ಉರ್ದು ಭಾರತೀಯ ಭಾಷೆ; ಮರಾಠಿ, ಹಿಂದಿ, ಸಂಸ್ಕೃತ ಅಥವಾ ಭಾರತದ ಇತರ ಯಾವುದೇ ಭಾಷೆಯಂತೆ ಉರ್ದು ಕೂಡ ಭಾರತೀಯವಾದುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್‌ನ ಈ ಹೇಳಿಕೆಯು ಸ್ವಾಗತಾರ್ಹವಾದುದು. ಈ ಭಾಷೆಗೆ ಸಾಂವಿಧಾನಿಕ ಸ್ಥಾನಮಾನವಿದೆ, ಚಾರಿತ್ರಿಕ ಮಹತ್ವವಿದೆ ಮತ್ತು ದೇಶದ ಹಲವು ಭಾಗಗಳಲ್ಲಿ ದಿನನಿತ್ಯದ ವ್ಯವಹಾರಕ್ಕೆ ಬಳಕೆಯಲ್ಲಿದೆ. ನಮ್ಮ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಿರುವ 21 ಭಾಷೆಗಳಲ್ಲಿ ಉರ್ದು ಕೂಡ ಒಂದು. ಇತರ ಎಲ್ಲ ಭಾಷೆಗಳ ಹಾಗೆಯೇ ಉರ್ದು ಕೂಡ ನಮ್ಮ ಭಾಷಿಕ ಪರಂಪರೆಯ ಭಾಗವಾಗಿದೆ. ದೇಶದ ಉತ್ತರ, ವಾಯವ್ಯ ಮತ್ತು ಇತರ ಭಾಗಗಳಲ್ಲಿ ಲಕ್ಷಾಂತರ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಉರ್ದು ಮಾತನಾಡುತ್ತಾರಾದರೂ ಇತರ ಧರ್ಮದವರೂ ಈ ಭಾಷೆ ಮಾತನಾಡುತ್ತಾರೆ. ಕರ್ನಾಟಕದಲ್ಲಿ ಶೇ 10ಕ್ಕಿಂತ ಹೆಚ್ಚು ಜನರು ಈ ಭಾಷೆ ಮಾತನಾಡುತ್ತಾರೆ. ಈ ಭಾಷೆಗೆ ಉತ್ಕೃಷ್ಟವಾದ ಸಾಹಿತ್ಯ ಪರಂಪರೆ ಇದೆ. ಉರ್ದು ಶಾಯಿರಿ ದೇಶದ ಹಲವು ಭಾಗಗಳಲ್ಲಿ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಉತ್ತರಪ್ರದೇಶ, ಆಂಧ್ರಪ್ರದೇಶ, ಜಮ್ಮು–ಕಾಶ್ಮೀರ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ, ತೆಲಂಗಾಣ ಮತ್ತು ದೆಹಲಿಯಲ್ಲಿ ಉರ್ದುವನ್ನು ಅಧಿಕೃತ ಭಾಷೆ ಎಂದೇ ಗುರುತಿಸಲಾಗಿದೆ ಎಂಬುದರತ್ತಲೂ ನ್ಯಾಯಾಲಯವು ಬೆಳಕು ಚೆಲ್ಲಿದೆ.
ವ್ಯಾಪಕ ಬಳಕೆ ಮತ್ತು ಪರಂಪರೆ ಇದ್ದರೂ ಉರ್ದು ಭಾಷೆಯನ್ನು ಇತ್ತೀಚಿನ ದಿನಗಳಲ್ಲಿ ಪೂರ್ವಗ್ರಹದಿಂದ ನೋಡಲಾಗುತ್ತಿದೆ. ಮುಸ್ಲಿಮರ ಭಾಷೆ, ‘ಶತ್ರುವಿನ ಭಾಷೆ’ ಎಂದೂ ಉರ್ದುವನ್ನು ಪರಿಗಣಿಸಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಪ್ರತಿಯೊಂದನ್ನೂ ದೂರವಿರಿಸುವ ಮನಃಸ್ಥಿತಿಯ ಫಲವಾಗಿ ಭಾಷೆಯನ್ನು ಹೀಗೆ ನೋಡಲಾಗುತ್ತಿದೆ. ಜನರನ್ನು ವಿಭಜಿಸುವ ಪ್ರತಿಯೊಂದು ವಿಚಾರದ ಹಾಗೆಯೇ ಇದು ಕೂಡ ಅಜ್ಞಾನ ಮತ್ತು ಪೂರ್ವಗ್ರಹದ ಪರಿಣಾಮ ಎಂದು ಹೇಳಬಹುದು. ನಮ್ಮ ದೇಶದಲ್ಲಿ ಭಾಷೆಯು ಅತ್ಯಂತ ಭಾವನಾತ್ಮಕ ವಿಚಾರಗಳಲ್ಲಿ ಒಂದು. ಹಾಗಾಗಿ, ಭಾಷೆಯನ್ನು ಕೂಡ ಅಸ್ಮಿತೆಯ ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ನ್ಯಾಯಾಲಯದ ಮುಂದೆ ಬಂದಿರುವ ಪ್ರಕರಣದ ಮೂಲವನ್ನು ನೋಡಿದರೆ ಈ ಪೂರ್ವಗ್ರಹ ಎಷ್ಟು ಗಾಢವಾಗಿ ಬೇರುಬಿಟ್ಟಿದೆ ಎಂಬುದು ಅರಿವಾಗುತ್ತದೆ. ಮಹಾರಾಷ್ಟ್ರದ ಅಕೋಲ ಜಿಲ್ಲೆಯ ಪಾತುರ್ ನಗರ ಸ್ಥಳೀಯಾಡಳಿತ ಸಂಸ್ಥೆಯ ದ್ವಿಭಾಷಾ ಸೂಚನಾ ಫಲಕವೊಂದರ ಕುರಿತಂತೆ ವಿವಾದ ಸೃಷ್ಟಿಯಾಗಿತ್ತು. ಫಲಕದಲ್ಲಿ ಮರಾಠಿ ಮತ್ತು ಉರ್ದು ಭಾಷೆಯನ್ನು ಬಳಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಯ ಮಾಜಿ ಸದಸ್ಯರು ಉರ್ದು ಬಳಕೆಯನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ಅದು ಸುಪ್ರೀಂ ಕೋರ್ಟ್‌ವರೆಗೆ ಬಂದಿದೆ. ಭಾಷೆಯ ಸ್ಥಾನಮಾನದ ಕುರಿತು ಸುಪ್ರೀಂ ಕೋರ್ಟ್ ಸರಿಯಾದ ನಿಲುವನ್ನೇ ತಳೆದಿದೆ.
ನ್ಯಾಯಾಲಯವು ಕೊಟ್ಟ ಸಂದೇಶವು ಬಹಳ ಸ್ಪಷ್ಟವಾಗಿಯೂ ದೃಢವಾಗಿಯೂ ಇದೆ. ‘ಭಾಷೆ ಎಂಬುದು ಧರ್ಮವಲ್ಲ... ಭಾಷೆಯು ಸಂಸ್ಕೃತಿ... ಹತ್ತಾರು ಭಾಷೆಗಳು ಮತ್ತು ಇತರ ವೈವಿಧ್ಯಗಳನ್ನು ಗೌರವಿಸಲು, ಸಂಭ್ರಮಿಸಲು ನಾವು ಕಲಿಯಬೇಕಿದೆ’ ಎಂದು ನ್ಯಾಯಾಲಯ ಹೇಳಿದೆ. ಉರ್ದು ಭಾಷೆಯು ‘ಗಂಗಾ– ಜಮುನಿ ತೆಹಜೀಬ್’ನ ಅತ್ಯುತ್ಕೃಷ್ಟ ಮಾದರಿಯಾಗಿದೆ ಎಂದು ಕೋರ್ಟ್ ಹೇಳಿದೆ. ಉರ್ದುವನ್ನು ಮುಸ್ಲಿಮರ ಭಾಷೆ ಎಂದು ನೋಡುವುದು ವಾಸ್ತವವನ್ನು ಮರೆಮಾಚುವ ಕರುಣಾಜನಕ ಸ್ಥಿತಿಯಾಗಿದೆ; ವೈವಿಧ್ಯದಲ್ಲಿ ಏಕತೆ ಎಂಬುದಕ್ಕೆ ಮಾಡುವ ಅವಮಾನವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಹಿಂದಿ ಮತ್ತು ಉರ್ದು ಎರಡೂ ಭಾಷೆಗಳು ಒಂದೇ ಭಾಷಿಕ ಮೂಲದಿಂದ ಅಭಿವೃದ್ಧಿ ಹೊಂದಿವೆ. ನಮ್ಮ ದೇಶದಲ್ಲಿ ಉರ್ದು ಭಾಷೆಯನ್ನು ಶತಮಾನಗಳಿಂದ ಮಾತನಾಡಲಾಗುತ್ತಿದೆ. ಈ ಭಾಷೆಯನ್ನು ತಿರಸ್ಕರಿಸುವುದು ಮತ್ತು ನಿಂದಿಸುವುದು ದೇಶದಲ್ಲಿ ವ್ಯಾಪಕವಾಗಿ ಕಾಣಿಸುತ್ತಿರುವ ವಿಭಜನೆಯ ಮನಃಸ್ಥಿತಿಯ ಭಾಗವಾಗಿದೆ. ಉರ್ದು ಸೇರಿದಂತೆ ಭಾರತದ ಭಾಷೆಗಳು, ಧರ್ಮಗಳು, ಜನಾಂಗಗಳು, ಇತರ ವೈವಿಧ್ಯಗಳು ನಮ್ಮ ಸಂಸ್ಕೃತಿಯನ್ನು ರೂಪಿಸಿವೆ. ಈ ಮಹತ್ವದ ವಿಚಾರವನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.