ಪರಭಾಷಿಕರಲ್ಲಿ ಕನ್ನಡದ ಬಗ್ಗೆ ಪ್ರೀತಿ ಮೂಡಿಸಲು ಹೇರಿಕೆ ಎನಿಸದ, ಬೆನ್ನುತಟ್ಟುವ ರೂಪದ ಕ್ರಮಗಳನ್ನು ಕೈಗೊಳ್ಳಬೇಕು. ಇದು ಖಂಡಿತವಾಗಿಯೂ ತಮ್ಮದೇ ದ್ವೀಪಗಳಲ್ಲಿರುವ ಪರಭಾಷಿಕರನ್ನು ಕನ್ನಡದ ಮುಖ್ಯವಾಹಿನಿಗೆ ಸೆಳೆಯುವಲ್ಲಿ ಮತ್ತು ಬೆಂಗಳೂರಿನಲ್ಲಿ ಮತ್ತೊಮ್ಮೆ ಒಂದು ಜಾಗೃತ ನಾಗರಿಕ ಸಮಾಜ ಕಟ್ಟುವಲ್ಲಿ ನೆರವಾಗಬಲ್ಲದು. ಕನ್ನಡಿಗರು ತಮ್ಮ ನುಡಿಗಾಗಿ, ಹಕ್ಕುಗಳಿಗಾಗಿ ದನಿ ಎತ್ತುವುದು ಸರಿಯೆ. ಆದರೆ ಒಳಗಿನಿಂದ ಕನ್ನಡಿಗರನ್ನು ಗಟ್ಟಿಗೊಳಿಸುವ, ದೂರಗಾಮಿ ‘ಕಟ್ಟುವ’ ಯೋಜನೆಗಳಿಗೆ ಈ ಎಚ್ಚರವನ್ನು ಹರಿಸದಿದ್ದರೆ ಅದು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಆಕ್ರೋಶ ಹೊರಹಾಕುವ ಮಟ್ಟಕ್ಕಷ್ಟೇ ಸೀಮಿತವಾಗುತ್ತದೆ
ತಮಿಳು ನಟ ಕಮಲ್ ಹಾಸನ್, ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡರು. ಇನ್ನೊಂದೆಡೆ ಆನೇಕಲ್ ಬಳಿಯ ರಾಷ್ಟ್ರೀಯ ಬ್ಯಾಂಕ್ ಒಂದರ ಮ್ಯಾನೇಜರ್ ಕನ್ನಡದಲ್ಲಿ ಸೇವೆ ನೀಡಿ ಅನ್ನುವ ಒತ್ತಾಯಕ್ಕೆ ಸಿಟ್ಟಾಗಿ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಅಬ್ಬರಿಸಿ ಕೊನೆಗೆ ವಿವಾದ ದೊಡ್ಡ ಮಟ್ಟಕ್ಕೆ ತಿರುಗಿದ ಮೇಲೆ ಕ್ಷಮೆ ಕೇಳಿದ ಘಟನೆ ನಡೆಯಿತು. ತಿಂಗಳೊಂದರ ಮುಂಚೆ ವಾಯುಪಡೆಯ ಸಿಬ್ಬಂದಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಡೆಲಿವರಿ ಹುಡುಗನೊಬ್ಬನ ಮೇಲೆ ಹಲ್ಲೆ ನಡೆಸಿ ಅದನ್ನು ಕನ್ನಡ ಮಾತನಾಡಲಾಗದಿದ್ದಕ್ಕೆ ತನ್ನ ಮೇಲಾದ ಹಲ್ಲೆ ಎಂದು ಬಿಂಬಿಸಿ ಬೀದಿ ಬದಿಯ ಜಗಳವೊಂದಕ್ಕೆ ಭಾಷಾ ಕದನದ ಸ್ವರೂಪ ಕೊಟ್ಟ ಘಟನೆ ನಡೆಯಿತು. ವಿವಾದಗಳಿಗೆ ಕಾಯುವ ದೆಹಲಿಯ ಇಂಗ್ಲಿಷ್ ಸುದ್ದಿವಾಹಿನಿಗಳು ಇವುಗಳನ್ನು ಕನ್ನಡಿಗರು ಭಾಷಾಂಧರು ಅನ್ನುವ ಹಣೆಪಟ್ಟಿ ಕಟ್ಟಲು ಬಳಸಿಕೊಂಡವು. ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಪರ-ವಿರೋಧದ ಬಿರುಸಾದ ಚರ್ಚೆಗೂ ಈ ಘಟನೆಗಳು ಕಾರಣವಾದವು.
ಈ ಘಟನೆಗಳೆಲ್ಲದರ ಹಿನ್ನೆಲೆಯಲ್ಲಿ ಕನ್ನಡಿಗರು, ವಿಶೇಷವಾಗಿ ಹೊಸ ತಲೆಮಾರಿನ ಕನ್ನಡಿಗರು, ತಮ್ಮ ನುಡಿಗಾಗಿ ಸಾಮಾಜಿಕ ಜಾಲತಾಣಗಳ ಒಳಗೂ, ಹೊರಗೂ ಅಳುಕಿಲ್ಲದೆ ದನಿ ಎತ್ತುತ್ತಿದ್ದಾರೆ. ಅದು ಕನ್ನಡಕ್ಕೆ ಒಂದು ಶಕ್ತಿ ಅನ್ನುವ ವಾದ ಒಂದು ಕಡೆಯದ್ದಾದರೆ, ಇಂತಹ ಘಟನೆಗಳು ಭಾಷಾ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿವೆ ಅನ್ನುವ ವಾದ ಇನ್ನೊಂದೆಡೆ ಕೇಳಿಬಂದಿದೆ. ಇಂತಹ ಘಟನೆಗಳನ್ನು ಕೊಂಚ ಆಳಕ್ಕಿಳಿದು ನೋಡಿದರೆ ಕನ್ನಡಿಗರು, ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಈ ಹೊತ್ತಿಗೆ ಎದುರಿಸುತ್ತಿರುವ ಗುರುತಿನ, ಅಸ್ತಿತ್ವದ ಪ್ರಶ್ನೆಗಳು, ಅದಕ್ಕಿರುವ ಕಾರಣಗಳು ಮತ್ತು ಪರಿಹಾರದ ಆಲೋಚನೆಗಳೆಲ್ಲವನ್ನೂ ಹೊಸತಾಗಿ ನೋಡುವ ಅಗತ್ಯವಿದೆ ಅನ್ನಿಸುತ್ತದೆ.
ಒಂದು ಕಾಲಕ್ಕೆ ನಿವೃತ್ತರ ಸ್ವರ್ಗ ಎಂಬಂತಿದ್ದ ಬೆಂಗಳೂರು ಮೂವತ್ತು ವರ್ಷಗಳಲ್ಲಿ ಭಾರತದ ಸಿಲಿಕಾನ್ ವ್ಯಾಲಿಯೇನೋ ಆಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲಿಗೆ ತೆರಿಗೆಯ ವಿಷಯದಲ್ಲಿ ಕಾಮಧೇನುವೂ ಆಯಿತು. ತೊಂಬತ್ತರ ದಶಕದಲ್ಲಿ ಬೆಂಗಳೂರು ಸಹಜವಾಗಿ ಬೆಳೆಯುತ್ತ, ವಲಸೆ ಬರುವ ಎಲ್ಲರನ್ನೂ ಮೆಲ್ಲಗೆ ತನ್ನೊಳಗೆ ಇಳಿಸಿಕೊಳ್ಳುತ್ತ ಹಂತ ಹಂತವಾಗಿ ಅವರನ್ನು ಸ್ಥಳೀಯ ಮುಖ್ಯವಾಹಿನಿಗೆ ತರುವ ರೂಪದಲ್ಲಿತ್ತು. ಬೆಂಗಳೂರಿನ ವಲಸೆಯ ಸ್ವರೂಪ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಬಹಳ ಬೇರೆಯ ರೂಪ ಪಡೆಯಿತು. ಇಪ್ಪತ್ತೈದು ವರ್ಷಗಳಲ್ಲಿ ಒಂದು ಕೋಟಿಗೂ ಹೆಚ್ಚು ಜನರು ಬೆಂಗಳೂರಿನ ಜನಸಂಖ್ಯೆಗೆ ಸೇರ್ಪಡೆಯಾದರು. ಇಂತಹ ತೀವ್ರ ವೇಗದ ವಲಸೆ ಮೂಲಸೌಕರ್ಯಗಳ ಮೇಲೆ ತನ್ನದೇ ಒತ್ತಡ ತಂದಿದ್ದು ಒಂದು ತೆರನಾದರೆ, ಸ್ಥಳೀಯ ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆಯದ, ತಮ್ಮದೇ ದ್ವೀಪಗಳಲ್ಲಿ ವಾಸಿಸುವ ಹಲವಾರು ಸಮೂಹಗಳನ್ನು ಇದು ನಗರದೊಳಗೆ ಸೃಷ್ಟಿ ಮಾಡಿತು. ಒಂದು ಸಮುದಾಯದ ಸ್ವರೂಪದಲ್ಲಿ ಜನರೆಲ್ಲರೂ ಒಟ್ಟಿಗೆ ಬಂದಾಗ ಆ ನಗರಕ್ಕೆ ಗುರುತಿಸಬಹುದಾದ ಸಾಂಸ್ಕೃತಿಕ ಚಹರೆಯೊಂದು ದಕ್ಕುತ್ತದೆ. ಹಾಗೆ ಒಟ್ಟಿಗೆ ಬರಲು ನುಡಿಯೊಂದು ಕೊಂಡಿಯಂತೆ ಕೆಲಸ ಮಾಡುತ್ತದೆ ಕೂಡ. ಅಂತಹ ನಾಗರಿಕ ಸಮಾಜ ರೂಪುಗೊಂಡಾಗ ಅದು ಅಲ್ಲಿನ ಸ್ಥಳೀಯ ಆಡಳಿತದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಆಡಳಿತ ಹಳಿ ತಪ್ಪದಂತೆ ನೋಡಿಕೊಳ್ಳುವ ಸಾಧನವೂ ಆಗಬಲ್ಲದು.
ಆದರೆ ಬೆಂಗಳೂರಿನಲ್ಲಿ ಇದಾವುದೂ ಆಗಲಿಲ್ಲ... ನಗರದ ಜೊತೆ ವ್ಯಾವಹಾರಿಕ ನಂಟೊಂದನ್ನೇ ಹೊಂದಿರುವ, ಚಿಕ್ಕ ಚಿಕ್ಕ ಗುಂಪುಗಳಲ್ಲಿ ಹರಡಿರುವ ಜನಸಮುದಾಯವೇ ಬೆಂಗಳೂರಿನ ಗುರುತು ಎಂಬ ಬದಲಾವಣೆ ಕಳೆದೆರಡು ದಶಕಗಳಲ್ಲಿ ಆಗಿದೆ. ಸಹಜವಾಗಿಯೇ ಇಂದು ಬೆಂಗಳೂರಿನಲ್ಲಿ ಕಾಣುವ ಅನೇಕ ಭಾಷಿಕ ಸಂಘರ್ಷಗಳಿಗೆ ಒಂದು ಕಾರಣ ಒಂದು ಗಟ್ಟಿಯಾದ, ಕನ್ನಡದ ನೆರಳಿನಲ್ಲಿ ಅರಳಿದ, ಎಲ್ಲರನ್ನೂ ಒಳಗೊಳ್ಳುವ ‘ಬೆಂಗಳೂರಿಗ’ ಅನ್ನುವ ಗುರುತಿನ ಕೊರತೆ ಅನ್ನಬಹುದು. ಇದನ್ನು ಬದಲಿಸಲು ಪರಭಾಷಿಕರನ್ನು ಕನ್ನಡದ ಮುಖ್ಯವಾಹಿನಿಗೆ ಸೆಳೆಯುವ ಹಲವಾರು ಪ್ರೋತ್ಸಾಹದ ಹೆಜ್ಜೆಗಳ ಅಗತ್ಯವಿದೆ. ಶಾಲೆಗಳಲ್ಲಿ ಕನ್ನಡದ ಕಲಿಕೆ ಕಡ್ಡಾಯ ಮಾಡುವುದು, ಸಾರ್ವಜನಿಕ ಸೇವೆಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳಿಗೆ ಕನ್ನಡ ನುಡಿಯ ಜ್ಞಾನ ಕಡ್ಡಾಯಗೊಳಿಸುವುದು, ರೈಲು, ವಿಮಾನ, ಬಸ್ ನಿಲ್ದಾಣಗಳಲ್ಲಿ ಕನ್ನಡ ಕಲಿಯುವ ಸುಲಭದ ಪರಿಕರಗಳನ್ನು ಒದಗಿಸುವುದು, ತಂತ್ರಜ್ಞಾನ ಬಳಸಿ ಯಾವ ಭಾಷೆಯಿಂದ ಬೇಕಿದ್ದರೂ ಕನ್ನಡ ಕಲಿಯುವುದನ್ನು ಸುಲಭವಾಗಿಸುವುದು, ಪರಭಾಷಿಕರು ಹೆಚ್ಚಿರುವ ಸ್ಥಳಗಳಲ್ಲಿ ಕನ್ನಡದ ನಡೆ-ನುಡಿ ಪರಿಚಯಿಸುವ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ಹೀಗೆ ಅನೇಕ ಹೇರಿಕೆ ಎನಿಸದ, ಬೆನ್ನುತಟ್ಟುವ ರೂಪದ ಕ್ರಮಗಳನ್ನು ಕೈಗೊಳ್ಳಬೇಕು. ಇದು ಖಂಡಿತವಾಗಿಯೂ ತಮ್ಮದೇ ದ್ವೀಪಗಳಲ್ಲಿರುವ ಪರಭಾಷಿಕರನ್ನು ಕನ್ನಡದ ಮುಖ್ಯವಾಹಿನಿಗೆ ಸೆಳೆಯುವಲ್ಲಿ ಮತ್ತು ಬೆಂಗಳೂರಿನಲ್ಲಿ ಮತ್ತೊಮ್ಮೆ ಒಂದು ಜಾಗೃತ ನಾಗರಿಕ ಸಮಾಜ ಕಟ್ಟುವಲ್ಲಿ ನೆರವಾಗಬಲ್ಲದು. ಅಂತಹ ಸಮುದಾಯದ ಕಲ್ಪನೆ ಈಡೇರಿದರೆ ಭಾಷಿಕ ಸಂಘರ್ಷವೂ ಕಡಿಮೆಯಾಗುತ್ತದೆ. ಇದು ಈ ಕ್ಷಣಕ್ಕೆ ಏನಾಗಬೇಕು ಅನ್ನುವ ಬಗೆಗಿನ ಒಂದು ಯೋಚನೆ.
ಇನ್ನೊಂದೆಡೆ ದೂರಗಾಮಿ ನೆಲೆಯಲ್ಲಿ ಏನಾಗಬೇಕು ಎನ್ನುವುದನ್ನೂ ಯೋಚಿಸಬೇಕಿದೆ. ಬೆಂಗಳೂರಿನಲ್ಲಿ ಕನ್ನಡಿಗರಲ್ಲಿ ಅಭದ್ರತೆಯ ಭಾವ ಹುಟ್ಟಲು ಒಂದು ಮುಖ್ಯ ಕಾರಣವೆಂದರೆ, ಕಳೆದ ಮೂವತ್ತು ವರ್ಷಗಳ ಬೆಂಗಳೂರಿನ ಆರ್ಥಿಕ ಬೆಳವಣಿಗೆಯ ಲಾಭದ ಸಿಂಹಪಾಲು ಕನ್ನಡೇತರರಿಗೆ ದಕ್ಕಿದೆ ಅನ್ನುವ ಭಾವನೆ. ಇದು ತಕ್ಕಮಟ್ಟಿಗೆ ನಿಜವೂ ಹೌದು. ಬೆಂಗಳೂರಿನ ಬೆಳವಣಿಗೆಯ ಜೊತೆ ದೊಡ್ಡ ಮಟ್ಟದಲ್ಲಿ ಅರ್ಥಿಕ ಬಲ ಜನರಿಗೆ ತಂದುಕೊಟ್ಟ ಐಟಿ, ಸೇವಾ ವಲಯ, ಸ್ಟಾರ್ಟ್‌ಅಪ್, ರಿಯಲ್ ಎಸ್ಟೇಟ್, ನಿರ್ಮಾಣದಂತಹ ಕ್ಷೇತ್ರಗಳಲ್ಲಿನ ಬಹುತೇಕ ಉದ್ಯಮಿಗಳು ಕನ್ನಡೇತರರಾಗಿದ್ದಾರೆ. ಉದ್ಯಮಶೀಲತೆಯ ಒಂದು ನಡೆ-ನುಡಿ ನಾನೂರು, ಐನೂರು ವರ್ಷಗಳಿಂದ ಕನ್ನಡ ಮಾತನಾಡುವ ಸಮುದಾಯದಲ್ಲಿ ಅಷ್ಟಾಗಿ ವಿಕಾಸವಾಗದ ಕಾರಣಕ್ಕೆ ಕನ್ನಡಿಗರು ಈ ಅಲೆಯ ಮೇಲೆ ಸವಾರಿ ಮಾಡಿ, ಉದ್ಯಮಿಗಳಾಗಿ ಆರ್ಥಿಕವಾಗಿ ಬಲಶಾಲಿಗಳಾಗಲು ಹೆಚ್ಚಿನಂಶ ಸಾಧ್ಯವಾಗಿಲ್ಲ.
ಯಾವ ಭಾಷಿಕ ಸಮುದಾಯ ಆರ್ಥಿಕವಾಗಿ ಬಲಗೊಳ್ಳುವುದಿಲ್ಲವೋ ಆಗ ಆ ಸಮುದಾಯದ ಭಾಷೆಯೂ ಮಾರುಕಟ್ಟೆಯಲ್ಲಿ ನ್ಯಾಯವಾಗಿ ಪಡೆದುಕೊಳ್ಳಬೇಕಾದ ಸ್ಥಾನ ಪಡೆದುಕೊಳ್ಳುವುದಿಲ್ಲ. ಬೆಂಗಳೂರಿನಲ್ಲಿ, ತಕ್ಕ ಮಟ್ಟಿಗೆ ಕರ್ನಾಟಕದ ಇತರೆ ಊರುಗಳಲ್ಲಿಯೂ ಮಾರುಕಟ್ಟೆಯ ಆದ್ಯತೆಯ ಭಾಷೆಯಾಗಿ ಕನ್ನಡ ಗಟ್ಟಿಯಾಗಿ ತಳವೂರಿಲ್ಲದಿದ್ದರೆ ಅದಕ್ಕೆ ಒಂದು ಕಾರಣ ಇದೇ ಅನ್ನಬಹುದು. ಇದನ್ನು ಬದಲಿಸಲು ಇರುವ ಒಂದೇ ದಾರಿ; ಹೆಚ್ಚೆಚ್ಚು ಕನ್ನಡಿಗರು ಉದ್ಯಮಿಗಳಾಗುವತ್ತ ಗಮನ ಹರಿಸುವುದು. ಹೆಚ್ಚು ಬಂಡವಾಳ ಬೇಡುವ, ಈಗಾಗಲೇ ಇತರರು ಆಳವಾಗಿ ಪಟ್ಟಭದ್ರರಂತೆ ಬೇರೂರಿರುವ ಕ್ಷೇತ್ರಗಳಲ್ಲಿ ಉದ್ಯಮದ ಸಾಹಸ ಮಾಡುವುದು ಕನ್ನಡಿಗರಿಗೆ ಕಷ್ಟ. ಆದರೆ ಕೃತಕ ಬುದ್ಧಿಮತ್ತೆಯ ಕಾಲವು ಜ್ಞಾನವನ್ನೇ ಒಂದು ಸರಕಾಗಿಸಿ, ಯಾರಿಗೂ ಅದನ್ನು ಬಳಸಿ ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ಕಟ್ಟುವ ಸಮಾನ ಅವಕಾಶ ಕಲ್ಪಿಸುತ್ತಿರುವಾಗ ಕನ್ನಡದ ಯುವಕರು ಅದನ್ನು ಸಶಕ್ತವಾಗಿ ಬಳಸಿ ಉದ್ಯಮಶೀಲತೆಯ ಕೊರತೆಯನ್ನು ನೀಗಿಸಿ, ಆರ್ಥಿಕವಾಗಿ ಬಲ ಪಡೆದುಕೊಳ್ಳುವುದು ಈಗ ಆಗಬೇಕು.
ಈ ಹಿಂದಿನ ಯಾವ ಔದ್ಯೋಗಿಕ ಕ್ರಾಂತಿಯೂ ಇಂತಹದೊಂದು ಸಾಧ್ಯತೆಯನ್ನು ತಂದಿರಲಿಲ್ಲ. ಈ ಅಲೆಯನ್ನಾದರೂ ಕನ್ನಡಿಗರು ಏರಬೇಕು. ಕನ್ನಡಿಗರು ತಮ್ಮ ನುಡಿಗಾಗಿ, ಹಕ್ಕುಗಳಿಗಾಗಿ ದನಿ ಎತ್ತುವುದು ಸರಿಯೇ, ಆದರೆ ಒಳಗಿನಿಂದ ಕನ್ನಡಿಗರನ್ನು ಗಟ್ಟಿಗೊಳಿಸುವ, ದೂರಗಾಮಿ ‘ಕಟ್ಟುವ’ ಯೋಜನೆಗಳಿಗೆ ಈ ಎಚ್ಚರವನ್ನು ಹರಿಸದಿದ್ದರೆ ಅದು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಆಕ್ರೋಶ ಹೊರಹಾಕುವ ಮಟ್ಟಕ್ಕಷ್ಟೇ ಸೀಮಿತವಾಗಿ ಉಳಿಯುತ್ತದೆ. ಇಂತಹ ಪ್ರತಿಕ್ರಿಯಾತ್ಮಕ ನಡೆ ಹೆಚ್ಚು ಕಾಲ ಬಾಳದು. ಹೆಚ್ಚು ಕನ್ನಡಿಗರನ್ನು ಜ್ಞಾನದ ಹಾದಿಯಲ್ಲಿ ಕೊಂಡೊಯ್ಯಲು ಕನ್ನಡವೊಂದಕ್ಕೇ ಸಾಧ್ಯ. ಆದರೆ ಅದಕ್ಕೆ ಅಂತಹ ಬಲ ತುಂಬುವ ಕೆಲಸ ಸರಿಯಾದ ನುಡಿ ಹಮ್ಮುಗೆ (ಲ್ಯಾಂಗ್ವೇಜ್ ಪ್ಲಾನಿಂಗ್) ಮೂಲಕ ಈಗ ಆಗಬೇಕು.
ಲೇಖಕ: ಪ್ರಕಾಶಕ, ನವೋದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.