ADVERTISEMENT

ಚಾರಿತ್ರಿಕ ಮೈಲಿಗಲ್ಲು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ಜರ್ಮನಿಯಲ್ಲಿ ನಡೆದ ಜೂನಿಯರ್ ಮಹಿಳಾ ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆದ್ದಿರುವುದು ಭಾರತದಾದ್ಯಂತ ಕ್ರೀಡಾ ವಲಯದಲ್ಲಿ ಸಂಚಲನ ಉಂಟು ಮಾಡಿದೆ. ಮಹಿಳಾ ಹಾಕಿಗೆ ಸಂಬಂಧಿಸಿದಂತೆ ವಿಶ್ವಕಪ್‌ನಲ್ಲಿ ಭಾರತದ ಅತ್ಯುತ್ತಮ ಸಾಧನೆ ಇದಾಗಿದೆ.

ದಶಕದ ಹಿಂದೆ ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಸಾಮರ್ಥ್ಯ ತೋರಿದ್ದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಮೂರೂವರೆ ದಶಕಗಳ ಹಿಂದೆ ಫ್ರಾನ್ಸ್‌ನಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ನಾಲ್ಕನೇ ಸ್ಥಾನ ತಲುಪಿದ್ದನ್ನೂ ಮರೆಯುವಂತಿಲ್ಲ.

ಆದರೆ ಜೂನಿಯರ್ ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಈವರೆಗಿನ ಸಾಮರ್ಥ್ಯ ಕಳಾಹೀನವಾಗಿತ್ತು. ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಈ ವಿಶ್ವಕಪ್‌ನ ಮೊದಲ ಮೂರು ಕೂಟಗಳಲ್ಲಿ ಪ್ರಧಾನ ಹಂತಕ್ಕೆ ಅರ್ಹತೆ ಗಳಿಸಿರಲಿಲ್ಲವಾದರೂ, ನಂತರದ ಮೂರು ಕೂಟಗಳಲ್ಲಿ ಒಂಬತ್ತನೇ ಸ್ಥಾನಕ್ಕಿಂತ ಮೇಲೇರಿರಲೇ ಇಲ್ಲ. ಎಂದಿನಂತೆ ಈ ಕೂಟದಲ್ಲಿಯೂ ಜರ್ಮನಿ, ಹಾಲೆಂಡ್, ಆಸ್ಟ್ರೇಲಿಯ, ಕೊರಿಯ, ಅರ್ಜೆಂಟಿನಾ, ಸ್ಪೇನ್ ಸೇರಿದಂತೆ ಹಾಕಿ ಜಗತ್ತಿನ ಘಟಾನುಘಟಿಗಳ ಸವಾಲು ಇದ್ದೇ ಇತ್ತು.

ಮಹಿಳಾ ಹಾಕಿಗೆ ಸಂಬಂಧಿಸಿದಂತೆ ಜಗತ್ತಿನಲ್ಲೇ ಮೊದಲಿಗೆ ದಿಟ್ಟ ಹೆಜ್ಜೆಗಳನ್ನಿರಿಸಿದ್ದ ಇಂಗ್ಲೆಂಡ್ ತಂಡವೇ ಈವರೆಗೆ ಒಂದೂ ಪದಕ ಗೆಲ್ಲಲಾಗಿಲ್ಲ. ಅಂತಹದರಲ್ಲಿ ಈ ಸಲ  ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವನಿತೆಯರನ್ನೇ ಮಣಿಸಿ ಪದಕ ಗೆದ್ದ ಭಾರತೀಯರ ಸಾಧನೆ ಶ್ಲಾಘನೀಯ.

ಕೇವಲ ಎರಡು ತಿಂಗಳ ಹಿಂದೆ ಜರ್ಮನಿಯಲ್ಲೇ ನಡೆದಿದ್ದ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ವಿಶ್ವ ಲೀಗ್‌ನ ಮೂರನೇ ಸುತ್ತಿನ ಹಣಾಹಣಿಯಲ್ಲಿ ಭಾರತದ ಮಹಿಳಾ ತಂಡ ಆಡಿತ್ತು.

ಇದೀಗ ಕಂಚು ಗೆದ್ದ ಭಾರತದ ಕಿರಿಯ ಆಟಗಾರ್ತಿಯರಲ್ಲಿ ಹಲವರು ಆ ಲೀಗ್‌ನಲ್ಲಿ ಆಡಿದ್ದರು. ಅಲ್ಲಿ ಸೀನಿಯರ್ ಆಟಗಾರ್ತಿಯರ ಜತೆಗೆ ಆಡಿದ ಅನುಭವ ಈ ಕೂಟದಲ್ಲಿ ಭಾರತದ ವನಿತೆಯರ ನೆರವಿಗೆ ಬಂದಿತು. ದೇಶದೊಳಗೆ ಎಷ್ಟೇ ಟೂರ್ನಿಗಳಲ್ಲಿ ಆಡಿದ್ದರೂ, ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ತಮಗಿಂತ ಹೆಚ್ಚು ಬಲಶಾಲಿಗಳೊಡನೆ ಸ್ಪರ್ಧಿಸುವುದರಿಂದ ನಮ್ಮ ಸಾಮರ್ಥ್ಯ ವೃದ್ಧಿಗೊಳ್ಳುತ್ತದೆ ಎನ್ನುವುದು ಇದೀಗ ಮತ್ತೆ ಸಾಬೀತಾಗಿದೆ.

ಹೀಗಾಗಿ ಮುಂದಿನ ದಿನಗಳಲ್ಲಿ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ ಭಾರತದ ತಂಡವನ್ನು ಹೊರ ದೇಶಗಳಿಗೆ ಕಳುಹಿಸಿ ಪ್ರಬಲರ ಎದುರು ಹಣಾಹಣಿಗೆ ಇಳಿಸುವ ಅನಿವಾರ್ಯ ಇದೆ ಎಂಬುದನ್ನು ಈ ದೇಶದ ಕ್ರೀಡಾ ಆಡಳಿತಗಾರರು ಮನದಟ್ಟು ಮಾಡಿಕೊಳ್ಳಬೇಕಿದೆ. ಏಷ್ಯಾ ಮಟ್ಟದಲ್ಲಿ ಗಮನ ಸೆಳೆದಿದ್ದ ಭಾರತದ ವನಿತೆಯರಿಗೆ ವಿಶ್ವಮಟ್ಟದಲ್ಲಿ ಎತ್ತರಕ್ಕೇರಲು ಆಸ್ಟ್ರೇಲಿಯಾದ ಕೋಚ್ ನೀಲ್ ಹಾಗುಡ್ ಅವರ ಮಾರ್ಗದರ್ಶನ ಸಹಕಾರಿಯಾಯಿತು ಎಂಬುದೂ ಅಷ್ಟೇ ನಿಜ.

ಯೂರೋಪ್ ಶೈಲಿಯನ್ನು ಹಾಗುಡ್ ಮೂಲಕ ಮೈಗೂಡಿಸಿಕೊಂಡ ಭಾರತದ ಆಟಗಾರ್ತಿಯರು ಯೂರೋಪ್‌ನ ಒಡಲಲ್ಲೇ ಅಲ್ಲಿನ ಆಟಗಾರ್ತಿಯರಿಗೆ ಮಣ್ಣುಮುಕ್ಕಿಸಿದ್ದು ಕಡಿಮೆ ಸಾಧನೆ ಏನಲ್ಲ. ಒಟ್ಟಾರೆ, ಮಹಿಳಾ ಹಾಕಿಗೆ ಸಂಬಂಧಿಸಿದಂತೆ ಇದೊಂದು ಉತ್ತಮ ಆರಂಭ. ಮುಂದಿನ ದಿನಗಳಲ್ಲಿ ಸರ್ಕಾರದ ಜತೆಗೆ ಕಾರ್ಪೊರೇಟ್ ವಲಯವೂ ಮಹಿಳಾ ಹಾಕಿಯ ಬೆನ್ನಿಗೆ ನಿಂತು ಅದನ್ನು ಇನ್ನೂ ಎತ್ತರಕ್ಕೆ ಏರಿಸಲು ಯತ್ನಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.