‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತಾ ಆಸ್ತಿಗಳಾಗಿ ಪರಿವರ್ತಿಸುವ ಸರ್ಕಾರದ ನಿರ್ಧಾರ ಒಳ್ಳೆಯದು. ಆದರೆ, ಈ ಪ್ರಕ್ರಿಯೆ ಜನಸಾಮಾನ್ಯರ ಪಾಲಿಗೆ ಹೊರೆ ಆಗಬಾರದು.
ಬೆಂಗಳೂರು ಮಹಾನಗರದ ‘ಬಿ’ ಖಾತಾ ಆಸ್ತಿಗಳನ್ನು ನಿಗದಿತ ಶುಲ್ಕ ಪಡೆಯುವ ಮೂಲಕ ‘ಎ’ ಖಾತಾ ಆಸ್ತಿಗಳನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವು ಸ್ವಾಗತಾರ್ಹವಾದುದು. ವಾಸ್ತವವಾಗಿ ಬಲು ಹಿಂದೆಯೇ ಆಗಬೇಕಾಗಿದ್ದ ಕೆಲಸ ಇದಾಗಿತ್ತು. ಲಕ್ಷಾಂತರ ಆಸ್ತಿಗಳು ಇದರಿಂದ ಕಾನೂನುಬದ್ಧಗೊಳ್ಳಲಿದ್ದು, ಈ ಆಸ್ತಿಗಳ ಮಾಲೀಕರು ನಿಟ್ಟುಸಿರು ಬಿಡಲಿದ್ದಾರೆ. ಒಂದೆಡೆ, ದಾಖಲೆಗಳ ನಿರ್ವಹಣೆ ಸುಗಮವಾಗಲಿದ್ದರೆ, ಇನ್ನೊಂದೆಡೆ, ಪಾಲಿಕೆಗಳ ವರಮಾನವೂ ಹೆಚ್ಚಲಿದೆ. ಅತಂತ್ರ ಸ್ಥಿತಿಯಲ್ಲಿದ್ದ ನಗರದ ಸುಮಾರು 7.5 ಲಕ್ಷ ಆಸ್ತಿಗಳಿಗೆ ‘ಎ’ ಖಾತೆ ಸಿಗಲಿರುವ ಕಾರಣ ಅಕ್ರಮ–ಸಕ್ರಮ ಎಂದು ಭಾಗ ಮಾಡಿ ನೋಡುವ ಪರಿಪಾಟಕ್ಕೂ ಕೊನೆ ಬೀಳುವ ನಿರೀಕ್ಷೆ ಇದೆ. ಹೀಗಿದ್ದೂ ಖಾತೆಗಳ ಪರಿವರ್ತನೆ ಮಾಡುವುದಕ್ಕಾಗಿ ಸರ್ಕಾರವು ನಿಗದಿಪಡಿಸಿರುವ ಮಾರ್ಗಸೂಚಿ ದರದ ಶೇ 5ರಷ್ಟು ಶುಲ್ಕವು ಮಧ್ಯಮವರ್ಗದವರ ಪಾಲಿಗೆ ನುಂಗಲಾರದ ತುತ್ತಾಗಿದೆ. ಒಂದು ಉದಾಹರಣೆ ತೆಗೆದುಕೊಳ್ಳುವುದಾದರೆ, ಪ್ರತಿ ಚದರ ಅಡಿಗೆ ₹7,000 ದರ ಇರುವ ಪ್ರದೇಶದ 30X40 ಚದರ ಅಡಿ ವಿಸ್ತೀರ್ಣದ ನಿವೇಶನಕ್ಕೆ ‘ಎ’ ಖಾತೆ ಪಡೆಯಲು ₹4.2 ಲಕ್ಷದಷ್ಟು ವೆಚ್ಚವಾಗಲಿದೆ. ತಮ್ಮ ಜೀವಮಾನದ ಉಳಿತಾಯದಿಂದ ನಿವೇಶನ ಖರೀದಿಸಿದ ಕುಟುಂಬಗಳ ಪಾಲಿಗೆ ಇದೊಂದು ದೊಡ್ಡ ಹೊರೆ. ಇಂತಹ ಆಸ್ತಿಗಳ ಮಾಲೀಕರು ನೋಂದಣಿ ಸಮಯದಲ್ಲಿ ಆಗಿನ ಮಾರ್ಗಸೂಚಿ ದರದ ಪ್ರಕಾರ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದಾರೆ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಬೇಕು.
‘ಬಿ’ ಖಾತಾ ಆಸ್ತಿಗಳ ಬಿಕ್ಕಟ್ಟು ಕೇವಲ ನಾಗರಿಕರಿಂದ ಸೃಷ್ಟಿಯಾದ ಸಮಸ್ಯೆಯಲ್ಲ. ಇಂತಹ ಆಸ್ತಿಗಳ ನೋಂದಣಿಗೆ ಅವಕಾಶ ಕೊಟ್ಟು, ತೆರಿಗೆ ಸಂಗ್ರಹ ಮಾಡಿದ ಸರ್ಕಾರ ಸಹ ಈ ಸಮಸ್ಯೆಯ ಹೊಣೆಯನ್ನು ಹೊರಬೇಕು. ಇದುವರೆಗೆ ಆಡಳಿತದ ಹೊಣೆ ಹೊತ್ತವರೆಲ್ಲ ಈ ಪ್ರಮಾದದಲ್ಲಿ ಭಾಗೀದಾರರು. ಲಾಗಾಯ್ತಿನಿಂದಲೂ ಇಂತಹ ಆಸ್ತಿಗಳ ನೋಂದಣಿಗೆ ಸರ್ಕಾರವೇ ಮುಂದೆ ನಿಂತು ಅವಕಾಶ
ಮಾಡಿಕೊಟ್ಟು, ಈಗ ದಂಡನೆಯ ಹಾದಿ ಹಿಡಿದಿರುವುದು ಸರಿಯಲ್ಲ. ಕಾನೂನು ಬದ್ಧ ಆಗಿರದ ಆಸ್ತಿಗಳ ನೋಂದಣಿಗೆ ಸರ್ಕಾರವು ಮೊದಲಿನಿಂದಲೂ ಅನುಮತಿಯನ್ನೇ ನೀಡಬಾರದಿತ್ತು. ಪ್ರಸ್ತುತ ಅವ್ಯವಸ್ಥೆಯು ದಶಕಗಳ ಆಡಳಿತಾತ್ಮಕ ನಿರಾಸಕ್ತಿ ಮತ್ತು ಅನುಕೂಲಸಿಂಧು ರಾಜಕಾರಣದ ಪರಿಣಾಮವಾಗಿದೆ. ಯೋಜಿತ ಅಭಿವೃದ್ಧಿ ಮತ್ತು ನಾಗರಿಕ ಶಿಸ್ತಿಗಿಂತಲೂ ಮತಗಳು ಮತ್ತು ಆದಾಯವೇ ಆದ್ಯತೆ ಪಡೆದುದರ ಫಲಶ್ರುತಿ ಇದು. ಅಲ್ಲದೆ, ಯೋಜನೆಯ ವ್ಯಾಪ್ತಿ ಕೂಡ ಸೀಮಿತವಾಗಿದೆ. ‘ಬಿ’ ಖಾತಾಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ನಲ್ಲಿರುವ ಸಾವಿರಾರು ಗೃಹಗಳನ್ನು ಈ ಯೋಜನೆಯ ಪರಿಧಿಯಿಂದ ಹೊರಗೆ ಇಡಲಾಗಿದೆ. ಖಾಲಿ ನಿವೇಶನಗಳು ಮತ್ತು ಏಕ-ಘಟಕ ಕಟ್ಟಡ ಹೊಂದಿರುವ ನಿವೇಶನಗಳಿಗೆ ಮಾತ್ರ ಪ್ರಯೋಜನ ಸಿಗಲಿದೆ. ಅದೇ ರೀತಿ, ನಗರದ ಹೊರವಲಯದ ಪ್ರದೇಶಗಳಲ್ಲಿರುವ ಹಲವು ಬಡಾವಣೆಗಳು ಪಂಚಾಯಿತಿಗಳ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಆಸ್ತಿಗಳಿಗೂ ‘ಎ’ ಖಾತಾ ಪಡೆಯುವ ಅದೃಷ್ಟವಿಲ್ಲ. ಅಲ್ಲಿನ ಖರೀದಿದಾರರು ಸಹ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ. ‘ಬಿ’ ಖಾತಾ ಸಮಸ್ಯೆ ಎದುರಿಸುತ್ತಿರುವ ಎಲ್ಲಾ ಆಸ್ತಿಗಳನ್ನೂ ಯೋಜನೆಯ ವ್ಯಾಪ್ತಿಗೆ ತರಬೇಕು.
ಖಾತೆ ಪರಿವರ್ತನೆಗೆ ಅರ್ಜಿ ಹಾಕಲು ನವೆಂಬರ್ 1ರಿಂದ ನೂರು ದಿನಗಳ ಕಾಲಾವಕಾಶ ನೀಡಲಾಗಿದೆ. ಬೇಕಾದ ದಾಖಲೆಗಳನ್ನು ಹೊಂದಿಸಿಕೊಳ್ಳಲು ಮತ್ತು ಅಗತ್ಯ ಪ್ರಮಾಣದ ಶುಲ್ಕ ಭರಿಸಲು ನಾಗರಿಕರಿಗೆ ಹೆಚ್ಚಿನ ಸಮಯ ಬೇಕಾಗಿರುವುದರಿಂದ ಕೊಟ್ಟ ಕಡಿಮೆ ಕಾಲದ ಮಿತಿ ಕೂಡ ಒಂದು ದೊಡ್ಡ ಸವಾಲು. ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತಂದಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಭಾರಿ ಪ್ರಮಾಣದ ಶುಲ್ಕವು ಜನರ ಭಾಗವಹಿಸುವಿಕೆಗೆ ಉತ್ತೇಜನ ನೀಡುವುದಿಲ್ಲ. ಅದರಿಂದ ಯೋಜನೆಯ ಉದ್ದೇಶವೇ ವ್ಯರ್ಥವಾದಂತಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಬಹುದಾದರೂ, ಅದನ್ನು ಕಚೇರಿಗಳಲ್ಲೇ ಪೂರ್ಣಗೊಳಿಸುವಂತಹ ಒತ್ತಡಕ್ಕೆ ಜನ ಸಿಲುಕುತ್ತಾರೆ. ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಅವರು ಲಂಚ ನೀಡುವ ಪ್ರಮೇಯವೂ ಬರುತ್ತದೆ. ಖಾತಾ ಪರಿವರ್ತನೆಯು ಒಂದು ಒಳ್ಳೆಯ ಹೆಜ್ಜೆಯಾಗಿದ್ದರೂ ಯೋಜನೆಯ ಅನುಷ್ಠಾನದಲ್ಲಿರುವ ಲೋಪಗಳ ಕಡೆಗೆ ಸರ್ಕಾರ ಗಮನಹರಿಸಬೇಕು. ಶುಲ್ಕದ ಹೊರೆ ಕಡಿತ, ಕಾಲಮಿತಿ ಹೆಚ್ಚಳ ಮತ್ತು ಜನರ ಸುಲಿಗೆ ತಪ್ಪಿಸುವಂತಹ ಉಪಕ್ರಮಗಳಿಗೆ ಮುಂದಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.