ರಾಜ್ಯದಲ್ಲಿ ಒಂದು ವಾರದಿಂದ ಅಕಾಲಿಕ ಮಳೆಯಾಗುತ್ತಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಪ್ರದೇಶದಲ್ಲಿ ವಿಪರೀತ ಮಳೆ ಯಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಾಪುರ, ಕೊಪ್ಪಳ, ಗುಲ್ಬರ್ಗ, ಉತ್ತರ ಕನ್ನಡ ಮತ್ತಿತರ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಸುರಿದು ಬೆಳೆ ನಾಶವಾಗಿದೆ. ಕೆಲವು ಕಡೆ ಆಲಿಕಲ್ಲು ರಾಶಿರಾಶಿ ಬಿದ್ದು ರಸ್ತೆಗಳು ಹಿಮದ ಹಾಸಿಗೆಯಂತೆ ಕಾಣುತ್ತಿವೆ.
ಕಂದಾಯ ಇಲಾಖೆ ಈವರೆಗೆ ಅಂದಾಜು ಮಾಡಿದಂತೆ ಅಕಾಲಿಕ ಮಳೆಗೆ 1.22 ಲಕ್ಷ ಹೆಕ್ಟೇರ್ ಕೃಷಿ ಬೆಳೆ ನಾಶವಾಗಿದೆ. 14,545 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆಗಳಿಗೆ ಹಾನಿ ಯಾಗಿದೆ. ಇದುವರೆಗೂ 11 ಮಂದಿ ಮೃತಪಟ್ಟಿದ್ದಾರೆ. 157 ಜಾನುವಾರು ಸತ್ತಿವೆ. 551 ಮನೆಗಳಿಗೆ ಹಾನಿಯಾಗಿದೆ. ಆದರೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಎಲ್ಲ ರಾಜಕಾರಣಿಗಳೂ ಲೋಕಸಭಾ ಚುನಾವಣೆಯಲ್ಲಿ ಮುಳುಗಿದ್ದು ರೈತರ ಕಷ್ಟವನ್ನು ಕೇಳಲು ಅವರಿಗೆ ಸಮಯವೇ ಇಲ್ಲದಂತಾಗಿದೆ. ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿರುವಾಗ ಅವರ ನೆರವಿಗೆ ಬಾರದೆ ತಮ್ಮ ಮಕ್ಕಳಿಗೆ, ಬಂಧುಗಳಿಗೆ ಟಿಕೆಟ್ ಕೊಡಿಸುವ ಹವಣಿಕೆಯಲ್ಲಿ ರಾಜಕಾರಣಿಗಳು ತೊಡಗಿರುವುದು ಅಕ್ಷಮ್ಯ.
ಆಕಾಶವೇ ಕಳಚಿ ಬಿದ್ದಂತೆ ರೈತರು ಕಂಗೆಟ್ಟಿರುವಾಗ ಅವರಿಗೆ ಸಾಂತ್ವನ ಹೇಳದ ರಾಜಕಾರಣಿಗಳ ನಡವಳಿಕೆ ಇಡೀ ರಾಜಕೀಯ ವ್ಯವಸ್ಥೆ ಬಗ್ಗೆಯೇ ಹೇಸಿಗೆ ಹುಟ್ಟಿಸುತ್ತದೆ. ಚುನಾವಣೆ ಹೆಸರಿನಲ್ಲಿ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿ ಅರಾಜಕತೆ ಉಂಟಾಗುವುದು ಒಳ್ಳೆಯದಲ್ಲ. ಕಷ್ಟದಲ್ಲಿರುವ ರೈತರ ನೆರವಿಗೆ ತಕ್ಷಣವೇ ಧಾವಿಸುವುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ. ಇಂಥ ಸಂದರ್ಭಗಳಲ್ಲಿ ಚುನಾವಣಾ ಆಯೋಗ ಕೂಡ ಆಕ್ಷೇಪಿಸಿದ ಉದಾಹರಣೆ ಇಲ್ಲ.
ಅಕಾಲಿಕ ಮಳೆಯಿಂದ ನಷ್ಟಕ್ಕೆ ಒಳಗಾಗಿರುವ ರೈತರ ನೆರವಿಗೆ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೂ ಮುಂದಾಗಬೇಕು. ‘ಜಿಲ್ಲಾಧಿಕಾರಿಗಳ ಬಳಿ ₨ 200 ಕೋಟಿ ಇದೆ. ಅದನ್ನು ವೆಚ್ಚ ಮಾಡಲು ಸೂಚಿಸಲಾಗಿದೆ’ ಎಂದು ಉನ್ನತ ಅಧಿಕಾರಿಗಳು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅಪಾರ ನಷ್ಟ ಆಗಿರುವಾಗ ಇಷ್ಟು ಕಡಿಮೆ ಹಣದಿಂದ ಏನು ಮಾಡಲು ಸಾಧ್ಯ?
ಬೆಳೆಗಳೆಲ್ಲಾ ನಾಶವಾಗಿ ರೈತರು ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತಿರುವಾಗ ಸರ್ಕಾರ ವಾರ್ಷಿಕ ಬೆಳೆ ನಾಶಕ್ಕೆ ಹೆಕ್ಟೇರ್‌ಗೆ ₨ 12 ಸಾವಿರ, ಮಳೆಯಾಶ್ರಿತ ಬೆಳೆಗೆ ಹೆಕ್ಟೇರ್‌ಗೆ ₨ 4.5 ಸಾವಿರ, ನೀರಾವರಿ ಬೆಳೆಗೆ ಹೆಕ್ಟೇರ್‌ಗೆ ₨ 8 ಸಾವಿರ ನೀಡಿದರೆ ಏನು ಪ್ರಯೋಜನ? ಇದು ಏನೇನೂ ಸಾಲದು. ಇಂಥ ಅವಾಸ್ತವಿಕ ಪರಿಹಾರ ಸೂತ್ರ ಬದಲಾಗಬೇಕು. ರೈತರು, ಮುಂದೆ ಕೈಗೊಳ್ಳಬೇಕಾದ ಬೇಸಾಯ ಕ್ರಮಗಳ ಬಗ್ಗೆಯೂ ಸಲಹೆ ನೀಡಬೇಕು. ಪರ್ಯಾಯ ಮತ್ತು ಅಲ್ಪಾವಧಿ ಬೆಳೆಗಳನ್ನು ಬೆಳೆದು ಈಗ ಆಗಿರುವ ನಷ್ಟವನ್ನು ಭರಿಸಿಕೊಳ್ಳುವ ಬಗ್ಗೆಯೂ ಅವರಿಗೆ ತಿಳಿವಳಿಕೆ ಹೇಳಬೇಕು. ಅದು ರಾಜ್ಯ ಸರ್ಕಾರದ ಕರ್ತವ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.