ADVERTISEMENT

ಸಂಪಾದಕೀಯ | ಮೀಸಲಾತಿಯಲ್ಲಿ ತಾರತಮ್ಯ: ತಪ್ಪುತಿದ್ದಿಕೊಳ್ಳಲು ಇನ್ನೂ ಕಾಲ ಮಿಂಚಿಲ್ಲ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 23:15 IST
Last Updated 8 ಆಗಸ್ಟ್ 2022, 23:15 IST
   

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾವಣೆಗಾಗಿ ವಾರ್ಡ್‌ವಾರು ಮೀಸಲಾತಿಯನ್ನು ನಿಗದಿ ಮಾಡಿ ರಾಜ್ಯ ಸರ್ಕಾರ ಪ್ರಕಟಿಸಿರುವ ಕರಡು ಪಟ್ಟಿಗೆ ತೀವ್ರವಾದ ಆಕ್ಷೇಪ ವ್ಯಕ್ತವಾಗಿದೆ ಮತ್ತು ಈ ಆಕ್ಷೇಪಕ್ಕೆ ಸೂಕ್ತ ಕಾರಣವೂ ಇದೆ. ಏಕೆಂದರೆ, ಮೀಸಲಾತಿ ನಿಗದಿ ಮಾಡಿರುವ ಕ್ರಮವು ತಾರತಮ್ಯದಿಂದ ಕೂಡಿರುವುದು ಮೇಲ್ನೋಟಕ್ಕೇ ಎದ್ದು ಕಾಣುತ್ತಿದೆ. ವಿರೋಧ ಪಕ್ಷದ ಪ್ರಮುಖ ಅಭ್ಯರ್ಥಿಗಳ ಗೆಲುವಿನ ಅವಕಾಶವನ್ನು ತಪ್ಪಿಸುವಂತಿರುವ ಮತ್ತು ಮೀಸಲಾತಿ ಪಟ್ಟಿಯು ತಾರತಮ್ಯದಿಂದ ಕೂಡಿದೆ ಎಂದು ದೂರಿ ಯಾರಾದರೂ ಕೋರ್ಟ್‌ ಮೆಟ್ಟಿಲೇರಿದರೆ, ಅದರಿಂದ ಚುನಾವಣೆ ಮುಂದೂಡಿಕೆಗೆ ಸಹಾಯವಾಗುತ್ತದೆ ಎನ್ನುವ ತಂತ್ರ ಈ ಕ್ರಮದ ಹಿಂದಿರುವುದು ಸುಸ್ಪಷ್ಟ.

ಸಂವಿಧಾನವು ಚುನಾವಣೆಯಲ್ಲಿ ಎಲ್ಲ ಸಮುದಾಯದವರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯವನ್ನು ಕಲ್ಪಿಸಲು ಮೀಸಲಾತಿ ಸೌಲಭ್ಯ ಒದಗಿಸಿದೆ. ಆದರೆ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಹವಣಿಸುತ್ತಿರುವಂತೆ ತೋರುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಆಯಾ ಕ್ಷೇತ್ರಗಳ ಮೀಸಲಾತಿ ನಿಗದಿ ಮಾಡಬೇಕು ಎನ್ನುವುದು ಸಂವಿಧಾನದ ನಿಯಮ. ನಗರಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡಿದ ನಿವೃತ್ತ ಅಧಿಕಾರಿಗಳ ತಂಡವೊಂದು ಹಾಲಿ ಮೀಸಲಾತಿ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಿದ್ದು, 187 ವಾರ್ಡ್‌ಗಳಲ್ಲಿ ನಿಗದಿ ಮಾಡಿದ ಮೀಸಲಾತಿಯು ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಉದಾಹರಣೆಗೆ, ಮಹದೇವಪುರ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಆದರೆ, ಬಿಬಿಎಂಪಿಯ ಅಲ್ಲಿನ 13 ವಾರ್ಡ್‌ಗಳ ಪೈಕಿ ಒಂದನ್ನು ಮಾತ್ರ ಆ ಸಮುದಾಯಕ್ಕಾಗಿ ಮೀಸಲಿಡಲಾಗಿದೆ. ಹಾಗೆಯೇ ಕಾಂಗ್ರೆಸ್‌ ಪಕ್ಷದ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 93 ವಾರ್ಡ್‌ಗಳ ಪೈಕಿ 76 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ. ರಾಜಕೀಯ ಲೆಕ್ಕಾಚಾರವೊಂದನ್ನು ಬಿಟ್ಟು ಈ ತೀರ್ಮಾನಗಳಲ್ಲಿ ಬೇರೆ ಯಾವ ತರ್ಕವೂ ಇಲ್ಲ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಗಾಂಧಿನಗರದ ಎಲ್ಲಾ ವಾರ್ಡ್‌ಗಳನ್ನು, ಜಯನಗರ ಹಾಗೂ ಚಾಮರಾಜಪೇಟೆ ಕ್ಷೇತ್ರಗಳ ತಲಾಆರು ವಾರ್ಡ್‌ಗಳಲ್ಲಿ ತಲಾ ಐದು ವಾರ್ಡ್‌ ಗಳನ್ನು ಮತ್ತು ಬಿಟಿಎಂ ಲೇಔಟ್‌ನ ಒಂಬತ್ತರಲ್ಲಿ ಎಂಟು ವಾರ್ಡ್‌ಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಈ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವವರು ಕಾಂಗ್ರೆಸ್‌ ಶಾಸಕರು. ಈ ಕ್ಷೇತ್ರಗಳಲ್ಲಿ ಗೆಲ್ಲಬಹುದಾದ ವಿರೋಧ ಪಕ್ಷದ ಪ್ರಮುಖ ಅಭ್ಯರ್ಥಿಗಳನ್ನು ಹಣಿಯಲು ಮೀಸಲಾತಿಯ ‘ಅಸ್ತ್ರ’ವನ್ನು ಈ ರೀತಿ ಪ್ರಯೋಗಿಸಲಾಗಿದೆ.

ADVERTISEMENT

ಚುನಾವಣೆಯನ್ನು ಆಡಳಿತಾರೂಢ ಬಿಜೆಪಿಯು ರಾಜಕೀಯವಾಗಿ ಎದುರಿಸಬೇಕೇ ವಿನಾ ಈ ರೀತಿ ಅನ್ಯಮಾರ್ಗ ಹಿಡಿಯುವ ಮೂಲಕವಲ್ಲ. ಯಲಹಂಕ, ಮಲ್ಲೇಶ್ವರ, ಪುಲಿಕೇಶಿನಗರ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ಯಾವ ವಾರ್ಡ್‌ನಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನಿಗದಿಯಾಗಿಲ್ಲ ಎಂದೂ ದೂರಲಾಗಿದೆ. ಮೀಸಲಾತಿಗೆ ಸಂಬಂಧಿಸಿದ ಎಲ್ಲ ದೂರು–ಆಕ್ಷೇಪಗಳಿಗೆ ಸೂಕ್ತ ಸ್ಪಷ್ಟನೆ ನೀಡ ಬೇಕಾದುದು ನಗರಾಭಿವೃದ್ಧಿ ಇಲಾಖೆಯ ಹೊಣೆ. ಈಗಲೂ ಕಾಲ ಮಿಂಚಿಲ್ಲ. ಇದು ಇನ್ನೂ ಕರಡು ಪಟ್ಟಿ. ಅನ್ಯಾಯವನ್ನು ಸರಿಪಡಿಸಿ, ತಾರತಮ್ಯ ಹೋಗಲಾಡಿಸಿ ಸಮರ್ಪಕವಾದ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸವನ್ನು ನಗರಾಭಿವೃದ್ಧಿ ಇಲಾಖೆಯು ಮುತುವರ್ಜಿಯಿಂದ ಮಾಡಬೇಕು.

ಪಕ್ಷಪಾತವಿಲ್ಲದೆ ಈ ಕೆಲಸ ನಡೆಯಲು ಇರುವ ಎಲ್ಲಾ ಅಡೆತಡೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾರಣೆ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿನಿಧಿಗಳಾಗಲೀ ಮಹಿಳಾ ಪ್ರತಿನಿಧಿಗಳಾಗಲೀ ಯಾವುದಾದರೂ ಕೆಲವೇ ಕೆಲವು ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತಗೊಂಡು, ಮಿಕ್ಕ ಕಡೆಗಳಲ್ಲಿ ಅವರ ಪ್ರಾತಿನಿಧ್ಯವೇ ಇಲ್ಲದಂತಾಗಬಾರದು. ಜರಡಿಯಿಂದ ಬೀಳುವ ನೀರಿನಂತೆ ಎಲ್ಲ ಕಡೆಗಳಲ್ಲೂ ಈ ಸಮುದಾಯಗಳಿಗೆ ಸಮಾನ ಅವಕಾಶ ಸಿಗಬೇಕು ಎನ್ನುವುದು ಸಂವಿಧಾನದ ಆಶಯ. ಅದನ್ನು ಪರಿಪಾಲಿಸುವುದು ಸರ್ಕಾರದ ಕರ್ತವ್ಯ. ಬಿಬಿಎಂಪಿಗೆ ಚುನಾವಣೆ ನಡೆಸುವಾಗಲೆಲ್ಲ, ವಾರ್ಡ್‌ಗಳಿಗೆ ಪಾಳಿ ಪ್ರಕಾರದ ಮೀಸಲಾತಿಯನ್ನು ನಿಗದಿ ಮಾಡಬೇಕು. ಹಾಗಾದಾಗ ಆಕ್ಷೇಪ ಗಳಿಗೆ ಅವಕಾಶ ಇರುವುದಿಲ್ಲ.

ಬಹು ಸಮಯದಿಂದ ಚುನಾಯಿತ ಕೌನ್ಸಿಲ್‌ ಇಲ್ಲದೆ ಕಾಲ ದೂಡುತ್ತಿರುವ ಬಿಬಿಎಂಪಿಗೆ ಚುನಾವಣೆಯನ್ನು ನಡೆಸಲು ತಾರತಮ್ಯದ ಮೀಸಲಾತಿ ಕಂಟಕವಾಗಬಾರದು. ಮೀಸಲಾತಿ ನಿಗದಿ ಪ್ರಕ್ರಿಯೆಯು ಪಕ್ಷ ರಾಜಕೀಯದ ಲಾಭ–ನಷ್ಟಗಳಿಂದ ದೂರ ಇರಬೇಕು, ಅದನ್ನು ನಗರಾಭಿವೃದ್ಧಿ ಇಲಾಖೆಯ ವಿವೇಚನೆಗೇ ಬಿಡಬೇಕು. ಈ ಹಿಂದೆ ಅಧಿಕಾರದಲ್ಲಿದ್ದಾಗ ಮೀಸಲಾತಿ ನಿಗದಿ ಮಾಡುವಲ್ಲಿ ತಾರತಮ್ಯ ಮಾಡಿದ ಆರೋಪವನ್ನು ಕಾಂಗ್ರೆಸ್‌ ಪಕ್ಷ ಕೂಡ ಎದುರಿಸಿದ್ದಿದೆ. ನಿಯಮದಂತೆ ನಡೆದುಕೊಳ್ಳುವುದೊಂದೇ ಎಲ್ಲರೂ ಪಾಲಿಸಬೇಕಾದ ನ್ಯಾಯದ ಹಾದಿ. ಇಲ್ಲದಿದ್ದರೆ ಇಂತಹ ತಾರತಮ್ಯದ ನಿಲುವಿಗೆ, ಅನ್ಯಾಯದ ಕ್ರಮಗಳಿಗೆ ಕೊನೆಯೆಂಬುದೇ ಇರುವುದಿಲ್ಲ. ಅಧಿಕಾರದ ಅಮಲು ಏರಿಸಿಕೊಂಡು ನ್ಯಾಯದ ಹಾದಿಯಿಂದ ದೂರ ಸರಿಯಲು ಹಂಬಲಿಸುವವರಿಗೆ ಮತದಾರರೇ ಬುದ್ಧಿ
ಕಲಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.