ADVERTISEMENT

ಸಂಪಾದಕೀಯ | ನಿಯಮದ ನೆಪ ಬೇಡ; ನೊಂದವರ ಕಣ್ಣೀರು ಒರೆಸಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 19:47 IST
Last Updated 2 ಆಗಸ್ಟ್ 2020, 19:47 IST
ಕೊರೊನಾ ಬಿಕ್ಕಟ್ಟು ಮತ್ತು ಸಂಕಷ್ಟದಲ್ಲಿರುವವರಿಗೆ ಪರಿಹಾರ
ಕೊರೊನಾ ಬಿಕ್ಕಟ್ಟು ಮತ್ತು ಸಂಕಷ್ಟದಲ್ಲಿರುವವರಿಗೆ ಪರಿಹಾರ   

ಕೊರೊನಾ ಸೋಂಕು ಹರಡುವಿಕೆಯನ್ನುತಡೆಯಲು ವಿಧಿಸಲಾಗಿದ್ದ ಲಾಕ್‌ಡೌನ್‌ನ ನಿರ್ಬಂಧಗಳನ್ನು ಈಗ ಸಡಿಲಿಸಲಾಗಿದೆ. ಆದರೆ, ಜನರ ಬದುಕು ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಈ ನಾಲ್ಕು ತಿಂಗಳ ಅವಧಿಯು ಕೆಲವು ವೃತ್ತಿ ಸಮುದಾಯಗಳ ಪಾಲಿಗೆ ದುಃಸ್ವಪ್ನವಾಗಿ ಕಾಡಿದೆ. ಆ ಸಮುದಾಯಗಳು ಹೊಟ್ಟೆ ಹೊರೆಯಲು ನೆಚ್ಚಿಕೊಂಡಿದ್ದ ದೈನಂದಿನ ಕೆಲಸಕ್ಕೇ ಕೋವಿಡ್‌ ಬಿಕ್ಕಟ್ಟು ಕಂಟಕವಾಗಿ ಪರಿಣಮಿಸಿದೆ. ಹಾಗೆ ಸಂಕಷ್ಟ ಅನುಭವಿಸಿದವರಲ್ಲಿ ಕ್ಷೌರ ವೃತ್ತಿನಿರತರು ಹಾಗೂ ಬಟ್ಟೆ ಶುಚಿಗೊಳಿಸುವ ಕಾಯಕದಲ್ಲಿ ತೊಡಗಿರುವವರೂ ಸೇರಿದ್ದಾರೆ. ರಾಜ್ಯ ಸರ್ಕಾರ ಈ ವೃತ್ತಿನಿರತರಿಗೆ ಒಂದು ಬಾರಿಯ ಪರಿಹಾರವಾಗಿ ಪ್ರತೀ ಕುಟುಂಬಕ್ಕೆ ₹ 5,000 ವಿಶೇಷ ನೆರವನ್ನು ಘೋಷಿಸಿತ್ತು. ಲೆಕ್ಕಾಚಾರದ ಪ್ರಕಾರ, ಈ ಎರಡೂ ಸಮುದಾಯಗಳ 2.90 ಲಕ್ಷ ಕುಟುಂಬಗಳಿಗೆ ಪರಿಹಾರ ಸಿಗಬೇಕಿತ್ತು. ಆದರೆ, ಇದುವರೆಗೆ ಸಿಕ್ಕಿದ್ದು 40 ಸಾವಿರ ಕುಟುಂಬಗಳಿಗಷ್ಟೆ. ‘ನೆರವು ಕೋರಿ ಸಲ್ಲಿಕೆಯಾಗಿದ್ದ ಹೆಚ್ಚಿನ ಅರ್ಜಿಗಳು ತಿರಸ್ಕೃತಗೊಂಡಿವೆ. ಇದಕ್ಕೆ ಮುಖ್ಯ ಕಾರಣ, ನೆರವು ನೀಡಲು ರೂಪಿಸಲಾಗಿರುವ ನಿಯಮಗಳು’ ಎಂದು ವರದಿಯಾಗಿದೆ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಬಿಪಿಎಲ್‌ ಪಡಿತರ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಹಾಗೂ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆಯನ್ನು ಜೋಡಿಸಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಅರ್ಹರಿಗೆ ಮಾತ್ರ ನೆರವು ಸಿಗಬೇಕು ಎನ್ನುವ ಸರ್ಕಾರದ ಕಳಕಳಿಯನ್ನು ಯಾರೂ ಪ್ರಶ್ನೆ ಮಾಡಲಾರರು. ಆದರೆ, ಸಂಕಷ್ಟದಲ್ಲಿರುವ ಜನರ ಕಣ್ಣೀರು ಒರೆಸಲು ನಿಯಮಗಳು ಅಡ್ಡಿಯಾಗಬಾರದಲ್ಲವೇ?

ಹಾಗೆ ನೋಡಿದರೆ, ಕ್ಷೌರ ವೃತ್ತಿನಿರತರು ಮತ್ತು ಬಟ್ಟೆ ಶುಚಿಗೊಳಿಸುವ ಕಾಯಕದಲ್ಲಿ ತೊಡಗಿರುವವರಿಗೆ ಇತರ ಎಲ್ಲ ವೃತ್ತಿ ಸಮುದಾಯಗಳಿಗಿಂತ ಸೋಂಕಿನ ಭೀತಿ ಹೆಚ್ಚು. ಅದರಲ್ಲೂ ಕ್ಷೌರ ವೃತ್ತಿನಿರತರು, ಅವರ ವೃತ್ತಿಯ ಸ್ವರೂಪದಿಂದಾಗಿ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡುವುದು ಕಷ್ಟ. ರೋಗಲಕ್ಷಣವಿಲ್ಲದ ಗ್ರಾಹಕರು ಬಂದು, ಅವರಿಂದ ಒಂದುವೇಳೆ ಸೋಂಕು ಹರಡಿದರೆ? ಜನ ಬಳಸಿದ ಮಲಿನ ಬಟ್ಟೆ, ವಸ್ತ್ರಗಳನ್ನು ಶುಚಿಗೊಳಿಸುವ ವೃತ್ತಿನಿರತರಿಗೂ ಸೋಂಕಿನ ಭೀತಿ ಇದ್ದೇ ಇದೆ. ಎಷ್ಟೇ ಎಚ್ಚರಿಕೆಯಿಂದ ಕೆಲಸ ಮಾಡಿದರೂ ಅಪಾಯದ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ, ಈ ಎರಡೂ ಸಮುದಾಯಗಳ ಎಷ್ಟೋ ಜನ ತಾತ್ಕಾಲಿಕವಾಗಿ ವೃತ್ತಿಯಿಂದಲೇ ವಿಮುಖರಾಗಿದ್ದಾರೆ. ಆದರೆ, ಜೀವನೋಪಾಯಕ್ಕಾಗಿ ಪರ್ಯಾಯ ಮಾರ್ಗ ಶೋಧಿಸುವುದು ಇಂತಹ ಸಂದರ್ಭದಲ್ಲಿ ಸುಲಭದ ಕೆಲಸವಲ್ಲ. ಇದ್ದ ಉದ್ಯೋಗಗಳನ್ನೇ ಉಳಿಸಿಕೊಳ್ಳುವುದು ಕಷ್ಟವಾಗಿರುವ ಈ ಸನ್ನಿವೇಶದಲ್ಲಿ ಹೊಸ ಉದ್ಯೋಗಾವಕಾಶಗಳು ಅಷ್ಟು ಸಲೀಸಾಗಿ ಸೃಷ್ಟಿಯಾಗಲಾರವು. ಪರಿಸ್ಥಿತಿಯ ಇಕ್ಕಟ್ಟಿನಿಂದ ಬದುಕು ಅತಂತ್ರವಾಗಿರುವವರ ಕಣ್ಣೀರನ್ನು ಒರೆಸುವುದು ಸರ್ಕಾರದ ಹೊಣೆ. ಸಂತ್ರಸ್ತರಿಗೆ ಕೇಂದ್ರ ಸರ್ಕಾರವೂ ಭರಪೂರ ನೆರವನ್ನು ಘೋಷಿಸಿತ್ತು. ಎಷ್ಟು ಜನರಿಗೆ ಅಂತಹ ನೆರವಿನ ಪ್ರಯೋಜನ‌ ಸಿಕ್ಕಿದೆ, ಯಾರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎನ್ನುವುದರ ಪರಿಶೀಲನೆ ನಡೆಯಬೇಕು. ಯಾವ ಅರ್ಹರೂ ಯೋಜನೆಯಿಂದ ವಂಚಿತರಾಗಬಾರದು ಎನ್ನುವುದು ಈ ಸಂದರ್ಭದ ಮೂಲಮಂತ್ರವಾಗಬೇಕು. ಜನ ಬೀದಿಗೆ ಬಿದ್ದು ನೋವು ಅನುಭವಿಸುತ್ತಿರುವಾಗ ನೆರವಿನ ಹಣವನ್ನು ಖಜಾನೆಯಲ್ಲಿ ಕೊಳೆಸುತ್ತಾ ನಿಯಮದ ಪಾಠ ಹೇಳುತ್ತಾ ಕೂರುವಲ್ಲಿ ಯಾವುದೇ ಅರ್ಥವಿಲ್ಲ. ಹಾಗೆಯೇ ಸೌಲಭ್ಯವಂಚಿತ ಕಾರ್ಮಿಕರು, ಹಮಾಲಿಗಳು, ಆಟೊ ಚಾಲಕರು, ಬೀದಿಬದಿಯ ವ್ಯಾಪಾರಿಗಳು... ಹೀಗೆ ಲಾಕ್‌ಡೌನ್‌ನಿಂದ ಯಾರೆಲ್ಲರ ಬದುಕು ದಯನೀಯವಾಗಿದೆಯೋ ಅವರಿಗೂ ನೆರವು ಒದಗಿಸುವಲ್ಲಿ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು. ಹಸಿವುಮುಕ್ತ ಸಮಾಜದ ಕುರಿತು ಬರೀ ಘೋಷಣೆ ಹೊರಡಿಸಿದರೆ ಏನು ಪ್ರಯೋಜನ? ಅನುಷ್ಠಾನದಲ್ಲಿ ಅದು ಕಾಣಬೇಕು. ಶುಷ್ಕ ನಿಯಮಗಳಿಗೆ ಜೋತು ಬೀಳದೆ ಸಹಾನುಭೂತಿಯಿಂದ, ಮಾನವೀಯ ಅಂತಃಕರಣದಿಂದ ನೊಂದವರ ಅರ್ಜಿ ಪರಿಶೀಲಿಸಿ, ಪರಿಹಾರ ಒದಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT