ಮಹಿಳೆಯರು ಗಿರಿಶಿಖರ, ಪರ್ವತಗಳನ್ನೇರಿ ಸಾಧನೆ ಮೆರೆದಿರುವುದು ಹೊಸತಲ್ಲ. ಆದರೆ ಲೈಟ್ ಕಂಬಗಳನ್ನು ಹತ್ತುವುದು ಅಗತ್ಯವಾದ ಉದ್ಯೋಗಗಳಿಗೆ ಮಾತ್ರ ಮಹಿಳೆಗೆ ಪ್ರವೇಶವಿಲ್ಲ ಎಂಬುದು ಹೇಗೆ ಸರಿ? ಇದಕ್ಕಾಗಿಯೇ ಎರಡು ಸಾವಿರ ಸಹಾಯಕ ಲೈನ್‌ಮೆನ್ ಹುದ್ದೆಗಳ ಭರ್ತಿಯನ್ನು ಪುರುಷರಿಗೆ ಮಾತ್ರ ಮೀಸಲಿರಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಕರೆದಿದ್ದ ಅಧಿಸೂಚನೆಯನ್ನು ರಾಜ್ಯ ಹೈಕೋರ್ಟ್ ರದ್ದುಮಾಡಿರುವುದು ಸ್ವಾಗತಾರ್ಹ.
ಈ ಹುದ್ದೆಗೆ ಮಹಿಳಾ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಅರ್ಜಿ ಸ್ವೀಕಾರದ ಗಡುವನ್ನು ಈಗ ವಿಸ್ತರಿಸಲಾಗಿದೆ. ಈ ಹುದ್ದೆಗೆ ಮಹಿಳೆ ಅಸಮರ್ಥಳು ಎಂಬುದನ್ನು ಸಾಬೀತು ಪಡಿಸುವಂತಹ ಯಾವುದೇ ಕ್ಷೇತ್ರ ಅಧ್ಯಯನವಾಗಲಿ, ವೈಜ್ಞಾನಿಕ ಸಮೀಕ್ಷೆಯಾಗಲೀ ನಡೆದಿಲ್ಲ.
ಹೀಗಿರುವಾಗ ಸಹಾಯಕ `ಲೈನ್‌ಮನ್~ ಹುದ್ದೆಯ ಕರ್ತವ್ಯಗಳನ್ನು ಮಹಿಳೆಯರು ನಿಭಾಯಿಸಲಾರರು ಎಂಬ ಕೆಪಿಟಿಸಿಲ್ ವಾದವನ್ನು ಕೋರ್ಟ್ ತಳ್ಳಿಹಾಕಿರುವುದು ಸರಿಯಾಗಿಯೇ ಇದೆ.
ಈ ಹುದ್ದೆಗಳಿಗೆ ಮಹಿಳೆಯರು ಈ ಹಿಂದೆ ನೇಮಕವಾಗ್ದ್ದಿದುದನ್ನೂ ಕೋರ್ಟ್ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ, ಈ ಹುದ್ದೆಗಳಿಗೆ ಮಹಿಳೆಯರಿಗೆ ಅವಕಾಶ ನಿರಾಕರಿಸಿದ್ದ ಕೆಪಿಟಿಸಿಎಲ್ ಕ್ರಮ ಸಂವಿಧಾನದ ತತ್ವಗಳಿಗೆ ವಿರೋಧವಾಗಿದ್ದುದು ಸ್ಪಷ್ಟ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಸಜ್ಜುಗೊಳ್ಳುವ ಸಂದರ್ಭದಲ್ಲಿ ಹೊರಬಿದ್ದಿರುವ ಈ ತೀರ್ಪು ಮಹತ್ವದ್ದು. ಜೊತೆಗೆ, ಮಹಿಳೆ ಕುರಿತಾದ ಪೂರ್ವಗ್ರಹಗಳ ವಿರುದ್ಧದ ಹೋರಾಟದ ಹಾದಿ ಇನ್ನೂ ಎಷ್ಟು ಸುದೀರ್ಘವಾಗಿದೆ ಎಂಬುದನ್ನೂ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ನೀಡಿರುವ ಈ ತೀರ್ಪು ಮತ್ತೊಮ್ಮೆ ಸಮಾಜಕ್ಕೆ ನೆನಪಿಸಿದೆ.
ಈ ಹಿಂದೆ ನ್ಯಾಯಾಲಯದ ಅನೇಕ ತೀರ್ಪುಗಳು ಮಹಿಳೆಯ ಹಕ್ಕುಗಳನ್ನು ಬಲಪಡಿಸಿವೆ. ಆದರೆ ಸಾಮಾಜಿಕವಾಗಿ ಮಹಿಳೆ ಕುರಿತಾದ ಮನೋಧರ್ಮ ಮಾತ್ರ ಇನ್ನೂ ಬದಲಾವಣೆಯಾಗಿಲ್ಲ ಎನ್ನುವುದನ್ನು ಈ ವಿದ್ಯಮಾನ ಮತ್ತೊಮ್ಮೆ ಎತ್ತಿ ತೋರಿಸಿದೆ.
`ಹೆರಿಗೆ ರಜೆ ಸಂದರ್ಭಗಳಲ್ಲಿ ಮಹಿಳೆಯರು ಈ ಹುದ್ದೆಗಳಿಗೆ ಲಭ್ಯವಾಗಲಾರರು. ಜೊತೆಗೆ ಈಗಾಗಲೇ ಈ ಹುದ್ದೆಯಲ್ಲಿರುವ ಕೆಲವು ಮಹಿಳೆಯರು ತಮಗೆ ಈ ಕೆಲಸ ಸಾಧ್ಯವಿಲ್ಲವೆಂದು ಲಿಖಿತವಾಗಿ ಬರೆದುಕೊಟ್ಟಿದ್ದಾರೆ~ ಎಂಬುದನ್ನು ಕೆಪಿಟಿಸಿಎಲ್ ತನ್ನ ವಾದಕ್ಕೆ ಬಳಸಿಕೊಂಡಿರುವುದಂತೂ ಬಾಲಿಶವಾಗಿದೆ.
ಅದೂ ಈ ಇಲಾಖೆ, ಮಹಿಳಾ ಸಚಿವರ ಉಸ್ತುವಾರಿಯಲ್ಲಿದ್ದೂ ಈ ಬಗೆಯ ಪೂರ್ವಗ್ರಹಗಳನ್ನು ಮೀರಲು ಸಾಧ್ಯವಾಗದಿರುವುದು ವಿಷಾದನೀಯ.
ಒಬ್ಬರು, ಇಬ್ಬರು ಮಹಿಳೆಯರು ತಮ್ಮ ಕೈಲಾಗದು ಎಂದ ಮಾತ್ರಕ್ಕೆ ಸಾರಾಸಗಟಾಗಿ ಮಹಿಳಾ ಸಮುದಾಯಕ್ಕೇ ಅವಕಾಶಗಳನ್ನು ನಿರಾಕರಿಸುವುದನ್ನು ಕುರಿತು ಕೋರ್ಟ್ ಸರಿಯಾಗಿಯೇ ಆಕ್ಷೇಪಿಸಿದೆ.
ಸಾರ್ವಜನಿಕ ಬದುಕಿನ ಹಲವು ಸ್ತರಗಳಲ್ಲಿ ತನಗೆ ಸಹಜವಾಗಿ ದಕ್ಕಬೇಕಾದ ಅವಕಾಶಗಳನ್ನು ಈಗಲೂ ಹೋರಾಡಿಯೇ ಮಹಿಳೆ ಪಡೆಯಬೇಕಾಗಿರುವುದು ದುರಂತ.
ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾರಂಭಿಸಿ 100 ವರ್ಷಗಳು ಕಳೆದು ಹೋಗಿದ್ದರೂ, ಇಂತಹ ಮನಃಸ್ಥಿತಿಗಳ ವಿರುದ್ಧದ ಹೋರಾಟ ಇನ್ನೂ ಮುಂದುವರಿಯುತ್ತಲೇ ಇದೆ. ಹಾಗಿದ್ದೂ ಕೋರ್ಟ್‌ನ ಈ ತೀರ್ಪು ಹೊಸ ಭರವಸೆಯನ್ನೂ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.