ADVERTISEMENT

ಸಂಪಾದಕೀಯ: BPSL ಪ್ರಕರಣದ ತೀರ್ಪು– ಐಬಿಸಿ ಪುನರವಲೋಕನ ಅಗತ್ಯ

ಸಂಪಾದಕೀಯ

ಸಂಪಾದಕೀಯ
Published 8 ಮೇ 2025, 20:06 IST
Last Updated 8 ಮೇ 2025, 20:06 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ಭೂಷಣ್ ಪವರ್ ಆ್ಯಂಡ್ ಸ್ಟೀಲ್‌ ಲಿಮಿಟೆಡ್‌ (ಬಿಪಿಎಸ್‌ಎಲ್‌) ಕಂಪನಿಯನ್ನು ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಯು ಸ್ವಾಧೀನಕ್ಕೆ ತೆಗೆದುಕೊಂಡಿದ್ದನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ.

ಕೋರ್ಟ್‌ನ ತೀರ್ಮಾನವು ಎರಡು ಕಂಪನಿಗಳು ದಿವಾಳಿ ಸಂಹಿತೆಯ (ಐಬಿಸಿ) ಅಡಿಯಲ್ಲಿ ತೆಗೆದುಕೊಂಡ ನಿರ್ಧಾರದ ಸರಿ–ತಪ್ಪುಗಳು, ಆ ನಿರ್ಧಾರದ ಕಾನೂನುಬದ್ಧತೆಯ ಆಚೆಗೂ ಚಾಚಿಕೊಂಡಿದೆ. ಐಬಿಸಿ ಅನುಷ್ಠಾನಕ್ಕೆ ಸಂಬಂಧಿಸಿದ ಹಾಗೂ ಆ ಕಾನೂನಿನ ಅಡಿಯಲ್ಲಿನ ಪ್ರಕ್ರಿಯೆಗಳ ಬಗ್ಗೆ ಇದು ಪ್ರಶ್ನೆಗಳನ್ನು ಎತ್ತಿದೆ. ಕೇಂದ್ರ ಸರ್ಕಾರವು 2016ರಲ್ಲಿ ಜಾರಿಗೆ ತಂದ ಈ ಕಾನೂನು, ಕಂಪನಿಗಳು ದಿವಾಳಿಯೆದ್ದಾಗ ಸೃಷ್ಟಿಯಾಗುವ ಸಮಸ್ಯೆಗಳನ್ನು ನಿಭಾಯಿಸಲು ಒಂದು ದಾರಿದೀಪ ಎಂದು ಭಾವಿಸಲಾಗಿದೆ. ಅಂತಹ ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ಇದೊಂದು ಪ್ರಮುಖ ಪರಿಕರವಾಗಿ ಒದಗಿಬಂದಿದೆ ಕೂಡ. ಕಂಪನಿಗಳು ದಿವಾಳಿಯಾದ ಸಂದರ್ಭದಲ್ಲಿ ಕಾನೂನಿಗೆ ಅನುಗುಣವಾಗಿ, ನಿರೀಕ್ಷಿತವಾದ ಬಗೆಯಲ್ಲಿ, ವ್ಯವಸ್ಥಿತವಾಗಿ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ ಎಂಬ ಭರವಸೆಯನ್ನು ಉದ್ದಿಮೆಗಳಿಗೆ, ಹೂಡಿಕೆದಾರರಿಗೆ, ಸಾಲದಾತರಿಗೆ ಮತ್ತು ಇತರ ಭಾಗೀದಾರರಿಗೆ ನೀಡುವ ಉದ್ದೇಶವು ಈ ಕಾನೂನಿಗೆ ಇದೆ. ಬಿಪಿಎಸ್‌ಎಲ್‌ ಕಂಪನಿಯನ್ನು ಮತ್ತೆ ಮೇಲಕ್ಕೆತ್ತಲು ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಯು ಸಲ್ಲಿಸಿದ್ದ ಯೋಜನೆಯು ಕಾನೂನುಬಾಹಿರ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ನ ತೀರ್ಪು, ಐಬಿಸಿ ಕಾನೂನಿನ ಅಡಿಯಲ್ಲಿ ವಿವರಿಸಲಾಗಿರುವ ಪ್ರಕ್ರಿಯೆಗಳಿಗೆ ಎದುರಾದ ದೊಡ್ಡ ಹಿನ್ನಡೆ.

ADVERTISEMENT

ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಯು ಬಿಪಿಎಸ್‌ಎಲ್‌ ಕಂಪನಿಯ ಪುನರುಜ್ಜೀವನಕ್ಕೆ ಸಲ್ಲಿಸಿದ್ದ ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) 2019ರಲ್ಲಿ ಒಪ್ಪಿಗೆ ನೀಡಿತ್ತು. ಆದರೆ ಬಿಪಿಎಸ್‌ಎಲ್‌ ಕಂಪನಿಯ ಪುನರುಜ್ಜೀವನ ಪ್ರಕ್ರಿಯೆಯು ಎರಡು ವರ್ಷಗಳಿಗೂ ಹೆಚ್ಚಿನ ಅವಧಿಯನ್ನು ತೆಗೆದುಕೊಂಡಿತ್ತು, ಇದು ಐಬಿಸಿ ಕಾನೂನಿನಲ್ಲಿ ಹೇಳಿರುವ ಅವಧಿಗಿಂತ ಹೆಚ್ಚು. ಎರಡು ವರ್ಷಗಳ ನಂತರದಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿಯು ಬಿಪಿಎಸ್‌ಎಲ್‌ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿತು. ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಯ ಕ್ರಮವನ್ನು ಒಪ್ಪದ ನ್ಯಾಯಾಲಯವು ಬಿಪಿಎಸ್‌ಎಲ್‌ ಕಂಪನಿಯ ಪರಿಸಮಾಪ್ತಿಗೆ ಆದೇಶಿಸಿದೆ. ಪ್ರಕ್ರಿಯೆಯ ಎಲ್ಲ ಭಾಗೀದಾರರ ನಡೆಯನ್ನು ಪ್ರಶ್ನಿಸಿರುವ ನ್ಯಾಯಾಲಯವು ಪ್ರಕ್ರಿಯೆಯನ್ನು ಕೂಡ ಪ್ರಶ್ನಿಸಿದೆ. ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿಯು ತಪ್ಪು ಮಾಹಿತಿ ಒದಗಿಸಿದೆ, ಬಿಪಿಎಸ್‌ಎಲ್‌ ಪುನರು ಜ್ಜೀವನಕ್ಕೆ ಒಪ್ಪಿಗೆ ಪಡೆದುಕೊಂಡ ಯೋಜನೆಗೆ ಅನುಗುಣವಾಗಿ ಸರಿಸುಮಾರು ಎರಡು ವರ್ಷಗಳ ಕಾಲ ನಡೆದುಕೊಂಡಿಲ್ಲ ಎಂದು ಹೇಳಿದೆ. ಪುನರುಜ್ಜೀವನ ಯೋಜನೆಯು ಐಬಿಸಿ ಹೇಳಿರುವ ರೀತಿಯಲ್ಲಿ ಇರಲಿಲ್ಲ, ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ ಕಂಪನಿಯ ಪುನರುಜ್ಜೀವನದ ಹೊಣೆ ಹೊತ್ತವರು ಶಾಸನಬದ್ಧವಾಗಿ ಕರ್ತವ್ಯ ನಿರ್ವಹಿಸಲು ವಿಫಲರಾದರು ಎಂದು ಕೂಡ ಸುಪ್ರೀಂ ಕೋರ್ಟ್‌ ಹೇಳಿದೆ. ಕಂಪನಿಯ ಪುನರುಜ್ಜೀವನದ ಯೋಜನೆಯನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಸಾಲದಾತರ ಸಮಿತಿಯು ತನ್ನ ವಿವೇಕವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ, ಪರಸ್ಪರ ವಿರುದ್ಧವಾದ ನಿಲುವುಗಳನ್ನು ತಳೆಯುವ ಮೂಲಕ ಅದು ಸಾಲದಾತರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಕೂಡ ಕೋರ್ಟ್ ಹೇಳಿದೆ. ಅಲ್ಲದೆ, ನಿಗದಿತವಾದ ಪ್ರಕ್ರಿಯೆಗಳನ್ನು ಎಲ್ಲ ಹಂತಗಳಲ್ಲಿಯೂ ಉಲ್ಲಂಘಿಸಲಾಯಿತು ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ನ ನಿರ್ಣಯವು ಐಬಿಸಿ ಅಡಿಯಲ್ಲಿ ರೂಪಿತವಾದ ವ್ಯವಸ್ಥೆಯನ್ನು ಪರಿಶೀಲನೆಗೆ ಒಳಪಡಿಸಿದೆ. ಇದು ಹಲವು ಪರಿಣಾಮಗಳನ್ನು ಉಂಟುಮಾಡಲಿದೆ. ಬಿಪಿಎಸ್‌ಎಲ್‌ ಕಂಪನಿಯು ದಿವಾಳಿ ಭೀತಿಯಲ್ಲಿದ್ದು, ಅದರ ಮೌಲ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಕಂಪನಿಗೆ ಸಾಲ ನೀಡಿದವರು ಕೂಡ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ. ಸಾಲ ಪಡೆದ ಕಾರ್ಪೊರೇಟ್‌ ಕಂಪನಿಗಳನ್ನು ಉಳಿಸುವ, ಬೇರೆ ಬೇರೆ ಪಾಲುದಾರರಿಗೆ ಆಗುವ ನಷ್ಟವನ್ನು ಕಡಿಮೆ ಮಾಡುವ, ಅರ್ಥವ್ಯವಸ್ಥೆಗೆ ಅನಪೇಕ್ಷಿತ ಹಾನಿ ಆಗದಂತೆ ನೋಡಿಕೊಳ್ಳುವ ಉದ್ದೇಶವು ಐಬಿಸಿ ಕಾನೂನಿಗೆ ಇದೆ. ಆದರೆ ಐಬಿಸಿ ರೂಪಿಸುವ ಮೊದಲು ಹಲವು ಕಂಪನಿಗಳು ನಡೆಸುತ್ತಿದ್ದ ಅಕ್ರಮಗಳು ಐಬಿಸಿ ಜಾರಿಗೆ ಬಂದ ನಂತರದಲ್ಲಿ ಇತರ ರೂಪಗಳಲ್ಲಿಯೂ ನಡೆಯಬಹುದು ಎಂಬುದನ್ನು ಕೋರ್ಟ್‌ನ ತೀರ್ಪು ಹೇಳಿದಂತಿದೆ. ಈ ಪ್ರಕರಣದಲ್ಲಿ ಐಬಿಸಿಯ ಆಶಯವನ್ನು ಉಲ್ಲಂಘಿಸಲಾಗಿದೆ. ಸುಪ್ರೀಂ ಕೋರ್ಟ್‌ ತೀರ್ಮಾನಕ್ಕೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಈ ತೀರ್ಪು ಐಬಿಸಿ ಕಾನೂನಿನ ಅನುಷ್ಠಾನದ ಬಗ್ಗೆ ಪುನರವಲೋಕನ ಆಗಬೇಕು ಎಂಬುದನ್ನು ಹೇಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.