ADVERTISEMENT

ಸಂಪಾದಕೀಯ | ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?

ಸಂಪಾದಕೀಯ
Published 14 ಜನವರಿ 2026, 0:17 IST
Last Updated 14 ಜನವರಿ 2026, 0:17 IST
<div class="paragraphs"><p>ಸಂಪಾದಕೀಯ | ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?</p></div>

ಸಂಪಾದಕೀಯ | ಒತ್ತುವರಿ ತೆರವು ಕಾರ್ಯಾಚರಣೆ: ಪ್ರಭಾವಿಗಳಿಗೆ ವಿನಾಯಿತಿ ಏಕೆ?

   

ಕೋಗಿಲು ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆಗಾಗಿ ಮೀಸಲಾಗಿರಿಸಿದ್ದ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಿದ ನಂತರ, ಥಣಿಸಂದ್ರದಲ್ಲಿ ಅತಿಕ್ರಮಣಕ್ಕೆ ಒಳಗಾಗಿದ್ದ ಭೂಮಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಡೆದಿದೆ. ಒತ್ತುವರಿದಾರರಿಂದ ಸಾರ್ವಜನಿಕ ಸ್ಥಳಗಳನ್ನು ಹಿಂದಕ್ಕೆ ಪಡೆಯುವ ಸರ್ಕಾರದ ಕ್ರಮ ಸ್ವಾಗತಾರ್ಹ. ಕೆರೆಯ ಅಂಗಳ, ರಾಜಕಾಲುವೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿನ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸರ್ಕಾರ ವಿಳಂಬವಾಗಿಯಾದರೂ ಪ್ರಾರಂಭಿಸಿದೆ. ಆದರೆ, ಈ ಕ್ರಮ ಸಹಾನುಭೂತಿ ಹಾಗೂ ಸಮಾನತೆಯನ್ನು ಒಳಗೊಂಡಿಲ್ಲದಿರುವುದು ಕಾರ್ಯಾಚರಣೆ ಉದ್ದೇಶದ ಪ್ರಾಮಾಣಿಕತೆಯ ಬಗ್ಗೆಯೇ ಅನುಮಾನ ಉಂಟಾಗಲು ಆಸ್ಪದ ಕಲ್ಪಿಸಿದೆ. ಕೋಗಿಲು ಪ್ರಕರಣದಿಂದ ಸ್ವಲ್ಪಮಟ್ಟಿಗೆ ಪಾಠ ಕಲಿತಂತಿರುವ ಬಿಡಿಎ, ಥಣಿಸಂದ್ರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಿರ್ವಸಿತರಾದವರಿಗೆ ತಾತ್ಕಾಲಿಕ ವಸತಿ ಹಾಗೂ ಆಹಾರದ ವ್ಯವಸ್ಥೆ ಮಾಡಿದೆ. ಆದರೂ, ಯಾವುದೇ ಮುನ್ಸೂಚನೆ ನೀಡದೆ ಕಾರ್ಯಾಚರಣೆ ನಡೆಸಲಾಗಿದೆ ಹಾಗೂ ತಮ್ಮನ್ನು ನಿಕೃಷ್ಟವಾಗಿ ನಡೆಸಿಕೊಳ್ಳಲಾಗಿದೆ ಎಂದು ಕೆಲವು ಸಂತ್ರಸ್ತರು ದೂರಿದ್ದಾರೆ. ಇಂಥ ಕಾರ್ಯಾಚರಣೆಗೆ ಸಂಬಂಧಿಸಿದಂತೆ, ಒತ್ತುವರಿದಾರರಲ್ಲಿ ಕಡು ಬಡವರಷ್ಟೇ ಎದ್ದು ಕಾಣಿಸುತ್ತಾರೆ ಹಾಗೂ ಬಲಾಢ್ಯರ ಒತ್ತುವರಿ ಅದೃಶ್ಯವಾಗಿಯೇ ಉಳಿಯುತ್ತದೆ ಎನ್ನುವುದನ್ನು ನಗರಾಡಳಿತ ಒಪ್ಪಿಕೊಳ್ಳಬೇಕು; ನೋವು ಹಾಗೂ ಅವಮಾನ ಉಂಟುಮಾಡುವಂತಹ ಕಾರ್ಯಾಚರಣೆಯಲ್ಲಿ ಬರೀ ಬಲಪ್ರಯೋಗವನ್ನಷ್ಟೇ ಅವಲಂಬಿಸಬಾರದು.

ಒತ್ತುವರಿ ಪ್ರದೇಶಗಳು ಬೆಂಗಳೂರು ಮಹಾನಗರ ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಕಟು ವಾಸ್ತವವೊಂದರ ಸಂಕೇತಗಳಾಗಿವೆ. ನಗರದ ಕೊಳೆಗೇರಿಗಳು ಆಕಸ್ಮಿಕ ಬಡತನದ ಸ್ಥಾವರಗಳಷ್ಟೇ ಆಗಿರದೆ, ಭೂಗತಲೋಕ, ಸ್ಥಳೀಯ ಗೂಂಡಾಗಳು, ರಾಜಕಾರಣಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ನಿಕಟ ಸಹಯೋಗದಲ್ಲಿ ಅವು ರೂಪುಗೊಂಡಿವೆ. ಒತ್ತುವರಿ ಇದ್ದಕ್ಕಿದ್ದಂತೆಯೇ ನಡೆಯುತ್ತದೆ. ಮೊದಲಿಗೆ ಭೂಮಿಯನ್ನು ಗುರ್ತಿಸಲಾಗುತ್ತದೆ, ರಾತ್ರೋರಾತ್ರಿ ಅದನ್ನು ಆಕ್ರಮಿಸಿ ಕೊಳ್ಳಲಾಗುತ್ತದೆ ಮತ್ತು ಮತಬ್ಯಾಂಕ್‌ ರೂಪುಗೊಳ್ಳಲು ಅಗತ್ಯವಾದ ಜನ ಸಮೂಹವನ್ನು ತ್ವರಿತವಾಗಿ ಅಲ್ಲಿ ನೆಲೆಗೊಳಿಸಲಾಗುತ್ತದೆ. ಆ ವಸತಿಗಳಿಗೆ ಅನೌಪಚಾರಿಕವಾಗಿ ಬಾಡಿಗೆ ಪಡೆಯಲಾಗುತ್ತದೆ; ಅದಕ್ಕೆ ಪ್ರತಿಯಾಗಿ ‘ರಕ್ಷಣೆ’ಯ ಭರವಸೆ ನೀಡಲಾಗುತ್ತದೆ. ಇಂಥ ಅಕ್ರಮ ಒಪ್ಪಂದ ಅನೇಕ ಪ್ರಶ್ನೆಗಳಿಗೆ ಎಡೆ ಮಾಡಿಕೊಡುತ್ತದೆ. ತನಗೆ ಸೇರದ ಭೂಮಿಯನ್ನು ವ್ಯಕ್ತಿಯೊಬ್ಬ ಮಾರಾಟ ಮಾಡುವುದು ಹೇಗೆ ಹಾಗೂ ಕೆಲವು ಸಂದರ್ಭಗಳಲ್ಲಿ ಆ ಭೂಮಿ ನೋಂದಣಿಯೂ ಆಗುವುದು ಹೇಗೆ? ಸರ್ಕಾರಿ ಭೂಮಿ, ಕೆರೆಗಳ ಅಂಗಳ ಹಾಗೂ ರಾಜಕಾಲುವೆಗಳ ದಾಖಲೆಗಳನ್ನು ಸಬ್‌ ರಿಜಿಸ್ಟ್ರಾರ್‌ಗಳು ಹೇಗೆ ಒಪ್ಪಿಕೊಳ್ಳುತ್ತಾರೆ? ಇವೆಲ್ಲ ವಹಿವಾಟುಗಳು ಪರಸ್ಪರ ಸಹಯೋಗವಿಲ್ಲದೆ ನಡೆಯುವುದು ಸಾಧ್ಯವಿಲ್ಲ. ಕೊಳೆಗೇರಿಗಳ ಮೇಲೆ ಪ್ರಾಬಲ್ಯ ಸಾಧಿಸಿದ್ದ ಸ್ಲಂ ಭರತ್‌ ಎನ್ನುವ ಭೂಗತಲೋಕದ ಕುಖ್ಯಾತ ವ್ಯಕ್ತಿಯೊಬ್ಬ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. 1990ರ ದಶಕದಲ್ಲಿ ಕಾಂಗ್ರೆಸ್‌ ನಾಯಕರೊಬ್ಬರು ತಮ್ಮಹೆಸರಿನೊಂದಿಗೆ ‘ಸ್ಲಂ’ ವಿಶೇಷಣ ಸೇರಿಸಿಕೊಂಡಿದ್ದರು ಮ‌ತ್ತು ಸಚಿವರೂ ಆಗಿದ್ದರು. ಸ್ನಾಯುಬಲ ಮತ್ತು ಚುನಾವಣಾ ರಾಜಕಾರಣದೊಂದಿಗೆ ಕೊಳೆಗೇರಿಗಳು ಬೆಸೆದುಕೊಂಡಿರುವ ಉದಾಹರಣೆಗಳು ಹೊಸತೂ ಅಲ್ಲ, ಆಕಸ್ಮಿಕವೂ ಅಲ್ಲ.

ADVERTISEMENT

2007ರಲ್ಲಿ ಸಲ್ಲಿಕೆಯಾದ ಎ.ಟಿ. ರಾಮಸ್ವಾಮಿ ವರದಿಯು, ಅಧಿಕಾರಿಗಳ ಕುಮ್ಮಕ್ಕಿನೊಂದಿಗೆ ಶ್ರೀಮಂತರು ಮತ್ತು ಪ್ರಭಾವಿಗಳು ಸಾವಿರಾರು ಎಕರೆ ಸರ್ಕಾರಿ ಭೂಮಿ ಕಬಳಿಸಿರುವುದನ್ನು ಬಹಿರಂಗಪಡಿಸಿತ್ತು. ಆ ವರದಿಯಲ್ಲಿ ಹೆಸರಿಸಿರುವ ಅನೇಕರು ಈಗಲೂ ಯಾವುದೇ ಕ್ರಮಕ್ಕೆ ಒಳಪಡದೆ, ಸವಲತ್ತುಗಳನ್ನು ಆನಂದಿಸುತ್ತಲೇ ಇದ್ದಾರೆ. ಇದಕ್ಕೆ ಪ್ರತಿಯಾಗಿ ಬಡವರು ಬುಲ್ಡೋಜರ್‌ ಪ್ರಹಾರ ಎದುರಿಸಿದ್ದಾರೆ. ಕರ್ನಾಟಕ ಭೂ ಕಬಳಿಕೆ ಪ್ರತಿಬಂಧಕ ಕಾಯ್ದೆ ಇದ್ದೂ ಉಪಯೋಗಕ್ಕೆ ಬರುತ್ತಿಲ್ಲ. ಈ ಕಾಯ್ದೆಯನ್ನು ‍ಪ್ರಾಮಾಣಿಕವಾಗಿ ಬಳಸಿದರೆ, ಅಕ್ರಮ ವಸತಿಗಳಲ್ಲಿ ವಾಸಿಸುವ ನಿವಾಸಿಗಳು ಮಾತ್ರವಲ್ಲದೆ, ಅತಿಕ್ರಮಣ ಕೃತ್ಯಗಳಿಗೆ ಹಣಕಾಸು ಒದಗಿಸುವವರು ಹಾಗೂ ಅವರಿಗೆ ಬೆಂಬಲ, ರಕ್ಷಣೆ ನೀಡುವವರನ್ನೂ ಬಯಲಿಗೆಳೆಯಬಹುದಾಗಿದೆ. ಆಗ ಕೊಳೆಗೇರಿಗಳನ್ನು ಕೆಡಹುವಾಗ ದೊರೆಯುವ ಚಿತ್ರಗಳು ಈಗಿನದಕ್ಕಿಂತಲೂ ಬೇರೆಯದೇ ಆಗಿರಬಹುದು. ಒತ್ತುವರಿಗಳ ಹಿಂದಿರುವ ಮಾಫಿಯಾ ಮತ್ತು ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ನಿರ್ಮೂಲಗೊಳಿಸುವುದು ರಾಜಕೀಯ ಇಚ್ಛಾಶಕ್ತಿಗೆ ನೈಜ ಪರೀಕ್ಷೆಯಾಗಿದೆ. ಅದು ಸಾಧ್ಯ ಆಗುವವರೆಗೂ, ಬುಲ್ಡೋಜರ್‌ಗಳು ನ್ಯಾಯದ ಬದಲು ಅಧಿಕಾರದ ಸಂಕೇತಗಳಾಗಿಯಷ್ಟೇ ಉಳಿಯುವ ವಿರೋಧಾಭಾಸವನ್ನು ನೋಡುತ್ತಿರಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.