯಮಂತ್ರಿಯಂತೆ, ಅವನನ್ನಾದರೂ ನೋಡೋಣವೆಂದು ಕುಮಾರಕೃಪಾಗೆ ಕಾಲಿಟ್ಟಿತು. ಒಳಗೆ ಕುಮಾರಣ್ಣನ ಸುತ್ತಲಿದ್ದ ನಾಕಾರು ಜ್ಯೋತಿಷಿಗಳು ವಿಕಾರೀ ಸಂವತ್ಸರದ ಫಲಾಫಲಗಳನ್ನು ಹೇಳುತ್ತ, ದೋಷಪರಿಹಾರಕ್ಕೆ ಯಾವ ಹೋಮ ಮಾಡಬೇಕು, ಯಾವೆಲ್ಲ ಗುಡಿಗುಂಡಾರ ಸುತ್ತಬೇಕು, ಮಂಡ್ಯದ ಮಹಿಳೆಯ ಸೋಲಿಸುವುದು ಹೇಗೆ ಎಂದು ಉದ್ದಪಟ್ಟಿ ಹಿಡಿದಿದ್ದರು. ಹೊರಗೆ ಜಾತ್ಯತೀತ ತೆನೆಹೊತ್ತ ಹೆಂಗಸು ಹೈರಾಣಾಗಿ ನಿಂತಿದ್ದಳು. ‘ಎಲ್ಲಿಯ ದೋಷ... ನನ್ನ ಸಂವತ್ಸರದಲ್ಲಿ ಹುಟ್ಟಿದ್ದಕ್ಕೇ ಮುಖ್ಯಮಂತ್ರಿಯಾಗಿದ್ದು’ ಎಂದು ವಿಕಾರೀ ಅಲವತ್ತುಕೊಂಡಿತು. ‌

ADVERTISEMENT

ಒಂದೇ ದಿನದ ಸುತ್ತಾಟದಲ್ಲಿಯೇ ಭರತಖಂಡದ, ಮನುಷ್ಯತ್ವವಿಲ್ಲದ ಮಾನವರೆಂಬ ಎರಡು ಕಾಲಿನ ಪ್ರಾಣಿಗಳ ವಿಕಾರಗಳನ್ನು ಕಂಡು ದಂಗುಬಡಿದ ವಿಕಾರೀಯು ಸೀದಾ ಬ್ರಹ್ಮನಲ್ಲಿಗೆ ಹೋಗಿ, ‘ನಾನಲ್ಲ... ಅಲ್ಲಿದ್ದಾರೆ ವಿಕಾರಿಗಳು... ನನ್ನ ಹೆಸರು ಬದಲಿಸಿಬಿಡಪ್ಪ...’ ಎಂದು ಮೊರೆಯಿಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.