ADVERTISEMENT

ಚರ್ಚೆ | ಮತ ಪತ್ರ ಬಳಕೆ: ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಮರುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 0:13 IST
Last Updated 13 ಸೆಪ್ಟೆಂಬರ್ 2025, 0:13 IST
   
ವಿಷಯ: ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತ ಪತ್ರ ಬಳಕೆಗೆ ಸರ್ಕಾರದ ನಿರ್ಧಾರ ಸರಿಯೇ?

ಕಳೆದ ದಶಕದಿಂದ ನಮ್ಮ ಚುನಾವಣೆಗಳನ್ನು ನಡೆಸುವ ರೀತಿ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಂದು ಕಾಲದಲ್ಲಿ ಎಲ್ಲ ಪ್ರಶ್ನೆಗಳನ್ನೂ ಮೀರಿ ನಂಬಿಕೆಗೆ ಅರ್ಹವಾಗಿದ್ದ ಚುನಾವಣಾ ಆಯೋಗವು, ಈಗ ಚುನಾವಣಾ ವ್ಯವಸ್ಥೆಯಲ್ಲಿ ಯಾವುದೇ ಕುತಂತ್ರಗಳು ನಡೆಯುತ್ತಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಲು ಹೆಣಗಾಡುತ್ತಿದೆ. ರಾಹುಲ್‌ ಗಾಂಧಿ ಅವರು ಆಗಸ್ಟ್‌ 7ರಂದು ಮಾಧ್ಯಮಗೋಷ್ಠಿ ನಡೆಸಿದಾಗ ಚುನಾವಣಾ ವ್ಯವಸ್ಥೆಯಲ್ಲಿನ ಹುಳುಕುಗಳು ಬಹಿರಂಗಗೊಂಡವು. ಮತಪತ್ರದ ಮೂಲಕ ಮತದಾನದ ವ್ಯವಸ್ಥೆಯನ್ನು ಮರುಸ್ಥಾಪಿಸುವ ಕರ್ನಾಟಕ ಸರ್ಕಾರದ ನಿರ್ಧಾರವು ಮುನ್ನೆಗತವೇ ವಿನಾ ಹಿಂದೆ ಇಟ್ಟ ಹೆಜ್ಜೆ ಅಲ್ಲ

ಒಬ್ಬ ಕವಿಯಾಗಿ ನಾನು ಕಲ್ಪನೆ ಮತ್ತು ರೂಪಕಗಳ ಲೋಕದಲ್ಲಿ ಜೀವಿಸುತ್ತಿರುತ್ತೇನೆ. ಸಂಸತ್‌ ಸದಸ್ಯನಾಗಿ ನಾನು ವಾಸ್ತವ ಜಗತ್ತಿನ ನಿಯಮಗಳು, ಪ್ರಕ್ರಿಯೆಗಳು ಮತ್ತು ಮತಗಳ ಬಗ್ಗೆ ಗಮನ ಹರಿಸುತ್ತೇನೆ. ಹಾಗಿದ್ದರೂ, ಇವೆರಡೂ ಮೇಲ್ನೋಟಕ್ಕೆ ಕಾಣಿಸುವಂತೆ ತುಂಬಾ ದೂರವಿಲ್ಲ. ಲಕ್ಷಾಂತರ ಯುವ ಭಾರತೀಯರ ರೀತಿಯಲ್ಲಿ ನನಗೂ ಪ್ರಜಾಪ್ರಭುತ್ವವೇ ಕವಿತೆಯಾಗಿದೆ. ಅದು ಕೆಲವು ಬಾರಿ ದುರ್ಬಲವಾಗಬಹುದು, ಇನ್ನೂ ಕೆಲವೊಮ್ಮೆ ಅದಕ್ಕೆ ಅನುಮಾನದ ಕಳಂಕ ಮೆತ್ತಿಕೊಳ್ಳಬಹುದು. ಆದರೆ, ಅದು ಯಾವಾಗಲೂ ಸಮಗ್ರತೆಯ ಕಡೆಗೆ ಸಾಗಲು ಶ್ರಮಿಸುತ್ತಿರುತ್ತದೆ. ದೇಶದ ಆತ್ಮಸಾಕ್ಷಿಯ ಮೇಲೆ ಶಾಯಿಯಲ್ಲಿ ಕವಿತೆಯನ್ನು ಬರೆಯಬೇಕೇ ವಿನಾ, ಪಾರದರ್ಶಕವಲ್ಲದ ಯಂತ್ರದೊಳಗೆ ಅದು ಅಡಗಿರಬಾರದು.  

ನಮ್ಮ ಪ್ರಜಾಪ್ರಭುತ್ವವು ಸಂದಿಗ್ಧ ಪರಿಸ್ಥಿತಿಯಲ್ಲಿರುವ ಈ ಹೊತ್ತಿನಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ಮತ ಪತ್ರಗಳ (ಬ್ಯಾಲೆಟ್‌ ಪೇಪರ್‌) ನಡುವಣ ಆಯ್ಕೆಯು ತಾಂತ್ರಿಕವಾದ ಸಂಗತಿಯಷ್ಟೇ ಅಲ್ಲ. ಅದು ನಂಬಿಕೆ, ವಿಶ್ವಾಸಾರ್ಹತೆ, ನಾಗರಿಕರನ್ನು ದೇಶದೊಂದಿಗೆ ಬೆಸೆಯುವ ನಂಬಿಕೆಯ ಪ್ರಶ್ನೆವಾಗಿದೆ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಈ ವಾಸ್ತವವನ್ನು ಗುರುತಿಸಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತ ಪತ್ರಗಳ ಬಳಕೆಯನ್ನು ಮತ್ತೆ ಚಾಲ್ತಿಗೆ ತರಲು ಮುಂದಾಗಿದೆ. 

ADVERTISEMENT

ಕಳೆದ ದಶಕದಿಂದ ನಮ್ಮ ಚುನಾವಣೆಗಳ ನಡವಳಿಕೆಯು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಂದು ಕಾಲದಲ್ಲಿ ಎಲ್ಲ ಪ್ರಶ್ನೆಗಳನ್ನೂ ಮೀರಿ ನಂಬಿಕೆಗೆ ಅರ್ಹವಾಗಿದ್ದ ಚುನಾವಣಾ ಆಯೋಗವು, ಈಗ ಚುನಾವಣಾ ವ್ಯವಸ್ಥೆಯಲ್ಲಿ ಯಾವುದೇ ಕುತಂತ್ರಗಳು ನಡೆಯುತ್ತಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಲು ಹೆಣಗಾಡುತ್ತಿದೆ. ರಾಹುಲ್‌ ಗಾಂಧಿ ಅವರು ಆಗಸ್ಟ್‌ 7ರಂದು ಪತ್ರಿಕಾಗೋಷ್ಠಿ ನಡೆಸಿದಾಗ ಚುನಾವಣಾ ವ್ಯವಸ್ಥೆಯಲ್ಲಿನ ಹುಳುಕುಗಳು ಬಹಿರಂಗಗೊಂಡವು. ಭಾರತವು ಬಯಸಿದಂತಹ ರೀತಿಯಲ್ಲಿ ನ್ಯಾಯಸಮ್ಮತ ಚುನಾವಣೆಗಳು ನಡೆಯುತ್ತಿಲ್ಲ ಎಂಬ ಬಗ್ಗೆ ಲಕ್ಷಾಂತರ ಜನರು ಮೊದಲೇ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ರಾಹುಲ್‌ ಗಾಂಧಿ ಅವರ ಸುದ್ದಿಗೋಷ್ಠಿಯು ಜನರ ಪಿಸುಮಾತಿಗೆ ದೊಡ್ಡ ಧ್ವನಿ ನೀಡಿದೆ.  

ರಾಹುಲ್‌ ಗಾಂಧಿ ಅವರು ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿನ ಅಕ್ರಮಗಳ ಬಗ್ಗೆ ಮಾತನಾಡಿದ್ದರೂ, ಅದರಲ್ಲಿ ತಿಳಿದು ಬಂದ ಸಂಗತಿಗಳು ಒಂದು ನಗರವನ್ನು ಮೀರಿ ಇತರೆಡೆಗಳಲ್ಲೂ ಪ್ರತಿಧ್ವನಿಸಿವೆ. ಮತದಾರರ ಪಟ್ಟಿಯಲ್ಲಿ ಹೇಳುವಂತೆ 10 ಚದರ ಅಡಿಯ ಒಂದು ಮನೆಯಲ್ಲಿ 80 ಮಂದಿ ನೋಂದಾಯಿತ ಮತದಾರರು ಇರಲು ಸಾಧ್ಯವೇ? ಇಂತಹ ಅಸಂಬದ್ಧಗಳು ಸಣ್ಣ ತಪ್ಪುಗಳಲ್ಲ. ವ್ಯವಸ್ಥಿತ ಭ್ರಷ್ಟಾಚಾರವನ್ನು ಇದು ತೋರಿಸುತ್ತದೆ. ಈ ಭ್ರಷ್ಟಾಚಾರವು ಮತದಾರರು ತಮಗಿರುವ ಒಂದು ಮತದ ಹಕ್ಕನ್ನು ಚಲಾಯಿಸುವುದಕ್ಕೂ ಮೊದಲೇ ಅವರ ವಿಶ್ವಾಸವನ್ನು ಕಸಿದುಕೊಳ್ಳುತ್ತದೆ. ಚುನಾವಣಾ ಆಯೋಗವೇ ನೀಡಿದ್ದ ದತ್ತಾಂಶಗಳನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ ಅವರು, ಒಂದು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸಾವಿರಾರು ನಕಲಿ ನೋಂದಣಿಗಳು, ನಕಲಿ ವಿಳಾಸಗಳು ಮತ್ತು ಅನುಮಾನಾಸ್ಪದ ಹೆಸರುಗಳು ನೋಂದಣಿಯಾಗಿರುವುದನ್ನು ಉಲ್ಲೇಖಿಸಿದ್ದರು. 

ಈ ಬೆಳವಣಿಗೆಗಳ ಬಗ್ಗೆ ಕಳವಳಗೊಂಡ ಜನರು, ‘ಮತ ಕಳವಿನ’ ವಿರುದ್ಧ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಈ ವರ್ಷದ ಅಂತ್ಯಕ್ಕೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ‘ಮತ ಅಧಿಕಾರ ಯಾತ್ರೆ’ಯಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ನಾನು ಕೂಡ ಈ ಯಾತ್ರೆಯಲ್ಲಿ ಭಾಗವಹಿಸಿ, ತಮ್ಮ ಮತದಾನದ ಹಕ್ಕನ್ನು ಕಳವು ಮಾಡಲಾಗುತ್ತಿದೆ ಎಂಬ ಭಾವನೆ ಹೊಂದಿದ್ದ ಅಸಂಖ್ಯ ಜನರನ್ನು ಭೇಟಿಯಾಗಿದ್ದೇನೆ. ಈ ರೀತಿ ದೇಶದ ಜನರನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವುದು ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ‘ಮತ ಕಳವು’ ಘೋಷಣೆ ಈಗ ದೇಶದಾದ್ಯಂತ ಅನುರಣಿಸುತ್ತಿದೆ. ಹಕ್ಕುಗಳನ್ನು ರಕ್ಷಿಸಬೇಕಾದ ಸಂಸ್ಥೆಗಳೇ ತಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂಬ ಅರಿವು ಜನರಲ್ಲಿ ಹೆಚ್ಚುತ್ತಿರುವುದನ್ನೂ ಇದು ಸೂಚಿಸುತ್ತದೆ. 

ಚುನಾವಣಾ ಆಯೋಗದ ನಡೆಗಳ ಬಗ್ಗೆ ಅನುಮಾನಗಳು ಹಲವು ವರ್ಷಗಳಿಂದಲೂ ಇವೆ. 2019ರ ಲೋಕಸಭಾ ಚುನಾವಣೆಗಳಲ್ಲಿ, ನಿರ್ದಿಷ್ಟ ಅಭ್ಯರ್ಥಿ/ಪಕ್ಷಕ್ಕೆ ಹಾಕಿದ ಮತವನ್ನು ದೃಢಪಡಿಸುವಂತಹ ವಿವಿಪ್ಯಾಟ್‌ ಚೀಟಿಗಳನ್ನು ಫಲಿತಾಂಶ ಬಂದ ನಂತರದ ಕೆಲವೇ ತಿಂಗಳಲ್ಲಿ ನಾಶ ಮಾಡಿದಾಗ ಆಯೋಗದ ಮೇಲಿನ ಅಪನಂಬಿಕೆ ಇನ್ನಷ್ಟು ಹೆಚ್ಚಾಯಿತು. 2024ರ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಗೊಂಡ ಮತಗಳು ಮತ್ತು ಎಣಿಕೆ ಮಾಡಿದ ಮತಗಳಲ್ಲಿ ವ್ಯತ್ಯಾಸ ಇರುವುದನ್ನು ಚುನಾವಣಾ ಆಯೋಗದ ದತ್ತಾಂಶಗಳೇ ತೋರಿಸಿದ್ದವು. ಈ ಬಗ್ಗೆ ವಿವರಣೆ ಕೇಳಿದಾಗ ಅಧಿಕಾರಿಗಳು ಸ್ಪಷ್ಟನೆ ನೀಡದೇ ಮೌನಕ್ಕೆ ಜಾರಿದ್ದರು. ಸಂದೇಹ ಬಂದ ಸಂದರ್ಭದಲ್ಲಿ ಮೌನವಾಗಿದ್ದರೆ, ಅನುಮಾನ ಇನ್ನಷ್ಟು ಹೆಚ್ಚಾಗುತ್ತದೆಯೇ ವಿನಾ ಕಡಿಮೆಯಾಗುವುದಿಲ್ಲ.  

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತಪತ್ರದ ಮೂಲಕ ಮತದಾನದ ವ್ಯವಸ್ಥೆಯನ್ನು ಮರುಸ್ಥಾಪಿಸುವ ಕರ್ನಾಟಕ ಸರ್ಕಾರದ ನಿರ್ಧಾರವು ಹಿಂದಡಿ ಇಟ್ಟಂತಲ್ಲ; ಬದಲಿಗೆ ಇದು ಮುನ್ನೆಗೆತ. ಚುನಾವಣಾ ಪ್ರಕ್ರಿಯೆಯನ್ನು ಎಲ್ಲರಿಗೂ ಕಾಣುವಂತೆ, ಮನವರಿಕೆಯಾಗುವಂತೆ ಮತ್ತು ವಿವಾದರಹಿತವಾಗಿ ನಡೆಸುವ ಮೂಲಕ ಅದರ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುವ ಉದ್ದೇಶಪೂರ್ವಕ ಪ್ರಯತ್ನ ಇದು.

ಇದರಲ್ಲಿ ಕರ್ನಾಟಕ ಏಕಾಂಗಿಯಲ್ಲ. ಜರ್ಮನಿ, ನೆದರ್‌ಲೆಂಡ್ಸ್‌ನಂತಹ ಹಲವು ಪ್ರಜಾಪ್ರಭುತ್ವ ರಾಷ್ಟ್ರಗಳು ಮತ ಪತ್ರದ ಮೂಲಕ ಮತದಾನ ಮಾಡುವ ವ್ಯವಸ್ಥೆಯನ್ನು ಮುಂದುವರಿಸಿವೆ, ಇಲ್ಲವೇ ಈ ವ್ಯವಸ್ಥೆಗೆ ಮರಳಿವೆ. ಆ ಮೂಲಕ ತ್ವರಿತವಾಗಿ ಫಲಿತಾಂಶ ಘೋಷಣೆಗಿಂತ ಮತದಾರರ ದೃಢನಂಬಿಕೆಗೆ ಗೌರವ ನೀಡುವ ಕೆಲಸ ಮಾಡಿವೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವು ಈ ಉದಾಹರಣೆಗಳಿಂದ ಪಾಠ ಕಲಿಯುವುದಕ್ಕೆ ಹಿಂಜರಿಯಬಾರದು. 

ಮತ ಪತ್ರಗಳು ಶಾಶ್ವತ ಮತ್ತು ದೃಢಪಡಿಸಬಹುದಾದ ದಾಖಲೆಯನ್ನು ಸೃಷ್ಟಿಸುತ್ತವೆ. ವಿವಾದ ಉಂಟಾದ ಸಂದರ್ಭದಲ್ಲಿ, ವೀಕ್ಷಕರ ಸಮ್ಮುಖದಲ್ಲಿ ಮತ ಪತ್ರಗಳನ್ನು ಬಹಿರಂಗವಾಗಿ ಮತ್ತು ನ್ಯಾಯಸಮ್ಮತವಾಗಿ ಮರು ಎಣಿಕೆ ಮಾಡಬಹುದು. ಕರ್ನಾಟಕದ ನಿರ್ಧಾರವು ದೇಶಕ್ಕೆ ಒಂದು ಮಾದರಿಯಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಪಾರದರ್ಶಕತೆಯ ಬಗ್ಗೆ ಭಯ ಹೊಂದಿಲ್ಲ ಎಂಬುದನ್ನು ಇದು ತೋರಿಸುತ್ತದೆ. 

ಗಣತಂತ್ರವನ್ನು ಬಲಪಡಿಸುವುದು, ಅದರ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುವುದು ಈಗಿನ ತುರ್ತು ಎನ್ನುವುದು ಎಲ್ಲ ಭಾರತೀಯರಂತೆ ನನ್ನ ಭಾವನೆಯೂ ಹೌದು. ಇದರ ಜೊತೆಗೆ ಪ್ರಜಾಪ್ರಭುತ್ವ ಎನ್ನುವುದು ಯಂತ್ರವಲ್ಲ, ಬದಲಿಗೆ ದೇಶದ ಜನರು ಮತ್ತು ಅವರ ಭವಿಷ್ಯದ ನಡುವಿನ ವರ್ತಮಾನದ ಒಪ್ಪಂದ ಎಂಬುದನ್ನು ನಾವೆಲ್ಲರೂ ನೆನಪಿಟ್ಟುಕೊಳ್ಳುವುದಕ್ಕೂ ಇದು ಸೂಕ್ತ ಸಮಯ. 

ಬಿಜೆಪಿ ಆಯೋಗದ ಪ್ರತಿನಿಧಿಯೇ?

ವಿಚಿತ್ರ ನೋಡಿ; ಅಕ್ರಮಗಳನ್ನು ಬಯಲಿಗೆಳೆದಾಗ ಚುನಾವಣಾ ಆಯೋಗ ಏನೂ ಮಾತನಾಡುವುದಿಲ್ಲ. ಬದಲಿಗೆ ಅಂತಹ ಯಾವ ತಪ್ಪು ನಡೆದಿಲ್ಲ ಎಂದು ಹೇಳಲು ಬಿಜೆಪಿ ತರಾತುರಿಯಲ್ಲಿ ಮುಂದೆ ಬರುತ್ತದೆ. ಒಂದು ವೇಳೆ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಸಂಸ್ಥೆಗಳ ಪಾವಿತ್ರ್ಯದ ಮೇಲೆ ಅದು ನಿಜವಾಗಿಯೂ ನಂಬಿಕೆ ಇಟ್ಟಿದ್ದರೆ ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಹೊಣೆಗಾರಿಕೆ ನಿಗದಿ ಮತ್ತು ಪರಿಹಾರ ಕ್ರಮಗಳನ್ನು ಹುಡುಕಲು ಅದು ಯತ್ನಿಸಬೇಕು. ಆದರೆ ಚುನಾವಣಾ ಆಯೋಗದಿಂದ ಪಾರದರ್ಶಕತೆ ಉತ್ತರದಾಯಿತ್ವ ಬಯಸಿದಾಗ ಮತ್ತು ಆಗಿರುವ ತಪ್ಪುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಮಾಡುವ ಯತ್ನಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿ ಪ್ರಯತ್ನಗಳಿಗೆ ತಡೆ ಒಡ್ಡುವ ದಾರಿಯನ್ನು ಬಿಜೆಪಿ ಆಯ್ಕೆ ಮಾಡಿಕೊಂಡಿದೆ. ಚುನಾವಣಾ ಆಯೋಗದ ಪ್ರತಿನಿಧಿಯಂತೆ ಬಿಜೆಪಿ ಯಾಕೆ ವರ್ತಿಸುತ್ತಿದೆ ಎಂಬುದನ್ನು ಜನರು ಯೋಚಿಸಬೇಕು. 

ಲೇಖಕ: ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.