ADVERTISEMENT

ಮಂತ್ರಿ, ಸಿಬ್ಬಂದಿಗೆ ಶಹಬ್ಬಾಸ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:59 IST
Last Updated 18 ಸೆಪ್ಟೆಂಬರ್ 2013, 19:59 IST

ಅಪಘಾತ ಹಾಗೂ ಇತರ  ದುರ್ಘಟನೆಗಳ ಸಂತ್ರಸ್ತರಿಗೆ ನೆರವಾಗು­ವವರು ಈಗ ವಿರಳ. ಸಹಾಯ ಮಾಡಬೇಕೆಂಬ ಮನಸ್ಸಿದ್ದರೂ ಕೋರ್ಟು, ಕಚೇರಿಗೆ ಅಲೆದಾಡುವ ಉಸಾಬರಿಯೇ ಬೇಡವೆಂದು ಆ ಕ್ಷಣದ ಮಟ್ಟಿಗೆ ಮಾನವೀಯತೆಯನ್ನೇ ಮರೆತವರಂತೆ ವರ್ತಿಸುವ ಜನರೇ ಎಲ್ಲೆಡೆ ಕಂಡು ಬರುತ್ತಾರೆ. ಇನ್ನು ಬೆಂಕಿ ಆಕಸ್ಮಿಕ ಅಥವಾ ನೀರಿನಲ್ಲಿ ಮುಳುಗುತ್ತಿರುವವರ ರಕ್ಷಣೆಗೆ ಯಾರೂ ಮುಂದೆ ಬರುವುದಿಲ್ಲ. ಏಕೆಂದರೆ ಅದರಲ್ಲಿ ಸಾಕಷ್ಟು ಅಪಾಯವೂ ಇರುತ್ತದೆ.

ಅಂತಹ ಸಂದರ್ಭಗಳಲ್ಲಿ ಜನ ಅಸಹಾಯಕರಾಗಿ ಉಳಿದುಬಿಡುತ್ತಾರೆ. ಅಪಾಯಕಾರಿ ಸನ್ನಿವೇಶದಲ್ಲೂ ಜೀವದ ಹಂಗು ತೊರೆದು ಸಹಾಯಕ್ಕೆ ಧಾವಿಸುವುದೇ ನಿಜವಾದ ಮಾನವೀಯತೆ. ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಬೆಂಗಾವಲು ಪಡೆಯ ಸಿಬ್ಬಂದಿ, ಕೆರೆಯಲ್ಲಿ ಮುಳುಗುತ್ತಿದ್ದ ಕಾರಿನಲ್ಲಿದ್ದ ಏಳು ಜನರ ಕುಟುಂಬವೊಂದರ ಜೀವ ಉಳಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಈ ಘಟನೆ ನಡೆದದ್ದು ತೀರ್ಥಹಳ್ಳಿ ತಾಲ್ಲೂಕಿನ ಬೇಗುವಳ್ಳಿ ಸಮೀಪದ ಕೆರೆಯಲ್ಲಿ. ಕೆರೆಯಲ್ಲಿ ಮುಳುಗುತ್ತಿದ್ದ ಕುಟುಂಬವನ್ನು ರಕ್ಷಿಸುವ ಕಾರ್ಯದಲ್ಲಿ ಸಚಿವ ಕಿಮ್ಮನೆ ರತ್ನಾಕರ ಅವರು ತಮ್ಮ ಕಾರಿನ ಚಾಲಕ ಮತ್ತು ಅಂಗರಕ್ಷಕನ ಜತೆ ಕೈಜೋಡಿಸಿದ್ದಾರೆ. ನಂತರ ಗ್ರಾಮಸ್ಥರ ನೆರವೂ ಸಿಕ್ಕಿದೆ.  ಜೀವನ್ಮರಣ ಸ್ಥಿತಿಯಲ್ಲಿದ್ದ ಕುಟುಂಬದ ಪ್ರಾಣ ಉಳಿಸಿದ್ದು ನಿಜವಾಗಿಯೂ ದೊಡ್ಡ ಸಾಹಸ. ಮರುಹುಟ್ಟು ಪಡೆದ ಭದ್ರಾವತಿಯ ಕುಟುಂಬ, ತಮಗೆ ದೊರೆತ ಸಕಾಲಿಕ ನೆರವನ್ನು ಎಂದಿಗೂ ಮರೆಯಲಿಕ್ಕಿಲ್ಲ. ಸಚಿವರು, ಅವರ ಕಾರು ಚಾಲಕ ಚಂದ್ರು, ಬೆಂಗಾವಲು ಪಡೆಯ ಕೃಷ್ಣಮೂರ್ತಿಯವರ ಸಮಯಪ್ರಜ್ಞೆ, ಮಾನವೀಯತೆ ಎಲ್ಲರಿಗೂ ಮಾದರಿ.

ಮಂತ್ರಿ ಮಾನ್ಯರು ಹಾಗೂ ಉನ್ನತ ಹುದ್ದೆಗಳಲ್ಲಿರುವವರು ಕಷ್ಟದಲ್ಲಿರುವ ಜನರನ್ನು ಕಂಡೂ ಕಾಣದಂತೆ ವರ್ತಿಸುವ ಘಟನೆಗಳು ನಿತ್ಯ ನಡೆಯುತ್ತವೆ. ಸಚಿವರ ಬೆಂಗಾವಲು ಪಡೆಯ ಸಿಬ್ಬಂದಿ ಕ್ಷುಲ್ಲಕ ಕಾರಣಕ್ಕಾಗಿ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿದ, ದುರ್ವರ್ತನೆ ತೋರಿದ ಹತ್ತಾರು ನಿದರ್ಶನಗಳಿವೆ. ಕುಡಿತದ ಅಮಲು ಹಾಗೂ ಅಧಿಕಾರದ ಅಮಲಿನಲ್ಲಿ ಅರೆಹುಚ್ಚರಂತೆ ವರ್ತಿಸಿ ಅಪಘಾತ ಮಾಡಿ ಹಲವರ ಪ್ರಾಣ ತೆಗೆದು, ಗಾಯಗೊಂಡವರನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾದ ಘಟನೆಗಳೂ ನಡೆದಿವೆ.

ಹಿಂದಿದ್ದ ಬಿಜೆಪಿ ಸರ್ಕಾರದ  ಸಚಿವರೊಬ್ಬರು, ಖಾಸಗಿ ಕಾರೊಂದು ತಮ್ಮ ಕಾರನ್ನು ಹಿಂದಿಕ್ಕಿ ಮುಂದೆ ಹೋಯಿತೆಂಬ ಕ್ಷುಲ್ಲಕ ಕಾರಣಕ್ಕೆ ಕುಪಿತಗೊಂಡು ಆ ಖಾಸಗಿ ಕಾರಿನ ಚಾಲಕನನ್ನು ಬೆಂಬತ್ತಿ ಹಿಡಿದು ಸಾರ್ವಜನಿಕರ ಸಮ್ಮುಖದಲ್ಲಿ ಥಳಿಸಿದ್ದಲ್ಲದೇ ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಂಡ ಘಟನೆಯನ್ನು ರಾಜ್ಯದ ಜನರು ಮರೆತಿರಲಿಕ್ಕಿಲ್ಲ.

ಹಣ, ಅಧಿಕಾರ ಇರುವವರೆಲ್ಲ ಅಹಂಕಾರ ಹಾಗೂ ದರ್ಪದ ನಡವಳಿಕೆ ಮೈಗೂಡಿಸಿಕೊಂಡು  ಸದಾ ಕೆಟ್ಟದಾಗಿಯೇ ವರ್ತಿಸುತ್ತಾರೆ ಎಂಬ ಭಾವನೆ ಸಾರ್ವಜನಿಕರಲ್ಲಿದೆ. ಇಂತಹ  ಸಮಯದಲ್ಲೇ ಸಚಿವ ರತ್ನಾಕರ ಹಾಗೂ ಅವರ ಸಿಬ್ಬಂದಿ ತಮ್ಮ ಮಾನವೀಯ ನಡವಳಿಕೆ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಈ ಕಾರ್ಯ ಅನುಕರಿಸಬೇಕಾದ ಒಂದು ಅಪರೂಪದ ಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.