ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ (ಬಲಬದಿ)
ವಾರಕ್ಕೆ 55 ಗಂಟೆಗಳಿಗಿಂತ ಹೆಚ್ಚು ದುಡಿಯುವುದರಿಂದ ಗಂಭೀರ ಅಪಾಯ ಉಂಟಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಐಎಲ್‌ಒ ಎಚ್ಚರಿಕೆ ನೀಡಿವೆ. ಆದ್ದರಿಂದ ಸರ್ಕಾರವು ಈ ಐ.ಟಿ ಕಂಪನಿಗಳಿಗೆ ಕಾರ್ಮಿಕ ಕಾಯ್ದೆಗಳಿಂದ ನೀಡಿರುವ ಎಲ್ಲಾ ವಿನಾಯಿತಿಗಳನ್ನು ಕೂಡಲೇ ಹಿಂಪಡೆದು, ವಾರಕ್ಕೆ 48 ಗಂಟೆ ಮಿತಿ ಕಡ್ಡಾಯ ಮಾಡಬೇಕು
‘ವಾರಕ್ಕೆ 90 ಗಂಟೆ ದುಡಿಯಬೇಕು, ರವಿವಾರವೂ ದುಡಿಯಬೇಕು, ಮನೆಯಲ್ಲಿದ್ದು ಹೆಂಡತಿಯ ಮುಖವನ್ನು ದಿಟ್ಟಿಸುವುದೇನಿದೆ' ಎನ್ನುತ್ತಾರೆ ಲಾರ್ಸೆನ್ ಆ್ಯಂಡ್ ಟೂಬ್ರೊ ಇನ್ಫೊಟೆಕ್ ಅಧ್ಯಕ್ಷ ಸುಬ್ರಹ್ಮಣ್ಯನ್. ‘ಪ್ರಧಾನಿ 100 ಗಂಟೆ ಕೆಲಸ ಮಾಡುತ್ತಾರೆ, ನೌಕರರು ವಾರಕ್ಕೆ ಎಪ್ಪತ್ತು ಗಂಟೆ ದುಡಿಯಬೇಕು’ ಎನ್ನುತ್ತಾರೆ ಇನ್ಫೊಸಿಸ್ ನಾರಾಯಣಮೂರ್ತಿ. ಯಾರೆಷ್ಟು ನಿದ್ದೆಗೆಟ್ಟಿದ್ದಾರೆ ಎಂದು ನೋಡಿದವರಿಲ್ಲ. ಆದರೆ, ಇವರಿಂದ ಎಲ್ಲರ ನಿದ್ದೆಗೆಡುತ್ತಿದೆ. ವಿಶ್ವಮಾನ್ಯ ನಿಯಮಗಳನ್ನು ಧಿಕ್ಕರಿಸಿ, ತಮ್ಮದೇ ನೌಕರರ ಹಿತವನ್ನೂ ಕಡೆಗಣಿಸಿ ಹೀಗೆಲ್ಲ ಹೇಳುತ್ತಾರೆಂದರೆ, ಇಂದಿನ ಭಾರತದಲ್ಲಿ ಉಳ್ಳವರ ಧಾರ್ಷ್ಟ್ಯವು ಎಲ್ಲಿಗೆ ತಲುಪಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಯಾವುದೇ ಕಾರ್ಮಿಕನನ್ನು ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ದುಡಿಸುವಂತಿಲ್ಲ ಎನ್ನುವುದು ವಿಶ್ವದೆಲ್ಲೆಡೆ ಇರುವ ಕಾನೂನು. ಇದು ಕಾರ್ಮಿಕರ ಬಲಿದಾನಗಳಿಂದ ದೊರೆತದ್ದೇ ಹೊರತು ಯಾರೋ ಪುಕ್ಕಟೆಯಾಗಿ ನೀಡಿದ್ದಲ್ಲ. ಕೈಗಾರಿಕಾ ಕ್ರಾಂತಿಯ ಹೊಸ ಯಂತ್ರಗಳಲ್ಲಿ ಗಾಣದೆತ್ತುಗಳಂತೆ 12– 20 ಗಂಟೆ ದುಡಿಸುತ್ತಿದ್ದುದನ್ನು ಪ್ರತಿಭಟಿಸಿ ‘8 ಗಂಟೆ ದುಡಿಮೆ, 8 ಗಂಟೆ ವಿನೋದ, 8 ಗಂಟೆ ನಿದ್ದೆ’ ಎಂದು ವಿಶ್ವದಾದ್ಯಂತ ಕಾರ್ಮಿಕರು ಮುಷ್ಕರ ಹೂಡಿದ್ದರು. 1886ರ ಮೇ 1ರಿಂದ ಅಮೆರಿಕದ ಷಿಕಾಗೊದಲ್ಲಿ ನಡೆದ ಪ್ರತಿಭಟನೆಯ ಮೇಲೆ ಪೊಲೀಸರ ಅಮಾನುಷ ದಾಳಿಗಳಲ್ಲಿ ಅನೇಕರು ಸತ್ತರು; ನಾಯಕರು ಗಲ್ಲಿಗೇರಿಸಲ್ಪಟ್ಟರು. ಅವರ ಬಲಿದಾನದ ನೆನಪಿಗಾಗಿಯೇ ಮೇ 1 ಅಂತರರಾಷ್ಟ್ರೀಯ ಕಾರ್ಮಿಕರ ದಿನವಾಯಿತು. ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಐಎಸ್‌ಎಫ್ ಸದಸ್ಯನಾಗಿದ್ದೆ ಎಂದು ಹೇಳಿಕೊಳ್ಳುವ ನಾರಾಯಣಮೂರ್ತಿ ಅವರಿಗೆ ಮೇ ದಿನದ ಈ ಮಹತ್ವ ನೆನಪಿಲ್ಲವೇ?
ದಿನಕ್ಕೆ 8, ವಾರಕ್ಕೆ 48 ಗಂಟೆ ಮೀರದ ದುಡಿಮೆಯ ಬೇಡಿಕೆ ಯನ್ನು ಮೊದಲ ಮಹಾಯುದ್ಧದ ಕೊನೆಗೆ, 1919ರ ಜುಲೈ 28ರಂದು ಸಹಿ ಹಾಕಿದ ವರ್ಸೈ ಒಪ್ಪಂದದಲ್ಲೇ ಸೇರಿಸಲಾಗಿತ್ತು. ಅದೇ ವರ್ಷಾಂತ್ಯಕ್ಕೆ ನಡೆದ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್ಒ) ಮೊದಲ ಸಮ್ಮೇಳನದ ನಿರ್ಣಯದ ಮೊದಲಲ್ಲೇ ಇದನ್ನು ಘೋಷಿಸಲಾಯಿತು; 1930ರಲ್ಲಿ ನಡೆದ ಐಎಲ್ಒ ಸಮ್ಮೇಳನವು ಇದನ್ನು ಕಚೇರಿ ಹಾಗೂ ವಹಿವಾಟುಗಳ ನೌಕರರಿಗೂ ವಿಸ್ತರಿಸಿತು. ಭಾರತದಲ್ಲಿ 1948ರ ಕಾರ್ಖಾನೆಗಳ ಕಾಯ್ದೆ 7:51, ಕರ್ನಾಟಕ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆ 1961ರ 3:7(1), ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ದುಡಿಮೆ ನಿಬಂಧನೆಗಳು 2020, ಕಂಡಿಕೆ 25, 26 ಎಲ್ಲವೂ ಕೆಲಸದ ಅವಧಿಯನ್ನು ವಾರಕ್ಕೆ 48 ಗಂಟೆಗಳಿಗೆ ಸೀಮಿತಗೊಳಿಸಿವೆ; 8 ಗಂಟೆಗಳಿಗಿಂತ ಹೆಚ್ಚು ದುಡಿಸಿದರೆ ದುಪ್ಪಟ್ಟು ಭತ್ಯೆ ನೀಡಬೇಕೆಂದು ಷರತ್ತನ್ನೂ ವಿಧಿಸಿವೆ.
ಹಾಗಿರುವಾಗ, 70-90 ಗಂಟೆ ದುಡಿಯಬೇಕೆಂದು ಈ ಐಟಿ ದೈತ್ಯರು ನಿರ್ಭಿಡೆಯಿಂದ ಹೇಳುವುದಕ್ಕೆ ಕಾರಣವೇನು? ತಮ್ಮ ನೌಕರರಿಗೂ, ರಾಜಕೀಯ ಪಕ್ಷಗಳಿಗೂ ವಿಪರೀತ ಬುದ್ಧಿವಾದ ಹೇಳುವ ಈ ಕಂಪನಿಗಳು 90ರ ದಶಕದ ಆರಂಭದಲ್ಲಿ ಐಟಿ ಕ್ರಾಂತಿಯ ಹೊಸತನದ ದುರ್ಲಾಭವನ್ನು ಪಡೆದು ಸರ್ಕಾರಗಳಿಂದ ಭೂಮಿ, ಇತರ ಸೌಲಭ್ಯಗಳು, ಬಗೆಬಗೆಯ ವಿನಾಯಿತಿಗಳು ಎಲ್ಲವನ್ನೂ ಪಡೆದುಕೊಂಡವು. ಉದ್ಯೋಗಿಗಳ ದುಡಿಮೆಯ ಷರತ್ತುಗಳನ್ನು ತಿಳಿಸಬೇಕೆಂದು ವಿಧಿಸಿರುವ 1946ರ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯ್ದೆಯಿಂದಲೂ ಕರ್ನಾಟಕದ ಐಟಿ ಕಂಪನಿಗಳು 1999ರಿಂದಲೇ ವಿನಾಯಿತಿಯನ್ನು ಪಡೆದುಕೊಂಡವು. ಜೂನ್ 2024ರಲ್ಲಿ ಇದನ್ನು ಮತ್ತೆ 5 ವರ್ಷಗಳಿಗೆ ಮುಂದುವರಿಸಲಾಗಿದೆ. ಐಟಿ ಉದ್ಯೋಗಿಗಳ ಹಿತಾಸಕ್ತಿಗಳನ್ನು ಕಡೆಗಣಿಸಿ, ಮಾಲೀಕರಿಗೆ ಮಣೆ ಹಾಕುವಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಇಂಥ ವಿನಾಯಿತಿಗಳಿಂದಾಗಿಯೇ ಅತಿ ಕಡಿಮೆ ಸಂಬಳಕ್ಕೆ, ಹೆಚ್ಚುವರಿ ಭತ್ಯೆಯೂ ಇಲ್ಲದೆ, ಅತಿ ಹೆಚ್ಚು ದುಡಿಸುವುದರಲ್ಲಿ ಭಾರತದ ಐಟಿ ಕಂಪನಿಗಳು ಅಗ್ರಣಿಗಳಾಗಿವೆ.
ಶತಮಾನದ ಹಿಂದೆ 8 ಗಂಟೆಗಳಿಗಿಂತ ಹೆಚ್ಚು ದುಡಿಯೆವು ಎಂದು ಪ್ರತಿಭಟಿಸಿ ಕಾರ್ಮಿಕರು ಹುತಾತ್ಮರಾಗಿದ್ದರೆ, ಇಂದು ಅನೇಕರು ತಮ್ಮ ಎಳೆಯ ವಯಸ್ಸಿನಲ್ಲೇ ಕೆಲಸದ ಒತ್ತಡದಿಂದ ಹುತಾತ್ಮರಾಗುತ್ತಿದ್ದಾರೆ. ಮೂರ್ನಾಲ್ಕು ವರ್ಷಗಳಿಂದ ಐಟಿ, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಉದ್ಯೋಗಿಗಳು ಕೆಲಸದ ಒತ್ತಡ ತಾಳಲಾರದೆ ಸಾವಿಗೆ ಶರಣಾಗುತ್ತಿರುವ ವರದಿಗಳು ತಿಂಗಳಿಗೆ 2–3ರಂತೆ ಬರುತ್ತಿವೆ. ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ವರ್ಷಕ್ಕೆ ಶೇ 4– ಶೇ 5ರಷ್ಟು ಹೆಚ್ಚುತ್ತಿದ್ದು, ಕೆಲಸದ ಒತ್ತಡಗಳು, ಖಿನ್ನತೆ, ಆತಂಕ, ಒಂಟಿತನಗಳು ಪ್ರಮುಖ ಕಾರಣಗಳಾಗಿವೆ. ಶೇ 80ಕ್ಕೂ ಹೆಚ್ಚು ಐಟಿ ಉದ್ಯೋಗಿಗಳು ಅಧಿಕ ಕೆಲಸದ ಒತ್ತಡ ಅನುಭವಿಸುತ್ತಿದ್ದು, ಶೇ 40ರಷ್ಟು ಮಂದಿ ಅದರಿಂದ ಖಿನ್ನತೆಗೂ, ಆತಂಕಕ್ಕೂ ಒಳಗಾಗುತ್ತಿದ್ದಾರೆಂದೂ ಶೇ 60ರಷ್ಟು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆಂದೂ ಇದರಿಂದಾಗಿ ಧೂಮಪಾನ ಹಾಗೂ ಮದ್ಯಪಾನದ ಚಟಗಳು ಹೆಚ್ಚುತ್ತಿವೆಯೆಂದೂ ಗಂಡ-ಹೆಂಡತಿಯರಿಗೆ ಬೆರೆಯುವುದಕ್ಕೂ ಆಗದೆ ವಿಚ್ಛೇದನಗಳು ಹೆಚ್ಚುತ್ತಿವೆಯೆಂದೂ ಅಧ್ಯಯನಗಳು ತೋರಿಸಿವೆ. ಇವುಗಳ ಮೂಲ ಕಾರಣವನ್ನು ಸರಿಪಡಿಸುವ ಬದಲು ಯೋಗಾಭ್ಯಾಸ, ದಿನಕ್ಕೊಂದರಂತೆ ಹುಟ್ಟುತ್ತಿರುವ ಬಾಬಾಗಳ ಉಪದೇಶ ಮುಂತಾದವುಗಳನ್ನು ಉದ್ಯೋಗಿಗಳ ಮೇಲೆ ಹೇರಲಾಗುತ್ತಿದೆ.
ಅತಿಯಾದ ಕೆಲಸದ ಒತ್ತಡಗಳಿಂದ ಯುವ ಜನರಲ್ಲಿ ಬೊಜ್ಜು, ಹೃದಯಾಘಾತ, ಹಠಾತ್ ಹೃದಯ ಸ್ತಂಭನ, ಮಿದುಳಿನ ಆಘಾತಗಳೂ ಹೆಚ್ಚುತ್ತಿವೆ. ಐಟಿಯ ಶೇ 90ಕ್ಕೂ ಹೆಚ್ಚು ಉದ್ಯೋಗಿಗಳಲ್ಲಿ ಅತಿಯಾದ ಕೆಲಸದಿಂದ ಕುತ್ತಿಗೆ, ಭುಜ, ಬೆರಳುಗಳ ನೋವು, ಕಣ್ಣಿನ ತೊಂದರೆ ಇತ್ಯಾದಿಗಳಾಗುವುದನ್ನು ಗುರುತಿಸಲಾಗಿದೆ. 7.40 ಲಕ್ಷ ನೌಕರರಲ್ಲಿ ನಡೆಸಿದ ಅಧ್ಯಯನದಂತೆ, ವಾರಕ್ಕೆ 55 ಗಂಟೆಗಳಿಗಿಂತ ಹೆಚ್ಚು ದುಡಿಯುವವರಲ್ಲಿ 2000ನೇ ವರ್ಷಕ್ಕೆ ಹೋಲಿಸಿದರೆ 2016ರ ವೇಳೆಗೆ ಹೃದಯಾಘಾತದ ಸಾವುಗಳಲ್ಲಿ ಶೇ 42ರಷ್ಟು ಮತ್ತು ಮಿದುಳಿನ ಆಘಾತದ ಸಾವುಗಳಲ್ಲಿ ಶೇ 19ರಷ್ಟು ಏರಿಕೆಯಾಗಿದೆ. ಐದು ವರ್ಷ ಪಾಳಿ ಬದಲಿಸುತ್ತಾ ಕೆಲಸ ಮಾಡುವವರಲ್ಲಿ ಹೃದಯಾಘಾತವು ಶೇ 7ರಷ್ಟು ಹೆಚ್ಚುತ್ತದೆ ಎನ್ನಲಾಗಿದೆ. ಕೊರೊನಾ ನೆಪದಲ್ಲಿ ಲಾಕ್‌ಡೌನ್ ಮಾಡಿ, ಮನೆಯಿಂದಲೇ ಕೆಲಸ ಎಂಬುದನ್ನು ಆರಂಭಿಸಿ, ಲಸಿಕೆಯನ್ನೂ ಕೊಟ್ಟು, ಜನರು ಮನೆಯಲ್ಲೂ ನೆಮ್ಮದಿಯಿಲ್ಲದೆ, ಸಾಮಾಜಿಕ ಸಂವಹನಗಳೂ ಇಲ್ಲದೆ, ಶೀಘ್ರ ತಿನಿಸುಗಳ ದಾಸರಾಗಿ, ಬೊಜ್ಜು ಬೆಳೆಸಿ, ಇನ್ನಷ್ಟು ಸಮಸ್ಯೆಗಳಿಗೀಡಾಗುವಂತಾಗಿದೆ.
ವಾರಕ್ಕೆ 55 ಗಂಟೆಗಳಿಗಿಂತ ಹೆಚ್ಚು ದುಡಿಯುವುದರಿಂದ ಗಂಭೀರವಾದ ಅಪಾಯ ಉಂಟಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ, ಐಎಲ್‌ಒಗಳು ಎಚ್ಚರಿಕೆ ನೀಡಿವೆ. ಆದ್ದರಿಂದ ಸರ್ಕಾರವು ಈ ಐ.ಟಿ ಕಂಪನಿಗಳಿಗೆ ಕಾರ್ಮಿಕ ಕಾಯ್ದೆಗಳಿಂದ ನೀಡಿರುವ ಎಲ್ಲಾ ವಿನಾಯಿತಿಗಳನ್ನು ಕೂಡಲೇ ಹಿಂಪಡೆದು, ವಾರಕ್ಕೆ 48 ಗಂಟೆಗಳ ಮಿತಿಯನ್ನು ಕಡ್ಡಾಯ ಮಾಡಬೇಕು. ಉಡಾಫೆ ಹೇಳಿಕೆಗಳನ್ನು ನೀಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ದೇಶದ ಪ್ರಜೆಗಳ ನೆಮ್ಮದಿ ಹಾಗೂ ಆರೋಗ್ಯವೇ ದೇಶದ ಅಭಿವೃದ್ಧಿಯ ಮಾನಕವೇ ಹೊರತು ನಾಲ್ಕೈದು ಕಂಪನಿಗಳ ಕೋಟಿಗಟ್ಟಲೆ ಲಾಭವಲ್ಲ.
ಲೇಖಕ: ವೈದ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.