ADVERTISEMENT

ಚಿನ್ನ ಏರುಪೇರು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 19:59 IST
Last Updated 14 ಏಪ್ರಿಲ್ 2013, 19:59 IST

ಬಹುತೇಕರ ಅಚ್ಚುಮೆಚ್ಚಿನ ಹಳದಿ ಲೋಹದ ಬೆಲೆ ಹಠಾತ್ತಾಗಿ ದಾಖಲೆ ಪ್ರಮಾಣದಲ್ಲಿ ಕುಸಿದಿರುವುದು ಅಚ್ಚರಿಮೂಡಿಸಿದೆ. ದೇಶಿ ಪೇಟೆಯಲ್ಲಿ ಚಿನ್ನದ ಬೆಲೆ ಪ್ರವೃತ್ತಿ ನಿರ್ಧರಿಸುವ ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು 2011ರ ಜುಲೈ ನಂತರ ಇದೇ ಮೊದಲ ಬಾರಿಗೆ ಪ್ರತಿ ಔನ್ಸ್‌ಗೆ 1500 ಡಾಲರ್‌ಗಿಂತ  ಕೆಳಗೆ (1,477ಕ್ಕೆ) ಇಳಿದಿರುವುದು ಇಲ್ಲಿಯೂ ಪ್ರಭಾವ ಬೀರಿದೆ. ಜಾಗತಿಕ ಮಾರುಕಟ್ಟೆಯಲ್ಲಿ ನಗದು ಹಣದ ಲಭ್ಯತೆ ಕುರಿತ ಕಳವಳವು ಹೂಡಿಕೆದಾರ ನಿದ್ದೆಗೆಡಿಸಿದ್ದು, ತಮ್ಮ ಬಳಿ ಇದ್ದ ಚಿನ್ನದ ಸಂಗ್ರಹ ಕರಗಿಸಲು ಧಾವಂತ ಪಟ್ಟಿದ್ದೆ ಬೆಲೆ ಈ ಪರಿ ಪ್ರಪಾತಕ್ಕೆ ಕುಸಿಯಲು ಕಾರಣವಾಗಿದೆ.

ಒಂದೇ ದಿನ, ಗರಿಷ್ಠ ವೇಗದಲ್ಲಿ ತಲಾ 10 ಗ್ರಾಂಗಳಿಗೆ ರೂ1,250ರಂತೆ ದಾಖಲೆ ಪ್ರಮಾಣದ (ಶೇ 5ರಷ್ಟು) ಕುಸಿತ ಕಂಡಿರುವುದು ಸಹಜವಾಗಿಯೇ ಚಿನಿವಾರ ಪೇಟೆಯಲ್ಲಿ ಕಳವಳ ಮೂಡಿಸಿದೆ. ಸಾಲದ ಸುಳಿಗೆ ಸಿಲುಕಿರುವ ಸೈಪ್ರಸ್‌ಗೆ ಇನ್ನಷ್ಟು ನೆರವು ನೀಡಲು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು  ಯೂರೋಪ್ ಒಕ್ಕೂಟಗಳು ಹಿಂದೇಟು ಹಾಕಿದ್ದರಿಂದ ಸೈಪ್ರಸ್, ಇಟಲಿ, ಗ್ರೀಕ್ ಮತ್ತು ಸ್ಪೇನ್ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಬಳಿ ಇರುವ ಚಿನ್ನ ಮಾರಾಟ ಮಾಡಲಿರುವ ವರದಿಗಳೇ ಈ ವಿದ್ಯಮಾನಕ್ಕೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜಾಗತಿಕ ಅರ್ಥವ್ಯವಸ್ಥೆಯಲ್ಲಿ ನಾಟಕೀಯ ಸುಧಾರಣೆ ಕಂಡು ಬಂದಿರುವುದರಿಂದ ಹೂಡಿಕೆದಾರರು ಇದುವರೆಗೆ `ಸುರಕ್ಷಿತ ಸ್ವರ್ಗ' ಎಂದೇ ಪರಿಗಣಿಸಿರುವ ಚಿನ್ನದಲ್ಲಿ ಹೂಡಿಕೆ ಮಾಡಿದ್ದ ಹಣವನ್ನು ಮರಳಿ ಪಡೆಯಲು  ಮಾರಾಟಕ್ಕೆ ಮುಗಿ ಬಿದ್ದಿದ್ದಾರೆ. ವಾಯಿದಾ ವಹಿವಾಟಿನಲ್ಲಿನ ಊಹಾತ್ಮಕ ಮಾರಾಟದ ಫಲವಾಗಿ ಮುಂಬರುವ ದಿನಗಳಲ್ಲಿ ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆಯೂ ಇದೆ.

ಇದುವರೆಗೆ ನಾಗಾಲೋಟದಲ್ಲಿ ಏರುಗತಿಯ್ಲ್ಲಲಿಯೇ ಇದ್ದ ಬೆಲೆ ಈಗ ದಿಢೀರನೆ  ಹಿಮ್ಮುಖವಾಗಿ ಚಲಿಸಿರುವುದು ಪೇಟೆಯಲ್ಲಿ ಸಂಚಲನ ಮೂಡಿಸಿರುವುದಂತೂ ನಿಜ. ಭೌತಿಕ ರೂಪದಲ್ಲಿ ಚಿನ್ನ ಖರೀದಿಸುವ ಚಿಲ್ಲರೆ ಖರೀದಿದಾರರಲ್ಲಿ ಇರುವ, ಚಿನ್ನದ ಬೆಲೆ ಇನ್ನಷ್ಟು ಕುಸಿತಗೊಳ್ಳುವ ನಿರೀಕ್ಷೆ ಕೂಡ ಪೇಟೆಯಲ್ಲಿ ಖರೀದಿ ನಿರುತ್ಸಾಹಕ್ಕೆ ಕಾರಣವಾಗಲಿದೆ. ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ ರೂ 125ರಂತೆ ಬೆಲೆ ಕುಸಿದಿರುವುದು ಇತ್ತೀಚಿನ ದಿನಗಳಲ್ಲಿಯೇ ದಾಖಲೆ ಮಟ್ಟದ್ದಾಗಿದ್ದರೂ, ಇದರಾಚೆಗೆ ಇನ್ನಷ್ಟು ಕುಸಿತದ ಸಾಧ್ಯತೆ ಇಲ್ಲ ಎಂದು ಚಿನ್ನಾಭರಣ ವರ್ತಕರು ಹೇಳುತ್ತಾರೆ.  ಆದಾಗ್ಯೂ  ಬೆಲೆ ಇಳಿಯುವ ನಿರೀಕ್ಷೆಯಲ್ಲಿದ್ದವರಿಗೆ ಚಿನ್ನ ಖರೀದಿಸಲು ಇದೊಂದು ಸುವರ್ಣಾವಕಾಶವಾಗಿದೆ ಎನ್ನಬಹುದು. ಮತ್ತೆ ಬೆಲೆ ಯಾವಾಗ ಏರುಗತಿ ಕಾಣಲಿದೆ ಎನ್ನುವುದೂ ಎಣಿಕೆಗೆ ನಿಲುಕದು. ಹೀಗಾಗಿ ಮದುವೆ ಮತ್ತಿತರ ಕಾರಣಗಳಿಗೆ ಅಷ್ಟಿಷ್ಟು ಚಿನ್ನ  ಖರೀದಿಸಲು ಇದು ಸಕಾಲವಾಗಿದೆ. ಚಿಲ್ಲರೆ ಖರೀದಿದಾರರ ಬೇಡಿಕೆ ಹೆಚ್ಚಿದರೆ ಮತ್ತೆ  ಬೆಲೆ ಏರುವ ಭೀತಿ ಇದ್ದೆ ಇರುವುದರಿಂದ ಖರೀದಿದಾರರೂ ಎಚ್ಚರಿಕೆಯಿಂದ ಹೆಜ್ಜೆ ಇಡಲು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.