ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳು ದೇಶದ ಗಮನಸೆಳೆದಿರುವ ಸಂದರ್ಭದಲ್ಲೇ, ಮಹಿಳೆಯರ ಸುರಕ್ಷತೆಯ ಬಗ್ಗೆ ಅನುಮಾನ ಮೂಡಿಸುವ ಘಟನೆಗಳು ಕರ್ನಾಟಕದಲ್ಲಿ ನಡೆದಿವೆ. ಮೈಸೂರು ಮತ್ತು ಕುಷ್ಟಗಿ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸುವ ಘಟನೆಗಳಾಗಿವೆ. ಮೈಸೂರಿನಲ್ಲಿ ನಡೆದಿರುವ ಅಪರಾಧ ಕೃತ್ಯದಲ್ಲಿ ಬಲೂನು ಮಾರಲು ಬಂದಿದ್ದ ಕಲಬುರಗಿಯ ಕುಟುಂಬದ ಹತ್ತು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದರ ಜೊತೆಗೆ, ಬರ್ಬರವಾಗಿ ಕೊಂದು, ಚರಂಡಿಯ ಮೇಲೆ ಮೃತದೇಹವನ್ನು ಎಸೆಯಲಾಗಿದೆ. ನತದೃಷ್ಟ ಬಾಲಕಿ, ರಾತ್ರಿ 12ಕ್ಕೆ ವ್ಯಾಪಾರ ಮುಗಿಸಿ ಗುಡಾರಕ್ಕೆ ಬಂದು ತಂದೆಯೊಂದಿಗೆ ಮಲಗಿದ್ದಾಳೆ. ಮುಂಜಾನೆ ನಾಲ್ಕರ ಸುಮಾರಿಗೆ ಮಳೆ ಬಂದಾಗ, ಸುರಕ್ಷಿತ ಸ್ಥಳಕ್ಕೆ ತೆರಳಲು ಕುಟುಂಬ ಎಚ್ಚರಗೊಂಡಾಗ ಬಾಲಕಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಗುಡಾರದಿಂದ ಸುಮಾರು 50 ಮೀಟರ್ ದೂರದಲ್ಲಿ ಬಾಲಕಿಯ ದೇಹ ಪತ್ತೆಯಾಗಿದೆ. ಕಿವಿ, ಕೆನ್ನೆ ಹಾಗೂ ಗಲ್ಲವನ್ನು ಕತ್ತರಿಸಿರುವುದು ಹಾಗೂ ಬಾಲಕಿಯ ದೇಹದ ಮೇಲಿರುವ ಇರಿತದ ಗಾಯಗಳು ಹಿಂಸಾತ್ಮಕ ಘಟನೆಯ ಭೀಕರತೆಗೆ ನಿದರ್ಶನದಂತಿವೆ. ಬೆಳಗ್ಗೆ ಮಗಳೊಂದಿಗೆ ಊರಿಗೆ ಮರಳಬೇಕಾಗಿದ್ದ ಕುಟುಂಬ, ಮೃತದೇಹದೊಂದಿಗೆ ತೆರಳಬೇಕಾದ ಸಂಕಟವನ್ನು ಅನುಭವಿಸಿದೆ. ಕುಷ್ಟಗಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಹದಿನೇಳು ವರ್ಷದ ಬಾಲಕಿಯ ಮೇಲೆ ಗ್ರಾಮ ಪಂಚಾಯಿತಿಯ ಕರವಸೂಲಿಗಾರ ಅತ್ಯಾಚಾರ ಎಸಗಿದ್ದಾನೆ. ಎರಡೂ ಪ್ರಕರಣಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವುದು ಹದಿನೆಂಟು ವರ್ಷದೊಳಗಿನ ಬಾಲಕಿಯರಾಗಿದ್ದು, ಪೋಕ್ಸೊ ಕಾಯ್ದೆಯನ್ವಯ ಪ್ರಕರಣಗಳು ದಾಖಲಾಗಿವೆ.
ಕಳೆದ ಕೆಲವು ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ವರದಿಯಾಗುತ್ತಿರುವ ಅತ್ಯಾಚಾರ ಪ್ರಕರಣಗಳು ಕ್ರೌರ್ಯದ ಮನಃಸ್ಥಿತಿಯ ತಲೆಮಾರೊಂದು ಸಕ್ರಿಯವಾಗಿರುವುದರ ಸಂಕೇತವಾಗಿವೆ. ಅತ್ಯಾಚಾರ ಎಸಗುವುದರ ಜೊತೆಗೆ ಸಂತ್ರಸ್ತರನ್ನು ಬರ್ಬರವಾಗಿ ಕೊಲ್ಲುವ ವಿಕೃತ ಮನೋಭಾವ ಹೆಚ್ಚಾಗುತ್ತಿದೆ. 2012ರಲ್ಲಿ ದೆಹಲಿಯಲ್ಲಿ ಯುವತಿಯೊಬ್ಬಳ ಮೇಲೆ ಚಲಿಸುವ ಬಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ, ‘ನಿರ್ಭಯಾ ಪ್ರಕರಣ’ ಹೆಸರಿನಲ್ಲಿ ವಿಶ್ವದ ಗಮನಸೆಳೆದಿತ್ತು. ಆ ಪ್ರಕರಣ ನಡೆದ ನಂತರ ಅತ್ಯಾಚಾರಿಗಳ ವಿರುದ್ಧದ ಹೋರಾಟವೊಂದು ಸಣ್ಣ ಪ್ರಮಾಣದಲ್ಲಿ ರೂಪುಗೊಂಡಿದೆಯಾದರೂ, ಹಿಂಸ್ರಪಶುಗಳ ಅಟ್ಟಹಾಸ ಕೊನೆಯಾಗದಿರುವುದು ಕಳವಳ ಹುಟ್ಟಿಸುವಂತಿದೆ. ಕೋಲ್ಕತ್ತದಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ, ಮಹಾರಾಷ್ಟ್ರದಲ್ಲಿ ಇಬ್ಬರು ಪುಟ್ಟ ಬಾಲಕಿಯರ ಮೇಲೆ ನಡೆದ ಲೈಂಗಿಕ ಪೀಡನೆ, ಉತ್ತರ ಪ್ರದೇಶದಲ್ಲಿ ದಾದಿಯ ಮೇಲೆ ವೈದ್ಯನಿಂದಲೇ ನಡೆದ ಅತ್ಯಾಚಾರದಂಥ ಪ್ರಕರಣಗಳು ನಾಗರಿಕ ಸಮಾಜಕ್ಕೆ ಕಳಂಕಪ್ರಾಯ. ಈ ದಾರುಣ ಘಟನೆಗಳ ಸಾಲಿಗೆ, ಮೈಸೂರಿನಲ್ಲಿ ನಡೆದ ಬಾಲಕಿಯ ಅತ್ಯಾಚಾರ–ಕೊಲೆ ಪ್ರಕರಣವೂ ಸೇರುವಂತಹದ್ದು.
ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸಿ ಸಮಾಜವನ್ನು ಮಾನವೀಯಗೊಳಿಸುವಲ್ಲಿ ರಾಜಕಾರಣದ ಪಾತ್ರ ಮಹತ್ವದ್ದು. ದುರದೃಷ್ಟವಶಾತ್, ರಾಜಕೀಯ ನಾಯಕರು ಸಂವೇದನಾಶೂನ್ಯರಾಗಿ ನಡೆದುಕೊಳ್ಳುತ್ತಿದ್ದಾರೆ. ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅರಣ್ಯಪ್ರದೇಶಕ್ಕೆ ಹೊತ್ತುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಕಳೆದ ವಾರ ನಡೆದಿದೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುವ ಸಂದರ್ಭದಲ್ಲಿ, ರಾತ್ರಿ ವೇಳೆ ಹೆಣ್ಣುಮಕ್ಕಳು ವಾಸಸ್ಥಳದಿಂದ ಹೊರಗೆ ಬಾರದೆ ಇರುವ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹೆಣ್ಣುಮಕ್ಕಳಿಗೆ ಸುರಕ್ಷತೆಯ ಭರವಸೆ ನೀಡಬೇಕಾದ ಮುಖ್ಯಮಂತ್ರಿಯೇ, ಸುರಕ್ಷತೆಗಾಗಿ ಮನೆಯೊಳಗೆ ಇರಿ ಎಂದು ಹೇಳಿರುವುದು ದುರದೃಷ್ಟಕರ. ಅವರ ಮಾತು, ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯವನ್ನೂ ಸೂಚಿಸುವಂತಿದೆ. ಕಳೆದ ವರ್ಷ ಕೋಲ್ಕತ್ತದ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದಲ್ಲೂ ಮಮತಾ ಬ್ಯಾನರ್ಜಿ ಅವರ ನಡವಳಿಕೆ ಟೀಕೆಗೊಳಗಾಗಿತ್ತು. ಮೈಸೂರು ಮತ್ತು ಕುಷ್ಟಗಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಬಗ್ಗೆ ಕರ್ನಾಟಕದ ರಾಜಕಾರಣಿಗಳ ಸ್ಪಂದನವೂ ನಿರಾಶಾದಾಯಕವಾಗಿದೆ. ಸಂತ್ರಸ್ತರ ಕುಟುಂಬದ ಬೆಂಬಲಕ್ಕೆ ನಿಲ್ಲಬೇಕಾದವರು ಹಾಗೂ ಅಪರಾಧಿಗಳನ್ನು ಕಠಿಣ ಕಾನೂನು ಕ್ರಮಕ್ಕೆ ಗುರಿಯಾಗಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಬೇಕಾದವರು, ಕ್ಷುಲ್ಲಕ ರಾಜಕಾರಣದ ಬೀದಿ ಪ್ರದರ್ಶನದಲ್ಲಿ ನಿರತರಾಗಿದ್ದಾರೆ. ಅತ್ಯಾಚಾರಿಗಳ ವಿಕೃತಿಯಂತೆಯೇ, ರಾಜಕೀಯ ನಾಯಕರ ಸಂವೇದನಾರಾಹಿತ್ಯ ಮನಃಸ್ಥಿತಿಯೂ ಅಪಾಯಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.