ADVERTISEMENT

ತುರ್ತಾಗಿ ಔಷಧಿ ಒದಗಿಸಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಗ್ರಾಮೀಣ ಜನರಿಗಾಗಿ ರೂಪಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರುವ ವಿಷಯದಲ್ಲಿ ಅಧಿಕಾರಶಾಹಿಯದು ಯಾವಾಗಲೂ ಅಸಡ್ಡೆಯ ಧೋರಣೆ. ಕೇಂದ್ರ ಹಾಗೂ ಸರ್ಕಾರಗಳೂ ಅಷ್ಟೇ. ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಹಂತದಲ್ಲಿ ಸರ್ಕಾರ ತೋರಿಸುವ ಉತ್ಸಾಹ, ಜಾರಿಯ ಸಮಯದಲ್ಲಿ ಕಂಡುಬರುವುದಿಲ್ಲ. ಗ್ರಾಮೀಣ ಜನರಿಗಾಗಿ ಆಯುರ್ವೇದ, ಯುನಾನಿ ಇತ್ಯಾದಿ ಭಾರತೀಯ (ದೇಶಿ) ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಕೇಂದ್ರವು ರೂಪಿಸಿದ `ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ~ ರಾಜ್ಯದಲ್ಲಿ ಜಾರಿಗೆ ಬಂದಿದೆ. ಆದರೆ ಈ ಯೋಜನೆಗೆ ಕಳೆದ ಹದಿನಾಲ್ಕು ತಿಂಗಳಿಂದ ಔಷಧ ಪೂರೈಕೆಯಾಗಿಲ್ಲ. ನಮ್ಮ ಜನರಿಗೆ ದೇಶಿ ವೈದ್ಯಕೀಯ ಪದ್ಧತಿಯಲ್ಲಿ ಅಪಾರ ನಂಬಿಕೆ. ಅಡ್ಡ ಪರಿಣಾಮಗಳಿಲ್ಲದ, ಹೆಚ್ಚಿನ ಖರ್ಚಿಲ್ಲದ ದೇಶಿ ಔಷಧಗಳನ್ನು ಲಕ್ಷಾಂತರ ಜನರು ಇಂದಿಗೂ ಅವಲಂಬಿಸಿದ್ದಾರೆ. ಇಂಥವರಿಗಾಗಿಯೇ ರಾಜ್ಯದ ಹಿಂದುಳಿದ ತಾಲ್ಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ ಜಾರಿಗೆ ಬಂದಿದೆ. ಸುಮಾರು 550 ಆಯುಷ್ ವೈದ್ಯರನ್ನು ನೇಮಕ ಮಾಡಲಾಗಿದೆ.

ಈ ವೈದ್ಯರಿಗೆ ಔಷಧಿ ಪೂರೈಕೆಯಾಗದೆ ಸಾವಿರಾರು ರೋಗಿಗಳು ಅಕ್ಷರಶಃ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಈ ವೈದ್ಯರು ತಮ್ಮ ರೋಗಿಗಳಿಗೆ ಆಲೋಪತಿ ಔಷಧಿಗಳನ್ನು ನೀಡುವಂತಿಲ್ಲ. ಔಷಧಿ ಖರೀದಿಸಿ ಬಳಸುವ ಶಕ್ತಿ ಇಲ್ಲದ ಬಡ ರೋಗಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಈ ವೈದ್ಯರಿಗೆ ಔಷಧ ಪೂರೈಸುವ ಜವಾಬ್ದಾರಿ ರಾಜ್ಯ ಸರ್ಕಾರದ ಆಯುಷ್ ಇಲಾಖೆಯದು. ಔಷಧ ಖರೀದಿಗೆ ಕೇಂದ್ರದ ಅನುದಾನ ನೀಡುವುದು ವಿಳಂಬವಾಗಿದ್ದರಿಂದ ಔಷಧಿ ಪೂರೈಕೆ ಸಾಧ್ಯವಾಗಿಲ್ಲ ಎಂದು ಇಲಾಖೆಯ ನಿರ್ದೇಶಕರು ನೆಪ ಹೇಳುತ್ತಿದ್ದಾರೆ. ರಾಜ್ಯದ ಆರೋಗ್ಯ ಸಚಿವರು ಈ ಕುರಿತು ಕೇಂದ್ರದ ಗಮನ ಸೆಳೆಯುವ ಪ್ರಯತ್ನ ಮಾಡಿಲ್ಲ. ರಾಜ್ಯ ಸರ್ಕಾರ ತನ್ನ ಹಣದಲ್ಲೇ ಔಷಧಿ ಪೂರೈಸುವ ತಾತ್ಕಾಲಿಕ ವ್ಯವಸ್ಥೆ ಮಾಡಬಹುದಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಂಥ ಧೋರಣೆ ಖಂಡನೀಯ. ಔಷಧ ಪೂರೈಕೆ ಸ್ಥಗಿತಗೊಂಡಿರುವುದರ ಹಿಂದೆ ದುರುದ್ದೇಶ ಇರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಔಷಧವನ್ನೇ ಪೂರೈಸದಿದ್ದರೆ ರೋಗಿಗಳು ಆಲೋಪತಿ ಚಿಕಿತ್ಸೆಯತ್ತ ಹೊರಳುತ್ತಾರೆ ಎಂಬ ಲೆಕ್ಕಾಚಾರವೂ ಇರಬಹುದು. ಭಾರತೀಯ ವೈದ್ಯಕೀಯ ಪದ್ಧತಿಗಳನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದೆ. ಗ್ರಾಮೀಣ ಆರೋಗ್ಯ ಕಾರ್ಯಕ್ರಮಗಳು ದುರ್ಬಲಗೊಳ್ಳಲು ಸರ್ಕಾರಗಳು ಅವಕಾಶ ಕೊಡಬಾರದು. ಸಬೂಬು ಹೇಳುವುದನ್ನು ಬಿಟ್ಟು ಔಷಧ ಪೂರೈಕೆಗೆ ಕ್ರಮ ಕೈಗೊಳ್ಳಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.