ADVERTISEMENT

ಕಾಯ್ದೆ ತಿದ್ದುಪಡಿಯೊಂದೇ ಮಾರ್ಗ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 19:30 IST
Last Updated 23 ಆಗಸ್ಟ್ 2012, 19:30 IST

ಬಗರ್‌ಹುಕುಂ ಸಾಗುವಳಿದಾರರಿಗೆ ಜಮೀನು ಸಿಗದೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದು ದುರದೃಷ್ಟಕರ. 

ಶಿರಾ ನಗರದ ಬಳಿಯ  ಮುದುಗೆರೆ ಕಾವಲ್‌ನಲ್ಲಿ 3075 ಎಕರೆ ಅರಣ್ಯ ಪ್ರದೇಶ ಸೇರಿದಂತೆ ಸುಮಾರು 4 ಸಾವಿರ ಎಕರೆ ಸರ್ಕಾರಿ ಜಮೀನು ಇದೆ. ಇದರಲ್ಲಿ 22 ಮಂದಿ ರೈತರು ಕಳೆದ 15 ವರ್ಷಗಳಿಂದ ಕೃಷಿ ಮಾಡುತ್ತ್ದ್ದಿದು, ತಮ್ಮ ಹೆಸರಿಗೆ ಖಾತೆಮಾಡಿಕೊಡುವಂತೆ ಒತ್ತಡ ಹಾಕುತ್ತಲೇ ಇದ್ದಾರೆ. 

ಇತ್ತೀಚಿಗೆ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು ಜಮೀನು ಬಿಟ್ಟುಕೊಡುವಂತೆ ರೈತರ ಮೇಲೆ ಒತ್ತಡ ಹಾಕಿದ್ದರು. ಒತ್ತಡ ಹೆಚ್ಚಿದ್ದರಿಂದ ಪ್ರತಿಭಟನೆಗೆ ಮುಂದಾದ ರೈತರು, ಸರ್ಕಾರದ ನಿಯಮದಂತೆ ಜಮೀನು ಸಿಗುವುದಿಲ್ಲ ಎಂಬ ವಿಚಾರ ಮನದಟ್ಟಾದಂತೆ ವಿಷ ಕುಡಿದು ಸಾವಿನ ಮನೆಯ ಕದ ತಟ್ಟಿದ್ದಾರೆ.
 
ವಿಷ ಸೇವಿಸಿದ ಮೂವರು ರೈತರಲ್ಲಿ ಒಬ್ಬ ಸಾವನ್ನಪ್ಪಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಇದು ತುಮಕೂರು ಜಿಲ್ಲೆಯೊಂದರ ಸಮಸ್ಯೆಯಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಸಾಗುವಳಿದಾರರ ಅರ್ಜಿ ಬಾಕಿ ಉಳಿದಿವೆ.

ಹೈಕೋರ್ಟ್ ಆದೇಶ ಹಾಗೂ ಎ.ಟಿ.ರಾಮಸ್ವಾಮಿ ಸಮಿತಿ ವರದಿ ಆಧರಿಸಿ 2007ರಲ್ಲಿ ಜಾರಿಗೆ ತಂದ ಭೂ ಅತಿಕ್ರಮಣ ನಿಯಂತ್ರಣ ಕಾಯ್ದೆ ಭೂ ಮಂಜೂರು ಮಾಡಲು ಕೈಕಟ್ಟಿ ಹಾಕಿದೆ. ಸರ್ಕಾರಿ ಭೂಮಿಯ ಬಗರ್‌ಹುಕುಂ ಸಾಗುವಳಿದಾರರಿಗೆ ಹಂಚಿಕೆ ಮಾಡುವ ಸರ್ಕಾರದ ಕ್ರಮ ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ನಲ್ಲಿ ದಾಖಲಾಗಿತ್ತು.
 
ಗೋಮಾಳ, ಗುಂಡುತೋಪು, ಇತರೆ ಸರ್ಕಾರಿ ಜಮೀನು ಹಂಚಿಕೆ ಮಾಡುವಾಗ ಕಡ್ಡಾಯವಾಗಿ ಗ್ರಾಮಗಳ ರಾಸುಗಳ ಸಂಖ್ಯೆ ಆಧರಿಸಿರಬೇಕು ಎಂದು ಕೋರ್ಟ್ ತೀರ್ಪು ನೀಡಿದೆ. ಈಗಾಗಲೇ ಹಲವು ಕಾರಣಗಳಿಂದಾಗಿ ಸರ್ಕಾರಿ ಭೂಮಿ ಕಡಿಮೆಯಾಗಿದ್ದು, ಸಾಗುವಳಿದಾರರಿಗೆ ಜಮೀನು ಮಂಜೂರು ಮಾಡಲಾಗುತ್ತಿಲ್ಲ.

ಆದರೆ ಶಾಸಕರ ಅಧ್ಯಕ್ಷತೆಯ ಬಗರ್‌ಹುಕುಂ ಸಮಿತಿಗಳು ತಮ್ಮ ಹಿಂಬಾಲಕರಿಗೆ ಮಾತ್ರ ಜಮೀನು ಮಂಜೂರು ಮಾಡುತ್ತಿರುವುದು ರೈತರ ಅಸಮಾಧಾನವನ್ನು ಹೆಚ್ಚಿಸಿದೆ. ಈಗಿನ ಭೂ ಅತಿಕ್ರಮಣ ನಿಯಂತ್ರಣ ಕಾಯ್ದೆಯು ಸರ್ಕಾರಿ ಭೂಮಿ ಅತಿಕ್ರಮಿಸಿದ ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಈ ಕಾಯ್ದೆಯಿಂದಾಗಿ ಬಗರ್‌ಹುಕುಂ ಸಾಗುವಳಿದಾರ ರೈತರ ಮೇಲೂ ಕ್ರಮ ಕೈಗೊಳ್ಳುವುದು ಅಧಿಕಾರಿಗಳಿಗೆ ಅನಿವಾರ್ಯವಾಗಿದೆ. ನಗರ, ಪಟ್ಟಣಗಳ ನಿರ್ದಿಷ್ಟ ಪರಿಮಿತಿಯಲ್ಲಿ ಇರುವ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿ ಸರ್ಕಾರ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕಾಗಿದೆ.
 
ಸರ್ಕಾರಿ ಜಮೀನು ಒತ್ತುವರಿ ವ್ಯಾಪ್ತಿಗೆ ಭೂಗಳ್ಳರ ಜೊತೆ ಬಗರ್‌ಹುಕುಂ ಸಾಗುವಳಿದಾರ ರೈತರು ಸೇರುತ್ತಾರೆ. ಕಾಯ್ದೆಯಲ್ಲಿ ಈ ರೈತರನ್ನು ಪ್ರತ್ಯೇಕಿಸದಿರುವುದು ಸಮಸ್ಯೆ ಕಗ್ಗಂಟಾಗುವಂತೆ ಮಾಡಿದೆ.

ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಕೇವಲ ಬಾಯಿ ಮಾತಿನಿಂದ ಪರಿಹಾರ ಸಾಧ್ಯವಿಲ್ಲ. ಭೂಕಾಯ್ದೆಗೆ ತಿದ್ದುಪಡಿ ತರಬೇಕು. ಸರ್ಕಾರಿ ಭೂಮಿ ಹಂಚಿಕೆಯಲ್ಲಿ ಭೂಗಳ್ಳರನ್ನು ತಡೆದು, ಬಗರ್‌ಹುಕುಂ ಸಾಗುವಳಿದಾರರ ರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.