ADVERTISEMENT

ಸಹಮತ ಬೇಕು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲು ಮುಂದಾಗಿರುವ ‘ಕೋಮು ಮತ್ತು ನಿರ್ದಿಷ್ಟ ಸಮುದಾಯದ ಮೇಲಿನ ಹಿಂಸಾಚಾರ ತಡೆ ಮಸೂದೆ’ ಕುರಿತಂತೆ ಹೆಚ್ಚಿನ ಚರ್ಚೆಗಳು ನಡೆಯಬೇಕೆಂಬ ಭಾವನೆ ವ್ಯಕ್ತವಾಗಿದೆ.  ಪರಿಶಿಷ್ಟರು ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕು ಎನ್ನುವ ಮಸೂದೆಯ ಮೂಲ ಉದ್ದೇಶವೇನೋ ಒಳ್ಳೆಯದು.

ಆದರೆ ಅದರ ಜಾರಿ ವಿಧಾನ ಆಕ್ಷೇಪಣೆಗೆ ಎಡೆ ಮಾಡುವಂತಿದೆ.  ದೌರ್ಜನ್ಯ, ಹಿಂಸೆ, ಸಾಮಾಜಿಕ ಬಹಿಷ್ಕಾರದಂಥ ಅಮಾನುಷ ಕೃತ್ಯಗಳಿಂದ ದುರ್ಬಲರು ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಅನೇಕ ಕಾನೂನುಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಅವು ಸಾಕಷ್ಟು ಪರಿಣಾಮಕಾರಿಯೂ ಆಗಿವೆ. ಆದರೂ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮತ್ತೊಂದು ಮಸೂದೆಯನ್ನು ತರುತ್ತಿರು ವುದರ ಮರ್ಮವನ್ನು ಸುಲಭವಾಗಿ ಗ್ರಹಿಸಬಹುದು.

ಹೀಗಾಗಿಯೇ ಮಸೂದೆ ಮಂಡನೆಗೆ ಮೊದಲೇ ವಿವಾದ ಉಂಟಾಗಿದೆ. ಬಿಜೆಪಿ ಆಡಳಿತದ ರಾಜ್ಯಗಳು ಮಾತ್ರವಲ್ಲದೆ ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡುಗಳಂಥ ಕಾಂಗ್ರೆಸ್ಸೇತರ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಇದನ್ನು ಬಲವಾಗಿ ವಿರೋಧಿಸುತ್ತಿದ್ದಾರೆ.  ತಮಿಳುನಾಡು ಮುಖ್ಯಮಂತ್ರಿ  ಜಯಲಲಿತಾ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನೇರವಾಗಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ADVERTISEMENT

ಇದು ರಾಜ್ಯಗಳ ಅಧಿಕಾರವನ್ನು ಮೊಟಕು ಮಾಡುತ್ತದೆ, ಭಾರತದ ಒಕ್ಕೂಟ ಸ್ವರೂಪಕ್ಕೆ ಧಕ್ಕೆ ತರುತ್ತದೆ, ಇಡೀ ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುತ್ತದೆ, ಹಿಂಸಾಚಾರ ಮತ್ತಷ್ಟು ಹೆಚ್ಚಾಗಿ ಮಸೂದೆಯ ಉದ್ದೇಶವೇ ವಿಫಲವಾಗುತ್ತದೆ ಎಂಬ ಬಗ್ಗೆ  ಅವರು ವ್ಯಕ್ತಪಡಿಸಿರುವ ಆತಂಕಗಳನ್ನು  ತಳ್ಳಿ ಹಾಕಲು ಸಾಧ್ಯವಿಲ್ಲ. ಈ ಮಸೂದೆಯಲ್ಲಿನ ಅಂಶಗಳನ್ನು ಅನುಷ್ಠಾನಕ್ಕೆ ತರುವ ಅಧಿಕಾರ ರಾಜ್ಯಗಳ ಕೈಯಲ್ಲಿಯೇ ಇರುತ್ತದೆ ಎಂದು ಕೇಂದ್ರ ಸರ್ಕಾರ ಈಗ ಸಮಜಾಯಿಷಿ ಕೊಟ್ಟಿದೆ.

ಹಾಗಿದ್ದರೆ,  ಇಂಥ ಮಸೂದೆ ರೂಪಿಸುವ ಅವಕಾಶವನ್ನು ರಾಜ್ಯಗಳಿಗೇ ಏಕೆ ಬಿಟ್ಟು ಕೊಡಬಾರದು ಎಂಬ ವಿರೋಧ ಪಕ್ಷಗಳ ಪ್ರಶ್ನೆಗೆ ಅದರ ಬಳಿ ಏನು ಉತ್ತರವಿದೆ? ಈ ವಿವಾದಾತ್ಮಕ ಮಸೂದೆ ಭಾರೀ ಕೋಲಾಹಲವನ್ನೇ ಸೃಷ್ಟಿಸಿದ ನಂತರ ಕೇಂದ್ರ ಸರ್ಕಾರ ಕೆಲವು ಬದಲಾವಣೆ ಮಾಡಿದೆ. ಆದರೂ ಬಿಜೆಪಿ ಮತ್ತು ಎಐಎಡಿಎಂಕೆಗೆ ಇದರಿಂದ ಸಮಾಧಾನವಾಗಿಲ್ಲ. ಪರಿಷ್ಕೃತ ಮಸೂದೆಯ ಪ್ರಕಾರ, ಗಲಭೆಪೀಡಿತ ಪ್ರದೇಶಗಳಲ್ಲಿ ತನಿಖಾ ಸಮಿತಿ ರಚಿಸಲು ರಾಜ್ಯಗಳಿಗೂ ಅಧಿಕಾರ ಇರುತ್ತದೆ.

ಈ ಮುನ್ನ, ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯವನ್ನು  ಮಾತ್ರ ಅಪರಾಧ ಎಂದು ಪರಿಗಣಿಸಲಾಗುತ್ತಿತ್ತು. ಇದು ಅಲ್ಪಸಂಖ್ಯಾತರನ್ನು ಓಲೈಸುವ  ರಾಜಕಾರಣ ಎಂಬ ಟೀಕೆ ಬಂದ ನಂತರ  ಅದನ್ನು ಮಾರ್ಪಡಿಸಲಾಗಿದೆ.  ಯಾವುದೇ ಧರ್ಮಕ್ಕೆ ಸೇರಿದ ವ್ಯಕ್ತಿ  ಕೋಮುಗಲಭೆಗೆ ಪ್ರಚೋದಿಸಿದರೂ ಆತನನ್ನು ಶಿಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಇದೆಲ್ಲ ಸರಿ. ಆದರೆ ಕಾನೂನು ಸುವ್ಯವಸ್ಥೆ, ಪರಿಶಿಷ್ಟರು ಮತ್ತು ಅಲ್ಪಸಂಖ್ಯಾತರ ರಕ್ಷಣೆ ಮುಖ್ಯವಾಗಿ ರಾಜ್ಯಗಳ ಸಂವಿಧಾನಾತ್ಮಕ ಹೊಣೆ. ಅದನ್ನು ಅತಿಕ್ರಮಿಸುವ ಕೇಂದ್ರದ  ಧೋರಣೆ ಸರಿಯಲ್ಲ. ಇಂಥ ಸೂಕ್ಷ್ಮ ವಿಚಾರಗಳಲ್ಲಿ ಪಕ್ಷ ರಾಜಕಾರಣವನ್ನು ಬಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪ್ರಧಾನಿ ಮನಮೋಹನ್‌ ಸಿಂಗ್‌ ಈಗ ಅಂಥ ಇಂಗಿತ ನೀಡಿರುವುದು ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.