ADVERTISEMENT

ಪಾಕ್ ಸುಪ್ರೀಂ ಕೋರ್ಟ್ ಮಹತ್ವದತೀರ್ಪು : ಆಸಿಯಾಗೆ ರಕ್ಷಣೆ ನೀಡಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 20:00 IST
Last Updated 4 ನವೆಂಬರ್ 2018, 20:00 IST
325
325   

ಗಲ್ಲುಶಿಕ್ಷೆಗೆ ಒಳಗಾಗಿದ್ದ ಆಸಿಯಾ ಬೀಬಿಯನ್ನು ಆರೋಪಮುಕ್ತಗೊಳಿಸಿ ಪಾಕಿಸ್ತಾನ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಧರ್ಮನಿಂದನೆಗಾಗಿ 2010ರಲ್ಲಿ ಈ ಕ್ರೈಸ್ತ ಕೃಷಿ ಕಾರ್ಮಿಕ ಮಹಿಳೆಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಕೆಳ ನ್ಯಾಯಾಲಯಗಳಲ್ಲಿ ದೃಢಪಡಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ರದ್ದು ಮಾಡಿ ಆಸಿಯಾ ಬಿಡುಗಡೆಗೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶಿಸಿರುವುದು ಪಾಕಿಸ್ತಾನದಾದ್ಯಂತ ಧಾರ್ಮಿಕ ಮೂಲಭೂತವಾದಿಗಳ ಪ್ರತಿಭಟನೆಗೆ ಕಾರಣವಾಯಿತು. ಈ ಪ್ರಕರಣದಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಹತ್ಯೆಗೆ ಕರೆನೀಡುವ ಮೂಲಕ ಧಾರ್ಮಿಕ ನಾಯಕರು ತಮ್ಮ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಜೊತೆಗೆ ಪಾಕಿಸ್ತಾನ ಸೇನೆಯಲ್ಲಿರುವ ಎಲ್ಲಾ ಮುಸ್ಲಿಮರೂ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಬಂಡೇಳಬೇಕು ಎಂಬಂಥ ಕರೆಯನ್ನೂ ನೀಡಲಾಯಿತು.

ತನ್ನ ತೀರ್ಪಿನಲ್ಲಿ ಧರ್ಮನಿಂದನೆ ಕಾನೂನನ್ನೇನೂ ಸುಪ್ರೀಂ ಕೋರ್ಟ್ ಪ್ರಶ್ನಿಸಿಲ್ಲ ಎಂಬುದನ್ನು ಗಮನಿಸಬೇಕು. ಆದರೆ, ಈ ಪ್ರಕರಣದಲ್ಲಿ ನೀಡಲಾದ ಮೂಲ ದೂರಿನಲ್ಲಿ ಸತ್ಯದ ಜೊತೆ ಸುಳ್ಳೂ ಸೇರ್ಪಡೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ಹೀಗಿದ್ದೂ ಈಗ ತೀರ್ಪು ನೀಡಿದ ನ್ಯಾಯಮೂರ್ತಿಗಳೂ ಧಾರ್ಮಿಕ ಮೂಲಭೂತವಾದಿಗಳಿಂದ ಹತ್ಯೆಯ ಬೆದರಿಕೆ ಎದುರಿಸುತ್ತಿದ್ದಾರೆ. ತೀರ್ಪು ಪ್ರಕಟವಾದ ನಂತರ, ಇಸ್ಲಾಂ ಆದರ್ಶಗಳನ್ನು ಮುಂದಿಟ್ಟುಕೊಂಡು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಜನಸಮೂಹಕ್ಕೆ ಸರಿಯಾದ ಸಂದೇಶವನ್ನೇ ರವಾನಿಸಿದ್ದರು.

‘ಇಸ್ಲಾಂ ಹೆಸರಲ್ಲಿ ರೌಡಿಗಳು ಈ ರಾಷ್ಟ್ರವನ್ನು ಅಪಹರಿಸಲಾಗದು. ಈ ವಿಚಾರದಲ್ಲಿ ರಾಷ್ಟ್ರದಲ್ಲಿ ಗೊಂದಲ ಮೂಡಿಸಿದಲ್ಲಿ ಆ ಪ್ರಕಾರವೇ ಅವರನ್ನು ನಿರ್ವಹಿಸಲಾಗುವುದು’ ಎಂದು ಸರಿಯಾಗಿಯೇ ಪ್ರಧಾನಿ ಎಚ್ಚರಿಕೆ ನೀಡಿದ್ದರು. ಪ್ರತಿರೋಧ ಹಾಗೂ ರೌಡಿತನದ ಬಗ್ಗೆ ಇರುವ ಸ್ಪಷ್ಟ ಗೆರೆಯನ್ನು ಗುರುತಿಸಿದ್ದ ಖಾನ್ ಅವರು ‘ನಯೀ ಪಾಕಿಸ್ತಾನದ’ ಆದರ್ಶವನ್ನು ಅನಾವರಣಗೊಳಿಸಿದಂತೆ ಭಾಸವಾಗಿತ್ತು. ಏಕೆಂದರೆ, ಕಳೆದ ಸೆಪ್ಟೆಂಬರ್ತಿಂಗಳಲ್ಲಷ್ಟೇ ಮುಲ್ಲಾಗಳ ಬೇಡಿಕೆಗಳಿಗೆ ಮಣಿದು, ಅಹ್ಮದೀ ಧಾರ್ಮಿಕ ಅಲ್ಪಸಂಖ್ಯಾತ ಗುಂಪಿಗೆ ಸೇರಿದ ಪ್ರಸಿದ್ಧ ಅರ್ಥಶಾಸ್ತ್ರಜ್ಞರೊಬ್ಬರನ್ನು ತಮ್ಮ ಆರ್ಥಿಕ ಸಲಹಾ ಮಂಡಳಿಯಿಂದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೊರಗಿಟ್ಟಿದ್ದು ವಿವಾದವಾಗಿತ್ತು. ಹೀಗಾಗಿ ಗಲಭೆಕೋರರ ವಿರುದ್ಧ ಕಿಡಿ ಕಾರಿ ‘ಕೋರ್ಟ್ ತೀರ್ಪು ಗೌರವಿಸಿ’ ಎಂದು ಇಮ್ರಾನ್ ಹೇಳಿದ್ದು ಸಮಾಧಾನಕರ ಸಂಗತಿಯಾಗಿತ್ತು. ಆದರೆ ಈಗ, ಧರ್ಮನಿಂದನೆ ಪರ ಮಾತನಾಡುವ ಮೂಲಭೂತವಾದಿಗಳ ಜೊತೆ ಅವರ ಸರ್ಕಾರ ಮತ್ತೆ ಸಂಧಾನ ಮಾಡಿಕೊಂಡಿರುವುದು ವಿಷಾದನೀಯ.

ADVERTISEMENT

ಈ ಸಂಧಾನದ ಪ್ರಕಾರ, ಆಸಿಯಾ ದೇಶದಿಂದ ಹೊರ ಹೋಗುವುದು ಸಾಧ್ಯವಿಲ್ಲ. ಹೀಗಾಗಿ, ‘ಇಂತಹ ಒಪ್ಪಂದದಿಂದ ಆಸಿಯಾ ಮರಣದಂಡನೆಗೆ ಮತ್ತೆ ಸಹಿ ಹಾಕಿದಂತಾಗಿದೆ’ ಎಂಬಂಥ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹೊಸ ಬೆಳವಣಿಗೆ ದುರಂತಮಯವಾದದ್ದು. ಈಗಾಗಲೇ ಆಸಿಯಾ ಪರ ವಾದಿಸಿದ್ದ ವಕೀಲರು, ಹತ್ಯೆಯ ಭೀತಿಯಿಂದ ದೇಶ ತ್ಯಜಿಸಿದ್ದಾರೆ ಎಂಬುದೂ ವರದಿಯಾಗಿದೆ.

‘ಸಹಿಷ್ಣುತೆಯೇ ಇಸ್ಲಾಂ ಧರ್ಮದ ಮೂಲಭೂತ ತತ್ವವಾಗಿದೆ. ಧರ್ಮವು ಅನ್ಯಾಯ ಮತ್ತು ದಬ್ಬಾಳಿಕೆಯನ್ನು ಖಂಡಿಸುತ್ತದೆ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ತೀರ್ಪು ಓದುವಾಗ ಹೇಳಿದ್ದಾರೆ. ಆಸಿಯಾ ಪರವಾಗಿ ಈ ಹಿಂದೆ ಮಾತನಾಡಿದ್ದ ಪಂಜಾಬ್‌ ಪ್ರಾಂತ್ಯದ ಗವರ್ನರ್ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ ಸಚಿವರೊಬ್ಬರನ್ನು ಈ ಹಿಂದೆ ಹತ್ಯೆ ಮಾಡಲಾಗಿತ್ತು.

ಧರ್ಮನಿಂದನೆಯ ಆರೋಪ ಹೊರಿಸಿ ಯಾವುದೇ ನ್ಯಾಯಾಂಗ ಪ್ರಕ್ರಿಯೆ ಅನುಸರಿಸದೇ 1990ರ ದಶಕದಿಂದ ಈವರೆಗೆ 62 ಜನರನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂಬುದು ಕಳವಳಕಾರಿ. ಪಾಕಿಸ್ತಾನದಲ್ಲಿ ಆಸಿಯಾ ಸುರಕ್ಷಿತವಾಗಿರುವುದು ಸಾಧ್ಯವಿಲ್ಲದಿರುವುದರಿಂದ ಬೇರೆ ದೇಶಗಳು ಆಕೆಗೆ ಆಶ್ರಯ ನೀಡಬೇಕೆಂಬ ಮನವಿಯನ್ನು ಆಕೆಯ ಬಂಧುಗಳು ಮಾಡುತ್ತಿದ್ದಾರೆ. ಈ ಮನವಿಗೆ ಕಿವಿಗೊಡಬೇಕಾದುದು ಮಾನವೀಯ ಧರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.