ADVERTISEMENT

ಸಂಪಾದಕೀಯ: ಫಿನ್‌ಟೆಕ್‌ ಉದ್ಯಮಕ್ಕೆ ಕಾರ್ಯಪಡೆ: ತೆರೆಯಲಿವೆ ಹಲವು ಸಾಧ್ಯತೆಗಳು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 1:19 IST
Last Updated 19 ನವೆಂಬರ್ 2021, 1:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಳೆದ ಒಂದು ದಶಕದ ಅವಧಿಯಲ್ಲಿ ದೇಶದ ಜನರ ಬದುಕಿನಲ್ಲಿ ಅತ್ಯಂತ ಮಹತ್ವದ ಪರಿವರ್ತನೆಗಳನ್ನು ತಂದಿರುವ ಉದ್ಯಮಗಳ ಸಾಲಿನಲ್ಲಿ ಹಣಕಾಸು ತಂತ್ರಜ್ಞಾನ ಉದ್ಯಮವು ಖಂಡಿತವಾಗಿಯೂ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಹಣಕಾಸು ಸೇವೆಗಳನ್ನು ತಂತ್ರಜ್ಞಾನದ ಸಹಾಯದಿಂದ ಜನರಿಗೆ ಬಹಳ ಹತ್ತಿರವಾಗಿಸಿರುವ ಫಿನ್‌ಟೆಕ್‌ ಉದ್ಯಮವು ಇಂದು ಬೃಹತ್ ಪ್ರಮಾಣದಲ್ಲಿ ಬೆಳೆದು ನಿಲ್ಲುವ ಆಶಾಭಾವನೆಯನ್ನು ದೇಶದ ಜನರಲ್ಲಿಯೂ, ನೀತಿ ನಿರೂಪಕರಲ್ಲಿಯೂ ಮೂಡಿಸಿದೆ. ವರ್ಷಗಳ ಹಿಂದೆ ಬ್ಯಾಂಕಿಗೆ ಹೋಗಿ ಅಗತ್ಯ ದಾಖಲೆಗಳನ್ನು ಕಾಗದದ ರೂಪದಲ್ಲಿ ನೀಡಿ, ಒಂದು ಖಾತೆ ತೆರೆಯಲು ದಿನಗಳ ಕಾಲ ಕಾಯುತ್ತಿದ್ದ ಜನಸಾಮಾನ್ಯ ಇಂದು ಅರ್ಧ ಗಂಟೆಯ ಅವಧಿಯಲ್ಲಿ ಖಾತೆಯೊಂದನ್ನು ತೆರೆಯಬಲ್ಲ; ಬ್ಯಾಂಕ್‌ಗೆ ಅಗತ್ಯವಿರುವ ದಾಖಲೆಗಳನ್ನು ತಾನು ಕುಳಿತಿರುವ ಸ್ಥಳದಿಂದಲೇ ಆನ್‌ಲೈನ್‌ ಮೂಲಕ ಸಲ್ಲಿಸಬಲ್ಲ. ಕಂಪನಿಯೊಂದರ ಷೇರುಗಳನ್ನು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಖರೀದಿಸಲು ಬ್ಯಾಂಕ್‌ನಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದ, ದೊಡ್ಡ ಅರ್ಜಿಗಳನ್ನು ಕೂಲಂಕಷವಾಗಿ ಗಮನಿಸಿ ಭರ್ತಿ ಮಾಡುತ್ತಿದ್ದ ಸಣ್ಣ ಹೂಡಿಕೆದಾರ ಇಂದು ಅದೇ ಕೆಲಸವನ್ನು ತನ್ನ ಸ್ಮಾರ್ಟ್‌ಫೋನ್‌ ಮೂಲಕ ಐದೇ ನಿಮಿಷಗಳಲ್ಲಿ ಪೂರ್ಣಗೊಳಿಸಬಲ್ಲ. ಷೇರು ಮಾರುಕಟ್ಟೆಗಳಲ್ಲಿ ಹಣ ಹೂಡಿಕೆ ಮಾಡಲು ಸಾಧ್ಯವಿರುವುದು ದೊಡ್ಡ ಮೊತ್ತದ ಹಣ ಇರುವವರಿಗೆ ಮಾತ್ರ ಎಂದು ಭಾವಿಸಿದ್ದ ವ್ಯಕ್ತಿ ಇಂದು ಫಿನ್‌ಟೆಕ್‌ ಉದ್ಯಮ ಅಭಿವೃದ್ಧಿಪಡಿಸಿರುವ ಚೂಟಿ ಅಪ್ಲಿಕೇಷನ್‌ಗಳನ್ನು ಬಳಸಿ, ತನ್ನ ಕೈಯಲ್ಲಿ ಬರೀ ₹100 ಇದ್ದರೂ ಅದನ್ನು ಬಳಸಿ ವ್ಯವಸ್ಥಿತ ಹೂಡಿಕೆ ಆರಂಭಿಸಬಲ್ಲ. ಮನೆಯಿಂದಲೇ ಡಿ–ಮ್ಯಾಟ್ ಖಾತೆ ತೆರೆಯುವುದು, ಅಗತ್ಯ ವಿಮಾ ಉತ್ಪನ್ನಗಳನ್ನು ಮೊಬೈಲ್‌ ಮೂಲಕವೇ ಖರೀದಿಸುವುದು, ಹತ್ತು ಹಲವು ಬಗೆಯ ಬಿಲ್‌ ಪಾವತಿಗಳನ್ನು ಸ್ಮಾರ್ಟ್‌ಫೋನ್‌ ಮೂಲಕವೇ ಮಾಡುವುದು, ಸಾಲಕ್ಕೆ ಸ್ಮಾರ್ಟ್‌ಫೋನ್‌ ಮೂಲಕವೇ ಅರ್ಜಿ ಸಲ್ಲಿಸಿ ಕೆಲವೇ ಗಂಟೆಗಳಲ್ಲಿ ಸಾಲದ ಮೊತ್ತವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡಿಸಿಕೊಳ್ಳುವುದು... ಹೀಗೆ ಹತ್ತು ಹಲವು ಸೇವೆಗಳನ್ನು ಪಡೆಯುವುದು ಇಂದು ಸುಲಭವಾಗಿದ್ದರ ಹಿಂದೆ ಫಿನ್‌ಟೆಕ್‌ ಉದ್ಯಮದ ಕೊಡುಗೆ ಇದೆ.

ಈ ಉದ್ಯಮದಲ್ಲಿ ಕರ್ನಾಟಕ ಹೊಂದಿರುವ ಮುಂಚೂಣಿ ಸ್ಥಾನವನ್ನು ಮುಂದೆಯೂ ಕಾಯ್ದುಕೊಳ್ಳುವ ಗುರಿಯೊಂದಿಗೆ ರಾಜ್ಯ ಸರ್ಕಾರವು ಕಾರ್ಯಪಡೆಯೊಂದನ್ನು ರಚಿಸಿದೆ. ಬ್ಯಾಂಕಿಂಗ್ ಸೇವೆಗಳ ತೊಟ್ಟಿಲು ಎಂಬ ಹೆಗ್ಗಳಿಕೆಯನ್ನು ಹೊತ್ತುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಫಿನ್‌ಟೆಕ್‌ ಉದ್ಯಮಕ್ಕೆ ಸಂಬಂಧಿಸಿದ ತೆರೆಯ ಹಿಂದಿನ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುವಂತೆ ಆಗಬೇಕು, ಈ ಉದ್ಯಮವು ಬೆಂಗಳೂರಿನ ಹೊರಗಡೆಯೂ ಬೆಳೆಯಬೇಕು ಎಂಬ ಉದ್ದೇಶ ಕೂಡ ಈ ಕಾರ್ಯಪಡೆಯನ್ನು ರಚಿಸಿರುವುದರ ಹಿಂದೆ ಇದೆ ಎಂದು ಸರ್ಕಾರವು ಹೇಳಿದೆ. ಇದು ಸ್ವಾಗತಾರ್ಹ. ಹಣಕಾಸು ತಂತ್ರಜ್ಞಾನ ವಲಯದ ಕಂಪನಿಗಳು ತಮ್ಮ ಬಂಡವಾಳ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಕಾಲಘಟ್ಟ ಇದು. ಈ ವಲಯದ ಹಲವು ಖಾಸಗಿ ಕಂಪನಿಗಳು, ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ ಮೂಲಕ ಹೆಚ್ಚು ಹೆಚ್ಚು ಬಂಡವಾಳ ಸಂಗ್ರಹಿಸುತ್ತಿವೆ. ಸಣ್ಣ ಹೂಡಿಕೆದಾರರು ಕೂಡ ಇಂತಹ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ಆಶಯಗಳು ಈಡೇರಿದ್ದೇ ಆದಲ್ಲಿ ಫಿನ್‌ಟೆಕ್‌ ಉದ್ಯಮವೂ ಬೆಳೆಯಲಿದೆ, ಅಲ್ಲಿ ಹಣ ಹೂಡಿಕೆ ಮಾಡುತ್ತಿರುವ ಸಣ್ಣ ಹೂಡಿಕೆದಾರರು ಕೂಡ ಬೆಳವಣಿಗೆ ಕಾಣಲಿದ್ದಾರೆ. ಉದ್ಯಮವು ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನೂ ಸೃಷ್ಟಿಸಿಕೊಡಬಹುದು. ಉದ್ಯಮದ ಬೆಳವಣಿಗೆಗೆ ಸರ್ಕಾರ ರಚಿಸಿರುವ ಕಾರ್ಯಪಡೆಯು ಹತ್ತು ಹಲವು ಸಾಧ್ಯತೆಗಳನ್ನು ತನ್ನ ಒಡಲೊಳಗೆ ಇರಿಸಿಕೊಂಡಿದೆ. ಕಾರ್ಯಪಡೆಯು ಅವಕಾಶಗಳಿಗೆ ಮತ್ತು ಸವಾಲುಗಳಿಗೆ ಹೇಗೆ ಸ್ಪಂದಿಸುತ್ತದೆ ಎಂಬುದರ ಆಧಾರದ ಮೇಲೆ ಉದ್ಯಮದ ಬೆಳವಣಿಗೆ ನಿಂತಿದೆ.

ಫಿನ್‌ಟೆಕ್‌ ಉದ್ಯಮದ ಕೆಲವು ಕಂಪನಿಗಳು ಜನಪ್ರಿಯತೆಯ ವಿಚಾರದಲ್ಲಿ ಅಸದೃಶ ಸಾಧನೆ ತೋರಿದ್ದರೂ ಹಣಕಾಸಿನ ಲಾಭ ಗಳಿಕೆಯ ವಿಚಾರದಲ್ಲಿ ತೀರಾ ಹಿಂದೆ ಬಿದ್ದಿರುವ ನಿದರ್ಶನಗಳು ಇವೆ. ಕೆಲವು ಕಂಪನಿಗಳು ದೇಶ ವಿದೇಶಗಳಿಂದ ಬಂಡವಾಳ ಆಕರ್ಷಿಸಿದ್ದರೂ ಇದುವರೆಗೆ ಅವು ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿಲ್ಲ. ಪರಿಸ್ಥಿತಿ ಹೀಗಿರುವಾಗ, ಬಂಡವಾಳ ಹೂಡಿಕೆದಾರರು ಎಷ್ಟು ದಿನಗಳವರೆಗೆ ಹಣ ಸುರಿಯುತ್ತ ಇರುತ್ತಾರೆ ಎನ್ನಲು ಸಾಧ್ಯವಿಲ್ಲ. ಬಂಡವಾಳ ತೊಡಗಿಸುವ ಹಂತವನ್ನು ದಾಟಿ ಫಿನ್‌ಟೆಕ್‌ ಕಂಪನಿಗಳು ಷೇರುದಾರರಿಗೆ, ಹೂಡಿಕೆದಾರರಿಗೆ ಲಾಭ ತಂದುಕೊಡುವ ಹಂತಕ್ಕೆ ಬರಬೇಕು. ಆಗಮಾತ್ರ ಕಂಪನಿಗಳು ಸುಸ್ಥಿರ ಆಗಬಲ್ಲವು. ಅವು ಸುಸ್ಥಿರವಾದಾಗ ಮಾತ್ರ ಉದ್ಯಮವು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣಬಹುದು. ಇಡೀ ಉದ್ಯಮವು ಅಂಥದ್ದೊಂದು ಹಂತವನ್ನು ಪ್ರವೇಶಿಸಲು ಈ ಕಾರ್ಯಪಡೆಯು ದಾರಿ ತೋರಬಹುದೇ? ಫಿನ್‌ಟೆಕ್‌ ಉದ್ಯಮದ ವಹಿವಾಟಿನ ಸ್ವರೂಪ ಹಾಗೂ ಅದು ನೀಡುತ್ತಿರುವ ಸೇವೆಗಳು ದೊಡ್ಡ ಮಟ್ಟದಲ್ಲಿ ಲಾಭ ತಂದುಕೊಡುವ ರೀತಿಯಲ್ಲಿ ಇಲ್ಲ ಎಂಬ ವಾದವೊಂದು ಇದೆ.ಇದರ ಬಗ್ಗೆಯೂ ಸಂಬಂಧಪಟ್ಟವರು ಗಮನ ಹರಿಸುವುದು ಸೂಕ್ತ. ದೇಶದಲ್ಲಿ ಬ್ಯಾಂಕ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಜಾಲ ಬಹಳ ದೊಡ್ಡದಾಗಿಯೇ ಇದ್ದರೂ ಬ್ಯಾಂಕಿಂಗ್‌ನ ಎಲ್ಲ ಬಗೆಯ ಸೇವೆಗಳ ಪ್ರಯೋಜನ ಪಡೆದಿರದ ವರ್ಗವೂ ಇದೆ. ಫಿನ್‌ಟೆಕ್‌ ಕಂಪನಿಗಳು ಈ ವರ್ಗವನ್ನು ಕೂಡ ತಲುಪುವ ಭರವಸೆ ಮೂಡಿಸಿವೆ. ಹಾಗಾಗಿ, ಫಿನ್‌ಟೆಕ್‌ ಉದ್ಯಮದ ಬೆಳವಣಿಗೆ ಅಂದರೆ ಹಣಕಾಸು ಸೇವೆಗಳ ಒಳಗೊಳ್ಳುವಿಕೆಗೆ ಆದ್ಯತೆ ನೀಡುವುದೂ ಆಗಿರುತ್ತದೆ. ಇವೆಲ್ಲವೂ ಸರ್ಕಾರ ಮತ್ತು ಕಾರ್ಯಪಡೆಯು ಎಷ್ಟರಮಟ್ಟಿಗೆ ಸ್ಪಂದನಶೀಲವಾಗಿ ಮುಂದಡಿ ಇರಿಸುತ್ತವೆ ಎಂಬುದನ್ನು ಆಧರಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.