ವಿವಿಧತೆಯಲ್ಲಿ ಏಕತೆ, ವೈವಿಧ್ಯಮಯ ಸಂಸ್ಕೃತಿ, ಧರ್ಮ ಮತ್ತು ಭಾಷೆಗಳ ಸಂಗಮವಾಗಿರುವ ಭಾರತ ದೇಶವನ್ನು ಒಂದು ಧರ್ಮದ ಚೌಕಟ್ಟಿಗೆ ಸೀಮಿತಗೊಳಿಸುವ ಪ್ರಯತ್ನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದೆ. ದೇವನೂರ ಮಹಾದೇವ ಅವರು ತಮ್ಮ ಲೇಖನದಲ್ಲಿ ಭಾರತೀಯ ಸಮಾಜದಲ್ಲಿ ಆರ್‌ಎಸ್‌ಎಸ್‌ನ ಪ್ರಭಾವ ಮತ್ತು ಅದರ ಧೋರಣೆಗಳ ಕುರಿತಾದ ವಿಶ್ಲೇಷಣೆಯನ್ನು ಬಹಳ ತೀಕ್ಷ್ಣವಾಗಿ ಮಾಡಿದ್ದಾರೆ. ಅವರು ಸಂಘದ ಧಾರ್ಮಿಕ-ರಾಜಕೀಯ ತತ್ವಗಳನ್ನು ಮಾತ್ರವಲ್ಲದೇ, ಅದರ ಸಾಮಾಜಿಕ ಪರಿಣಾಮಗಳನ್ನೂ ಸಮಗ್ರವಾಗಿ ಪರಿಶೀಲಿಸಿದ್ದಾರೆ. ಲೇಖನವು ವಿಶೇಷವಾಗಿ ಸಂಘದ ನಿಗೂಢ ಕಾರ್ಯಪದ್ಧತಿಗಳು, ಸಂಘದಲ್ಲಿ ಕಾರ್ಯಕರ್ತರು ಮತ್ತು ನಾಯಕರ ವಿವೇಚನಾರಹಿತ ಜೀತಗಾರಿಕೆ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ.
ಕನ್ನಡದ ಪ್ರಮುಖ ಕವಿ ಗೋವಿಂದ ಪೈ ಅವರ ‘ಮನುಜ ದೇವತೆ’ ಕಾವ್ಯದಲ್ಲಿರುವ ಮಾನವತೆಯ ಬೋಧನೆ, ಎಲ್ಲ ಧರ್ಮಗಳ ಜನರ ನಡುವೆ ಸಮಾನತೆ ಎಂಬ ವಿಚಾರಕ್ಕೆ ಆರ್‌ಎಸ್‌ಎಸ್‌ನ ನಿಲುವುಗಳು ವಿರುದ್ಧವಾಗಿವೆ. ಕುವೆಂಪು ತಮ್ಮ ‘ರಾಮಾಯಣ ದರ್ಶನ’ ಕೃತಿಯಲ್ಲಿ ಧರ್ಮದ ಅಂಧಭಕ್ತಿಗಿಂತ ಮಾನವೀಯ ಮೌಲ್ಯಗಳಿಗೆ ಒತ್ತು ನೀಡುತ್ತಾರೆ. ಕುವೆಂಪು ಅವರ ಪ್ರಕಾರ, ‘ವಿಶ್ವಮಾನವತ್ವವೇ ನಿಜವಾದ ಧರ್ಮ’. ಈ ಮಾತು ಆರ್‌ಎಸ್‌ಎಸ್‌ನ ‘ಹಿಂದೂ ರಾಷ್ಟ್ರ’ದ ಸೀಮಿತ ಚಿಂತನೆಗೆ ಸೈದ್ಧಾಂತಿಕ ಉತ್ತರವಾಗಿದೆ.
ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್ ಇ.ವಿ.ರಾಮಸ್ವಾಮಿ ಮತ್ತು ಇತ್ತೀಚಿನ ಕಾಲದಲ್ಲಿ ಯುರೋಪಿಯನ್ ಇತಿಹಾಸಕಾರ ಕ್ರಿಸ್ಟೋಫರ್ ಜೆಫ್ರೆಲಾಟ್ ಮುಂತಾದವರು ‘ಆರ್‌ಎಸ್‌ಎಸ್‌ನ ಉದ್ದೇಶ ಭಾರತದ ಬಹುಸಂಸ್ಕೃತಿಯ ಸ್ವಭಾವಕ್ಕೆ ಧಕ್ಕೆ ಮಾಡುವಂಥದ್ದು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂಬೇಡ್ಕರ್ ತಮ್ಮ ‘ಥಾಟ್ಸ್ ಆನ್ ಪಾಕಿಸ್ತಾನ್’ ಕೃತಿಯಲ್ಲಿ, ಹಿಂದೂ ರಾಷ್ಟ್ರದ ಕಲ್ಪನೆ ಅಸಮಾನತೆ ಮತ್ತು ದ್ವೇಷದ ಬೀಜ ಬಿತ್ತುತ್ತದೆ ಎಂದು ಎಚ್ಚರಿಸಿದ್ದರು. ಸಂಘವು ಹೇಗೆ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಅಪಾಯಕಾರಿಯಾದುದು ಮತ್ತು ಮುಸ್ಲಿಮರನ್ನು ಅಭದ್ರತೆಗೆ ಸಿಲುಕಿಸಿ ಹೇಗೆ ಅವರನ್ನೂ ಕೋಮುವಾದಿಗಳನ್ನಾಗಿಸುತ್ತದೆ ಎಂದು ‘ಥಾಟ್ಸ್ ಆನ್ ಪಾಕಿಸ್ತಾನ್’ ಕೃತಿಯ ಪುಟ ಸಂಖ್ಯೆ 241ರಿಂದ ಅಂಬೇಡ್ಕರ್ ಅವರು ವಿವರಿಸುತ್ತಾರೆ.
ಆರ್‌ಎಸ್‌ಎಸ್ 1925ರಲ್ಲಿ ಕೇಶವ ಬಲಿರಾಮ ಹೆಡ್ಗೇವಾರ್ ಅವರಿಂದ ಸ್ಥಾಪಿತವಾದ ಒಂದು 'ಭೂಗತ ಸಂಘಟನೆ'ಯಾಗಿದೆ. ಅದರ ಘೋಷಿತ ಉದ್ದೇಶ ‘ಹಿಂದೂ ರಾಷ್ಟ್ರ’ ನಿರ್ಮಾಣವಾದರೂ, ಸೈದ್ದಾಂತಿಕವಾಗಿ ಅದು ಭಾರತೀಯ ಸಂವಿಧಾನದ ‘ಸಮಾನತೆ ಮತ್ತು ಸಾಮಾಜಿಕ ನ್ಯಾಯ’ ಎಂಬ ಮೌಲ್ಯಗಳ ವಿರುದ್ಧ ನಿಂತಿದೆ. ಸಂಘದ ಚಿಂತನೆಗಳಲ್ಲಿ ಸಾವರ್ಕರ್ ‘ಹಿಂದೂತ್ವ’– ಅಂದರೆ ಧರ್ಮಕ್ಕಿಂತ ಹೆಚ್ಚಾಗಿ ರಾಷ್ಟ್ರೀಯವಾದದ ಹೆಸರಿನ ಸಂಸ್ಕೃತಿ ಆಧರಿತ ಮೂಲಭೂತವಾದವೇ ಪ್ರಮುಖವಾಗಿದ್ದು, ಇದು ಗಾಂಧೀಜಿಯ ಜಾತ್ಯತೀತತೆ, ಭಾವೈಕ್ಯತೆ, ಅಹಿಂಸೆ ಮತ್ತು ಅಂಬೇಡ್ಕರರ ಬಹುಜನವಾದದ ಭಾರತದ ಪರಿಕಲ್ಪನೆಗೆ ವಿರುದ್ಧವಾಗಿದೆ.
‘1930 ಮತ್ತು 1940ರ ದಶಕದ ಉತ್ತರಾರ್ಧದಲ್ಲಿ ಅನೇಕ ಆರ್‌ಎಸ್‌ಎಸ್ ಸದಸ್ಯರು ಯುರೋಪಿಯನ್ ಫ್ಯಾಸಿಸ್ಟ್‌ಗಳೆಡೆಗೆ ಆಕರ್ಷಿತರಾಗಿದ್ದರು. ಈ ಅವಧಿಯಲ್ಲಿ, ಗೋಲ್ವಲ್ಕರ್ ಅವರು ಆರ್‌ಎಸ್‌ಎಸ್ ಅನ್ನು ನಾಜಿ ಶೈಲಿಗೆ ಪರಿವರ್ತಿಸಲು ಪ್ರಯತ್ನಿಸಿದರು’ ಎಂದು ದಾಖಲೆಗಳು ಹೇಳುತ್ತವೆ.
ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳದೇ, ಬ್ರಿಟಿಷರ ಒಡೆದು ಆಳುವ ನೀತಿಗೆ ಪೂರಕವಾಗಿ ದೇಶವನ್ನು ಧರ್ಮದ ಮೇಲೆ ಒಡೆಯುವಲ್ಲಿ ಆರ್‌ಎಸ್‌ಎಸ್ ಬ್ರಿಟಿಷರಿಗೆ ಸಹಕಾರ ನೀಡಿತ್ತು. ಮಹಾತ್ಮ ಗಾಂಧಿ ನೇತೃತ್ವದ ಚಳವಳಿ ದೇಶವನ್ನು ಸ್ವತಂತ್ರಗೊಳಿಸಲು ಸಿದ್ಧತೆ ನಡೆಸುತ್ತಿದ್ದಾಗ, ದೇಶದಲ್ಲಿ ಮತೀಯ ಭಾವನೆಗಳ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲೇ ಆಂತರಿಕ ಸಂಘರ್ಷವನ್ನು ಆರ್‌ಎಸ್‌ಎಸ್ ಸೃಷ್ಟಿಸಿತು.
ಗಾಂಧಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್ ಮೇಲೆ ಸರ್ಕಾರವು ಅನಿವಾರ್ಯವಾಗಿ ದಮನ ಕ್ರಮ ಕೈಗೊಂಡಿತು. ಆರ್‌ಎಸ್‌ಎಸ್ ಅನ್ನು ಒಂದೂವರೆ ವರ್ಷ ಕಾಲ ನಿಷೇಧಿಸಲಾಯಿತು. ಗಾಂಧಿ ಹತ್ಯೆಯ ನಂತರ ಇಂದಿನವರೆಗೂ ಆರ್‌ಎಸ್‌ಎಸ್ ಭೂಗತ ಕಾರ್ಯಾಚರಣೆಯನ್ನೇ ನಡೆಸುತ್ತಿದೆ. ಆರ್‌ಎಸ್‌ಎಸ್ ಇಂದಿಗೂ ನೋಂದಾವಣೆಗೊಳ್ಳದ ಸಂಘಟನೆಯಾಗಿದ್ದು, ದೇಶದ ಎಲ್ಲಾ ಮತೀಯ ಗಲಭೆಗಳು, ಆಂತರಿಕ ಭಯೋತ್ಪಾದನೆಗಳು, ಸಾಮೂಹಿಕ ಹತ್ಯೆಗಳಲ್ಲಿ ಆರ್‌ಎಸ್‌ಎಸ್ ಪಾತ್ರವಿದ್ದರೂ ಅದು ಕಾನೂನಿನ ಕೈಗೆ ಸಿಗದಂತೆ ಭೂಗತ ಕಾರ್ಯಾಚರಣೆಯನ್ನೇ ಇಂದಿಗೂ ನಡೆಸುತ್ತಿದೆ.
ಭಾರತದ ಕಾರ್ಮಿಕ ವರ್ಗ, ರೈತರು ಮತ್ತು ಶೋಷಿತರ ಶಕ್ತಿ ಯಾವಾಗಲೂ ಸಾಮಾಜಿಕ ಬದಲಾವಣೆಯ ಮೂಲವಾಗಿದೆ. ಆದರೆ, ಈ ಶಕ್ತಿಯ ಸಂಘಟಿತ ಧಾರೆಗೆ ಅಡ್ಡಿಯಾಗುತ್ತಿರುವ ಪ್ರಮುಖ ಸಂರಚನೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡ ಒಂದು. ತನ್ನನ್ನು ಸಾಂಸ್ಕೃತಿಕ ಸಂಸ್ಥೆ ಎಂದು ಕರೆದುಕೊಳ್ಳುವ ಈ ಸಂಘವು ವಾಸ್ತವದಲ್ಲಿ ವರ್ಗಭೇದ, ಜಾತಿಭೇದ ಮತ್ತು ಪಿತೃತ್ವಾಧಾರಿತ ವ್ಯವಸ್ಥೆಯನ್ನು ಕಾಪಾಡುವ ರಾಜಕೀಯ–ಸಾಮಾಜಿಕ ಸಂಘಟನೆಯಾಗಿದೆ. ಇದನ್ನು ದೇವನೂರರ ಲೇಖನವು ಸೂಚ್ಯವಾಗಿ ದಾಖಲಿಸಿದೆ.
ಆರ್‌ಎಸ್‌ಎಸ್‌ನ ಆಧಾರವಾದ ಹಿಂದುತ್ವ ಸಿದ್ಧಾಂತ ದುಡಿಯುವ ವರ್ಗವನ್ನು ವಿಭಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಂದು ಕಡೆ ‘ಹಿಂದೂ ಏಕತೆ’ ಎಂಬ ಘೋಷಣೆಯನ್ನು ಕೂಗುತ್ತಾ, ಮತ್ತೊಂದು ಕಡೆ ಜಾತಿ, ಮತ, ಭಾಷೆ ಆಧಾರಿತ ವಿಭಜನೆಗಳನ್ನು ಮಾಡುತ್ತಿದೆ. ಈ ವಿಭಜನೆಗಳು ದುಡಿಯುವ ವರ್ಗದ ಏಕತೆಯ ವಿರುದ್ಧವಾದ ಅಸ್ತ್ರಗಳಾಗಿ ಕಾರ್ಯನಿರ್ವಹಿಸುತ್ತವೆ.
ಕೃಷಿ, ಕಾರ್ಖಾನೆ ಮತ್ತು ಕಟ್ಟಡ ಕಾರ್ಮಿಕರ ಹೋರಾಟಗಳಲ್ಲಿ ಆರ್‌ಎಸ್‌ಎಸ್-ಬಿಜೆಪಿ ಪ್ರಭಾವಿತ ಸಂಘಟನೆಗಳು ‘ರಾಷ್ಟ್ರಪ್ರೇಮ’ ಅಥವಾ ‘ಧರ್ಮರಕ್ಷಣೆ’ ಎಂಬ ಹೆಸರಿನಲ್ಲಿ ಕಾರ್ಮಿಕರ ಮೂಲ ಹಕ್ಕುಗಳನ್ನು ಕುಗ್ಗಿಸಲು ಯತ್ನಿಸುತ್ತಿವೆ. ಕೇಂದ್ರದ ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆಗಳು, ವೇತನ ಕಡಿತ ಇವುಗಳೆಲ್ಲವೂ ಆರ್ಥಿಕ ಶೋಷಣೆಯೊಂದಿಗೆ ಸಾಂಸ್ಕೃತಿಕ ನಿಯಂತ್ರಣವನ್ನು ಕೂಡ ಬಲಪಡಿಸುತ್ತವೆ.
ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ನ ಕಾರ್ಮಿಕ ವಿರೋಧಿ ನಿಲುವುಗಳಿಗೆ ಹಲವು ಸ್ಪಷ್ಟ ಉದಾಹರಣೆಗಳು ಸಿಗುತ್ತವೆ. ಪೀಣ್ಯ, ಚಿಕ್ಕಬಳ್ಳಾಪುರ, ಬೆಳಗಾವಿ ಮುಂತಾದ ಪ್ರದೇಶಗಳಲ್ಲಿ ಕಾರ್ಮಿಕರು ವೇತನ ಹೆಚ್ಚಳಕ್ಕಾಗಿ ಹೋರಾಡಿದಾಗ, ಆರ್‌ಎಸ್‌ಎಸ್‌ನಿಂದ ಪ್ರೇರಿತವಾದ ಸಂಘಟನೆಗಳು ‘ರಾಷ್ಟ್ರದ ಹಿತ’ ಎಂಬ ನೆಪದಲ್ಲಿ ಮುಷ್ಕರ ವಿರೋಧಿ ನಿಲುವು ತಳೆದವು. ರೈತ ಚಳವಳಿಗಳ ಸಂದರ್ಭದಲ್ಲಿ ಸಹ, ಹಿಂದೂ ಧರ್ಮದ ಹೆಸರಿನಲ್ಲಿ ಸರ್ಕಾರದ ಪರ ನಿಂತು ‘ವಿದೇಶಿಪ್ರೇರಿತ ರೈತ ಹೋರಾಟ, ಖಲಿಸ್ತಾನಿಪ್ರೇರಿತ ರೈತ ಹೋರಾಟ’ ಎಂದು ರೈತ ನಾಯಕರ ವಿರುದ್ಧ ದ್ವೇಷದ ಪ್ರಚಾರ ನಡೆಸಿತು.
ಆರ್‌ಎಸ್‌ಎಸ್‌ನ ಮೂಲ ತತ್ವವು ದುಡಿಯುವ ವರ್ಗದ ವಿಮೋಚನೆಗೆ ವಿರುದ್ಧವಾಗಿದೆ. ಕಾರ್ಮಿಕರ ರಾಜಕೀಯ ಶಕ್ತಿಯನ್ನು ನಿರ್ಲಕ್ಷ್ಯ ಮಾಡುವುದಷ್ಟೇ ಅಲ್ಲ, ಅವರನ್ನು ‘ರಾಷ್ಟ್ರದ ಯೋಧರು’ ಎಂಬ ಭಾವನಾತ್ಮಕ ಬಲೆಯಿಂದ ಬುದ್ಧಿಶೋಷಣೆಗೆ ಒಳಪಡಿಸುತ್ತದೆ. ಈ ಬಲೆಗೆ ಸಿಲುಕದವರನ್ನು ‘ರಾಷ್ಟ್ರದ್ರೋಹಿಗಳು’ ಎಂದು ಆರ್‌ಎಸ್‌ಎಸ್ ಕರೆಯುತ್ತದೆ.
ಅಲ್ಪಸಂಖ್ಯಾತ ಸಮುದಾಯಗಳ ಅಮಾಯಕ ಬಡ ಜನರ ಬದುಕಿನ ಮೇಲೆ ಬುಲ್ಡೋಜರ್ ಸಂಸ್ಕೃತಿಯ ಹೇರಿಕೆಗೆ ಆರ್‌ಎಸ್ಎಸ್ ಮುನ್ನುಡಿ ಬರೆದಿರುವುದು ದೇಶದ ದುಡಿಯುವ ವರ್ಗದ ಮೇಲಿನ ಭೀಕರ ದಾಳಿಗೆ ಸಾಕ್ಷಿ.
ಆರ್‌ಎಸ್‌ಎಸ್ ಬಗ್ಗೆ ಯುವಸಮುದಾಯ ಎಚ್ಚೆತ್ತುಕೊಳ್ಳದೇ ಇದ್ದರೆ ಅದು ದೇಶವನ್ನು ಆಪೋಷನ ತೆಗೆದುಕೊಳ್ಳುತ್ತದೆ. ಭೂಗತ ಸಂಘಟನೆಯೊಂದು ದೇಶವನ್ನು ನಿಗೂಢವಾಗಿ ಆಳುತ್ತಾ, ಮತ್ತೊಂದೆಡೆ ದೇಶವನ್ನು ಜಾತಿ, ಧರ್ಮಗಳ ಮೂಲಕ ಒಡೆದು ಸಾವು–ನೋವಿಗೆ ಕಾರಣವಾಗುತ್ತಾ ರಾಷ್ಟ್ರವನ್ನು ಅಧಃಪತನದತ್ತ ಕೊಂಡೊಯ್ಯುತ್ತದೆ ಎಂಬ ಎಚ್ಚರಿಕೆ ನಮಗಿರಬೇಕು. ದೇವನೂರರು ಈ ಆಶಯವನ್ನು ತಮ್ಮದೇ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ.
ಲೇಖಕ: ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.