ADVERTISEMENT

ವಿಜ್ಞಾನ ಅಧಿವೇಶನ ಮುಂದೂಡಿಕೆ ಹೊಣೆಗೇಡಿತನದ ಪರಮಾವಧಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 19:30 IST
Last Updated 25 ಡಿಸೆಂಬರ್ 2017, 19:30 IST
ವಿಜ್ಞಾನ ಅಧಿವೇಶನ ಮುಂದೂಡಿಕೆ ಹೊಣೆಗೇಡಿತನದ ಪರಮಾವಧಿ
ವಿಜ್ಞಾನ ಅಧಿವೇಶನ ಮುಂದೂಡಿಕೆ ಹೊಣೆಗೇಡಿತನದ ಪರಮಾವಧಿ   

ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಜನವರಿ 3ರಿಂದ 7ರವರೆಗೆ ನಡೆಯಬೇಕಿದ್ದ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ (ಐಎಸ್‌ಸಿ) 105ನೇ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದು ದುರದೃಷ್ಟಕರ. ಕಳವಳಕಾರಿಯೂ ಹೌದು. ಶತಮಾನ ಮೀರಿದ ಐಎಸ್‌ಸಿ ಇತಿಹಾಸದಲ್ಲಿ ಇದೇ ಮೊದಲ ಸಲ ಇಂತಹ ಬೆಳವಣಿಗೆ ನಡೆದಿದೆ. ವಿದ್ಯಾರ್ಥಿಗಳ ಪ್ರತಿಭಟನೆಗಳಿಂದ ಕಂಗೆಟ್ಟಿರುವ ವಿಶ್ವವಿದ್ಯಾಲಯದ ಆಡಳಿತವು ಐಎಸ್‌ಸಿಯ ಆತಿಥ್ಯ ವಹಿಸಲಾಗದೆಂದು ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಈ ತಿಂಗಳ ಮೊದಲ ವಾರದಲ್ಲಿ ಇದೇ ವಿಶ್ವವಿದ್ಯಾಲಯದ ಎಂ.ಎಸ್ಸಿ. ವಿದ್ಯಾರ್ಥಿಯೊಬ್ಬನ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರಿಂದ ವಿದ್ಯಾರ್ಥಿ ಸಂಘಟನೆಗಳು ರೊಚ್ಚಿಗೆದ್ದಿದ್ದವು. ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳಬೇಕಿದ್ದ ವಿಜ್ಞಾನ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆ ಮತ್ತೆ ಭುಗಿಲೇಳಬಹುದು ಎಂಬ ಆತಂಕ ವಿಶ್ವವಿದ್ಯಾಲಯದ ಆಡಳಿತವನ್ನು ಕಾಡಿದ್ದರಿಂದ ಅಧಿವೇಶನವನ್ನೇ ಮುಂದೂಡುವ ನಿರ್ಧಾರಕ್ಕೆ ಬರಲಾಯಿತು ಎಂದು ಹೇಳಲಾಗಿದೆ. ಐಎಸ್‌ಸಿಯಂತಹ ಮಹತ್ವದ ಅಧಿವೇಶನ ನಡೆಸುವ ತಾಣವನ್ನು ದಿಢೀರ್‌ ಎಂದೇನೂ ಗೊತ್ತುಪಡಿಸುವುದಿಲ್ಲ.

ವರ್ಷದ ಮೊದಲೇ ಸ್ಥಳ ನಿರ್ಧಾರವಾಗಿರುತ್ತದೆ. ಸಿದ್ಧತೆಗಳು ಸಹ ಮುಂಚಿತವಾಗಿಯೇ ಶುರುವಾಗಿರುತ್ತವೆ. ಕ್ಯಾಂಪಸ್‌ನಲ್ಲಿ ನಡೆದಿರುವ ಬೆಳವಣಿಗೆಗಳ ಕುರಿತು ಕಾಲಕಾಲಕ್ಕೆ ವಿವರಿಸಿ, ಆತಿಥ್ಯ ವಹಿಸಲು ಸಾಧ್ಯವಿಲ್ಲ ಎಂಬುದನ್ನು ಉಸ್ಮಾನಿಯಾ ವಿಶ್ವವಿದ್ಯಾಲಯ ಆಡಳಿತವು ಸಂಘಟಕರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಅಂತಹ ಜವಾಬ್ದಾರಿಯನ್ನು ಪ್ರದರ್ಶಿಸಿದ್ದರೆ ಬೇರೆ ಸ್ಥಳ ಹುಡುಕಿ, ನಿಗದಿಯಂತೆಯೇ ಸಮಾವೇಶ ನಡೆಸಬಹುದಿತ್ತು.

ಅಂತಿಮ ಕ್ಷಣದವರೆಗೆ ಕಾಲಹರಣ ಮಾಡಿ, ಈಗ ಸಮಾವೇಶ ಮುಂದೂಡುವಂತೆ ಮಾಡಿರುವುದು ಉಸ್ಮಾನಿಯಾ ವಿಶ್ವವಿದ್ಯಾಲಯ ಆಡಳಿತ ಹಾಗೂ ಸಂಘಟಕರ ಹೊಣೆಗೇಡಿತನವಲ್ಲದೆ ಬೇರೇನಲ್ಲ.

ADVERTISEMENT

ಅಧಿವೇಶನ ಮುಂದೂಡುವಂತಹ ವಾತಾವರಣ ಸೃಷ್ಟಿಯಾದದ್ದು ವಿಜ್ಞಾನಪ್ರಿಯರಲ್ಲಿ ಸಹಜವಾಗಿಯೇ ಅಸಮಾಧಾನವನ್ನು ಉಂಟುಮಾಡಿದೆ. ನೊಬೆಲ್‌ ಪ್ರಶಸ್ತಿ ಪುರಸ್ಕೃತರೂ ಸೇರಿದಂತೆ ಸಾಧಕ ವಿಜ್ಞಾನಿಗಳು ಪಾಲ್ಗೊಳ್ಳುವ ಇಂತಹ ಅಧಿವೇಶನಗಳು ಯುವ ವಿಜ್ಞಾನಿಗಳಿಗೆ, ಅದರಲ್ಲೂ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಚಿಲುಮೆಗಳು. ದೇಶ–ವಿದೇಶಗಳ ವಿಜ್ಞಾನಿಗಳು ಒಂದಾಗಿ ಬೆರೆಯಲು, ವಿಚಾರ ವಿನಿಮಯ ಮಾಡಿಕೊಳ್ಳಲು ಇದಕ್ಕಿಂತಲೂ ಮಹತ್ವದ ವೇದಿಕೆ ಬೇರೊಂದಿಲ್ಲ. ದೇಶದ ವಿಜ್ಞಾನ ರಂಗದಲ್ಲಿ ಆಗಿರುವ ಬೆಳವಣಿಗೆಗಳು ಜಗತ್ತಿಗೆ ಎದ್ದು ಕಾಣುವಂತೆ ಮಾಡುವ ತಾಕತ್ತು ಈ ಅಧಿವೇಶನಕ್ಕೆ ಇದೆ. ಸ್ವಾತಂತ್ರ್ಯ ಸಿಕ್ಕಮೇಲೆ ದೇಶದ ಚುಕ್ಕಾಣಿ ಹಿಡಿದ ಜವಾಹರಲಾಲ್‌ ನೆಹರೂ ಅವರಿಂದ ಹಿಡಿದು ಇದುವರೆಗೆ ಆಡಳಿತ ನಡೆಸಿದ ಪ್ರತೀ ಪ್ರಧಾನಿಯೂ ತಮ್ಮ ಹೊಸ ವರ್ಷದ ಸಾರ್ವಜನಿಕ ಕಾರ್ಯಕ್ರಮವನ್ನು ವಿಜ್ಞಾನ ಅಧಿವೇಶನದ ಮೂಲಕವೇ ಆರಂಭಿಸುತ್ತಿದ್ದರು.

ವಿಜ್ಞಾನ ಕ್ಷೇತ್ರಕ್ಕೆ ದೇಶ ಆ ಮಟ್ಟಿಗೆ ಮಹತ್ವ ನೀಡಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನ ಅಧಿವೇಶನದ ಮಹತ್ವಕ್ಕೆ ಕುಂದು ತರುವ ಬೆಳವಣಿಗೆಗಳು ನಡೆದಿರುವುದು ವಿಷಾದನೀಯ. ಈ ಹಿಂದಿನ ಎರಡು ಅಧಿವೇಶನಗಳು ಮೇಳದ ಸ್ವರೂಪ ತಳೆದಿದ್ದವು ಎಂಬ ಆರೋಪ ಇದೆ. ವಿಜ್ಞಾನ ಕ್ಷೇತ್ರದಲ್ಲಿ ಅಲ್ಪ–ಸ್ವಲ್ಪ ಸಾಧನೆ ಮಾಡಿದವರು ಅಧಿವೇಶನದ ವೇದಿಕೆಯೇರಿ ವಿಜ್ಞಾನಕ್ಕಿಂತ ಪುರಾಣಗಳ ಪ್ರತಿಪಾದಕರಾಗಿ ಕಂಗೊಳಿಸಿದ್ದರು. ವೈಜ್ಞಾನಿಕ ಪ್ರಗತಿಯನ್ನು ಪುರಾಣಗಳ ಜತೆ ತಳಕು ಹಾಕುವಂಥ ಮಾತು ಆಡಿದ್ದರು. ವಿಜ್ಞಾನ ಅಧಿವೇಶನದ ಹಿರಿಮೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವ ಹೊಣೆ ಅಧಿಕಾರಸ್ಥರದು.

ವಿಜ್ಞಾನ ಅಧಿವೇಶನವನ್ನು ಮುಂದೂಡಿರುವುದು ಒಂದು ಕೆಟ್ಟ ನಿದರ್ಶನ.

ಈ ಬಾರಿಯ ಅಧಿವೇಶನವನ್ನು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ನಡೆಸಲು ಸಾಧ್ಯವಾಗದಿದ್ದರೆ ಬೇರೆ ಎಲ್ಲಿಯಾದರೂ ಆಯೋಜಿಸಬೇಕು. ಅಲ್ಲದೇ ಅಧಿವೇಶನ ಮುಂದೂಡುವ ಪ್ರಸಂಗ ಮುಂದೆಂದೂ ಬಾರದಂತೆ ಎಚ್ಚರ ವಹಿಸಬೇಕು. ಅಧಿವೇಶನ ನಿಯಮಿತವಾಗಿ ನಡೆಯಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.