ಸಂಪಾದಕೀಯ
ಸಂಸತ್ತಿನ ಮುಂದೆ ಮಂಡನೆಗೊಂಡಿರುವ ಹೊಸ ಮಸೂದೆಗಳು ಪ್ರಜಾಪ್ರಭುತ್ವದ ಮೂಲ ಆಶಯಗಳು ಹಾಗೂ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿವೆ.
––––
ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಬುಧವಾರ ಮಂಡಿಸಿರುವ ಸಂವಿಧಾನದ 130ನೇ ತಿದ್ದುಪಡಿ ಮಸೂದೆ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಮಸೂದೆಗಳು ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಘಿಸುತ್ತಿವೆ. ಅಲ್ಲದೆ, ಪ್ರಜಾತಾಂತ್ರಿಕ ರಾಜಕೀಯ ವ್ಯವಸ್ಥೆಯನ್ನು ರೂಪಿಸಿರುವ ಮೂಲ ಪರಿಕಲ್ಪನೆಗಳಿಗೆ ಕೂಡ ಇವು ವಿರುದ್ಧವಾಗಿವೆ. ಈ ಮಸೂದೆಗಳನ್ನು ಬಹಳ ತಪ್ಪು ಗ್ರಹಿಕೆಯಿಂದ ರೂಪಿಸಲಾಗಿದೆ, ಮಸೂದೆಗಳ ಹಿಂದಿನ ಆಶಯವು ತಪ್ಪಾಗಿದೆ ಹಾಗೂ ಇವು ಕಾನೂನಿನ ರೂಪ ಪಡೆದು ಜಾರಿಗೆ ಬಂದಲ್ಲಿ ಅನುಷ್ಠಾನದಲ್ಲಿ ಅನ್ಯಾಯ ಆಗುವ ಸಾಧ್ಯತೆ ಇದೆ. ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರು ಕನಿಷ್ಠ ಐದು ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗುವ ಅಪರಾಧ ಎಸಗಿದ ಆರೋಪದ ಅಡಿಯಲ್ಲಿ ಬಂಧಿತರಾಗಿ, ಸತತ 30 ದಿನಗಳವರೆಗೆ ಜೈಲಿನಲ್ಲಿ ಇದ್ದರೆ ಅವರು ತಮ್ಮ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳುವ ಈ ಮಸೂದೆಗಳು, ಅವರ ವಿರುದ್ಧದ ಆರೋಪಗಳು ಸಾಬೀತಾಗುವ ಮುನ್ನವೇ ಅವರನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶ ಮಾಡಿಕೊಡುತ್ತವೆ. ಮಸೂದೆಗಳನ್ನು ಈಗ ಸಂಸತ್ತಿನ ಜಂಟಿ ಸಮಿತಿಯ ಪರಾಮರ್ಶೆಗೆ ರವಾನಿಸಲಾಗಿದೆ. ಮಸೂದೆಗಳನ್ನು ಆದಷ್ಟು ಬೇಗ ಕಾನೂನಿನ ರೂಪದಲ್ಲಿ ಜಾರಿಗೆ ತರುವ ಉದ್ದೇಶದಿಂದ, ಸಂಸತ್ತಿನ ಮುಂದಿನ ಅಧಿವೇಶನಕ್ಕೆ ಮೊದಲು ಮಸೂದೆಯ ಬಗ್ಗೆ ಅಭಿಪ್ರಾಯ ನೀಡಬೇಕು ಎಂದು ಸಮಿತಿಗೆ ತಿಳಿಸಲಾಗಿದೆ.
ಭ್ರಷ್ಟ ರಾಜಕಾರಣಿಗಳು ಅಧಿಕಾರ ದಲ್ಲಿ ಮುಂದುವರಿಯುವುದನ್ನು ಯಾರೂ ಬಯಸುವುದಿಲ್ಲ. ಆದರೆ, ಕಾನೂನಿನ ಪ್ರಕ್ರಿಯೆಗಳನ್ನು ಸರಿಯಾಗಿ ಪಾಲಿಸದೆ ಯಾವುದೇ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸುವುದನ್ನು ಯಾರೂ ಬೆಂಬಲಿಸಬಾರದು. ಈ ಮಸೂದೆಗಳು ಕಾನೂನಿನ ರೂಪದಲ್ಲಿ ಜಾರಿಗೆ ಬಂದಲ್ಲಿ, ರಾಜಕೀಯವಾಗಿ ವಿರೋಧಿಸುವ ಪಕ್ಷಗಳನ್ನು ಹಾಗೂ ಆ ಪಕ್ಷಗಳ ಸಚಿವರನ್ನು ಕಿರುಕುಳಕ್ಕೆ ಗುರಿಪಡಿಸಲು ಕೇಂದ್ರ ಸರ್ಕಾರಕ್ಕೆ ಒಂದು ಅಸ್ತ್ರವಾಗಿ ಒದಗಿಬರಲಿವೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಸೇರಿದಂತೆ ಕೇಂದ್ರದ ವಿವಿಧ ತನಿಖಾ ಸಂಸ್ಥೆಗಳನ್ನು, ಬಿಜೆಪಿಯನ್ನು ರಾಜಕೀಯವಾಗಿ ವಿರೋಧಿಸುವ ಪಕ್ಷಗಳ ನಾಯಕರಿಗೆ ಕಿರುಕುಳ ನೀಡಲು ಈಗ ಬಳಕೆ ಮಾಡಲಾಗುತ್ತಿದೆ. ಈಗಿರುವ ಕಾನೂನುಗಳು ಹಾಗೂ ಅವುಗಳ ಅಡಿಯಲ್ಲಿ ವಿವರಿಸಿರುವ ಪ್ರಕ್ರಿಯೆಗಳು ಈ ರಾಜಕೀಯ ನಾಯಕರಿಗೆ ಒಂದಿಷ್ಟು ರಕ್ಷಣೆಗಳನ್ನು ಒದಗಿಸಿವೆ. ಆದರೆ, ಪ್ರಸ್ತಾವಿತ ಕಾನೂನುಗಳು ಎಲ್ಲ ಬಗೆಯ ರಕ್ಷಣೆಗಳನ್ನು ಇಲ್ಲವಾಗಿಸುತ್ತವೆ. ಕೇಂದ್ರ ಸರ್ಕಾರದ ಮನಸೋಇಚ್ಛೆ ನಡೆಗಳು ಹಾಗೂ ದ್ವೇಷದ ಕ್ರಮಗಳಿಂದ ರಕ್ಷಣೆ ಇಲ್ಲದಂತಾಗುತ್ತದೆ. ಈ ಕಾನೂನುಗಳು, ಸಂವಿಧಾನದ 356ನೇ ವಿಧಿಯ ಹೊಸ ರೂಪದಂತೆ ಆಗಲಿವೆ; ಈ ಕಾನೂನುಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ಸಾಧ್ಯವಾಗುತ್ತದೆ. ಈ ಕಾನೂನುಗಳು ಸಂಸದೀಯ ಪ್ರಜಾತಂತ್ರದ ಅಗತ್ಯ ನಿಯಮಗಳಿಗೆ ಅನುಗುಣವಾಗಿ ಇಲ್ಲ. ಅಲ್ಲದೆ, ಇವು ಸಾಂವಿಧಾನಿಕ ಒಕ್ಕೂಟ ವ್ಯವಸ್ಥೆಗೆ ಪೆಟ್ಟುಕೊಡುವಂತೆ ಇವೆ. ಸಂವಿಧಾನದ ವಿವಿಧ ಅಂಗಗಳ ಅಧಿಕಾರ ವ್ಯಾಪ್ತಿಗೆ ಈ ಕಾನೂನುಗಳು ಸವಾಲೊಡ್ಡುವಂತೆ ಇವೆ, ಚುನಾಯಿತ ಸರ್ಕಾರಗಳನ್ನು ವಜಾಗೊಳಿಸಲು ಕಾರ್ಯಾಂಗದ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುತ್ತವೆ.
ಹೊಸ ಮಸೂದೆಗಳನ್ನು ಕೇಂದ್ರ ಸರ್ಕಾರವು ಸಮರ್ಥಿಸಿಕೊಂಡಿದೆ. ಈ ಮಸೂದೆಗಳಲ್ಲಿ ಸಾರ್ವಜನಿಕ ಹಿತ ಅಡಗಿದೆ; ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕರಾಗಿ ಹಾಗೂ ಅನುಮಾನಗಳಿಗೆ ಅತೀತರಾಗಿ ಇರಬೇಕಾದುದರ ಅಗತ್ಯ ಇದೆ ಎಂದು ಹೇಳಿದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಡೆಗಳನ್ನು ಗಮನಿಸಿ ಹೇಳುವುದಾದರೆ, ನೈತಿಕ ನೆಲೆಗಟ್ಟಿನ ಈ ವಾದಗಳು ರಾಜಕೀಯ ವಿರೋಧಿಗಳ ವಿರುದ್ಧ ಕ್ರಮ ಜರುಗಿಸುವುದಕ್ಕೆ ಒಂದು ನೆಪವಾಗಿ ಬರುತ್ತವೆ, ಅಷ್ಟೇ. ಕಾನೂನು ಪ್ರಕ್ರಿಯೆಗಳ ನಿಧಾನಗತಿ ಹಾಗೂ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದನ್ನು ಗಮನಿಸಿ ಕೇಂದ್ರ ಸರ್ಕಾರವು ತನ್ನ ವಿರೋಧಿಗಳ ವಿರುದ್ಧ ತ್ವರಿತವಾಗಿ ಕ್ರಮ ಜರುಗಿಸುವುದಕ್ಕೆ ಈ ಹೆಜ್ಜೆ ಇರಿಸಿರಬಹುದು. ಈ ಮಸೂದೆಗಳು ಭ್ರಷ್ಟಾಚಾರವನ್ನು ಕೊನೆಗೊಳಿಸುವುದಿಲ್ಲ, ಇವು ವಿರೋಧ ಪಕ್ಷಗಳನ್ನು ದುರ್ಬಲಗೊಳಿಸುತ್ತವೆ. ಮಸೂದೆಗಳಿಗೆ ಸಂಸತ್ತಿನ ಅಂಗೀಕಾರ ದೊರೆತರೂ ನ್ಯಾಯಾಂಗದ ಪರಿಶೀಲನೆಯ ಸಂದರ್ಭದಲ್ಲಿ ಅವು ಬಿದ್ದುಹೋಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ, ‘ತಪ್ಪಿತಸ್ಥ ಎಂದು ಸಾಬೀತಾಗುವವರೆಗೆ ಯಾರೂ ದೋಷಿ ಅಲ್ಲ’ ಎಂಬ ಮೂಲ ತತ್ವಕ್ಕೆ ಮಸೂದೆಗಳು ವಿರುದ್ಧವಾಗಿವೆ. ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯು ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕು ಎಂಬುದು ಆತ, ಆತನ ಪಕ್ಷ ಹಾಗೂ ಜನರಿಗೆ ಸಂಬಂಧಿಸಿದ ವಿಚಾರ. ಆರೋಪಿಯು ತಪ್ಪಿತಸ್ಥ ಎಂಬುದು ಸಾಬೀತಾಗುವವರೆಗೂ ಅಲ್ಲಿ ಕಾನೂನಿಗೆ ಯಾವುದೇ ಪಾತ್ರ ಇರಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.