ADVERTISEMENT

ಆರ್‌ಬಿಐ ಸ್ವಾಯತ್ತತೆಗೆ ಭಂಗ ತರುವ ಪ್ರಯತ್ನ ಸಲ್ಲ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 19:30 IST
Last Updated 16 ಜನವರಿ 2017, 19:30 IST
ಆರ್‌ಬಿಐ ಸ್ವಾಯತ್ತತೆಗೆ  ಭಂಗ ತರುವ ಪ್ರಯತ್ನ ಸಲ್ಲ
ಆರ್‌ಬಿಐ ಸ್ವಾಯತ್ತತೆಗೆ ಭಂಗ ತರುವ ಪ್ರಯತ್ನ ಸಲ್ಲ   

ಭಾರತೀಯ ರಿಸರ್ವ್‌ ಬ್ಯಾಂಕ್‌ನ  ಸಾಂಸ್ಥಿಕ ಅಸ್ಮಿತೆ ಹಾಗೂ ಸ್ವಾಯತ್ತತೆಗೆ ಸರಿಪಡಿಸಲಿಕ್ಕಾಗದಷ್ಟು ಧಕ್ಕೆ ಒದಗಿದೆ ಎನ್ನುವ ಕೂಗು  ಕೇಳಿಬರುತ್ತಿದೆ.  ನೋಟು ರದ್ದು ಮತ್ತು ಹೊಸ ಕರೆನ್ಸಿಗಳ ಚಲಾವಣೆ ವಿಷಯದಲ್ಲಿ ಆರ್‌ಬಿಐಗೆ ನೆರವಾಗಲು ಕೇಂದ್ರ ಸರ್ಕಾರ, ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರನ್ನು ನಿಯೋಜಿಸಿರುವುದೂ ಸೇರಿದಂತೆ ಹಲವಾರು ಬೆಳವಣಿಗೆಗಳು ವಿವಾದಕ್ಕೆ ಎಡೆಮಾಡಿಕೊಟ್ಟಿವೆ.

ವೃತ್ತಿಪರತೆಯ ಶ್ರೇಷ್ಠತೆಗೆ ಪ್ರತೀಕವಾದ  ಸಂಸ್ಥೆಗಳಲ್ಲಿ ಒಂದಾಗಿರುವ ಆರ್‌ಬಿಐ, ಈಗ ತನ್ನ ಕರ್ತವ್ಯ ಮತ್ತು ಹೊಣೆಗಾರಿಕೆ ನಿಭಾಯಿಸುವಲ್ಲಿ ಸ್ವಾಯತ್ತತೆಗೆ ಎರವಾಗಿದೆ.ಹಣಕಾಸು ಸಚಿವಾಲಯದ ಇನ್ನೊಂದು  ಇಲಾಖೆಯ ರೀತಿ ಕಾರ್ಯನಿರ್ವಹಿಸುತ್ತಿದೆ  ಎಂಬಂಥ  ಟೀಕೆಗಳಿಗೆ ಅದು ಗುರಿಯಾಗಿದೆ. ಇದೊಂದು  ಅನಪೇಕ್ಷಿತ ಬೆಳವಣಿಗೆ.

ಆರ್‌ಬಿಐನ ಸ್ವತಂತ್ರ ಕಾರ್ಯನಿರ್ವಹಣೆಗೆ ಧಕ್ಕೆ ಒದಗಿದೆ ಎಂದು ಆರ್‌ಬಿಐ ಸಿಬ್ಬಂದಿ ವರ್ಗದವರಷ್ಟೇ ಕಳವಳ ವ್ಯಕ್ತಪಡಿಸಿಲ್ಲ. ಆರ್‌ಬಿಐ ಮಾಜಿ ಗವರ್ನರ್‌ಗಳು, ಆರ್ಥಿಕ ತಜ್ಞರೂ ಇದಕ್ಕೆ ದನಿಗೂಡಿಸಿದ್ದಾರೆ. ರಿಸರ್ವ್ ಬ್ಯಾಂಕ್‌ನ ಅಧಿಕಾರ ವ್ಯಾಪ್ತಿಯಲ್ಲಿ ಸರ್ಕಾರ ಅತಿಕ್ರಮಣ ಮಾಡಿದೆ ಎನ್ನುವುದು ಇವರೆಲ್ಲರ ಮುಖ್ಯ  ಆಕ್ಷೇಪ. ಇದೇ ಸಂದರ್ಭದಲ್ಲಿ ಆರ್‌ಬಿಐನ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯನ್ನು ಪೂರ್ಣವಾಗಿ ಗೌರವಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ಹೇಳಿಕೆ ನೀಡಿದೆ.

ಅಲ್ಲದೆ ಸಾರ್ವಜನಿಕ ಹಿತಾಸಕ್ತಿಯ ಹಲವು ವಿಚಾರಗಳ ಬಗ್ಗೆ ಸರ್ಕಾರ ಹಾಗೂ ಆರ್‌ಬಿಐ ಸಮಾಲೋಚನೆಗಳನ್ನು ನಡೆಸುವುದು, ನಿರ್ದೇಶನಗಳನ್ನು ನೀಡುವುದು  ಕಾನೂನು ವ್ಯಾಪ್ತಿಯಲ್ಲೇ ಇದೆ ಎಂಬಂಥ ಸಮರ್ಥನೆಯನ್ನೂ ನೀಡಲಾಗಿದೆ.  1934ರ ಆರ್‌ಬಿಐ ಕಾಯಿದೆ ಸೆಕ್ಷನ್ 7ರಲ್ಲಿ ಇದು ಸ್ಪಷ್ಟವಾಗಿಯೇ ಇದೆ ಎಂಬ ವಾದವೂ ಇದೆ. 

ಹೀಗಿದ್ದೂ ಪ್ರಮುಖ ನೀತಿನಿರ್ಧಾರಗಳ ವಿಚಾರದಲ್ಲಿ ‘ಇಲ್ಲ’ ಎಂದು ಹೇಳುವ ಅಧಿಕಾರ ಆರ್‌ಬಿಐ ಗವರ್ನರ್‌ಗೆ ಇದ್ದೇ ಇರುತ್ತದೆ ಎಂಬುದನ್ನು ಆರ್‌ಬಿಐ ಪ್ರತಿಪಾದಿಸಿಕೊಂಡೇ ಬಂದಿದೆ. ಹೀಗಾಗಿಯೇ  ಅನೇಕ ಆರ್‌ಬಿಐ ಗವರ್ನರ್‌ಗಳು ಈ ಹಿಂದೆ ಸರ್ಕಾರದೊಂದಿಗೆ ಎದುರಿಸಿದ ಸಂಘರ್ಷಗಳೂ ಸಾರ್ವಜನಿಕ ಪ್ರಜ್ಞೆಯಲ್ಲಿ ದಾಖಲಾಗಿವೆ.

ನೋಟು ರದ್ದತಿ ಬಗ್ಗೆ ಸರ್ಕಾರ ಕೇಳಿದ ಸಲಹೆಗೆ ಆರ್‌ಬಿಐ ಸಮ್ಮತಿ ನೀಡಿದ ಬೆನ್ನಲ್ಲೇ ನೋಟು ರದ್ದತಿ ನಿರ್ಧಾರ ಜಾರಿಗೆ ಬಂದಿದ್ದರಿಂದ ನೋಟುಗಳ ಚಲಾವಣೆ ವಿಷಯದಲ್ಲಿ ಆರ್‌ಬಿಐನ ಕೈ ಕಟ್ಟಿಹಾಕಿದಂತಾಗಿತ್ತು. ನೋಟು ಮುದ್ರಣ ಮತ್ತು ನಗದು ಚಲಾವಣೆಯ ಗುರುತರ ಹೊಣೆಗಾರಿಕೆ ನಿರ್ವಹಿಸುವ ಆರ್‌ಬಿಐಗೆ, ನೋಟು ರದ್ದತಿ ತೀರ್ಮಾನದ ಪರಿಣಾಮಗಳ ಅಗಾಧತೆ ಮತ್ತು ತೀವ್ರತೆಯ ಅರಿವಿದ್ದರೂ, ಅದನ್ನು ನಿಭಾಯಿಸಲು ಸಾಕಷ್ಟು ಸಮಯಾವಕಾಶ  ದೊರೆಯದೆ  ಟೀಕೆಗೆ ಗುರಿಯಾಗಿದೆ. 

ನೋಟುಗಳು ರದ್ದಾಗುತ್ತಿದ್ದಂತೆ ಆರ್‌ಬಿಐ ಆ ಬಗ್ಗೆ ಹೆಚ್ಚು ಮಾತನಾಡದೆ ಸರ್ಕಾರದ ನಿರ್ಧಾರದಲ್ಲಿ ತನ್ನ ಪಾತ್ರವೇನೂ ಇಲ್ಲ ಎನ್ನುವುದನ್ನು ಬಹಿರಂಗಪಡಿಸಲೂ ವಿಳಂಬ ಮಾಡಿತು.  ಇದು ಕೂಡ ಅದರ ಪ್ರತಿಷ್ಠೆಗೆ ಮಸಿ ಬಳಿಯಿತು. ಭಾರತೀಯ ರಿಸರ್ವ್‌ ಬ್ಯಾಂಕ್‌ ದೇಶದ ಹಣಕಾಸು ವ್ಯವಸ್ಥೆಯ ಮಹತ್ವದ ನಿಯಂತ್ರಣ ಸಂಸ್ಥೆಯಾಗಿದೆ.  ಬಡ್ಡಿ ದರ ನಿಗದಿ ಮತ್ತು ಹಣದುಬ್ಬರ ನಿಯಂತ್ರಣಗಳಷ್ಟೇ ಅದರ ಕೆಲಸವಲ್ಲ. ಆರ್ಥಿಕ ಅಸ್ಥಿರತೆ ಉದ್ಭವಿಸದಂತೆ ಅಗತ್ಯ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುವುದೂ ಅದರ ಗುರುತರ ಹೊಣೆಯಾಗಿರುವುದರಿಂದ ಅದರ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದು ಸಲ್ಲದು.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಇದೆ.  ದೇಶವೊಂದರ ಸಶಕ್ತ ಆರ್ಥಿಕತೆಗೆ ಹಣಕಾಸು ಸಂಸ್ಥೆಗಳು ಯಾವುದೇ ಕಾರಣಕ್ಕೂ ದುರ್ಬಲವಾಗಿರಬಾರದು. ಈ ಕಾರಣಕ್ಕಾಗಿಯೇ, ಆರ್‌ಬಿಐ ಅನ್ನು ಹಣಕಾಸು ಇಲಾಖೆಯ ಅಂಗಸಂಸ್ಥೆ ಎಂಬಂತೆ ಪರಿಗಣಿಸುವ ಧೋರಣೆ ಸಮರ್ಥನೀಯವಲ್ಲ. ಸ್ವಾಯತ್ತತೆ ಕಾಪಾಡಿಕೊಳ್ಳುವ ವಿಷಯದಲ್ಲಿ ಆರ್‌ಬಿಐ ದೃಢ ನಿಲುವು ತಳೆಯಬೇಕು.

ಸರ್ಕಾರವೂ ಆರ್‌ಬಿಐನ ಸ್ವಾಯತ್ತತೆ ರಕ್ಷಿಸಲು ತನ್ನ ಧೋರಣೆ ಬದಲಾಯಿಸಬೇಕಾದ ಅಗತ್ಯ ಇದೆ. ಆರ್‌ಬಿಐ ನಿರ್ವಹಿಸಬೇಕಾದ  ಪಾತ್ರ ಮತ್ತು ಸ್ವಾಯತ್ತತೆ ಬಗ್ಗೆ ಸ್ಪಷ್ಟ ವ್ಯಾಖ್ಯಾನ ನೀಡಬೇಕಾಗಿದೆ.   ಆರ್‌ಬಿಐನ ಸ್ವಾತಂತ್ರ್ಯ ಗೌರವಿಸುವುದಾಗಿ ಸರ್ಕಾರ ಹೇಳಿದ್ದರೂ, ಅದು ಬರೀ ಮೌಖಿಕ ಭರವಸೆಯಾಗದೆ ನಿಜವಾದ ಅರ್ಥದಲ್ಲಿ ಕಾರ್ಯರೂಪಕ್ಕೆ ಬರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.