ADVERTISEMENT

ಸಂಪಾದಕೀಯ: ಕಾಲಹರಣ ಮಾಡಿದ್ದು ಸಾಕು; ಯುವವೈದ್ಯರ ಸೇವೆ ಬಳಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 21:48 IST
Last Updated 27 ಏಪ್ರಿಲ್ 2021, 21:48 IST
.
.   

ಕೋವಿಡ್‌ನ ಎರಡನೇ ಅಲೆಯ ಹೊಡೆತವನ್ನು ತಾಳಲಾಗದೆ ನಮ್ಮ ಆರೋಗ್ಯ ಮೂಲಸೌಕರ್ಯ ಕುಸಿದುಬಿದ್ದಿದೆ. ಸೋಂಕಿತರ ಆರೈಕೆಗೆ ವೈದ್ಯಕೀಯ ಸಿಬ್ಬಂದಿಯ ಕೊರತೆ ಕೂಡ ಈಗ ತೀವ್ರವಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ, ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವೈದ್ಯಕೀಯ ಪದವಿಯನ್ನು ಪೂರೈಸಿದ ಸುಮಾರು 7,000 ವಿದ್ಯಾರ್ಥಿಗಳ ಸೇವೆ ಪಡೆಯುವ ಪ್ರಕ್ರಿಯೆ ಸಂಕೀರ್ಣವಾಗಿಪರಿಣಮಿಸಿರುವುದು ದುರದೃಷ್ಟಕರ. ಒಂದೆಡೆ, ವೈದ್ಯಕೀಯ ಸ್ನಾತಕೋತ್ತರವಿದ್ಯಾರ್ಥಿಗಳನ್ನು ಕೋವಿಡ್‌ ಆಸ್ಪತ್ರೆಗಳಲ್ಲಿ ಯಾವುದೇ ಹೆಚ್ಚುವರಿ ವೇತನ ನೀಡದೆ ದುಡಿಸಿಕೊಳ್ಳಲಾಗುತ್ತಿದೆ. ಇನ್ನೊಂದೆಡೆ, ವೈದ್ಯಕೀಯ ಪದವೀಧರ ವಿದ್ಯಾರ್ಥಿಗಳು ಸೇವೆ ಸಲ್ಲಿಸಲು ಇರುವ ಅವಕಾಶ ಕೂಡ ವ್ಯರ್ಥವಾಗಿ ಹೋಗುತ್ತಿದೆ. ‘ಕಡ್ಡಾಯ ಗ್ರಾಮೀಣ ಸೇವೆ’ ಕಾಯ್ದೆಯಅನುಷ್ಠಾನದಲ್ಲಿ ಆಗಿರುವ ಎಡವಟ್ಟಿನಿಂದ ಸಮಸ್ಯೆ ಇಷ್ಟೊಂದು ಕಗ್ಗಂಟಾಗಿದೆ. ಕಡ್ಡಾಯ ಗ್ರಾಮೀಣ ಸೇವೆಯನ್ನು ಪೂರೈಸದ ವಿದ್ಯಾರ್ಥಿಗಳ ವೈದ್ಯ ಪದವಿಯನ್ನು ನೋಂದಣಿ ಮಾಡುವಂತಿಲ್ಲ ಎನ್ನುತ್ತದೆ ನಿಯಮ. ಹೀಗಾಗಿ ಪದವಿ ಪೂರೈಸಿದರೂ ಕಡ್ಡಾಯ ಸೇವೆ ಪೂರ್ಣಗೊಳಿಸದಿದ್ದರೆ ಅಂಥವರು ವೈದ್ಯರಾಗಿ ಕರ್ತವ್ಯ ನಿರ್ವಹಿಸಲಾಗದು.

ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ವೈದ್ಯ ವಿದ್ಯಾರ್ಥಿಗಳು ಹಿಂದೇಟು ಹಾಕುವುದು, ಸರ್ಕಾರ ಹೋಗಲೇಬೇಕೆಂದು ಬಿಗಿಪಟ್ಟು ಹಿಡಿಯುವುದು– ಈ ಹಗ್ಗಜಗ್ಗಾಟ ಹತ್ತು ವರ್ಷಗಳಿಂದಲೂ ನಡೆಯುತ್ತಿದೆ. ‘ವೈದ್ಯಕೀಯ ಕೋರ್ಸ್‌ ಪೂರೈಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ಕಾಯ್ದೆ–2012’ ಅನ್ನು ಗ್ರಾಮೀಣ ಭಾಗಗಳಲ್ಲಿ ವೈದ್ಯಕೀಯ ಸೇವೆ ಹೆಚ್ಚಿಸುವಸದುದ್ದೇಶದಿಂದಲೇ ರೂಪಿಸಲಾಗಿದೆ. ಹಿಂದಿನ ವರ್ಷಗಳಲ್ಲಿ, ಹೈಕೋರ್ಟ್‌ ಆದೇಶಗಳೂ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಈ ಕಾಯ್ದೆಯನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವುದು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಕಾಯ್ದೆಯನ್ನು ಈ ವರ್ಷ ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಪಟ್ಟು ಹಿಡಿದಿತ್ತು. ಆದರೆ, ಗ್ರಾಮೀಣ ಸೇವೆಗೆ ಸಿದ್ಧರಿದ್ದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲು ಆರೋಗ್ಯ ಇಲಾಖೆ ಮೀನಮೇಷ ಎಣಿಸಿತು. ಈ ಮಧ್ಯೆ, ಪದವಿ ಪೂರೈಸಿದವರಿಗೆ ಅಂಕಪಟ್ಟಿ ನೀಡದಂತೆ ಕಾಲೇಜುಗಳಿಗೆ ನಿರ್ದೇಶನವೂ ಹೋಯಿತು. ಈ ಕಾರಣಗಳಿಂದ ಸಮಸ್ಯೆ ಬಿಗಡಾಯಿಸಿದೆ.

ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಪ್ರವೇಶ ಬಯಸಿದ ವಿದ್ಯಾರ್ಥಿಗಳು ಗ್ರಾಮೀಣ ಸೇವೆಗೆ ಒಪ್ಪಿ ₹ 30 ಲಕ್ಷದಿಂದ ₹ 50 ಲಕ್ಷದವರೆಗೆ ಬಾಂಡ್‌ ನೀಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಹಾಗೆಯೇ ಪದವಿಯನ್ನು ಮುಗಿಸಿದವರಿಗೆ, ಕಾಲೇಜಿನಿಂದ ಹೊರಬಿದ್ದು ಮೂರು ತಿಂಗಳಾದರೂ ಸ್ವತಂತ್ರವಾಗಿ ಕೆಲಸ ಮಾಡಲೂ ಅವಕಾಶ ನೀಡದೆ, ಗ್ರಾಮೀಣ ಸೇವೆಗೂ ಕಳುಹಿಸದೆ ಕಾಲಹರಣ ಮಾಡಲಾಗಿದೆ. ಸರ್ಕಾರ, ಸಕಾಲದಲ್ಲಿ ಆದೇಶ ಹೊರಡಿಸಿದ್ದರೆ ಈ ವೇಳೆಗಾಗಲೇ ವಿದ್ಯಾರ್ಥಿಗಳು ಮೂರು ತಿಂಗಳು ಗ್ರಾಮೀಣ ಸೇವೆಯನ್ನು ಪೂರೈಸಿರುತ್ತಿದ್ದರು. ಹೊಸದಾಗಿ ನೇಮಕಗೊಂಡವರಿಗೆ ವೇತನ ನೀಡಲು ಅನುದಾನದ ಕೊರತೆ, ಕಾನೂನು ಅಡೆತಡೆ, ಆರೋಗ್ಯ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ನಿರ್ಣಯ ಕೈಗೊಳ್ಳುವಲ್ಲಿ ಮಾಡಿದ ವಿಳಂಬವೇ ಇಂದಿನ ಬಿಕ್ಕಟ್ಟಿಗೆ ಕಾರಣ. ಈ ಮಧ್ಯೆ, ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ನೀಟ್‌ ಪರೀಕ್ಷೆ ಎದುರಿಸಲು ದೇಶದಾದ್ಯಂತ ಒಂದೂಮುಕ್ಕಾಲು ಲಕ್ಷ ವೈದ್ಯ ಪದವೀಧರರು ತಯಾರಿ ನಡೆಸಿದ್ದರು. ಪರೀಕ್ಷೆ ಮುಗಿದಿದ್ದರೆ ಅಷ್ಟು ಜನ ಯುವವೈದ್ಯರು ರೋಗಿಗಳ ಸೇವೆಗೆ ಲಭ್ಯರಾಗುತ್ತಿದ್ದರು.

ADVERTISEMENT

ಪರೀಕ್ಷೆ ಮುಂದಕ್ಕೆ ಹೋಗಿದ್ದರಿಂದ ಆ ಅವಕಾಶವೂ ತಪ್ಪಿದೆ. ಸಾರ್ವಜನಿಕ ಆರೋಗ್ಯ ನಿರ್ಲಕ್ಷಿಸಿ ಚುನಾವಣೆ ಮೇಲೆ ಚುನಾವಣೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಪರೀಕ್ಷೆಗಳು ಮಾತ್ರ ಮುಂದಕ್ಕೆ ಹೋಗುತ್ತಲೇ ಇವೆ. ಇರಲಿ, ಗ್ರಾಮೀಣ ಸೇವೆಗೆ ಸಿದ್ಧರಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಒಂದಿನಿತೂ ವಿಳಂಬ ಮಾಡದೆ, ನಿಯಮಗಳ ನೆಪವನ್ನೂ ಹೇಳದೆ ನೇಮಕಾತಿ ಪತ್ರವನ್ನು ಕೊಡಬೇಕು. ವೈದ್ಯ ಪದವಿ ನೋಂದಣಿ ಪ್ರಕ್ರಿಯೆ ಆರಂಭಿಸುವುದಾಗಿ ಆರೋಗ್ಯ ಸಚಿವರು ಹೇಳಿದ್ದಾರೆ. ಇದು ಬರೀ ಮಾತಾಗಬಾರದು. ಈ ಪ್ರಕ್ರಿಯೆ ತ್ವರಿತವಾಗಿಪೂರ್ಣಗೊಳ್ಳಬೇಕು. ಇಡೀ ದೇಶ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಯುವವೈದ್ಯರು ಲಭ್ಯವಿದ್ದರೂ ಅವರ ಸೇವೆಯನ್ನು ಪಡೆಯದೆ ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ವೈದ್ಯಕೀಯ ವಿದ್ಯಾರ್ಥಿಗಳೂ ಅಷ್ಟೆ; ಪದವಿ ಅಧ್ಯಯನಕ್ಕೆ ಸೇರುವಾಗಲೇ ಗ್ರಾಮೀಣ ಸೇವೆಗೆ ಹೋಗುವ ನಿಯಮವನ್ನು ಒಪ್ಪಿ, ಆಮೇಲೆ ತಗಾದೆ ತೆಗೆಯುವುದು ಸರ್ವಥಾ ಸಮರ್ಥನೀಯ ನಡೆಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.