ಒಕ್ಕೂಟದ ತೆರಿಗೆ ವರಮಾನದಲ್ಲಿ ರಾಜ್ಯಗಳಿಗೆ ಕೊಡುವ ಪಾಲನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರವು ಹಣಕಾಸು ಆಯೋಗಕ್ಕೆ ಹೇಳಲಿದೆ ಎಂಬ ವರದಿಗಳು ರಾಜ್ಯ ಸರ್ಕಾರಗಳ ತಲೆಬಿಸಿಗೆ ಕಾರಣವಾಗಿವೆ. ಈಗಿರುವ ನಿಯಮಗಳ ಪ್ರಕಾರ, ರಾಜ್ಯ ಸರ್ಕಾರಗಳಿಗೆ ಒಕ್ಕೂಟದ ತೆರಿಗೆ ಸಂಗ್ರಹದಲ್ಲಿ ಶೇಕಡ 41ರಷ್ಟು ಪಾಲು ಸಿಗುತ್ತಿದೆ. ಈ ಪಾಲನ್ನು ಶೇ 40ಕ್ಕೆ ತಗ್ಗಿಸಬೇಕು ಎಂದು ಕೇಂದ್ರವು ಆಯೋಗಕ್ಕೆ ಹೇಳಲಿದೆ ಎಂಬುದಾಗಿ ವರದಿಯಾಗಿದೆ. ಸಾಂವಿಧಾನಿಕವಾಗಿ ರಚನೆಯಾಗಿರುವ ಹಣಕಾಸು ಆಯೋಗವು ತೆರಿಗೆ ವರಮಾನವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಹೇಗೆ, ಯಾವ ಪ್ರಮಾಣದಲ್ಲಿ ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಶಿಫಾರಸು ಮಾಡುತ್ತದೆ. ಅರವಿಂದ ಪನಗರಿಯಾ ನೇತೃತ್ವದ 16ನೇ ಹಣಕಾಸು ಆಯೋಗವು ಈಗ ತೆರಿಗೆ ವರಮಾನ ಹಂಚಿಕೆ ವಿಚಾರವಾಗಿ ಸಮಾಲೋಚನೆಗಳನ್ನು ನಡೆಸುತ್ತಿದೆ. ಆಯೋಗವು ತನ್ನ ಶಿಫಾರಸುಗಳನ್ನು ಅಕ್ಟೋಬರ್ 31ಕ್ಕೆ ಮೊದಲು ಸಲ್ಲಿಸಲಿದೆ. ಈ ಶಿಫಾರಸುಗಳು 2026-27ನೇ ಆರ್ಥಿಕ ವರ್ಷದಿಂದ ಜಾರಿಗೆ ಬರಲಿವೆ. ಒಕ್ಕೂಟದ ತೆರಿಗೆ ವರಮಾನದಲ್ಲಿ ರಾಜ್ಯಗಳ ಪಾಲು 1980ರಲ್ಲಿ ಶೇಕಡ 20ರಷ್ಟು ಇದ್ದಿದ್ದು ಈಗ ಶೇ 41ಕ್ಕೆ ಬಂದಿದೆ. ಅಂದರೆ ಇದು ಕಾಲ ಕಳೆದಂತೆಲ್ಲ ಹೆಚ್ಚುತ್ತಾ ಸಾಗಿದೆ. ತೆರಿಗೆ ವರಮಾನದಲ್ಲಿ ರಾಜ್ಯಗಳ ಪಾಲು ಶೇ 40ರಷ್ಟು ಇದ್ದಿದ್ದನ್ನು 15ನೇ ಹಣಕಾಸು ಆಯೋಗವು ಶೇ 41ಕ್ಕೆ ಹೆಚ್ಚು ಮಾಡಿತ್ತು.
ಕೇಂದ್ರ ಸರ್ಕಾರದ ವೆಚ್ಚಗಳು ಹೆಚ್ಚಾಗಿರುವುದರ ಪರಿಣಾಮವಾಗಿ, ಅದರಲ್ಲೂ ಮುಖ್ಯವಾಗಿ ಆರ್ಥಿಕ ಬೆಳವಣಿಗೆ ದರವು ತಗ್ಗಿರುವ ಈ ಸಂದರ್ಭದಲ್ಲಿ, ರಾಜ್ಯಗಳ ತೆರಿಗೆ ವರಮಾನದ ಪಾಲನ್ನು ಕಡಿಮೆ ಮಾಡುವಂತೆ ಆಯೋಗವನ್ನು ಕೋರಲಾಗುತ್ತದೆ ಎಂದು ವರದಿಗಳು ಹೇಳುತ್ತವೆ. 2024–25ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಶೇ 4.8ರಷ್ಟು ಇದೆ. ಇದೇ ಸಂದರ್ಭದಲ್ಲಿ ರಾಜ್ಯಗಳ ವಿತ್ತೀಯ ಕೊರತೆಯು ದೇಶದ ಜಿಡಿಪಿಯ ಶೇ 3.2ರಷ್ಟು ಇದೆ. ರಾಜ್ಯ ಸರ್ಕಾರಗಳು ಕೂಡ ಗಂಭೀರವಾದ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಅವುಗಳ ತೆರಿಗೆ ವರಮಾನದ ಪಾಲನ್ನು ಕಡಿಮೆ ಮಾಡುವಂತೆ ಹೇಳಲು ವಿತ್ತೀಯ ಕೊರತೆಯ ಪ್ರಮಾಣವು ಸರಿಯಾದ ಕಾರಣ ಆಗುವುದಿಲ್ಲ. 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದ ನಂತರದಲ್ಲಿ ತಮ್ಮ ವರಮಾನವನ್ನು ಹೆಚ್ಚು ಮಾಡಿಕೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಅಧಿಕಾರವು ಬಹಳ ಸೀಮಿತವಾಗಿದೆ. ತೆರಿಗೆ ವರಮಾನದಲ್ಲಿ ರಾಜ್ಯಗಳ ಪಾಲು ಶೇ 41ರಷ್ಟು ಇರುವುದನ್ನು ಶೇ 40ಕ್ಕೆ ಕಡಿಮೆ ಮಾಡಿದರೆ, ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ ₹ 35 ಸಾವಿರ ಕೋಟಿ ಸಿಗುತ್ತದೆ. ಆದರೆ, ರಾಜ್ಯಗಳ ವರಮಾನ ತಗ್ಗಿ ಅವುಗಳ ಪಾಲಿಗೆ ಸಮಸ್ಯೆ ಎದುರಾಗುತ್ತದೆ. ವಿವಿಧ ಸೆಸ್ ಹಾಗೂ ಸರ್ಚಾರ್ಜ್‌ಗಳ ಮೂಲಕ ತಾನು ಪಡೆಯುವ ವರಮಾನವನ್ನು ಕೇಂದ್ರ ಸರ್ಕಾರವು ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. ಇಂತಹ ವರಮಾನವು ಕೇಂದ್ರದ ಒಟ್ಟು ವರಮಾನದ ಶೇಕಡ 15ರಷ್ಟು ಇದೆ. ಈ ವರಮಾನವನ್ನು ಕೂಡ ಲೆಕ್ಕಕ್ಕೆ ತೆಗೆದುಕೊಂಡರೆ, ರಾಜ್ಯಗಳ ಪಾಲಿಗೆ ಸಿಗುವುದು ಶೇ 41ಕ್ಕಿಂತ ಕಡಿಮೆ ಎಂಬ ಅಂದಾಜು ಇದೆ.
ಹಲವು ರಾಜ್ಯಗಳು ವರಮಾನ ಹಂಚಿಕೆಯ ಪ್ರಮಾಣವನ್ನು ಶೇ 41ರ ಬದಲು ಶೇ 50ಕ್ಕೆ ಹೆಚ್ಚಿಸಬೇಕು ಎಂಬ ಆಗ್ರಹ ಮಂಡಿಸಿವೆ. ವೆಚ್ಚಗಳು ಹೆಚ್ಚಾಗುತ್ತಿದ್ದರೂ ತಮಗೆ ವರಮಾನ ಹೆಚ್ಚಿಸಿಕೊಳ್ಳಲು ಮಾರ್ಗೋಪಾಯ ಇಲ್ಲದಿರುವುದನ್ನು ರಾಜ್ಯಗಳು ತಮ್ಮ ಆಗ್ರಹಕ್ಕೆ ಕಾರಣವನ್ನಾಗಿ ಉಲ್ಲೇಖಿಸಿವೆ. ಅರ್ಥ ವ್ಯವಸ್ಥೆಯಲ್ಲಿ ಸರ್ಕಾರಗಳಿಂದ ಆಗುವ ವೆಚ್ಚದಲ್ಲಿ ರಾಜ್ಯ ಸರ್ಕಾರಗಳ ಪಾಲು ಶೇ 60ಕ್ಕಿಂತ ಹೆಚ್ಚಿದೆ. ರಾಷ್ಟ್ರೀಯ ವರಮಾನಕ್ಕೆ ತಾವು ನೀಡುವ ಕೊಡುಗೆಗೆ ಹೋಲಿಸಿದರೆ ತಮಗೆ ಸಿಗುವ ಮೊತ್ತ ಬಹಳ ಕಡಿಮೆ ಎಂಬ ಅಸಮಾಧಾನವು ದಕ್ಷಿಣದ ರಾಜ್ಯಗಳಲ್ಲಿ ಈಗಾಗಲೇ ಇದೆ. ರಾಜ್ಯಗಳ ತೆರಿಗೆ ವರಮಾನದ ಪಾಲನ್ನು ತಗ್ಗಿಸುವ ಆಲೋಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಹಣಕಾಸು ಆಯೋಗವನ್ನು ರಾಜ್ಯಗಳ ಹಕ್ಕು ಹತ್ತಿಕ್ಕುವ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಕೇಂದ್ರ ಯತ್ನಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಆಲೋಚನೆಯು ಪ್ರತಿಗಾಮಿ. ಇದು ಒಕ್ಕೂಟ ವ್ಯವಸ್ಥೆಯಲ್ಲಿನ ಸಂಬಂಧವನ್ನು ಇನ್ನಷ್ಟು ಹಾಳು ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.