ADVERTISEMENT

ಯುದ್ಧಕಾಲದ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಕತ್ತಲಲೋಕದ ಕಡೆ ಕರ್ನಾಟಕ ಭರದಿಂದ ಸಾಗುತ್ತಿದೆ. ರಾಜ್ಯದ ವಿದ್ಯುತ್ ಬೇಡಿಕೆಯ ಬಹುಪಾಲನ್ನು ಪೂರೈಸುತ್ತಿದ್ದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ನಾಲ್ಕು ಘಟಕಗಳು ಸ್ಥಗಿತಗೊಂಡ ನಂತರ ಲೋಡ್‌ಶೆಡ್ಡಿಂಗ್ ಜಾರಿ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ ನಾಲ್ಕೈದು ಗಂಟೆ ಕೂಡಾ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.
 
ಮಳೆ ಬರದೆ ಹೋದರೆ ಪರಿಸ್ಥಿತಿ ಚಿಂತಾಜನಕವಾಗಲಿದೆ. ರಾಜ್ಯದಲ್ಲಿ ಕಾಣಿಸಿಕೊಂಡಿರುವ ವಿದ್ಯುತ್ ಕೊರತೆ ಅನಿರೀಕ್ಷಿತವಾಗಿ ಎರಗಿದ ಪ್ರಾಕೃತಿಕ ವಿಕೋಪ ಅಲ್ಲ. ಇದು ನಮ್ಮ ಆಡಳಿತಾರೂಢರ ಬೇಜವಾಬ್ದಾರಿ ಮತ್ತು ದೂರದೃಷ್ಟಿಯ ಕೊರತೆಯ ಫಲ. ಕೇಂದ್ರ ವಿದ್ಯುತ್ ಪ್ರಾಧಿಕಾರದ ಸಮೀಕ್ಷೆ ಪ್ರಕಾರ ಗುಜರಾತ್ ರಾಜ್ಯದ ವಿದ್ಯುತ್ ಕೊರತೆ (ಶೇ 22) ಕರ್ನಾಟಕಕ್ಕಿಂತ ಎರಡು ಪಾಲು ಹೆಚ್ಚಿದೆ.

ಆದರೆ ಆ ರಾಜ್ಯದ 18 ಸಾವಿರ ಹಳ್ಳಿಗಳಲ್ಲಿ ದಿನದ 24 ಗಂಟೆ ವಿದ್ಯುತ್ ಪೂರೈಕೆ ಇದೆ. ಇದಕ್ಕೆ ಕಾರಣ 1500 ಕೋಟಿ ರೂಪಾಯಿ ವೆಚ್ಚದ `ಜ್ಯೋತಿಗ್ರಾಮ ಯೋಜನೆ~. ಗುಜರಾತ್‌ನಲ್ಲಿ ರೈತರಿಗೆ ಉಚಿತ ವಿದ್ಯುತ್ ಇಲ್ಲ, ಆದರೆ ಕೃಷಿ ಬಳಕೆಗೆ ವಿದ್ಯುತ್‌ನ ಕೊರತೆಯೂ ಇಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಗುಜರಾತ್ ಮಾದರಿಯ ಪಠಣ ಮಾಡುತ್ತಿತ್ತು.

ವಿದ್ಯುತ್ ಕ್ಷೇತ್ರದ ಸುಧಾರಣೆಗಾಗಿಯಾದರೂ ಆ ಮಾದರಿಯನ್ನು ಪಾಲಿಸಿದ್ದರೆ ಕತ್ತಲೆಯ ಹಾದಿಯಲ್ಲಿ ಒಂದಿಷ್ಟು ಬೆಳಕನ್ನು ಕಾಣಲು ಸಾಧ್ಯವಿತ್ತು. ವಿದ್ಯುತ್ ವಿಚಾರದಲ್ಲಿ ಕರ್ನಾಟಕ ಎಂದೂ ಸ್ವಾವಲಂಬಿಯಾಗಿರಲಿಲ್ಲ. ಹೀಗಿದ್ದರೂ ವಿದ್ಯುತ್ ಉತ್ಪಾದನೆಗೆ ಲಭ್ಯ ಇದ್ದ ಅವಕಾಶಗಳನ್ನು ಬಳಸಿಕೊಳ್ಳಲು ಈ ವರೆಗಿನ ಎಲ್ಲ ಸರ್ಕಾರಗಳು ವಿಫಲವಾಗಿವೆ.

ಬೆಂಕಿಬಿದ್ದಾಗ ನೀರಿಗಾಗಿ ಬಾವಿ ಹುಡುಕಿಕೊಂಡು ಹೋಗುವ ವಿಧಾನದ ಮೂಲಕ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲಾಗದು. ಇದಕ್ಕಾಗಿ ಆಳುವವರು ದೂರದೃಷ್ಟಿ ಹೊಂದಿರಬೇಕಾಗುತ್ತದೆ. ಬಿಡದಿ ಸಮೀಪದ 1400 ಮೆಗಾವಾಟ್ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಘಟಕ ಯೋಜನೆ, ಹಾಸನದ ಗಾಂಧಿ ಜಲವಿದ್ಯುತ್ ಘಟಕ, ಜೇವರ್ಗಿ, ಯರಮರಸ್, ಯಾದ್ಲಾಪುರ ಥರ್ಮಲ್ ವಿದ್ಯುತ್ ಘಟಕ ಸೇರಿದಂತೆ 9 ಯೋಜನೆಗಳು ಕಡತದಲ್ಲಿವೆ.

ಅಧಿಕಾರಕ್ಕೆ ಬಂದ ದಿನದಿಂದ ಬಿಜೆಪಿ ಸರ್ಕಾರ ಹೇಳುತ್ತಾ ಬಂದಿರುವ ಛತ್ತೀಸ್‌ಗಡ ವಿದ್ಯುತ್ ಯೋಜನೆಯ ಬಗ್ಗೆ ಈಗ ಮಾತನಾಡುವವರೇ ಇಲ್ಲ. ಹೊಸ ಯೋಜನೆಗಳ ಮೂಲಕ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗದಿದ್ದರೆ ಲಭ್ಯ ಇರುವ ವಿದ್ಯುತ್ತನ್ನು ಜಾಗರೂಕತೆಯಿಂದ ಬಳಸುವ ವಿವೇಕವಾದರೂ ಇರಬೇಕು.

ಒಂದೆಡೆ ವಿದ್ಯುತ್ ಸಾಗಾಣಿಕೆಯಲ್ಲಿನ ನಷ್ಟ, ಇನ್ನೊಂದೆಡೆ ಎಗ್ಗಿಲ್ಲದೆ ನಡೆಯುತ್ತಿರುವ ವಿದ್ಯುತ್ ಕಳ್ಳತನ. ಇದರ ಜತೆಗೆ ಜಾಹೀರಾತು, ಅಲಂಕಾರ ಮತ್ತು ವೈಭವದ ಆಚರಣೆಗಳಿಗಾಗಿಯೂ ವಿದ್ಯುತ್ ಪೋಲಾಗುತ್ತಿದೆ. ಅಭದ್ರತೆಯಿಂದ ನರಳುತ್ತಿರುವ ರಾಜ್ಯ ಸರ್ಕಾರಕ್ಕೆ ಇದನ್ನು ತಡೆಯುವ ರಾಜಕೀಯ ಇಚ್ಛಾಶಕ್ತಿ ಇದ್ದಂತಿಲ್ಲ.

ತಕ್ಷಣದ ಪರಿಹಾರಕ್ಕೆ ಇರುವ ಇನ್ನೊಂದು ಮಾರ್ಗ ಕೇಂದ್ರ ಗ್ರಿಡ್‌ನಿಂದ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಪಡೆದುಕೊಳ್ಳುವುದು.  ಕೇಂದ್ರ ಸಂಪುಟದಲ್ಲಿರುವ ರಾಜ್ಯದ ನಾಲ್ವರು ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರೆ ಇದು ಸಾಧ್ಯ.ರಾಜ್ಯ ಸರ್ಕಾರವನ್ನು ಟೀಕಿಸುವುದಷ್ಟೇ ವಿರೋಧ ಪಕ್ಷದ ಕೆಲಸ ಅಲ್ಲ.ವಿದ್ಯುತ್‌ಗೆ ಸಂಬಂಧಿಸಿದಂತೆ ನಾವಿಂದು ಯುದ್ಧಕಾಲದ ಸ್ಥಿತಿಯಲ್ಲಿದ್ದೇವೆ, ಆ ಗಂಭೀರತೆಯಿಂದಲೇ ಅದನ್ನು ಎದುರಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.