ADVERTISEMENT

ಮದಗಜ ಬಿಸಿಸಿಐಗೆ ಅಂಕುಶವಿಟ್ಟ ‘ಮದ್ದು’

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 20:00 IST
Last Updated 11 ಆಗಸ್ಟ್ 2019, 20:00 IST
   

ಕಾಲ ಬದಲಾಗುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ಗೆ (ಐಸಿಸಿ) ಹೆಚ್ಚು ಆದಾಯ ನೀಡುವ ಸಂಸ್ಥೆ ಮತ್ತು ವಿಶ್ವದ ಶ್ರೀಮಂತ ಕ್ರೀಡಾ ಮಂಡಳಿಗಳ ಯಾದಿಯಲ್ಲಿ ತಾನೂ ಇದ್ದೇನೆ ಎಂಬ ‘ಮದ’ದಲ್ಲಿ ಮೆರೆಯುತ್ತಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ ಮಂಡಿಯೂರಿದೆ. ಕ್ರಿಕೆಟ್‌ ಆಟಗಾರರ ಉದ್ದೀಪನ ಮದ್ದು ಪರೀಕ್ಷೆಯನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದಿಂದ (ನಾಡಾ) ಮಾಡಿಸಲು ಸಮ್ಮತಿ ಸೂಚಿಸಿದೆ. ತಾನು ಸರ್ಕಾರದಿಂದ ಅನುದಾನ ಪಡೆಯುತ್ತಿಲ್ಲ, ಸ್ವಾಯತ್ತ ಸಂಸ್ಥೆ ಎಂದು ಪ್ರತಿಪಾದಿಸುತ್ತಿದ್ದ ಬಿಸಿಸಿಐ, ಸರ್ಕಾರದಿಂದ ಅಂತರ ಕಾಪಾಡಿಕೊಂಡಿತ್ತು. ಅಲ್ಲದೆ ನಾಡಾದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳು ಇಲ್ಲವೆಂದು ಹೇಳಿತ್ತು. ಅದಕ್ಕಾಗಿ ಸ್ವೀಡನ್‌ ಮೂಲದ ಸಂಸ್ಥೆಯ ಸಹಯೋಗದಲ್ಲಿ ಪ್ರತ್ಯೇಕ ವ್ಯವಸ್ಥೆ
ಯೊಂದನ್ನು ಕೂಡ ರೂಪಿಸಿಕೊಂಡಿತ್ತು. ಆಟಗಾರರು ತಮ್ಮ ಖಾಸಗಿ ಓಡಾಟಗಳ ವಿವರಗಳನ್ನು ಒಪ್ಪಿಸಬೇಕಾಗಿದ್ದ ‘ವೇರ್‌ಅಬೌಟ್’ ನಿಯಮದ ಬಗ್ಗೆಯೂ ತಕರಾರು ಎತ್ತಿತ್ತು.

ಈ ವಿಷಯಗಳನ್ನೇ ಮುಂದಿಟ್ಟುಕೊಂಡು ನಾಡಾದಿಂದ ದೂರ ಉಳಿಯುತ್ತಿದ್ದ ಬಿಸಿಸಿಐಗೆ ಕೊನೆಗೂ ಕೇಂದ್ರ ಕ್ರೀಡಾ ಇಲಾಖೆ ಮತ್ತು ಐಸಿಸಿ ಕಡಿವಾಣ ಹಾಕಿವೆ. ಅದಕ್ಕೆ ನೆಪವಾಗಿದ್ದು ಯುವ ಆಟಗಾರ ಪೃಥ್ವಿ ಶಾ ಅವರ ಪ್ರಕರಣ. ಕೆಮ್ಮು ಶಮನದ ಔಷಧ ತೆಗೆದುಕೊಂಡಿದ್ದು ಅವರಿಗೆ ಮುಳುವಾಗಿತ್ತು. ಆಟಗಾರರಲ್ಲಿ ಜಾಗೃತಿ ಮೂಡಿಸುವಲ್ಲಿ ಸರಿಯಾದ ಕ್ರಮ ಕೈಗೊಂಡಿಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಯಿತು. ಅಲ್ಲದೆ ಈ ಪ್ರಕರಣವನ್ನು ನಿರ್ವಹಿಸಿದ ರೀತಿಯೂ ವಿಶ್ವಾಸಾರ್ಹವಾಗಿರಲಿಲ್ಲ. ಜನವರಿ– ಫೆಬ್ರುವರಿ ಅವಧಿಯಲ್ಲಿ ಪೃಥ್ವಿ ಅವರ ಮೂತ್ರದ ಮಾದರಿ ಪಡೆಯಲಾಗಿತ್ತು. ಅದರ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿತ್ತು. ಅವರು ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿದ್ದರಿಂದ ಮಾರ್ಚ್ 16ರಿಂದ ನವೆಂಬರ್‌ವರೆಗೆ ಅಮಾನತು ಶಿಕ್ಷೆ ಜಾರಿ ಮಾಡಲಾಗಿದೆ. ಆದರೆ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತಿತರ ಟೂರ್ನಿಗಳಲ್ಲಿ ಪೃಥ್ವಿ ಆಡಿದ್ದರು. ಇದು ಬಿಸಿಸಿಐಗೇ ತಿರುಗುಬಾಣವಾಯಿತು.

ನಾಡಾ ವ್ಯಾಪ್ತಿಗೆ ಬಿಸಿಸಿಐ ಒಳಪಟ್ಟ ಬೆಳವಣಿಗೆಯಿಂದಾಗಿ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಗೊಳಿಸುವ ಐಸಿಸಿ ಪ್ರಯತ್ನಕ್ಕೆ ಬಲ ಬಂದಿದೆ. ಏಕೆಂದರೆ, ಐಸಿಸಿಯು ವಾಡಾ (ವಿಶ್ವ ಉದ್ದೀಪನ ಮದ್ದು ನಿಗ್ರಹ ಸಂಸ್ಥೆ) ನಿಯಮಕ್ಕೊಳಪಟ್ಟರೆ ಮಾತ್ರ ಒಲಿಂಪಿಕ್ಸ್‌ನಲ್ಲಿ ಅವಕಾಶ ಸಿಗುತ್ತದೆ. ಬೇರೆಲ್ಲ ದೇಶಗಳೂ ಈ ಮೊದಲೇ ವಾಡಾ ನಿಯಮಕ್ಕೆ ಒಪ್ಪಿದ್ದವು. ಆದರೆ ಬಿಸಿಸಿಐ ಮಾತ್ರ ಮೊಂಡುತನ ತೋರಿತ್ತು. ಎರಡನೆಯದಾಗಿ, ಮಾಹಿತಿ ಹಕ್ಕು ನಿಯಮದಡಿ ಬರಲು ಬಿಸಿಸಿಐ ಬಹಳ ವರ್ಷಗಳಿಂದ ಪ್ರತಿರೋಧಿಸಿತ್ತು. ಇದೀಗ ಈ ಕಗ್ಗಂಟನ್ನು ಬಿಡಿಸುವ ದಾರಿ ಸುಲಭವಾಗಿದೆ. ‘ಎಲ್ಲರೂ ಈ ನೆಲದ ಕಾನೂನು ಗೌರವಿಸಬೇಕು. ಕ್ರಿಕೆಟ್‌ ಕೂಡ ಅದಕ್ಕೆ ಹೊರತಲ್ಲ’ ಎಂದು ಇಲಾಖೆಯ ಅಧಿಕಾರಿಗಳು ಈಗಾಗಲೇ ಹೇಳಿದ್ದಾರೆ. ಈ ಹೊತ್ತಿಗೆ ನಾಡಾ ಗೆದ್ದಿರಬಹುದು. ಆದರೆ ಅದರ ನಿಜವಾದ ಪರೀಕ್ಷೆ ಈಗ ಆರಂಭವಾಗಲಿದೆ. ಬೇರೆ ಕ್ರೀಡೆಗಳು ಮತ್ತು ಕ್ರಿಕೆಟ್‌ಗೆ ಇರುವ ವ್ಯತ್ಯಾಸವನ್ನು ಆಳವಾಗಿ ಅಧ್ಯಯನ ಮಾಡಬೇಕು. ಬೇರೆ ಆಟಗಳಲ್ಲಿ ಬಳಕೆಯಾಗುವಂತಹ ಉದ್ದೀಪನ ಮದ್ದುಗಳನ್ನು ಕ್ರಿಕೆಟಿಗರು ಬಳಸಲಿಕ್ಕಿಲ್ಲ. ಏಕೆಂದರೆ ಕ್ರಿಕೆಟಿಗರು ಹೆಚ್ಚು ಹೊತ್ತು ಕ್ರೀಡಾಂಗಣದಲ್ಲಿ ಸಕ್ರಿಯರಾಗಿರುತ್ತಾರೆ. ಎರಡು ವರ್ಷಗಳ ಹಿಂದೆ ನ್ಯೂಜಿಲೆಂಡ್‌ನ ಕ್ಲಬ್‌ ಕ್ರಿಕೆಟಿಗ ಆ್ಯಡಂ ಕಿಂಗ್ ಅವರು ತಾವು ನಿಷೇಧಿತ ನ್ಯಾಂಡ್ರೊಲಿನ್ ಮತ್ತು ಟೆಸ್ಟೊಸ್ಟೆರಾನ್ ಸೇವಿಸಿರುವುದಾಗಿ ಹೇಳಿದ್ದರು. ‘ಮದ್ದು ಸೇವಿಸಿ ಅಥ್ಲೀಟ್‌ಗಳ ಮಾದರಿಯ ದೈಹಿಕ ಕ್ಷಮತೆ ಗಳಿಸುವ ನನ್ನ ಉದ್ದೇಶ ವಿಫಲವಾಯಿತು. ಬದಲಿಗೆ ದೇಹತೂಕ ವಿಪರೀತ ಹೆಚ್ಚಿತ್ತು. ಮೊಣಕಾಲಿನ ಅಂಗಾಂಶಗಳು ಜಡ್ಡುಗಟ್ಟಿದವು’ ಎಂದು ಕಿಂಗ್ ಹೇಳಿದ್ದರು. ರಂಗೋಲಿ ಕೆಳಗೆ ನುಸುಳಿ ಬರುವ ಮದ್ದುಗಳ ಕುರಿತ ಅರಿವು ಹಾಗೂ ಪರೀಕ್ಷೆಗೆ ಸೂಕ್ತ ತಂತ್ರಜ್ಞಾನ ಅಳವಡಿಕೆಯ ಸವಾಲು ಕೂಡ ನಾಡಾ ಮುಂದಿದೆ.

ADVERTISEMENT

ಅನಿವಾರ್ಯವಾಗಿ ನಿಯಮ ಒಪ್ಪಿಕೊಂಡಿರುವ ಬಿಸಿಸಿಐ, ‘ನಾಡಾ’ ವಿಕೆಟ್ ಉರುಳಿಸುವ ಪ್ರಯತ್ನ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುಂತಿಲ್ಲ. ಇನ್ನು ಮುಂದೆ ಮಂಡಳಿಯು ತನ್ನ ಎಲ್ಲ ಆಟಗಾರರಿಗೂ ನಿಷೇಧಿತ ಮದ್ದುಗಳು ಮತ್ತು ಆರೋಗ್ಯ ಸಮಸ್ಯೆಯಾದಾಗ ತೆಗೆದುಕೊಳ್ಳಬೇಕಾದ ಅಧಿಕೃತ ಮದ್ದುಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ನಾಡಾದೊಂದಿಗೆ ಮಾಡಬೇಕಿದೆ. ಈಗಾಗಲೇ ಫಿಕ್ಸಿಂಗ್‌ನಿಂದ ಮುಖಭಂಗ ಅನುಭವಿಸಿರುವ ಕ್ರಿಕೆಟ್‌ಗೆ ಉದ್ದೀಪನ ಮದ್ದು ಕಳಂಕ ತಂದರೆ ಕೋಟ್ಯಂತರ ಅಭಿಮಾನಿಗಳ ವಿಶ್ವಾಸಕ್ಕೆ ದ್ರೋಹ ಬಗೆದಂತಾಗುತ್ತದೆ. ಈ ನಿಟ್ಟಿನಲ್ಲಿ ಆಟಗಾರರೂ ತಮ್ಮ ತಾರಾ ವರ್ಚಸ್ಸು, ಸಿರಿತನದ ಹಮ್ಮುಬಿಮ್ಮು ಬಿಟ್ಟು ವಿಧೇಯ ವಿದ್ಯಾರ್ಥಿ
ಗಳಾಗುವುದು ಉತ್ತಮ. ಈಗಿನ ಕ್ರಿಕೆಟ್‌ ತಂಡಗಳಲ್ಲಿ ಫಿಸಿಯೊ, ತಜ್ಞ ವೈದ್ಯರು, ತರಬೇತುದಾರರ ಬಳಗವೇ ಇದೆ. ಆದಾಗ್ಯೂ ಮದ್ದು ಸೇವನೆ ಪ್ರಕರಣ ವರದಿಯಾದರೆ ಅದು ಅಕ್ಷಮ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.