ADVERTISEMENT

ಚರ್ಚೆ– ಏಕಕಾಲದಲ್ಲಿ ಎರಡು ಪದವಿ ಎಡಬಿಡಂಗಿ ನಿರ್ಧಾರ: ನಿರಂಜನಾರಾಧ್ಯ

ಡಾ.ನಿರಂಜನಾರಾಧ್ಯ ವಿ.ಪಿ
Published 22 ಏಪ್ರಿಲ್ 2022, 18:46 IST
Last Updated 22 ಏಪ್ರಿಲ್ 2022, 18:46 IST
ನಿರಂಜನಾರಾಧ್ಯ
ನಿರಂಜನಾರಾಧ್ಯ   

ಒಂದೆಡೆ, ಕಳೆದ ಒಂದು ದಶಕದಿಂದ ಉದ್ಯೋಗದ ಅವಕಾಶಗಳು ಗಣನೀಯವಾಗಿ ಕಡಿಮೆಯಾಗಿವೆ. ಇದ್ದ ಉದ್ಯೋಗವನ್ನು ಕಳೆದುಕೊಂಡಿದ್ದೇವೆ. ಎರಡು ಮೂರು ಪದವಿಗಳನ್ನು ಹೊಂದಿರುವ ಹಾಗೂ ಅದರ ಜೊತೆಗೆ ಡಾಕ್ಟರೇಟ್‌ ಪದವಿಯನ್ನು ಗಳಿಸಿರುವ ಹಲವು ವಿದ್ಯಾವಂತ ಯುವಕರು ನಿರಂತರವಾಗಿ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಮತ್ತೊಂದೆಡೆ, ಕೇಂದ್ರ ಸರ್ಕಾರವು ವಿಶ್ವ ವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮೂಲಕ ಏಕಕಾಲಕ್ಕೆ ಎರಡು ಪದವಿ ಓದುವ ಅವಕಾಶವನ್ನು ಒದಗಿಸುವ ಹೊಸ ಬಗೆಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಇದು ಒಂದು ಬಗೆಯ ದ್ವಂಧ ಹಾಗು ವೈರುಧ್ಯ.

ಒಂದೆಡೆ, ನಿರುದ್ಯೋಗ ಹಾಗೂ ಮತ್ತೊಂದಡೆ ಏಕಕಾಲಕ್ಕೆ ಎರಡು ಪದವಿ ಓದುವ ನೀತಿ ಕುರಿತಂತೆ ಮೇಲಿನ ಪ್ರಶ್ನೆಗಳನ್ನು ಎತ್ತಲು ಹಲವು ಮುಖ್ಯ ಕಾರಣಗಳಿವೆ. ನಮಗೆಲ್ಲಾ ಗೊತ್ತಿರುವಂತೆ ದೇಶದಲ್ಲಿ ಲಕ್ಷಾಂತರ ಯುವಕರು ಈಗಾಗಲೇ ಎರಡು–ಮೂರು–ನಾಲ್ಕು ಪದವಿಗಳನ್ನು ಮಾಡಿಕೊಂಡಿದ್ದಾರೆ. ವೃತ್ತಿಪರ ಕೋರ್ಸ್‌ಗಳನ್ನೂ (ಡಿ.ಇಡಿ, ಬಿ.ಇಡ್‌, ಎಂ.ಇಡ್‌, ವೈದ್ಯಕೀಯ, ಇಂಜಿನಿಯರಿಂಗ್‌, ಇತ್ಯಾದಿ) ಮಾಡಿಕೊಂಡಿದ್ದಾರೆ. ಕೆಲವರು ಬಿ.ಎ ಮತ್ತು ಬಿ.ಕಾಂ, ಕೆಲವರು ಸ್ನಾತಕೋತ್ತರ ವಿಭಾಗದಲ್ಲಿ ಇತಿಹಾಸ, ರಾಜಕೀಯಶಾಸ್ತ್ರ , ಸಮಾಜ ಶಾಸ್ತ್ರ ಗಳಲ್ಲಿ ಎರೆಡೆರಡು ಪದವಿ ಪಡೆದು ಈಗಾಗಲೇ ನಿರುದ್ಯೋಗಿಗಳಾಗಿದ್ದಾರೆ. ಅಂದರೆ, ಈಗಾಗಲೇ ಎರೆಡೆರಡು-ಮೂರು ಪದವಿಗಳನ್ನು ಓದುಕೊಂಡಿದ್ದರೂ ಅವರಿಗೆ ಉದ್ಯೋಗವಾಗಲಿ ಅಥವಾ ನಿರುದ್ಯೋಗ ಭತ್ಯೆಯಾಗಲೀ ಸಿಗುತ್ತಿಲ್ಲ. ಹತ್ತಿರದ ಭವಿಷ್ಯದಲ್ಲಿ ಅವರಿಗೆ ಉದ್ಯೋಗ ಖಾತರಿಯ ಯಾವುದೇ ಭರವಸೆಯಿಲ್ಲ. ಸಂದರ್ಭ ಹೀಗಿರುವಾಗ, ಏಕಕಾಲದಲ್ಲಿ ಎರಡೆರಡು ಪದವಿಗೆ ಅವಕಾಶ ಕಲ್ಪಿಸುವ ತೀರ್ಮಾನದ ಹಿಂದೆ ಯಾವ ವೈಚಾರಿಕತೆ ಅಥವಾ ವೈಜ್ಞಾನಿಕತೆ ಇದೆ ಎಂಬುದು ತಿಳಿಯುತ್ತಿಲ್ಲ.

ಶಿಕ್ಷಣ ಕ್ಷೇತ್ರದಲ್ಲಿ ಬಹಳ ದೊಡ್ಡ ಪ್ರಮಾಣದ ಅಸಮಾನತೆ, ತಾರತಮ್ಯ ಮತ್ತು ಪ್ರತ್ಯೇಕತೆ ಇದೆ. ಒಂದು ಕಡೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳು ಹಾಗೂ ಪ್ರತಿಷ್ಠಿತ ಡೀಮ್ಡ್‌ ವಿಶ್ವವಿದ್ಯಾಲಯಗಳು. ಸರ್ಕಾರಿ ಪದವಿ-ಪೂರ್ವ ಕಾಲೇಜು, ಪದವಿ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ಅರ್ಧಕ್ಕೆ ಅರ್ಧದಷ್ಟು ಬೋಧಕ ಹಾಗೂ ಬೋಧಕೇತರ ಹುದ್ದೆಗಳು ಖಾಲಿ ಇವೆ. ಇಲ್ಲಿರುವ ಬಡ –ಮಧ್ಯಮ ಗ್ರಾಮೀಣ ವಿದ್ಯಾರ್ಥಿಗಳು ವಿಶೇಷವಾಗಿ ಪರಿಶಿಷ್ಟ ಜಾತಿ/ವರ್ಗ, ಹಿಂದುಳಿದ ವರ್ಗದ ಮಕ್ಕಳು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಪ್ರಭುತ್ವದ ಮಟ್ಟಕ್ಕೆ ಕಲಿತು ಒಂದು ಪದವಿಯನ್ನು ಗಳಿಸಲು ಹರೆಸಾಹಸ ಪಡುತ್ತಿದ್ದಾರೆ. ಅರ್ಥಪೂರ್ಣ ಕಲಿಕೆ ಸಾಧ್ಯವಾಗುತ್ತಿಲ್ಲ. ಜೊತೆಗೆ, ಮೂಲಭೂತ ಸೌಕರ್ಯಗಳಲ್ಲಿ ಯಾವುದೂ ಇಲ್ಲದಾಗಿದೆ. ಮೂಲಭೂತ ಸೌಲಭ್ಯಗಳೇ ಇಲ್ಲದೇ ಕಾಲೇಜು/ವಿಶ್ವವಿದ್ಯಾಲಯಗಳು ಸೊರಗುತ್ತಾ ಇರುವಾಗ ಎರಡೆರಡು ಪದವಿ ಓದುವುದಕ್ಕೆ ಯಾವ ರೀತಿಯ ವಾತಾವರಣವನ್ನು ಕಟ್ಟಿಕೊಟ್ಟಿದ್ದೇವೆ ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

ADVERTISEMENT

ಈ ಬಗೆಯ ನೀತಿಗಳು ಈಗಾಗಲೇ ಇರುವ ಅಂತರ, ತಾರತಮ್ಯವನ್ನು ಹಾಗೂ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಉದಾಹರಣೆಗೆ, ಎರಡೆರಡು ಪದವಿ ಮಾಡುವುದನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಬೆಳಿಗ್ಗೆ ಒಂದು ಕಾಲೇಜಿಗೆ ಹೋದರೆ, ಮಧ್ಯಾಹ್ನದ ಇನ್ನೊಂದು ಕಾಲೇಜಿಗೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅದಲ್ಲದೆ, ಎಲ್ಲಾ ರೀತಿಯ ಸೌಲಭ್ಯ ಇರುವ ಸರ್ಕಾರಿ ಕಾಲೇಜುಗಳನ್ನು ಹುಡುಕುವುದು ಕಷ್ಟದ ಕೆಲಸವೇ ಸರಿ. ಹತ್ತಿರದಲ್ಲೇ ಸೌಲಭ್ಯ ಇರುವ ಖಾಸಗಿ ಕಾಲೇಜು ಇದೆ ಎಂದಾದರೂ ಅದು ದುಬಾರಿಯಾಗಿರುತ್ತದೆ. ಅದು ಕೇವಲ ಉಳ್ಳವರಿಗೆ ಮಾತ್ರ ಸಾಧ್ಯವಾಗುತ್ತದೆ.

ಅತ್ಯಂತ ನೋವಿನ ಸಂಗತಿ ಎಂದರೆ, ಈ ನೀತಿಯನ್ನು ಜಾರಿಗೆ ತರುವಲ್ಲಿ ಮುಂಚೂಣಿಯಲ್ಲಿರುವವರು ಹೇಳುವ ಮಾತೆಂದರೆ ‘ಯಾರು ಸಮರ್ಥರು ಮತ್ತು ಬುದ್ಧಿವಂತರಿದ್ದಾರೆ ಅವರು ಏಕಕಾಲದಲ್ಲಿ ಎರಡೆರಡು ಪದವಿ ಓದಿಕೊಂಡರೆ ಏನು ತಪ್ಪೇನು’. ಅಂದರೆ ಅವರ ಚಿಂತನೆಯ ಪ್ರಕಾರ ಶಿಕ್ಷಣ ಅವರು ಪರಿಭಾವಿಸುವ ಸಮರ್ಥರಿಗೆ, ಬುದ್ಧಿವಂತರಿಗೆ ಸಿಕ್ಕಿದರೆ ಸಾಕು. ಅವರ ತರ್ಕವನ್ನು ಒಪ್ಪುವುದಾದರೆ , ನಮಗೆ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ತಾರತಮ್ಯರಹಿತ ಸಮ ಸಮಾಜವನ್ನು ಪ್ರತಿಪಾದಿಸುವ ಸಂವಿಧಾನದ ಅವಶ್ಯಕತೆಯಿಲ್ಲ. ಪ್ರಾಚೀನ ಭಾರತದಲ್ಲಿದ್ದಂತೆ ಶಿಕ್ಷಣ ಒಂದು ಸವಲತ್ತಾದರೆ ಸಾಕು ಅದು ಸಾರ್ವತ್ರಿಕವಾಗಬೇಕಿಲ್ಲ.

ಈ ಬಗೆಯ ಅಪ್ರಬುದ್ಧ ಚಿಂತನೆಯ ಜನರು ಸ್ಪಷ್ಟವಾಗಿ ಅರಿಯಬೇಕಾದ ಅಂಶವೆಂದರೆ, ಭಾರತದ ಸಂವಿಧಾನ ಹಾಗು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅನ್ವಯ ಅವಕಾಶಗಳು ಎಲ್ಲರಿಗೂ ಸಮಾನವಾಗಿ ಲಭ್ಯವಾಗಬೇಕು. ಅದರಲ್ಲೂ ವಿಶೇಷವಾಗಿ, ದಮನಿತ ವರ್ಗದ ಜನರಿಗೆ ವಿಶೇಷ ಸೌಲಭ್ಯ ಕಲ್ಪಿಸಿಕೊಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂಬುದು ಸಂವಿಧಾನದ ಆಶಯ. ಯಾರು ಸಮರ್ಥರು, ಯಾರಿಗೆ ಹಣ ಬಲ ಇದೆ ಅವರು ಓದಿಕೊಳ್ಳಲಿ ಎಂದು ನೀತಿ ನಿರೂಪಕರು ಹೇಳುವುದು ಸಂವಿಧಾನವನ್ನು ಅಣಕಿಸಿದಂತಾಗುತ್ತದೆ. ಈಗಿರುವ ಅಸಮಾನತೆಯ ಫಲವಾಗಿ, ಈಗಾಗಲೇ ಶೇ 80ರಷ್ಟು ಉದ್ಯೋಗ ಅವಕಾಶಗಳು ಮೇಲ್ವರ್ಗದ ಶೇ20ರಷ್ಟು ಜನರಿಗೆ ಸಿಗುತ್ತಿವೆ. ಕೇವಲ ಶೇಕಡ 20ರಷ್ಟು ಉದ್ಯೋಗಗಳಿಗೆ ಶೇಕಡ 80ರಷ್ಟು ಜನರು ಪೈಪೋಟಿ ಮಾಡಬೇಕಾದ ಅನಾರೋಗ್ಯಕರ ಪರಿಸ್ಥಿತಿ ಉಂಟಾಗಿದೆ. ಖಾಸಗಿ ವಲಯದಲ್ಲಿ ಉದ್ಯೋಗ ಅವಕಾಶ ಕುರಿತಂತೆ ಯಾವುದೇ ಸ್ಪಷ್ಟ ನೀತಿಯಿಲ್ಲ. ಈ ತೆರನಾದ ಅಸಮತೋಲನ ಇರುವಾಗ ನಾವು ಈ ಬಗೆಯ ಅವೈಜ್ಞಾನಿಕ ಮತ್ತು ಬಹುಸಂಖ್ಯಾತರನ್ನು ಹೊರಗಿಡುವ ನೀತಿಗಳನ್ನು ರೂಪಿಸುವುದು ಸಂವಿಧಾನದ ಮೂಲ ತತ್ವವನ್ನೇ ಬುಡಮೇಲು ಮಾಡಿದಂತಾಗುತ್ತದೆ.

ಏಕಕಾಲಕ್ಕೆ ಎರಡೆರಡು ಪದವಿ ಓದುವ ನೀತಿಯ ಜಾರಿಯಿಂದ ಉಳ್ಳವರು ಮತ್ತು ಇಲ್ಲದವರ ಮಧ್ಯೆ ಅನಾರೋಗ್ಯಕರ ಸ್ಪರ್ಧೆ ಉಂಟಾಗುತ್ತದೆ. ಉಳ್ಳವರು ಎರಡು ಪದವಿ ಮಾಡುತ್ತಾರೆ, ಹೆಚ್ಚಿನ ಅವಕಾಶಗಳನ್ನು ದೊರಕಿಸಿಕೊಳ್ಳುತ್ತಾರೆ. ಗ್ರಾಮೀಣ ಭಾಗದ ಬಹುತೇಕ ಮಕ್ಕಳಿಗೆ ಹಣಬಲ ಇಲ್ಲದ ಕಾರಣ ಅವರಿಗೆ ಅವಕಾಶವೇ ಇಲ್ಲಂದಂತಾಗುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಇದು ಅನಾರೋಗ್ಯಕರ ಸ್ಪರ್ಧೆಯಾಗುತ್ತದೆ. ಪರಿಣಾಮ ಅವರು ವ್ಯವಸ್ಥೆಯಿಂದ ಹೊರ ನೂಕಲ್ಪಡುತ್ತಾರೆ. ಈಗಾಗಲೇ ಹಿಂದೆ ಬಿದ್ದಿರುವ ಅವರು ಮತ್ತಷ್ಟು ಹಿಂದೆ ಬೀಳುವಂಥ ಸ್ಥಿತಿ ನಿರ್ಮಾಣವಾಗುತ್ತದೆ .

ಒಟ್ಟಾರೆ, ಈ ನೀತಿಯ ಅಪಾಯಗಳನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಮೂರು ಅಂಶಗಳು ಮುಖ್ಯವಾಗುತ್ತವೆ.

ಮೊದಲನೆಯದಾಗಿ ಈ ನೀತಿಯು, ‘ಶಿಕ್ಷಣ ಹಕ್ಕಲ್ಲ, ಸವಲತ್ತು’ ಎನ್ನುವ ಪ್ರಾಚೀನ ಭಾರತಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಸಂವಿಧಾನ, ಮಾನವ ಹಕ್ಕುಗಳು, ಸಾರ್ವತ್ರಿಕ ಶಿಕ್ಷಣ, ಗೌಣವಾಗುತ್ತದೆ. ಏಕಕಾಲಕ್ಕೆ ಸಮರ್ಥರಿಗೆ ಎರೆಡೆರಡು ಪದವಿ ಮಾಡಲು ಅವಕಾಶ ಕಲ್ಪಿಸಲು ಹೊರಟಿರುವವರ ಮನಸ್ಥಿತಿಯ ಹಿಂದೆ ಒಂದು ಕಾಣದ ಹುನ್ನಾರವಿದೆ. ಈ ಮೂಲಕ ಭಾರತದ ಸಂವಿಧಾನದ ಅನ್ವಯ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣತಂತ್ರದ ಬದಲು ಬೇರೊಂದು ಬಗೆಯ ಭಾರತವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದ್ದಾರೆ. ಈ ನೀತಿಯು ಜಾರಿಗೆ ಬಂದರೆ ಸಂವಿಧಾನ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿನ ಮಾನವ ಹಕ್ಕುಗಳ ಒಡಂಬಡಿಕೆಗಳನ್ನು ಸಾಮಾನ್ಯ ತತ್ವಗಳನ್ನು ಉಲ್ಲಂಘಿಸುವ ಅಪಾಯ ಇದೆ.

ಎರಡನೆಯದಾಗಿ, ಪದವಿ ಗಳಿಸು ವುದು ಎಂದರೆ ಒಂದು ವಿಷಯದಲ್ಲಿ ಆಳವಾದ ಜ್ಞಾನವನ್ನು ಹೊಂದಿರುವುದು ಎಂದು ಅರ್ಥ. ಏಕಕಾಲದಲ್ಲಿ ಎರಡು ಪದವಿಗಳನ್ನು ಮಾಡಲು ಹೊರಟರೆ, ವಿದ್ಯಾರ್ಥಿಯು ಆ ಕಡೆಗೂ ಇಲ್ಲದ, ಈ ಕಡೆಗೂ ಇಲ್ಲದ ಎಡಬಿಡಂಗಿಯಾಗುವ ಸಾಧ್ಯತೆ ಹೆಚ್ಚುತ್ತದೆ. ಯಾವುದಾದರು ಒಂದು ವಿಷಯದಲ್ಲಾದರು ಪ್ರಭುತ್ವದ ಮಟ್ಟಕ್ಕೆ ಜ್ಞಾನ –ಕೌಶಲವಿಲ್ಲದೆ ಕೆಲಸಕ್ಕೆ ಬಾರದ ಪದವೀಧರರಾಗುವ ಮೂಲಕ ರೀತಿಯಲ್ಲಿ ಪದವಿ ಪಡೆದು ಕೊಂಡಂತಾಗುತ್ತದೆ. ಮೂರನೆಯದಾಗಿ, ‘ಸಮರ್ಥರು-ಬುದ್ದಿವಂತರು ಎನಿಸಿ ಕೊಂಡವರೂ ಕೂಡ ಏಕಕಾಲದಲ್ಲಿ ಎರಡು ಪದವಿ ಮಾಡಲು ಖಾಸಗಿ ವಿಶ್ವ ವಿದ್ಯಾಲಯಗಳಲ್ಲಿ ಅಥವಾ ಖಾಸಗಿ ಕಾಲೇಜುಗಳನ್ನು ಅವಲಂಬಿಸ ಬೇಕಾಗುತ್ತದೆ. ಇದು ಶಿಕ್ಷಣ ವ್ಯವಸ್ಥೆಯ ಖಾಸಗೀಕರಣ -ವ್ಯಾಪಾರೀಕರಣವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇಂಥಹ, ಅವೈಜ್ಞಾನಿಕ ವಿಚಾರಗಳನ್ನು ಕೈಬಿಟ್ಟು, ಇರುವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ವಿದ್ಯಾರ್ಥಿಗಳು ಈಗ ಯಾವ ಪದವಿ ಓದುತ್ತಿದ್ದಾರೋ ಅದರಲ್ಲೇ ಅತ್ಯಂತ ಶ್ರೇಷ್ಠವಾದ, ಉತ್ಕೃಷ್ಟವಾದ ಜ್ಞಾನವನ್ನು ಕಟ್ಟಿಕೊಡುವ ಕಡೆ ಸರ್ಕಾರ ಗಮನಕೊಡಬೇಕು. ಆ ಮೂಲಕ ತಮ್ಮ ಜ್ಞಾನ ಕೌಶಲವನ್ನು ಬಳಸಿ ಆರ್ಥಿಕ ಸ್ವಾವಲಂಬಿಗಳಾಗುವ ಹೊಸ ಬಗೆಯ ಆರ್ಥಿಕ ವ್ಯವಸ್ಥೆಯ ಬಗ್ಗೆ ಯೋಚಿಸಬೇಕಿದೆ.

ಲೇಖಕ: ಅಭಿವೃದ್ಧಿ ಶಿಕ್ಷಣ ತಜ್ಞ,ನಿರೂಪಣೆ: ಸುಕೃತ ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.