ADVERTISEMENT

ಸಂದರ್ಶನ | ಬರ ಎದುರಿಸಲು ಆಡಳಿತ ಯಂತ್ರ ಸನ್ನದ್ಧ: ಸಚಿವ ಕೃಷ್ಣಬೈರೇಗೌಡ

ರಾಜ್ಯ ಸರ್ಕಾರವು ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸುತ್ತಿದೆಯೇ?

ರಾಜೇಶ್ ರೈ ಚಟ್ಲ
Published 26 ಜನವರಿ 2024, 20:39 IST
Last Updated 26 ಜನವರಿ 2024, 20:39 IST
<div class="paragraphs"><p>ದಾವಣಗೆರೆ ತಾಲುಕಿನ ಆನಗೋಡು ಮತ್ತು ಅಣಜಿ ನಡುವಿನ ಜಮಾಪುರ ಗ್ರಾಮದಲ್ಲಿ ಒಣಗಿರುವ ಬೆಳೆಗಳೊಂದಿಗೆ ರೈತ ದಂಪತಿ (ಒಳಚಿತ್ರದಲ್ಲಿ... <em>ಕೃಷ್ಣಬೈರೇಗೌಡ</em>)</p></div>

ದಾವಣಗೆರೆ ತಾಲುಕಿನ ಆನಗೋಡು ಮತ್ತು ಅಣಜಿ ನಡುವಿನ ಜಮಾಪುರ ಗ್ರಾಮದಲ್ಲಿ ಒಣಗಿರುವ ಬೆಳೆಗಳೊಂದಿಗೆ ರೈತ ದಂಪತಿ (ಒಳಚಿತ್ರದಲ್ಲಿ... ಕೃಷ್ಣಬೈರೇಗೌಡ)

   

ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದೆ. ಪರಿಣಾಮವಾಗಿ ಬೆಳೆಗಳೆಲ್ಲ ನಷ್ಟವಾಗಿವೆ. ರೈತ ಕಂಗಾಲಾಗಿದ್ದಾನೆ ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ರೈತರ ಸಂಕಷ್ಟ ಪರಿಹಾರ ಕಾರ್ಯ ಗಂಭೀರವಾಗಿ ನಡೆದಿಲ್ಲ. ಕೇಂದ್ರವು ಪರಿಹಾರದ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದೆ ಎಂದು ರಾಜ್ಯ ಸರ್ಕಾರ ವಾದಿಸುತ್ತಿದೆ. ಆದರೆ, ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವೇ ಇಲ್ಲ, ಎಲ್ಲ ಹಣವನ್ನು ‘ಗ್ಯಾರಂಟಿ’ ಯೋಜನೆಗಳ ಜಾರಿಗೆ ವಿನಿಯೋಗಿಸಲಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ದೂರುತ್ತಿದೆ. ಈ ಕುರಿತು, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಮಾತುಗಳು ಇಲ್ಲಿವೆ

_______________________________

ADVERTISEMENT
  • 223 ತಾಲ್ಲೂಕುಗಳನ್ನು ಬರಪೀಡಿತವೆಂದು ಸೆಪ್ಟೆಂಬರ್‌ 13ರಂದೇ ಘೋಷಿಸಲಾಗಿದೆ. ಈ ತಾಲ್ಲೂಕುಗಳಲ್ಲಿ ವಸ್ತುಸ್ಥಿತಿ ಹೇಗಿದೆ?

ಸದ್ಯ ಪರಿಸ್ಥಿತಿ ನಿಯಂತ್ರಣ ದಲ್ಲಿದೆ. ಬರದಿಂದ ಎದುರಾಗಿರುವ, ಎದುರಾಗಬಹುದಾದ ಎಲ್ಲ ಸವಾಲು– ಸಮಸ್ಯೆಗಳನ್ನು ಎದುರಿಸಲು ಆಡಳಿತ ಯಂತ್ರ ಸನ್ನದ್ಧವಾಗಿದೆ. ಅಗತ್ಯ ಇರುವ ಕಡೆಗಳಿಗೆ ಕುಡಿಯುವ ನೀರು ಪೂರೈಕೆ, ಮೇವು ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳ ಬಳಿ ₹ 870 ಕೋಟಿ ಲಭ್ಯವಿದೆ. ಬರ ನಿರ್ವಹಣೆ ಹೊಣೆಯನ್ನು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ. ಸದ್ಯ 36 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. 158 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು 141 ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ. 2–3 ಹೋಬಳಿ ಹೊರತುಪಡಿಸಿದರೆ, ಮೇವು ಕೊರತೆ ಎಲ್ಲೂ ಇಲ್ಲ. ಮೇವು ಬ್ಯಾಂಕ್, ಗೋ ಶಾಲೆ ತೆರೆಯುವ ಅಗತ್ಯವೂ ಬಂದಿಲ್ಲ. ಮೇವಿನ ಲಭ್ಯತೆ ಹೆಚ್ಚಿಸಲು ಬಿತ್ತನೆ ಬೀಜದ 6,36,847 ಕಿಟ್‌ಗಳನ್ನು ಉಚಿತವಾಗಿ ಈಗಾಗಲೇ ವಿತರಿಸಲಾಗಿದೆ. ಫೆಬ್ರುವರಿಯಲ್ಲಿ ಮತ್ತೊಮ್ಮೆ 7 ಲಕ್ಷ ಕಿಟ್‌ಗಳನ್ನು ನೀಡಲಿದ್ದೇವೆ. 16 ಜಿಲ್ಲೆಗಳಲ್ಲಿ ಮೇವು ಖರೀದಿಗೆ ಟೆಂಡರ್ ನಡೆದಿದೆ. ಬರ ಪರಿಹಾರ ಕಾರ್ಯಗಳ ಮೇಲೆ ನಿಗಾ ಇಡಲು ರಚಿಸಿರುವ ಶಾಸಕರ ನೇತೃತ್ವದ ತಾಲ್ಲೂಕು ಮಟ್ಟದ ಕಾರ್ಯಪಡೆ ನ. 4ರಿಂದ ಈವರೆಗೆ 344 ಸಭೆಗಳನ್ನು ಮಾಡಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಜೂನ್‌ 1ರಿಂದ ಈವರೆಗೆ 210 ಸಭೆಗಳನ್ನು ನಡೆಸಿದೆ.

  • ಬರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದ್ದು, ತಯಾರಿ ಏನು?

ಮುಂದಿನ ದಿನಗಳಲ್ಲಿ ಪರಿಸ್ಥಿತಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಅದಕ್ಕೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. 6,097 ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶಗಳ 1,186 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಬಹುದೆಂದು ಅಂದಾಜಿಸಿದ್ದೇವೆ. ಈ ಗ್ರಾಮಗಳು ಮತ್ತು ವಾರ್ಡ್‌ಗಳ ಪಟ್ಟಿಯನ್ನೂ ತಯಾರಿಸಿದ್ದೇವೆ. ಹೀಗೆ ಗುರುತಿಸಿದ ಗ್ರಾಮ, ವಾರ್ಡ್‌ ಹೊರತಾದ ಕಡೆಗಳಲ್ಲೂ ಸಮಸ್ಯೆಗಳು ಎದುರಾಗಬಹುದು. ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲು ಸೂಚಿಸಲಾಗಿದೆ. ಈಗಾಗಲೇ 3,000 ಕಡೆಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿದ್ದೇವೆ.

ಕೊಳವೆಬಾವಿ ಹೊಂದಿರುವ 1,200 ಜನರ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. 21 ಜಿಲ್ಲೆಗಳಲ್ಲಿ ಟ್ಯಾಂಕರ್‌ಗಳಿಗೆ ಟೆಂಡರ್‌ ಮಾಡಿದ್ದೇವೆ. ಯಾವುದೇ ಊರಿನಲ್ಲಿ ನೀರಿನ ಕೊರತೆ ಎದುರಾದರೂ 24 ಗಂಟೆಯ ಒಳಗೆ ಟ್ಯಾಂಕರ್‌ ಮೂಲಕವಾದರೂ ನೀರು ಪೂರೈಸಲು ಹೇಳಿದ್ದೇವೆ. ಅನಿವಾರ್ಯವಾದರೆ ಮೇವು ಖರೀದಿ, ಮೇವು ಬ್ಯಾಂಕ್‌, ಗೋ ಶಾಲೆ ತೆರೆಯಲು ಸೂಚಿಸಿದ್ದೇವೆ.

  • ಟ್ಯಾಂಕರ್‌, ಕೊಳವೆಬಾವಿ ಒದಗಿಸಿದವರಿಗೆ ಬಾಡಿಗೆ ಹಣ ಪಾವತಿ ವಿಳಂಬವಾಗುತ್ತಿದೆ ಎಂಬ ದೂರು ಇದೆಯಲ್ಲ?

ಬರ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ತಳಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕುಡಿಯುವ ನೀರಿನ ಸಹಾಯಕ ಎಂಜಿನಿಯರ್‌ಗಳ ತಂಡಕ್ಕೆ ವಹಿಸಲಾಗಿದೆ. ಟ್ಯಾಂಕರ್‌, ಖಾಸಗಿ ಕೊಳವೆಬಾವಿ ಒದಗಿಸಿದವರ ಬಿಲ್‌ ಅನ್ನು ಪ್ರತಿ 15 ದಿನಗಳಿಗೊಮ್ಮೆ ಸಿದ್ಧಪಡಿಸಬೇಕು. ತಹಶೀಲ್ದಾರ್‌ಗಳು ಈ ಬಿಲ್‌ಗಳನ್ನು ಪರಿಶೀಲಿಸಿ ತಕ್ಷಣವೇ ಹಣ ಪಾವತಿಸಬೇಕು. ಇದರಲ್ಲಿ ಯಾವುದೇ ವಿಳಂಬ ಆಗಬಾರದೆಂದು ಸ್ಪಷ್ಟ ಸೂಚನೆ ನೀಡಿದ್ದೇನೆ.

  • ಎಕರೆಗೆ ₹2 ಸಾವಿರ ವಿತರಣೆ ಎಲ್ಲಿಗೆ ಬಂತು?

ಈವರೆಗೆ (ಜ. 25) 28.80 ಲಕ್ಷ ರೈತರಿಗೆ ₹545.03 ಕೋಟಿ ಪಾವತಿ ಆಗಿದೆ. ಅಂದಾಜು 37 ಲಕ್ಷ ರೈತರಿಗೆ ಪರಿಹಾರ ಸಿಗಲಿದೆ. ಇನ್ನೂ 8ರಿಂದ 9 ಲಕ್ಷ ರೈತರ ಬೆಳೆಹಾನಿ ಸಮೀಕ್ಷೆಯ ಪರಿಶೀಲನೆ ಪೂರ್ಣಗೊಂಡ ತಕ್ಷಣ ಪರಿಹಾರದ ಹಣ ಪಾವತಿಯಾಗಲಿದೆ. ರೈತರ ಬೆಳೆ ಸಮೀಕ್ಷೆಯ ಮಾಹಿತಿಯನ್ನು ‘ಫ್ರೂಟ್ಸ್‌’ (ಫಾರ್ಮರ್‌ ರಿಜಿಸ್ಟ್ರೇಷನ್‌  ಮತ್ತು ಯೂನಿಫೈಡ್‌ ಬೆನಿಫೀಷಿಯರಿ ಸಿಸ್ಟಂ) ತಂತ್ರಾಂಶದಲ್ಲಿ  ಅಧಿಕಾರಿಗಳು ದಾಖಲಿಸಿದ್ದಾರೆ. ಫ್ರೂಟ್ಸ್‌ ಡಾಟಾಬೇಸ್‌ನಲ್ಲಿ 7.7 ಲಕ್ಷ ರೈತರ ಮಾಹಿತಿಯೇ ಇರಲಿಲ್ಲ. ನೋಂದಣಿಯಲ್ಲಿ ಬಿಟ್ಟು ಹೋಗಿರುವ ಅರ್ಹ ರೈತರ ಮಾಹಿತಿಯನ್ನು ಮತ್ತೆ ದಾಖಲಿಸಲು ಸೂಚಿಸಲಾಗಿದೆ. ಎಲ್ಲ ಅರ್ಹ ರೈತರ ಆಧಾರ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆಗೆ ಈ ಪರಿಹಾರ ಹಣ ನೇರವಾಗಿ ಜಮೆ ಮಾಡಲಾಗುತ್ತಿದೆ. 

  • ಬರ ಪರಿಹಾರದಲ್ಲೂ ಅಕ್ರಮಗಳು ನಡೆದಿವೆ ಎಂದು ನೀವು ಹೇಳಿದ್ದೀರಿ?

ಹೌದು, ಹಿಂದಿನ ಸರ್ಕಾರದ ಅವಧಿಯಲ್ಲಿ ಪರಿಹಾರ ಕೊಡುವುದರಲ್ಲಿ ವ್ಯಾಪಕ ಅಕ್ರಮವಾಗಿರುವುದು ಗಮನಕ್ಕೆ ಬಂದಿದೆ. ಕಡೂರು ತಾಲ್ಲೂಕಿನಲ್ಲಿ ₹6 ಕೋಟಿಯಷ್ಟು ದುರುಪಯೋಗವಾಗಿರುವ ಆರೋಪವಿದೆ. ಇಲ್ಲಿನ 13 ಗ್ರಾಮಗಳಲ್ಲಿ ಪರಿಶೀಲಿಸಿದಾಗ, 1,635 ಸರ್ವೆ ನಂಬರ್‌ಗಳಿಗೆ ₹2.54 ಕೋಟಿ ಪಾವತಿಯಾಗಿದೆ. ಈ ಪೈಕಿ, 576 ರೈತರ ಆಧಾರ್‌ ಹೊಂದಾಣಿಕೆ ಆಗಿಲ್ಲ. ಆಧಾರ್‌ ಇಲ್ಲದ 329 ಮಂದಿಗೆ ಹಣ ಪಾವತಿಯಾಗಿದೆ. 1,241 ರೈತರು ಹಾಕಿರುವ ಬೆಳೆಗೂ, ಪರಿಹಾರ ಪಾವತಿಸಿದ ಬೆಳೆಗೂ ಸಂಬಂಧವೇ ಇಲ್ಲ. 299 ರೈತರ ಬೆಳೆ ಮಾಹಿತಿಯೇ ಇಲ್ಲ. ಡೇಟಾಬೇಸ್‌ನಲ್ಲಿ ಇಲ್ಲದಿರುವವರಿಗೂ ಹಣ ಪಾವತಿಯಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್‌, ಶಿಗ್ಗಾವಿಯಲ್ಲೂ ಇಂಥ ಅಕ್ರಮ ನಡೆದಿದೆ. ಪ್ರಾದೇಶಿಕ ಅಧಿಕಾರಿ ಕೊಟ್ಟ ವರದಿಯನ್ನು ಮುಚ್ಚಿಡಲಾಗಿದೆ. ಚಿತ್ರದುರ್ಗ, ಕಲಬುರಗಿ, ರಾಯಚೂರಿನಲ್ಲಿಯೂ ಇದೇ ರೀತಿಯ ಅಕ್ರಮ ನಡೆದ ದೂರುಗಳಿವೆ. ಯಾರದ್ದೋ ಜಮೀನು, ಇನ್ಯಾರಿಗೊ ಹಣ ಪಾವತಿಯಾಗಿದೆ. ಬೆಳೆ ಪರಿಹಾರ ರೈತರ ಹಕ್ಕು. ಇದನ್ನು ಸಮರ್ಪಕವಾಗಿ ಮಾಡಬೇಕೆಂಬ ಕಾರಣಕ್ಕೆ ಮತ್ತು ಅಕ್ರಮಕ್ಕೆ ಕಡಿವಾಣ ಹಾಕಲೇಬೇಕೆಂದು ‘ಫ್ರೂಟ್ಸ್‌’ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯಗೊಳಿಸಲಾಗಿದೆ.

  • ಜನ ಗುಳೇ ಹೋಗುವ ಪರಿಸ್ಥಿತಿ ಎದುರಾಗಬಹುದೇ?

ಬರಗಾಲದಂತಹ ಪರಿಸ್ಥಿತಿಯಲ್ಲಿ ಉದ್ಯೋಗ ಇಲ್ಲದೆ ಜನ ಗುಳೇ ಹೋಗುವ ಸ್ಥಿತಿ ಬರಬಾರದೆಂಬ ಕಾರಣಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ತಂದಿತ್ತು. ಸಾಮಾನ್ಯವಾಗಿ 100 ದಿನ ಕೆಲಸ ಕೊಡಬೇಕು. ಬರಗಾಲ ಬಂದಾಗ ಹೆಚ್ಚುವರಿಯಾಗಿ 50 ದಿನಗಳ ಕೆಲಸ ಕೊಡಬೇಕು ಎಂಬ ಕಾನೂನಿದೆ. ನಾವು ಈ ಬಗ್ಗೆಯೂ ಒತ್ತಾಯ ಮಾಡಿದ್ದೇವೆ. ಆದರೆ, ಕೇಂದ್ರ ಸರ್ಕಾರ ಅದಕ್ಕೂ ಒಪ್ಪಿಗೆ ಕೊಟ್ಟಿಲ್ಲ. ಈಗಾಗಲೇ 100 ದಿನಗಳ ಕೆಲಸ ಪೂರೈಸಿದವರು ಸಂಕಷ್ಟದಲ್ಲಿದ್ದಾರೆ. ನಮ್ಮ ‘ಗ್ಯಾರಂಟಿ’ ಯೋಜನೆಗಳಿಂದ ಜನರ ಕೈಗೆ ಸ್ವಲ್ಪ ಹಣ ಹೋಗುತ್ತಿರುವುದರಿಂದ ಅನುಕೂಲವಾಗಿದೆ. ಕೇಂದ್ರ ಸರ್ಕಾರ ತಕ್ಷಣ ಹೆಚ್ಚುವರಿ 50 ದಿನಗಳ ಕೆಲಸಕ್ಕೆ ಒಪ್ಪಿಗೆ ಕೊಡಬೇಕು. ಅದರಿಂದ ಗುಳೇ ಹೋಗುವುದನ್ನು ತಪ್ಪಿಸಲು ಅವಕಾಶ ಆಗುತ್ತದೆ.

  • ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಲೇ ಇವೆಯಲ್ಲ?

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪರಿಹಾರ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸುವ ಧೈರ್ಯವನ್ನು ಬಿಜೆಪಿಯವರು ಮೊದಲು ತೋರಿಸಲಿ. ತಮ್ಮ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು, ಜನರ ಕಣ್ಣಿಗೆ ಮಣ್ಣೆರಚಲು ನಮ್ಮ (ಕಾಂಗ್ರೆಸ್) ಮೇಲೆ ಅವರು ಆರೋಪ ಮಾಡುತ್ತಿದ್ದಾರೆ. ಕೇಂದ್ರದ ವಿಳಂಬದ ವಿರುದ್ಧ ಧ್ವನಿ ಎತ್ತುವ ಧೈರ್ಯ ಇಲ್ಲದೆ, ವೃಥಾ ದೂರುತ್ತಿದ್ದಾರೆ. ಅವರಿಗೆ ಬದ್ಧತೆ ಇದ್ದರೆ ಕೇಂದ್ರ ಸರ್ಕಾರದ ಜೊತೆ ಮಾತನಾಡಲಿ. ಕೇಂದ್ರ ಸರ್ಕಾರ ಕೊಡಬೇಕಾದ ಪರಿಹಾರದ ಹಣವನ್ನು ನಾವು ನೀಡುತ್ತಿದ್ದೇವೆ.

  • ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಏಕೆ?

ಸೆ. 13ರಂದು ಬರ ಘೋಷಣೆ ಮಾಡಿ, ಸೆ. 23ರಂದು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಬೇರೆ ರಾಜ್ಯಗಳು ಮನವಿ ಸಲ್ಲಿಸುವ ಎರಡು ತಿಂಗಳು ಮೊದಲೇ ನಾವು ಮನವಿ ಕೊಟ್ಟಿದ್ದೇವೆ. ಕೇಂದ್ರ ತಂಡ ರಾಜ್ಯದಲ್ಲಿ ಅಕ್ಟೋಬರ್‌ನಲ್ಲಿ ಅಧ್ಯಯನ ನಡೆಸಿ ವರದಿ ನೀಡಿದೆ. ಕೇಂದ್ರದ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ಮುಖ್ಯಮಂತ್ರಿ ಮತ್ತು ನಾನು ಪ್ರಧಾನಿಯವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದೇವೆ. ಈವರೆಗೆ 17 ಪತ್ರಗಳನ್ನು ಬರೆದಿದ್ದೇವೆ. ಪ್ರಧಾನಿಯವರು ಮೊನ್ನೆ ರಾಜ್ಯಕ್ಕೆ ಬಂದಿದ್ದಾಗಲೂ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಆದರೆ, ನಮ್ಮ ಮನವಿಗೆ ಸಂಬಂಧಿಸಿದಂತೆ ಈವರೆಗೂ ಕೇಂದ್ರ ಸರ್ಕಾರ ಯಾವುದೇ ತೀರ್ಮಾನ ಮಾಡಿಲ್ಲ. ಹೀಗಾಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಯಾಕೆ ವಿಳಂಬ ಮಾಡುತ್ತಿದೆಯೊ ಗೊತ್ತಿಲ್ಲ. ತಕ್ಷಣ ನೆರವಿಗೆ ಬರಬೇಕು ಎನ್ನುವುದು ನಮ್ಮ ಆಗ್ರಹ.

  • ಕೇಂದ್ರದ ಈ ನಡೆ ಉದ್ದೇಶಪೂರ್ವಕ ಅನಿಸುತ್ತಿದೆಯೇ?

ನಮ್ಮದು ಒಕ್ಕೂಟ ವ್ಯವಸ್ಥೆ. ಬರಗಾಲ ಬಂದಾಗ ನಮ್ಮದೂ (ರಾಜ್ಯ), ಅವರದ್ದೂ (ಕೇಂದ್ರ) ಜವಾಬ್ದಾರಿ ಇದೆ. ಆದರೆ, ಮೂರು ತಿಂಗಳು ಕಳೆದರೂ ಒಂದು ತೀರ್ಮಾನಕ್ಕೆ ಬರಲು ಕೇಂದ್ರಕ್ಕೆ ಆಗಿಲ್ಲ ಎನ್ನುವುದು ನಮ್ಮ ಕಲ್ಪನೆ, ಊಹೆಗೆ ನಿಲುಕದ ಸಂಗತಿ. ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದ್ದಾರೊ ಗೊತ್ತಿಲ್ಲ. ಸಂಘರ್ಷದಿಂದ ಜನರಿಗೆ ಲಾಭ ಇಲ್ಲ. ನಾವಂತೂ ಪರಿಹಾರ ಬಿಡುಗಡೆ ಮಾಡುವಂತೆ ನಿರಂತರ ಒತ್ತಡ ಹಾಕುತ್ತಿದ್ದೇವೆ. ಕೇಂದ್ರದಿಂದ ಬರಬೇಕಾದ ಪರಿಹಾರ ವಿಳಂಬ ಆಗಿರುವುದರಿಂದ ನಾವೇ ರೈತರಿಗೆ ಮೊದಲ ಕಂತಿನಲ್ಲಿ ₹2 ಸಾವಿರ ಪರಿಹಾರ ಕೊಡಲು ತೀರ್ಮಾನಿಸಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.