ADVERTISEMENT

ಆಟಗಾರನಿಗಿಂತ ದೇಶ ದೊಡ್ಡದು

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST

ಕ್ರೀಡೆಯಲ್ಲಿ ಆಟಗಾರ, ದೇಶ ಮತ್ತು ಆಟಕ್ಕಿಂತ ದೊಡ್ಡವನೇನಲ್ಲ. ಒಲಿಂಪಿಕ್ ಕ್ರೀಡೆಗಳಂಥ ಮಹಾನ್ ಕ್ರೀಡಾಮೇಳದಲ್ಲಿ ದೇಶವನ್ನು ಪ್ರತಿನಿಧಿಸುವುದೇ ದೊಡ್ಡ ಗೌರವ.

ಇದನ್ನು ಅರ್ಥ ಮಾಡಿಕೊಳ್ಳದ ಟೆನಿಸ್ ಆಟಗಾರರಾದ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ,  ಲಿಯಾಂಡರ್ ಪೇಸ್ ಜೊತೆ ಒಲಿಂಪಿಕ್ಸ್‌ನಲ್ಲಿ ಆಡುವುದಿಲ್ಲ ಎಂದು ಹಟ ಹಿಡಿದಿರುವುದು ವಿವಾದ ಎಬ್ಬಿಸಿದೆ. ಪೇಸ್-ಭೂಪತಿ  ವಿರಸ ಹೊಸತೇನಲ್ಲ. 1999ರಿಂದಲೇ ಆರಂಭವಾಗಿದೆ.

ಅದು ವೈಯಕ್ತಿಕ ಜಗಳ. ಭಾರತ ಟೆನಿಸ್ ಸಂಸ್ಥೆ ಆಯ್ಕೆ ಸಮಿತಿ ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ, ಪದಕ ಗೆಲ್ಲುವ ಉತ್ತಮ ಜೋಡಿ ಎಂಬ ಭಾವನೆಯಿಂದ ಆಯ್ಕೆಮಾಡಿದೆ. ಆಯ್ಕೆ ಸಮಿತಿ ನಿರ್ಧಾರವೇ ಅಂತಿಮ.

ಇಂಥವನ ಜೊತೆಯೇ ಆಡುತ್ತೇನೆ ಅಥವಾ ಆಡುವುದಿಲ್ಲ ಎಂದು ಹೇಳುವ ಅಧಿಕಾರ ಆಟಗಾರನಿಗೆ ಇಲ್ಲ. ಪೇಸ್ ಜೊತೆ ಆಡುವುದೇ ಇಲ್ಲ ಎಂದು ಹೇಳುತ್ತಿರುವ ಭೂಪತಿ, ಒಲಿಂಪಿಕ್ಸ್‌ಗೆ ಹೋಗದಿದ್ದಲ್ಲಿ ಅದು ದೇಶಕ್ಕೇ ಮಾಡುವ ಅಪಚಾರ. ಕಳೆದ ಏಳೆಂಟು ತಿಂಗಳಿಂದ ಇವರ ಜೊತೆ ಆಡುತ್ತಿರುವ ಬೋಪಣ್ಣ ಕೂಡ ಹಿಂದೇಟು ಹಾಕಿ ತಮ್ಮ ಭವಿಷ್ಯವನ್ನು ತಾವೇ ಹಾಳುಮಾಡಿಕೊಳ್ಳುತ್ತಿದ್ದಾರೆ.

ಪೇಸ್ ಮತ್ತು ಭೂಪತಿ ಯಶಸ್ವಿ ಜೋಡಿ. ವಿಶ್ವ ಡಬಲ್ಸ್ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವವರು. ಒಲಿಂಪಿಕ್ಸ್‌ನಲ್ಲಿ ಖಂಡಿತವಾಗಿಯೂ ಪದಕ ಬರುವ ಸಾಧ್ಯತೆ ಇದೆ. ಒಲಿಂಪಿಕ್ಸ್‌ಗಾಗಿ ಕೇಂದ್ರ ಕ್ರೀಡಾ ಇಲಾಖೆ ಇವರಿಗಾಗಿ ಹಣ ಖರ್ಚು ಮಾಡಿದೆ. ಭೂಪತಿಗೆ 18.66 ಲಕ್ಷ, ಪೇಸ್‌ಗೆ 8.25 ಲಕ್ಷ ಹಾಗೂ ರೋಹನ್‌ಗೆ 17.37 ಲಕ್ಷ ರೂಪಾಯಿ ನೀಡಲಾಗಿದೆ.

ಕಳೆದ ವರ್ಷದ ಕೊನೆಯಲ್ಲಿ ಭೂಪತಿ ಜೊತೆಗಿನ ಜೊತೆಯಾಟವನ್ನು ಪೇಸ್ ಕಡಿದುಹಾಕಿದರು. ಆಗಿನಿಂದ ಭೂಪತಿ - ಬೋಪಣ್ಣ ಜೊತೆಯಾಗಿ ಒಲಿಂಪಿಕ್ಸ್‌ಗಾಗಿಯೇ ತಯಾರಿ ನಡೆಸಿರಬಹುದು.

ಆದರೆ, ಪೇಸ್ ಜೊತೆ ಒಲಿಂಪಿಕ್ಸ್‌ನಲ್ಲಿ ಆಡುವುದಿಲ್ಲ ಎಂದು ಅವರು ಆಗಲೇ ಹೇಳಬಹುದಿತ್ತು. ಸಂಸ್ಥೆ ಕೂಡ ಇದನ್ನು ಗಮನಕ್ಕೆ ತೆಗೆದುಕೊಳ್ಳಬೇಕಿತ್ತು. ಸಾನಿಯಾ ಮಿರ್ಜಾಗೆ ಒಲಿಂಪಿಕ್ಸ್‌ನಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಸಿಕ್ಕಲ್ಲಿ, ಆಕೆಯ ಜೊತೆ ಮಿಕ್ಸೆಡ್ ಡಬಲ್ಸ್‌ನಲ್ಲಿ ಯಾರು ಆಡಬೇಕೆಂಬುದೂ ಪ್ರಶ್ನೆಯಾಗಿಯೇ ಉಳಿದಿದೆ.
 
ತೀರ ಜೂನಿಯರ್ ಆಟಗಾರನ ಜೊತೆ ಆಡಬೇಕೆಂದು ಹೇಳಿದರೆ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುವುದಾಗಿ ಪೇಸ್ ಎಚ್ಚರಿಸಿರುವುದೂ ಕೂಡ ಒತ್ತಡದ ತಂತ್ರವೇ. ಒಲಿಂಪಿಕ್ಸ್‌ಗೆ ತಂಡದ ಪಟ್ಟಿ ಕಳಿಸಲು ಇಂದೇ (ಜೂನ್ 21) ಕೊನೆಯ ದಿನ.

ಈ ಹಂತದಲ್ಲಿ ಸಂಸ್ಥೆ ಮತ್ತು ದೇಶದ ಮೇಲೆ ಸವಾರಿ ಮಾಡಲು ಯತ್ನಿಸುವುದು ಸ್ವಾರ್ಥದ ಪರಮಾವಧಿ. 38 ವರ್ಷ ವಯಸ್ಸಿನ ಭೂಪತಿ ತಮ್ಮ ಟೆನಿಸ್ ಜೀವನದ ಸಂಜೆಯಲ್ಲಿದ್ದಾರೆ. ಅವರಿಗೆ ಕಳೆದುಕೊಳ್ಳುವುದು ಏನೂ ಇರಲಿಕ್ಕಿಲ್ಲ. ಆದರೆ ಇನ್ನೂ ಹಲವು ವರ್ಷ ಆಡಬೇಕಿರುವ ಬೋಪಣ್ಣ (32) ಭವಿಷ್ಯದ ಬಗ್ಗೆ ಯೋಚಿಸಬೇಕಿತ್ತು.

ಅಂತಿಮವಾಗಿ ಇಬ್ಬರೂ ಆಡಲು ನಿರಾಕರಿಸಿದಲ್ಲಿ ಫೆಡರೇಷನ್ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಕೊಟ್ಟ ಹಣದ ಜೊತೆ ದೊಡ್ಡ ಮೊತ್ತದ ದಂಡವನ್ನೂ ವಸೂಲು ಮಾಡಬೇಕು. ಇದು ಉಳಿದವರಿಗೂ ಪಾಠವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.