ADVERTISEMENT

ಸಂಪಾದಕೀಯ | ಕೃಷಿ ಬಿಕ್ಕಟ್ಟು: ಅನುಷ್ಠಾನಕ್ಕೆ ಸಿಗಬೇಕಿದೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 3:08 IST
Last Updated 3 ಜೂನ್ 2020, 3:08 IST
   

ಲಾಕ್‌ಡೌನ್‌ನಿಂದ ಬೆಳೆ ನಷ್ಟ ಅನುಭವಿಸಿದ್ದ ರೈತವರ್ಗಕ್ಕೆ, ‘ಈ ಬಾರಿ ಮುಂಗಾರು ಉತ್ತಮವಾಗಿ ಇರಲಿದೆ’ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯು ತುಸು ಸಮಾಧಾನವನ್ನೇನೋ ತಂದಿದೆ. ಈಗಾಗಲೇ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿ, ಕೃಷಿ ಚಟುವಟಿಕೆಗಳೂ ಗರಿಗೆದರಿವೆ.

ಎರಡು–ಮೂರು ತಿಂಗಳುಗಳಿಂದ ಅನುಭವಿಸಿದ್ದ ನೋವನ್ನೆಲ್ಲ ಮರೆತು ಕೃಷಿಕ ಮತ್ತೆ ಹೊಲದ ಕಡೆಗೆ ಆಶಾಭಾವದಿಂದ ಮುಖ ಮಾಡಿದ್ದಾನೆ. ರೈತ ಸಮುದಾಯವು ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿಯೇ ಕೇಂದ್ರ ಸರ್ಕಾರವು ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ಎಳ್ಳು, ಶೇಂಗಾ, ಸೂರ್ಯಕಾಂತಿ, ಹತ್ತಿ ಸೇರಿದಂತೆ 14 ಬೆಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸುವ ತೀರ್ಮಾನ ಮಾಡಿದೆ.

ಹಲವು ಬೆಳೆಗಳಿಗೆ ಬೆಂಬಲ ಬೆಲೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿರುವುದು ಗಮನಾರ್ಹ. ಬ್ಯಾಂಕ್‌ನಿಂದ ಪಡೆದ ₹ 3 ಲಕ್ಷದವರೆಗಿನ ಅಲ್ಪಾವಧಿ ಕೃಷಿ ಸಾಲದ ಮರುಪಾವತಿ ಗಡುವನ್ನು ಆಗಸ್ಟ್‌ 31ರವರೆಗೆ ವಿಸ್ತರಿಸಿದೆ. ಈ ಗಡುವಿನೊಳಗೆ ಮರುಪಾವತಿ ಮಾಡಿದರೆ ಬಡ್ಡಿ ರಿಯಾಯಿತಿಯೂ ದೊರೆಯಲಿದೆ ಎಂದು ಪ್ರಕಟಿಸಲಾಗಿದೆ.

ADVERTISEMENT

ಬೆಳೆ ನಷ್ಟದಿಂದ ಕಂಗೆಟ್ಟಿದ್ದ ರೈತನ ಮುಂದೆ ಈಗ ಸಾಲ ಮರುಪಾವತಿಯ ದೊಡ್ಡ ಸವಾಲೂ ಇದೆ. ಜತೆಗೆ ಬಿತ್ತನೆಗೆ ಅಗತ್ಯವಾದ ಬೀಜ–ಗೊಬ್ಬರದ ವ್ಯವಸ್ಥೆಯನ್ನೂ ಮಾಡಿಕೊಂಡು, ಕೃಷಿ ವೆಚ್ಚವನ್ನು ಹೊಂದಿಸಿಕೊಳ್ಳಬೇಕಿದೆ.

ಕೊರೊನಾ ಬಿಕ್ಕಟ್ಟಿನಿಂದ ರಾಜ್ಯದ ಕೃಷಿ ಮಾರುಕಟ್ಟೆ ವ್ಯವಸ್ಥೆಯ ಎಲ್ಲ ಹುಳುಕುಗಳು ಬಟಾಬಯಲಾಗಿವೆ. ಮಾರುಕಟ್ಟೆ ವ್ಯವಸ್ಥೆ ಸ್ತಬ್ಧವಾದ ಕಾರಣ, ಕೊಯ್ಲಿಗೆ ಬಂದ ಹಣ್ಣು, ತರಕಾರಿಯು ಬೆಳೆದವರ ಕಣ್ಣೆದುರೇ ಮಣ್ಣುಪಾಲಾಗಿವೆ. ಹೂವಿನ ಬೆಳೆಗಾರರು, ಹೈನು ಕೃಷಿಕರು ಕೂಡ ಇಂತಹ ಸಂಕಟದಿಂದ ಹೊರತಾಗಿಲ್ಲ. ಈಗ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಸಣ್ಣ ರೈತರು ಪರಿತಪಿಸುವಂತಾಗಿದೆ.

ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾದ ಹಾಗೂ ರೈತರಿಗೆ ತುರ್ತು ಸಂದರ್ಭದಲ್ಲಿ ನೆರವಾಗುತ್ತಿದ್ದ ಸಹಕಾರ ಸಂಘಗಳು ಸಹ ಮರುಪಾವತಿ ಸಮಸ್ಯೆ ಎದುರಿಸುತ್ತಿವೆ. ಇಂತಹ ಸನ್ನಿವೇಶದಲ್ಲಿ ಬೆಂಬಲ ಬೆಲೆ ಹೆಚ್ಚಳದಿಂದ ರೈತರಿಗೆ ತಕ್ಷಣಕ್ಕೆ ಪ್ರಯೋಜನವಾಗದು. ಮುಂದಿನ 3–4 ತಿಂಗಳ ಬಳಿಕ ಮುಂಗಾರಿನ ಬೆಳೆ ಬಂದು, ಅದನ್ನು ಮಾರಾಟ ಮಾಡುವಾಗಲಷ್ಟೇ ಕೇಂದ್ರದ ಬೆಂಬಲ ಬೆಲೆ ಹೆಚ್ಚಳದ ನಿರ್ಧಾರದಿಂದ ನೆರವಾದೀತು. ಆದರೆ, ಸದ್ಯದ ಸಂಕಷ್ಟದಿಂದ ಹೊರಬಂದು ಬೆಳೆ ಬೆಳೆಯುವುದೇ ಈಗ ಸವಾಲು.

ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಘೋಷಿಸಿದ ₹1 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಕೃಷಿ ಸಮುದಾಯದ ಬಿಕ್ಕಟ್ಟಿಗೆ ಸ್ವಲ್ಪಮಟ್ಟಿಗಾದರೂ ಪರಿಹಾರ ಒದಗಿಸಬಹುದು ಎಂಬ ನಿರೀಕ್ಷೆ ಇದೆ. ಘೋಷಣೆಗಳು ಕೂಡಲೇ ಅನುಷ್ಠಾನಕ್ಕೆ ಬಂದು, ಫಲಾನು ಭವಿಗಳಿಗೆ ಕಾಲಮಿತಿಯೊಳಗೆ ಅದರ ಪ್ರಯೋಜನ ದೊರೆತರೆ ಆ ನಿರೀಕ್ಷೆ ಫಲಿಸುತ್ತದೆ. ಅದು ಫಲಿಸುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.

ಪರಿಹಾರ ರೂಪದಲ್ಲಿ ಸಿಗಬೇಕಾದ ಹಣ ಎಲ್ಲ ಅರ್ಹ ಕೃಷಿಕರಿಗೆ ಸಕಾಲದಲ್ಲಿ ಸಿಗಬೇಕು. ಅವರು ಬಿತ್ತನೆ ಬೀಜ, ಗೊಬ್ಬರ ಖರೀದಿಸಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಹೆಚ್ಚಿಸಿ, ಅಲ್ಲಿಗೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸಿದರೆ ಅದರಿಂದ ಹೆಚ್ಚಿನ ಪ್ರಯೋಜನವಾಗದು. ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಎಲ್ಲ ಬೆಳೆಗಳಿಗೂ ಸೂಕ್ತ ಮಾರುಕಟ್ಟೆ ಸಿಗುವಂತಹ ವ್ಯವಸ್ಥೆಯನ್ನು ರೂಪಿಸಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು.

ಭಾರತದಲ್ಲಿ ಕೃಷಿ ಎಂದರೆ ಮುಂಗಾರು ಮಾರುತದೊಂದಿಗಿನ ಜೂಜಾಟ ಎಂಬ ಮಾತಿದೆ. ಅದು ಮಾರುಕಟ್ಟೆಯೊಂದಿಗಿನ ಜೂಜಾಟವೂ ಆಗಬಾರದು. ಕೃಷಿಕರ ಬಗೆಗಿನ ಕಾಳಜಿಯು ತೋರಿಕೆಯದಲ್ಲ ಎಂಬುದನ್ನು ನಿರೂಪಿಸುವಂತೆ ಸರ್ಕಾರಗಳು ನಿರಂತರ ಎಚ್ಚರ ವಹಿಸಬೇಕು, ಬದ್ಧತೆ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.