ADVERTISEMENT

ಮುಕ್ತ, ನ್ಯಾಯಯುತ ಚುನಾವಣೆಗೆ ಸಜ್ಜುಗೊಳಿಸಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ಮುಕ್ತ, ನ್ಯಾಯಯುತ ಚುನಾವಣೆಗೆ ಸಜ್ಜುಗೊಳಿಸಿ
ಮುಕ್ತ, ನ್ಯಾಯಯುತ ಚುನಾವಣೆಗೆ ಸಜ್ಜುಗೊಳಿಸಿ   

ರಾಜ್ಯ ವಿಧಾನಸಭೆಯ ಚುನಾವಣೆ ಮೇ 12ರಂದು ಒಂದೇ ಹಂತದಲ್ಲಿ ನಡೆಯಲಿದ್ದು ಚುನಾವಣೆ ಸಂಬಂಧದ ಕಾರ್ಯಚಟುವಟಿಕೆಗಳು ಗರಿಗೆದರಿವೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಬಾಡೂಟಕ್ಕೆ ಕುಳಿತವರನ್ನು ಚಿಕ್ಕಬಳ್ಳಾಪುರದಲ್ಲಿ ಹೊರಗೆ ಕಳುಹಿಸಿದ ಪ್ರಕರಣ ವರದಿಯಾಗಿದೆ. ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಾಗಿ ಪೂರಕ ವಾತಾವರಣ ನಿರ್ಮಾಣಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಹೊಣೆಗಾರಿಕೆ ಸಹಜವಾಗಿಯೇ ಚುನಾವಣಾ ಆಯೋಗಕ್ಕಿದೆ. ರಾಜ್ಯದಲ್ಲಿ ಅಧಿಕಾರ ಗದ್ದುಗೆಗೆ ಏರಲು ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಹಣಾಹಣಿ ನಡೆಸಿವೆ. ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ತನ್ನ ರಾಜಕೀಯ ಪ್ರಸ್ತುತತೆ ಉಳಿಸಿಕೊಳ್ಳಲು ಹೋರಾಡುತ್ತಿದೆ. ಇಂತಹ ತೀವ್ರ ಸ್ಪರ್ಧಾತ್ಮಕ ವಾತಾವರಣದಲ್ಲಿ ನ್ಯಾಯಯುತ ಚುನಾವಣೆಗಳನ್ನು ಸುಗಮವಾಗಿ ನಡೆಸುವ ಸವಾಲು ಚುನಾವಣಾ ಆಯೋಗದ್ದಾಗಿದೆ. ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಬಗ್ಗೆ ರಾಜಕೀಯ ಪಕ್ಷಗಳು ಹಾಗೂ ಮತದಾರರಲ್ಲಿ ಇರಬಹುದಾದ ತಪ್ಪು ಕಲ್ಪನೆಗಳನ್ನು ಸರಿಪಡಿಸಲು ಚುನಾವಣಾ ಆಯೋಗ ಸಾಂಸ್ಥಿಕ ನೆಲೆಯಲ್ಲಿ ಶ್ರಮಿಸಬೇಕಿದೆ. ಇಂತಹ ಸಂದರ್ಭದಲ್ಲಿ, ರಾಜ್ಯದಲ್ಲಿ ಸ್ಥಾಪಿಸಲಾಗುವ ಎಲ್ಲಾ ಮತಗಟ್ಟೆಗಳಲ್ಲೂ ಮತ ಖಾತರಿ ಯಂತ್ರಗಳನ್ನು (ವಿ.ವಿ.ಪ್ಯಾಟ್) ಬಳಸಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿರುವುದು ಸ್ವಾಗತಾರ್ಹ. ಏಕೆಂದರೆ, ಯಾವುದೇ ರೀತಿಯ ಅನುಮಾನಗಳಿಗೂ ಅವಕಾಶ ಮಾಡಿಕೊಡದಂತೆ ಕಾರ್ಯ ನಿರ್ವಹಿಸುವ ಹೊಣೆಗಾರಿಕೆ ಚುನಾವಣಾ ಆಯೋಗಕ್ಕಿದೆ. ಇಂತಹ ಸನ್ನಿವೇಶದಲ್ಲಿ, ರಾಜ್ಯದ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸುವ ಕೆಲವೇ ನಿಮಿಷಗಳ ಮೊದಲೇ ಆ ಮಾಹಿತಿ ಸೋರಿಕೆ ಆಗಿದ್ದು ಅನೇಕ ಪ್ರಶ್ನೆಗಳಿಗೆ ಕಾರಣವಾಯಿತು. ಕಳೆದ ವರ್ಷ ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಣೆಯಲ್ಲಾದ ವಿಳಂಬವೂ ವಿವಾದವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸಿದ್ದ ಆಯೋಗದ ಕ್ರಮವನ್ನು ದೆಹಲಿ ಹೈಕೋರ್ಟ್ ಇತ್ತೀಚೆಗಷ್ಟೇ ರದ್ದು ಮಾಡಿದೆ. ಇಲ್ಲಿ, ಸಹಜ ನ್ಯಾಯ ತತ್ವವನ್ನೂ ಪಾಲಿಸಿಲ್ಲ ಎಂಬಂಥ ತೀವ್ರ ಟೀಕೆಗಳನ್ನು ಚುನಾವಣಾ ಆಯೋಗ ಎದುರಿಸಬೇಕಾಯಿತು.

ಯಾವುದೋ ಪಕ್ಷದ ಪರ ವಾಲುವಿಕೆ ಇದೆ ಎಂಬಂಥ ಸಣ್ಣ ಸಂಶಯವೂ ಸುಳಿಯದಂತಹ ಕಾರ್ಯ ವೈಖರಿ ಚುನಾವಣಾ ಆಯೋಗಕ್ಕೆ ಇರಬೇಕಾದುದು ಅಗತ್ಯ. ಬದ್ಧತೆಯ ಕಠಿಣ ನಿಲವು ಕೈಗೊಳ್ಳುವಾಗ, ರಾಜಕೀಯ ಪಕ್ಷಗಳಿಂದ ಟೀಕೆಗಳು ಎದುರಾಗುತ್ತವೆ ಎಂಬುದೂ ನಿಜ. ಆದರೆ, ಪ್ರಜಾಪ್ರಭುತ್ವದ ಆಶಯಗಳನ್ನು ಜೀವಂತವಾಗಿಡಲು ಹಾಗೂ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಸಲು ಇಂತಹ ಕಠಿಣ ನಿಲವುಗಳು ಅತ್ಯಗತ್ಯ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವಂತಹ ಹೊಣೆ ಹೊತ್ತುಕೊಂಡಿರುವ ಸಾಂವಿಧಾನಿಕ ಸಂಸ್ಥೆಯಾಗಿದೆ ಚುನಾವಣಾ ಆಯೋಗ ಎಂಬುದನ್ನು ನಾವು ಮರೆಯಲಾಗದು.

ನೀತಿ ಸಂಹಿತೆ ಅಡಿ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನೂ ನಿರ್ಭಿಡೆಯಿಂದ ಕೈಗೊಳ್ಳಬೇಕಾದುದು ಮುಖ್ಯ. ‌ಚುನಾವಣೆಗಳಲ್ಲಿ ಹಣಬಲ, ತೋಳ್ಬಲಗಳು ಮೇಲುಗೈ ಸಾಧಿಸುತ್ತಾ ಅಪರಾಧಿಗಳ ರಾಜಕೀಯ ಪ್ರವೇಶಕ್ಕೆ ದಾರಿಮಾಡುತ್ತಿರುವ ವಿದ್ಯಮಾನ ಮುಂದುವರಿದೇ ಇರುವ ಕಾಲಘಟ್ಟ ಇಂದಿನದು. ಇದು ನಿಯಂತ್ರಣಕ್ಕೆ ಬರಬೇಕಾದಲ್ಲಿ ಮತದಾರರಲ್ಲಿ ಜಾಗೃತಿ ಇರಬೇಕಾದುದು ಅವಶ್ಯ. ಹಣ ಹಂಚಿಕೆ, ಉಡುಗೊರೆ ನೀಡಿಕೆ ಮುಂತಾದ ಕ್ರಮಗಳ ಮೂಲಕ ಮತದಾರರಿಗೆ ಆಮಿಷ ಒಡ್ಡುವಂತಹ ಕ್ರಿಯೆಗಳಿಗೆ ಅವಕಾಶ ಇರದಂತಹ ಸ್ಥಿತಿ ಸೃಷ್ಟಿಯಾಗಬೇಕು. ಈ ಬಗ್ಗೆ ಮತದಾರರಲ್ಲೇ ಜಾಗೃತಿ ಮೂಡಿಸುವ ಅಭಿಯಾನಗಳು ನಡೆಯುತ್ತಿದ್ದು ಇವು ಹೆಚ್ಚಾಗಬೇಕು. ದ್ವೇಷ ಬಿತ್ತುವ ಅಥವಾ ಜನರನ್ನು ವಿಭಜಿಸುವಂತಹ ಅಭಿಯಾನಗಳಿಗೆ ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುವ ವಿಚಾರದ ಬಗ್ಗೆಯೂ ನಿಗಾ ವಹಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿರುವುದು ಸರಿಯಾದುದು. ಪ್ರಜಾಪ್ರಭುತ್ವ ಎಂದರೆ ಪ್ರತಿನಿಧೀಕರಣದ ರಾಜಕಾರಣ. ಇದನ್ನು ಅರ್ಥಪೂರ್ಣವಾಗಿಸಲು ಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ಮತದಾನದ ಹೊಣೆಗಾರಿಕೆಯನ್ನು ಮತದಾರರು ಮರೆಯಬಾರದು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಮತದಾರರು ಪಾಲ್ಗೊಳ್ಳುವಂತಾಗಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.